Acting Chief Justice Satish Chandra Sharma 
ಸುದ್ದಿಗಳು

ಬೆಂಗಳೂರು ಅಭಿವೃದ್ಧಿ ದೃಷ್ಟಿಯಿಂದ ಮರಗಳ ತೆರವು ಅನಿವಾರ್ಯ: ಕರ್ನಾಟಕ ಹೈಕೋರ್ಟ್

ಇಪ್ಪತ್ತೈದು ಮರಗಳನ್ನು ಕಡಿಯುವುದು ಮತ್ತು ಏಳು ಮರಗಳ ಸ್ಥಳಾಂತರ ಸಂಬಂಧ ಸರ್ಕಾರದ ಅಧಿಕೃತ ಜ್ಞಾಪಕ ಪತ್ರವನ್ನು ಪ್ರಶ್ನಿಸಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮನವಿ ವಿಚಾರಣೆಯನ್ನು ಪೀಠ ನಡೆಸಿತು.

Bar & Bench

ಬೆಂಗಳೂರಿನ ಸುರಂಜನ್‌ದಾಸ್‌ ರಸ್ತೆಯಲ್ಲಿ ಕೆಳರಸ್ತೆ (ಅಂಡರ್‌ಪಾಸ್‌) ನಿರ್ಮಿಸಲು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಗೆ ಈಚೆಗೆ ಕರ್ನಾಟಕ ಹೈಕೋರ್ಟ್‌ ಅನುಮತಿಸಿದೆ.

ಕೆಳರಸ್ತೆ ನಿರ್ಮಾಣ ಮಾಡುವ ಉದ್ದೇಶ ಹೊಂದಿರುವ ಸ್ಥಳದಲ್ಲಿ ಬಾಕಿ ಉಳಿದಿರುವ ಹತ್ತು ಮರಗಳನ್ನು ತೆರವು ಮಾಡುವುದರಿಂದ ಪರಿಸರದ ದೃಷ್ಟಿಯಿಂದ ನಷ್ಟವಾದರೂ ನಗರದ ಅಭಿವೃದ್ಧಿಯ ದೃಷ್ಟಿಯಿಂದ ಈ ಕ್ರಮಕೈಗೊಳ್ಳಬೇಕಿದೆ ಎಂದು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್‌ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸಚಿನ್‌ ಶಂಕರ್‌ ಮಗದುಮ್‌ ಅವರಿದ್ದ ವಿಭಾಗೀಯ ಪೀಠವು ಆದೇಶದಲ್ಲಿ ತಿಳಿಸಿದೆ.

ಕಮಾಂಡ್‌ ಆಸ್ಪತ್ರೆಯಿಂದ ಹೋಪ್‌ ಫಾರ್ಮ್‌ವರೆಗಿನ ಕೆಳರಸ್ತೆಯು ಸಿಗ್ನಲ್‌ ರಹಿತವಾದ ಕಾರಿಡಾರ್‌ ಆಗಿದೆ. ಕೆಳರಸ್ತೆ ನಿರ್ಮಿಸುವುದಕ್ಕೆ ಮರ ತೆರವು ಮಾಡುವ ಸಂಬಂಧ ನೀಡಲಾಗಿರುವ ಅನುಮತಿಯ ಕುರಿತು ಹೊಸ ನಿರ್ಧಾರ ಕೈಗೊಳ್ಳುವಂತೆ ಮರಗಳ ತಜ್ಞರ ಸಮಿತಿಗೆ ಕಳೆದ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯ ನಿರ್ದೇಶಿಸಿತ್ತು. ಈ ಸಂಬಂಧ ಈಗಾಗಲೇ ತಜ್ಞರ ಸಮಿತಿ ಅನುಮತಿಸಿದ್ದು, ಕೇವಲ ಹತ್ತು ಮರಗಳನ್ನು ಮಾತ್ರ ತೆರವು ಮಾಡಬೇಕಿದೆ ಎಂದು ಪೀಠಕ್ಕೆ ಬಿಬಿಎಂಪಿ ವಿವರಿಸಿತು.

“ಬಾಕಿ ಉಳಿದಿರುವ ಹತ್ತು ಮರಗಳನ್ನು ತೆರವು ಮಾಡುವುದು ಅನಿವಾರ್ಯವಾಗಿದೆ ಎಂದು ಮರಗಳ ತಜ್ಞರ ಸಮಿತಿ ವರದಿ ಸಲ್ಲಿಸಿದೆ. ಮರ ತೆರವು ಮಾಡುವುದರಿಂದ ಪರಿಸರಕ್ಕೆ ಹಾನಿಯಾಗುತ್ತದೆ ಎಂಬುದು ಸತ್ಯ. ಆದರೆ, ಬೆಂಗಳೂರು ನಗರದ ಅಭಿವೃದ್ಧಿ, ಟ್ರಾಫಿಕ್‌ ನಿಯಂತ್ರಣ, ರಸ್ತೆ ಅಪಘಾತ ಮತ್ತು ಆ ಪ್ರದೇಶದಲ್ಲಿ ಆಸ್ಪತ್ರೆಗಳು ಇರುವುದನ್ನು ಗಮನದಲ್ಲಿಟ್ಟುಕೊಳ್ಳಬೇಕಿದೆ” ಎಂದು ನ್ಯಾ. ಶರ್ಮಾ ನೇತೃತ್ವದ ಪೀಠ ಹೇಳಿದೆ.

ಇದಕ್ಕೆ ಪ್ರತಿಯಾಗಿ ರಾಜ್ಯ ಮರಗಳ ರಕ್ಷಣೆ ಕಾಯಿದೆ ಅಡಿ ಗಿಡ ನೆಡುವಂತೆ ಸಂಬಂಧಪಟ್ಟ ಇಲಾಖೆಗೆ ಆದೇಶಿಸಿರುವ ನ್ಯಾಯಾಲಯವು ಅರ್ಜಿಯನ್ನು ವಿಲೇವಾರಿ ಮಾಡಿತು. ಈ ಸಂಬಂಧ ಆದೇಶ ಪಾಲನಾ ವರದಿಯನ್ನು ರಿಜಿಸ್ಟ್ರಾರ್‌ ಜನರಲ್‌ ಅವರಿಗೆ ಸಲ್ಲಿಸುವಂತೆ ಬಿಬಿಎಂಪಿಗೆ ಪೀಠ ಆದೇಶ ಮಾಡಿದೆ.

ಇಪ್ಪತ್ತೈದು ಮರಗಳನ್ನು ಕಡಿಯುವುದು ಮತ್ತು ಏಳು ಮರಗಳ ಸ್ಥಳಾಂತರ ಸಂಬಂಧ ಸರ್ಕಾರದ ಅಧಿಕೃತ ಜ್ಞಾಪಕ ಪತ್ರ ಪ್ರಶ್ನಿಸಿ ಸ್ವಾತಿ ದಾಮೋದರ್‌ ಅವರು ಸಾರ್ವಜನಿಕ ಹಿತಾಸಕ್ತಿ ಮನವಿ ಸಲ್ಲಿಸಿದ್ದರು. ಸಿಗ್ನಲ್‌ ರಹಿತವಾದ ಕಾರಿಡಾರ್‌ ನಿರ್ಮಾಣಕ್ಕೆ ಹಿಂದೂಸ್ತಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ (ಎಚ್‌ಎಎಲ್‌) ಉಚಿತವಾಗಿ ತನ್ನ ಭೂಮಿಯನ್ನು ನೀಡುತ್ತಿದೆ. ಈ ಸಂಬಂಧ ಬಿಬಿಎಂಪಿ ಮತ್ತು ಎಚ್‌ಎಎಲ್‌ ಒಪ್ಪಂದ ಮಾಡಿಕೊಂಡಿವೆ ಎಂದು ನ್ಯಾಯಾಲಯಕ್ಕೆ ವಿವರಣೆ ನೀಡಲಾಗಿತ್ತು.