ಬಂಧಿತರಿಗೆ ಕೂಡ ವೈದ್ಯಕೀಯ ಚಿಕಿತ್ಸೆಯ ಮೂಲಭೂತ ಹಕ್ಕು ಇದೆ ಎಂದ ದೆಹಲಿ ಹೈಕೋರ್ಟ್: ಕೊಲೆ ಆರೋಪಿಯ ಚಿಕಿತ್ಸೆಗೆ ಅನುಮತಿ

ನರಮಂಡಲ ಸಮಸ್ಯೆಗಳ ಬಗ್ಗೆ ವೈದ್ಯಕೀಯ ವರದಿ ತಿಳಿಸಿದ ಹಿನ್ನೆಲೆಯಲ್ಲಿ ಆ ಕೈದಿಗೆ ಆದ್ಯತೆಯ ಮೇರೆಗೆ ಸಿಟಿ ಸ್ಕ್ಯಾನ್ ಹಾಗೂ ಎಂಆರ್‌ಐ ಪರೀಕ್ಷೆ ನಡೆಸುವಂತೆ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ (ಏಮ್ಸ್‌) ನ್ಯಾಯಾಲಯ ನಿರ್ದೇಶನ ನೀಡಿದೆ.
Medical Rights of Prisoners
Medical Rights of Prisoners
Published on

ಕೊಲೆ ಆರೋಪ ಎದುರಿಸುತ್ತಿದ್ದ ವ್ಯಕ್ತಿಯೊಬ್ಬನಿಗೆ ವೈದ್ಯಕೀಯ ಚಿಕಿತ್ಸೆ ಒದಗಿಸಲು ದೆಹಲಿ ಹೈಕೋರ್ಟ್‌ ಈಚೆಗೆ ಅನುಮತಿಸಿದೆ [ಜಗನ್ನಾಥ್‌ ಶಾ ಅಲಿಯಾಸ್‌ ಲಾಳಾ ಮತ್ತು ದೆಹಲಿ ಸರ್ಕಾರ ನಡುವಣ ಪ್ರಕರಣ].

ಜೈಲಿನಲ್ಲಿ ಇರುವವರಿಗೆ ಕೂಡ ಸಮರ್ಪಕ ವೈದ್ಯಕೀಯ ಚಿಕಿತ್ಸೆ ಪಡೆಯುವ ಮೂಲಭೂತ ಹಕ್ಕು ಇದೆ ಎಂದು ನ್ಯಾಯಮೂರ್ತಿ ಗಿರೀಶ್ ಕಾಥ್ಪಾಲಿಯಾ ಅವರು ಸ್ಪಷ್ಟಪಡಿಸಿದರು.

Also Read
ಉನ್ನಾವ್ ಅತ್ಯಾಚಾರ ಪ್ರಕರಣ: ಬಿಜೆಪಿ ಮಾಜಿ ಶಾಸಕ ಸೆಂಗರ್ ಜಾಮೀನಿಗೆ ಸುಪ್ರೀಂ ಕೋರ್ಟ್ ತಡೆ

ಆರೋಪಿಗೆ ನರಮಂಡಲ ಸಮಸ್ಯೆ ಇದ್ದು ತುರ್ತುಚಿಕಿತ್ಸೆ ಅಗತ್ಯವಿದೆ ಎಂಬುದನ್ನು ಗಮನಿಸಿದ ನ್ಯಾಯಾಲಯ ವ್ಯಕ್ತಿ ನ್ಯಾಯಾಂಗ ಬಂಧನದಲ್ಲಿದ್ದಾನೆ ಎಂಬ ಕಾರಣಕ್ಕೆ ಮಾತ್ರ ವೈದ್ಯಕೀಯ ಆರೈಕೆಯನ್ನು ನಿರಾಕರಿಸಲು ಸಾಧ್ಯವಿಲ್ಲ ಎಂದು ತಿಳಿಸಿತು.

“ಮಾನವೀಯತೆಯ ದೃಷ್ಟಿಯಿಂದ ಆರೋಪಿ/ಅರ್ಜಿದಾರ ನ್ಯಾಯಾಂಗ ಬಂಧನದಲ್ಲಿದ್ದರೂ ಕೂಡ ಸಮರ್ಪಕ ವೈದ್ಯಕೀಯ ಚಿಕಿತ್ಸೆಯಿಂದ ವಂಚಿತನಾಗಬಾರದು. ಆರೋಗ್ಯದ ಹಕ್ಕು ಬದುಕುವ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಮೂಲಭೂತ ಹಕ್ಕಿನ ಅವಿಭಾಜ್ಯ ಭಾಗವಾಗಿದೆ. ಅರ್ಜಿದಾರ ಪ್ರಸ್ತುತ ಕೇವಲ ಆರೋಪಿಯಾಗಿದ್ದಾನೆಯೇ ವಿನಾ ಅಪರಾಧಿಯಲ್ಲ… ಅತ್ಯಂತ ಭಯಾನಕ ಅಪರಾಧಿ ಹಾಗೂ ದೋಷಾರೋಪ ಹೊತ್ತವರಿಗೆ ಕೂಡ ಬದುಕುವ ಮತ್ತು ಸ್ವಾತಂತ್ರ್ಯದ ಮೂಲಭೂತ ಹಕ್ಕು ಇದೆ. ಕಾನೂನುಬದ್ಧ ಪ್ರಕ್ರಿಯೆ ಹೊರತಾಗಿ ಆ ಹಕ್ಕುಗಳನ್ನು ಕಿತ್ತುಕೊಳ್ಳಲು ಸಾಧ್ಯವಿಲ್ಲ” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.

ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿದ್ದ ಆರೋಪಿ ಗುರುತು ಮುಚ್ಚಿಹಾಕುವ ಸಲುವಾಗಿ ಶವಕ್ಕೆ ಬೆಂಕಿ ಹಚ್ಚಿದ್ದ. ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 103(1) (ಕೊಲೆ), 238(b) (ಸಾಕ್ಷ್ಯ ನಾಶ) ಹಾಗೂ ಶಸ್ತ್ರಾಸ್ತ್ರ ಕಾಯಿದೆಯ 25/27ನೇ ಸೆಕ್ಷನ್‌ನಡಿ ಆತನ ವಿರುದ್ಧ ಪ್ರಕರಣ ದಾಖಲಾಗಿತ್ತು.

ವೈದ್ಯಕೀಯ ಕಾರಣಗಳನ್ನು ಮುಂದಿಟ್ಟು, ಆರೋಪಿಯು ಮಧ್ಯಂತರ ಜಾಮೀನಿಗೆ ಅರ್ಜಿ ಸಲ್ಲಿಸಿದ್ದ. ಆದರೆ ಷನ್ಸ್ ಕೋರ್ಟ್ ಮಧ್ಯಂತರ ವೈದ್ಯಕೀಯ ಜಾಮೀನಿನ ವಿಸ್ತರಣೆಯನ್ನು ನಿರಾಕರಿಸಿದ್ದ ವಿಚಾರವನ್ನು ಅರ್ಜಿಯಲ್ಲಿ ಬಹಿರಂಗಪಡಿಸಿಲ್ಲವೆಂದು ಸರ್ಕಾರ ಆಕ್ಷೇಪಿಸಿತ್ತು. ೀ ಹಿನ್ನೆಲೆಯಲ್ಲಿ ಆರೋಪಿ ಜಾಮೀನು ಅರ್ಜಿಯನ್ನು ಹಿಂಪಡೆಯಲು ಮನವಿ ಮಾಡಿಕೊಂಡಿದ್ದ. ಹೈಕೋರ್ಟ್ ಅದಕ್ಕೆ ಅನುಮತಿ ನೀಡಿದರೂ, ಜಾಮೀನು ಅರ್ಜಿ ಹಿಂಪಡೆಯುವುದರಿಂದ ಬಂಧನಾವಧಿಯಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯುವ ಹಕ್ಕಿಗೆ ಯಾವುದೇ ಅಡ್ಡಿಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿತು.

Also Read
[ಶಬರಿಮಲೆ ಚಿನ್ನ ಕಳವು ಪ್ರಕರಣ] ದೇವಾಲಯ ಆಸ್ತಿ ರಕ್ಷಣೆಗೆ ವಿಶೇಷ ಕಾನೂನು ಜಾರಿಗೆ ಬರಲಿ: ಕೇರಳ ಹೈಕೋರ್ಟ್

ಸೆಷನ್ಸ್ ಕೋರ್ಟ್‌ಗೆ ರಾಜ್ಯ ಸಲ್ಲಿಸಿದ್ದ ವರದಿಯಲ್ಲಿ, ಆರೋಪಿಗೆ ಗಂಭೀರ ನರವೈಜ್ಞಾನಿಕ ಸಮಸ್ಯೆಗಳಿದ್ದು ಮುಂದಿನ ಪರೀಕ್ಷೆಗಳು ಅಗತ್ಯವೆಂದು ಒಪ್ಪಿಕೊಳ್ಳಲಾಗಿತ್ತು. ಇದನ್ನು ಪರಿಗಣಿಸಿದ ಹೈಕೋರ್ಟ್, ಕೈದಿಗೆ ಒಂದು ವಾರದೊಳಗೆ ಆದ್ಯತೆಯ ಮೇರೆಗೆ ಸಿಟಿ ಸ್ಕ್ಯಾನ್ ಹಾಗೂ ಎಂಆರ್‌ಐ ಪರೀಕ್ಷೆ ನಡೆಸುವಂತೆ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ (ಏಮ್ಸ್‌) ಆದೇಶಿಸಿತು.

ಅಲ್ಲದೆ, ಬಂಧನದಲ್ಲಿರುವ ಆರೋಪಿಗಳ ವೈದ್ಯಕೀಯ ಅರ್ಜಿಗಳನ್ನು ವಿಚಾರಣೆ ನಡೆಸುವಾಗ ಆರೋಪಿಗೆ ಚಿಕಿತ್ಸೆ ವಂಚಿತವಾಗದಂತೆ ಹಾಗೂ ರಾಜ್ಯ ಮತ್ತು ದೂರುದಾರರ ಹಿತಾಸಕ್ತಿಗೂ ಹಾನಿಯಾಗದಂತೆ ಸಮತೋಲನ ಕಾಯ್ದುಕೊಳ್ಳುವುದು ನ್ಯಾಯಾಲಯಗಳ ಕರ್ತವ್ಯ ಎಂದು ಹೈಕೋರ್ಟ್ ತಿಳಿಸಿದೆ. ಆದೇಶದ ಪ್ರತಿಯನ್ನು ಆಸ್ಪತ್ರೆಗೆ ಹಾಗೂ ಜೈಲು ಅಧೀಕ್ಷಕರಿಗೆ ಕಳುಹಿಸುವಂತೆ ತನಿಖಾಧಿಕಾರಿಗಳಿಗೆ ಅದು ಸೂಚಿಸಿದೆ.

Kannada Bar & Bench
kannada.barandbench.com