Justice MR Shah and Justice Hima Kohli
Justice MR Shah and Justice Hima Kohli  
ಸುದ್ದಿಗಳು

ನಮ್ಮ ನೈತಿಕತೆ ಎಷ್ಟರ ಮಟ್ಟಿಗೆ ಕುಸಿದಿದೆ? ಗೋವಾ ಶಾಸಕರ ಪಕ್ಷಾಂತರ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಕಳವಳ

Bar & Bench

ಶಾಸನ ರೂಪಿಸುವವರಲ್ಲಿ ನೈತಿಕತೆ ಕುಸಿದಿರುವುದರಿಂದ ಪಕ್ಷಾಂತರ ಮಾಡುವವರ ಸಂಖ್ಯೆ ಹೆಚ್ಚಳವಾಗಿದೆ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ವಿಷಾದಿಸಿದೆ [ಗಿರೀಶ್ ಚೋಡಂಕರ್ ಮತ್ತು ಗೋವಾ ವಿಧಾನಸಭೆ ಸಭಾಧ್ಯಕ್ಷರು ಇನ್ನಿತರರ ನಡುವಣ ಪ್ರಕರಣ].

ಕಾಂಗ್ರೆಸ್ ಮತ್ತು ಮಹಾರಾಷ್ಟ್ರವಾದಿ ಗೋಮಾಂತಕ್ ಪಕ್ಷದಿಂದ 2019ರಲ್ಲಿ 12 ಶಾಸಕರು ಬಿಜೆಪಿಗೆ ಪಕ್ಷಾಂತರಗೊಂಡಿದ್ದಾರೆ ಎಂದು ಆರೋಪಿಸಿ ಗೋವಾ ಕಾಂಗ್ರೆಸ್ ಘಟಕದ ಮಾಜಿ ಅಧ್ಯಕ್ಷ ಗಿರೀಶ್ ಚೋಡಂಕರ್  ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನ್ಯಾಯಮೂರ್ತಿಗಳಾದ ಎಂ ಆರ್ ಶಾ ಮತ್ತು ಹಿಮಾ ಕೊಹ್ಲಿ ಅವರಿದ್ದ ಪೀಠ ನಡೆಸಿತು.

ಇತ್ತೀಚೆಗಷ್ಟೇ 9 ಕಾಂಗ್ರೆಸ್ ಶಾಸಕರು ಬಿಜೆಪಿಗೆ ಪಕ್ಷಾಂತರ ಮಾಡಿದ್ದಾರೆ ಎಂದು ಸೂಚಿಸಿದ ಚೋಡಂಕರ್ ಪರ ವಕೀಲರು ಪ್ರಕರಣಕ್ಕೆ ಸಂಬಂಧಿಸಿದ ವಿಸ್ತೃತ ಕಾನೂನು ಪ್ರಶ್ನೆಯನ್ನು ಗಣನೆಗೆ ತೆಗೆದುಕೊಳ್ಳುವಂತೆ ನ್ಯಾಯಾಲಯವನ್ನು ಒತ್ತಾಯಿಸಿದರು. ಆಗ ನ್ಯಾ, ಶಾ ಅವರು “ನಮ್ಮ ನೈತಿಕತೆ ಎಷ್ಟರಮಟ್ಟಿಗೆ ಕುಸಿದಿದೆ!” ಎಂದು ಬೇಸರ ವ್ಯಕ್ತಪಡಿಸಿದರು.

ಆದರೂ ಇನ್ನುಮುಂದೆ ಪ್ರಕರಣದಲ್ಲಿ ಯಾವುದೇ ತುರ್ತು ಇಲ್ಲ ಎಂದ ಪೀಠ ಕಾನೂನು ಪ್ರಶ್ನೆಗಳನ್ನು ಪರಿಗಣಿಸಲು ಮುಂದಿನ ವರ್ಷ ಪ್ರಕರಣವನ್ನು ಪಟ್ಟಿ ಮಾಡುವಂತೆ ಸೂಚಿಸಿತು.

ಬಿಜೆಪಿಗೆ ಪಕ್ಷಾಂತರಗೊಂಡಿರುವ ಗೋವಾ ವಿಧಾನಸಭೆಯ 12 ಸದಸ್ಯರನ್ನು ಅನರ್ಹಗೊಳಿಸುವಂತೆ ಕೋರಿ ಸಲ್ಲಿಸಿದ್ದ ಮನವಿಯನ್ನು ವಜಾಗೊಳಿಸಿದ್ದ ಬಾಂಬೆ ಹೈಕೋರ್ಟ್‌ ಆದೇಶವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ. ವಿಧಾನಸಭೆಯ ಸ್ಪೀಕರ್ ತೆಗೆದುಕೊಂಡ ನಿರ್ಧಾರವನ್ನು ಬಾಂಬೆ ಹೈಕೋರ್ಟ್‌ ಮೂಲತಃ ಎತ್ತಿ ಹಿಡಿದಿತ್ತು.

ಅರ್ಜಿಯಲ್ಲಿ ಈ ಕೆಳಗಿನ ಕಾನೂನಿನ ಪ್ರಶ್ನೆಗಳನ್ನು ಕೇಳಲಾಗಿತ್ತು:

1. ಶಾಸಕಾಂಗ ಪಕ್ಷದ ಸದಸ್ಯರು ತಮ್ಮ ಶಾಸಕಾಂಗ ಪಕ್ಷದ ವಿಲೀನ ಮಾಡುವುದಕ್ಕೆ ಮೂಲ ರಾಜಕೀಯ ಪಕ್ಷದ ವಿಲೀನ ಮಾಡಬೇಕು ಎಂಬುದು ಅಗತ್ಯವಾದ ಪೂರ್ವ ಷರತ್ತೇ?

2. ಅದರಲ್ಲಿಯೂ ಮುಖ್ಯವಾಗಿ, ಮೂಲ ರಾಜಕೀಯ ಪಕ್ಷದ ವಿಲೀನ ನಡೆಯದಿದ್ದಾಗ ಶೆಡ್ಯೂಲ್ X ನ ಪ್ಯಾರಾ 4 (1) ರ ಅಡಿಯಲ್ಲಿ ನೀಡಲಾದ ರಕ್ಷಣೆಯನ್ನು ಶಾಸಕಾಂಗ ಪಕ್ಷದ ಸದಸ್ಯರಿಗೆ ನೀಡಬಹುದೇ?

ಹೈಕೋರ್ಟ್ ಆದೇಶದಿಂದಾಗಿ ಕೆಲವು  ಅಸಂಗತ ಪರಿಸ್ಥಿತಿಗಳು ಉದ್ಭವಿಸುತ್ತವೆ ಎಂದು ಅರ್ಜಿಯಲ್ಲಿ ದೂರಲಾಗಿದೆ. ಅರ್ಜಿದಾರರ ಪರ ಹಿರಿಯ ವಕೀಲ ಪಿ ಚಿದಂಬರಂ, ಪ್ರತಿವಾದಿಗಳನ್ನು ಹಿರಿಯ ವಕೀಲ ಡೇರಿಯಸ್ ಖಂಬಟ್ಟಾ ಸ್ಪೀಕರ್‌ ಪರವಾಗಿ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಕೆ ಎಂ ನಟರಾಜ್‌ ಇನ್ನಿತರರು ವಾದ ಮಂಡಿಸಿದ್ದರು.