“ನ್ಯಾಯಾಂಗಕ್ಕೆ ಹೊರಗಿಗಿಂತ ಒಳಗಿನ ಶಕ್ತಿಗಳಿಂದಲೇ ಹೆಚ್ಚು ಅಪಾಯ ಎಂದು ನ್ಯಾಯಾಂಗದ ಇಂದಿನ ಸ್ಥಿತಿಗತಿಯ ಬಗ್ಗೆ ಬಹುಹಿಂದೆಯೇ ಅಂದಿನ ಮುಖ್ಯ ನ್ಯಾಯಮೂರ್ತಿಯಾಗಿದ್ದ ವೈ ವಿ ಚಂದ್ರಚೂಡ್ ಅವರು ಮುನ್ನೋಟ ಬೀರಿದ್ದರು” ಎಂದು ದೆಹಲಿ ಹೈಕೋರ್ಟ್ ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎ ಪಿ ಶಾ ಹೇಳಿದರು.
ವೆಬಿನಾರ್ ಮೂಲಕ ಆಯೋಜಿಸಲಾಗಿದ್ದ ನ್ಯಾ. ಹೊಸಬೆಟ್ಟು ಸುರೇಶ್ ಸ್ಮಾರಕ "ಅವನತ್ತಿಯತ್ತ ಸುಪ್ರೀಂ ಕೋರ್ಟ್: ಮರೆತುಹೋದ ಸ್ವಾತಂತ್ರ್ಯ ಮತ್ತು ಹಕ್ಕುಗಳ ನಾಶ" ಉಪನ್ಯಾಸ ಕಾರ್ಯಕ್ರಮ ಮತ್ತು ಮರಣೋತ್ತರವಾಗಿ ನ್ಯಾ. ಹೊಸಬೆಟ್ಟು ಸುರೇಶ್ ಅವರಿಗೆ ಡಾ. ಅಸ್ಗರ್ ಅಲಿ ಎಂಜಿನಿಯರ್ ಜೀವಮಾನ ಸಾಧನೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಉಪನ್ಯಾಸ ನೀಡಿದರು.
“ಸುಪ್ರೀಂ ಕೋರ್ಟ್‌ನ ಹಿಂದಿನ ಮೂವರು ಮುಖ್ಯ ನ್ಯಾಯಮೂರ್ತಿಗಳು ರಾಜಕೀಯವಾಗಿ ಅತ್ಯಂತ ಸೂಕ್ಷ್ಮವಾದ ಪ್ರಕರಣಗಳನ್ನು ತಮಗೆ ಧಕ್ಕಿರುವ ಮಾಸ್ಟರ್ ಆಫ್ ರೋಸ್ಟರ್ ಅಸ್ತ್ರ ಬಳಸಿ ಇತ್ತೀಚೆಗೆ ನಿವೃತ್ತರಾದ ನ್ಯಾ. ಅರುಣ್ ಮಿಶ್ರಾ ಅವರ ಪೀಠದ ಮುಂದೆ ವಿಚಾರಣೆಗೆ ಒಳಪಡಿಸಿದ್ದರು ಎಂಬ ಕುರಿತು ಹಲವು ನಿರೂಪಕರು ವಿವರಿಸಿದ್ದಾರೆ” ಎಂದು ಅವರು ನೆನೆಪಿಸಿಕೊಂಡರು.
“ನ್ಯಾ. ಹೊಸಬೆಟ್ಟು ಸುರೇಶ್ ಮತ್ತು ಡಾ. ಅಸ್ಗರ್ ಅಲಿ ಎಂಜಿನಿಯರ್ ಅವರು ದೈಹಿಕ ಮತ್ತು ಮೌಖಿಕವಾಗಿ ಸಾಕಷ್ಟು ನಿಂದನೆ ಎದುರಿಸಿದರೂ ಬೆಂಕಿಯ ಅಡಿ ನಿಲ್ಲುವಾಗ ಧೈರ್ಯ ಅತ್ಯಂತ ಮುಖ್ಯ ಎಂದು ಅದನ್ನು ಮುಂದುವರೆಸಿದ್ದರು.”ನ್ಯಾ. ಎ ಪಿ ಶಾ, ದೆಹಲಿ ಹೈಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ
“ನಾವು ಯುದ್ದದಲ್ಲಿ ಭಾಗವಹಿಸದೇ ಇರಬಹುದು. ಆದರೆ ಇಂದು ನಿಸ್ಸಂಶಯವಾಗಿ ನಾವು ತುರ್ತು ಪರಿಸ್ಥಿತಿ ಎದುರಿಸುತ್ತಿದ್ದೇವೆ. ಬಹುಕಾಲದಿಂದ ನಾವು ಲೋಕಪಾಲದ ಬಗ್ಗೆ ಏನನ್ನೂ ಕೇಳುತ್ತಿಲ್ಲ. ತನಿಖಾ ಸಂಸ್ಥೆಗಳನ್ನು ವ್ಯಾಪಕವಾಗಿ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಕೇಂದ್ರ ಚುನಾವಣಾ ಆಯೋಗ ಸಂಶಯಾಸ್ಪದವಾಗಿ ರಾಜೀ ಮಾಡಿಕೊಂಡಿದೆ. ಪಕ್ಷಪಾತರಹಿತವಾದ ನಾಲ್ಕನೇ ಆಯಾಮ ಎಂಬ ಕಲ್ಪನೆ ಸತ್ತಿದೆ. ನಾಗರಿಕ ಸಮಾಜದ ಕಿತ್ತು ಹಿಸುಕಿ ಕೊಲ್ಲಲಾಗುತ್ತಿದೆ. ಇದೆಲ್ಲಕ್ಕಿಂತಲೂ ಮಿಗಲಾದುದು ನ್ಯಾಯಾಂಗದ ದಯನೀಯ ಸ್ಥಿತಿ” ಎಂದು ಬೇಸರ ವ್ಯಕ್ತಪಡಿಸಿದರು.
“ನಾವು ಅಂದುಕೊಂಡಿದ್ದಕ್ಕಿಂತ ಕಡಿಮೆ ಮಧ್ಯಪಂಥೀಯವಾದ, ನಾವು ಬಿಂಬಿಸಿದ್ದಕ್ಕಿಂತ ಹೆಚ್ಚು ಬಲಪಂಥೀಯವಾದ ಬಿಜೆಪಿ ನೇತೃತ್ವದ ಎನ್ ಡಿಎ ಅಧಿಕಾರಕ್ಕೆ ಬರುತ್ತಿದ್ದಂತೆ ನ್ಯಾಯಾಂಗದ ಅಧಃಪತನ ಆರಂಭವಾಗಿದ್ದು ಕಾಕತಾಳೀಯ. ನ್ಯಾಯಮೂರ್ತಿಗಳ ನೇಮಕಾತಿ, ಬಡ್ತಿ ಮತ್ತು ವರ್ಗಾವಣೆಯು ಕಾನೂನು ಸಚಿವಾಲಯದ ಮೂಗಿನ ನೇರಕ್ಕೆ ನಡೆಯುತ್ತಿದೆ” ಎಂದು ಆರೋಪಿಸಿದರು.
“ಗುಜರಾತ್ ಮೂಲದ ನ್ಯಾಯಮೂರ್ತಿ ಅಖಿಲ್ ಖುರೇಷಿ ಹಾಗೂ ದೆಹಲಿಯ ನ್ಯಾ. ಮುರಳೀಧರ್ ಅವರ ವರ್ಗಾವಣೆ ಪ್ರಶ್ನಾರ್ಹವಾದರೂ ಸುಪ್ರೀಂ ಕೋರ್ಟ್ ತುಟಿಬಿಚ್ಚಲಿಲ್ಲ. ಭಾರತದಲ್ಲಿ ಇಂದು ಅಧಿಕಾರಸ್ಥರನ್ನು ಹೊಣೆಗಾರರನ್ನಾಗಿಸುವ ಎಲ್ಲಾ ಸಂಸ್ಥೆಗಳನ್ನೂ ವ್ಯವಸ್ಥಿತವಾಗಿ ನಾಶಮಾಡಲಾಗಿದೆ. ಇದು ಬಿಜೆಪಿ ಅಧಿಕಾರಕ್ಕೆ ಬರುತ್ತಲೇ ಆರಂಭವಾಯಿತು” ಎಂದು ದೂರಿದರು.
“2018ರಲ್ಲಿ ನಾಲ್ವರು ನ್ಯಾಯಮೂರ್ತಿಗಳ ಐತಿಹಾಸಿಕ ಸುದ್ದಿಗೋಷ್ಠಿ, ಸೆಕ್ಷನ್ 66A ರದ್ದತಿ, ಸೆಕ್ಷನ್ 377ರ ನಿರಪರಾಧಿಕರಣ ಇತರ ತೀರ್ಪುಗಳು ನ್ಯಾಯಾಂಗದ ಬಗ್ಗೆ ಭರವಸೆ ಮೂಡಿಸಿದ್ದರೂ ಶಬರಿಮಲೆ ಮತ್ತು ಅಯೋಧ್ಯಾ ಪ್ರಕರಣಗಳಲ್ಲಿ ನ್ಯಾಯಾಲಯವು ನ್ಯಾಯಾಂಗ ಪರಿಶೀಲನೆಯಿಂದ ವಿಮುಖವಾಗಿತ್ತು. ಈ ಎರಡೂ ಪ್ರಕರಣಗಳಲ್ಲಿ ಬಹುಸಂಖ್ಯಾತರಿಂದ ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸುವಲ್ಲಿ ನ್ಯಾಯಾಲಯ ವಿಫಲವಾಗಿರುವುದು ಸ್ಪಷ್ಟವಾಗಿತ್ತು” ಎಂದರು.
“ಅಂತಿಮ ಎಂದು ಭಾವಿಸಲಾದ ಸುಪ್ರೀಂ ಕೋರ್ಟ್‌ನ ತೀರ್ಪುಗಳನ್ನು ಕೇಂದ್ರ ಸರ್ಕಾರ ಅನುಕೂಲಕರವಾಗಿ ಮರೆಮಾಚಿತ್ತು. ಅಯೋಧ್ಯಾ ತೀರ್ಪು ಅವಿರೋಧ ಎಂದರೂ ರಾಜಕೀಯವಾಗಿ ಪ್ರಮುಖವಾದ ಈ ಪ್ರಕರಣವು ಅನುಮಾನಾಸ್ಪದ ಅವಿರೋಧವಾಗಿದೆ” ಎಂದು ಸಂಶಯ ವ್ಯಕ್ತಪಡಿಸಿದರು.
“ಕೋವಿಡ್ ಹಿನ್ನೆಲೆಯಲ್ಲಿ ಲಾಕ್ ಡೌನ್ ಘೋಷಿಸಿದ್ದ ಸಂದರ್ಭದಲ್ಲಿ ವಲಸೆ ಕಾರ್ಮಿಕರ ಹಿತಾಸಕ್ತಿ ಕಾಯಲು ವಿಫಲವಾದ ಸರ್ಕಾರದ ವಿರುದ್ಧದ ಸಾರ್ಜಜನಿಕ ಹಿತಾಸಕ್ತಿ ಅರ್ಜಿಯನ್ನು ನ್ಯಾಯಾಲಯ ಸ್ವೀಕರಿಸಲಿಲ್ಲ. ಇಷ್ಟು ಮಾತ್ರವಲ್ಲದೇ ಪ್ರಶ್ನಾರ್ಹವಾದ ಹೇಳಿಕೆಗಳೂ ನ್ಯಾಯಪೀಠದಿಂದ ಹೊರಬಿದ್ದವು. ವಲಸೆ ಕಾರ್ಮಿಕರಿಗೆ ಸೂರು ಮತ್ತು ಆಹಾರ ವಿತರಿಸುತ್ತಿರುವಾಗ ಅವರಿಗೆ ಇನ್ನೇನು ಕೊಡಬೇಕು… ಅಪಘಾತದಲ್ಲಿ ಕಾರ್ಮಿಕರು ಸತ್ತರೆ ಇದನ್ನು ನ್ಯಾಯಾಲಯ ಹೇಗೆ ತಪ್ಪಿಸಲಾಗುತ್ತದೆ ಎಂದು ನ್ಯಾಯಾಲಯ ಪ್ರಶ್ನಿಸಿತ್ತು” ಎಂದು ವಿವರಿಸಿದರು.
“ಪೌರತ್ವ ತಿದ್ದುಪಡಿ ಕಾಯಿದೆಯ ಸಾಂವಿಧಾನಿಕತೆಯನ್ನು ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸಿರುವಾಗ ಸರ್ಕಾರವು ನ್ಯಾಯಯುತವಾಗಿ ಹೋರಾಟ ಮಾಡುತ್ತಿದ್ದವರನ್ನು ಬಾಯಿ ಮುಚ್ಚಿಸುವ ಕೆಲಸ ಮಾಡುತ್ತಿತ್ತು. ಉತ್ತರ ಪ್ರದೇಶದಲ್ಲಿ ಪ್ರತಿಭಟನಾಕಾರರ ಮೇಲೆ ದಾಳಿ ಮಾಡಲು ಪೊಲೀಸರಿಗೆ ಪರವಾನಗಿ ನೀಡಲಾಗಿತ್ತು. ದೆಹಲಿಯಲ್ಲಿ ಗೌರವಯುತವಾಗಿ ಮೌನ ಪ್ರತಿಭಟನೆ ನಡೆಸುತ್ತಿದ್ದವರು ಹಾಗೂ ವಿದ್ಯಾರ್ಥಿಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದರು. ಇವೆರಲ್ಲರ ಮೇಲೆ ಓಬೀರಾಯನ ಕಾಲದ ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯಿದೆ (ಯುಎಪಿಎ) ಅಡಿ ದೂರು ದಾಖಲಿಸುವ ಮಾದರಿ ಅನುಸರಿಸಲಾಗಿತ್ತು. ಇದೆಲ್ಲವನ್ನೂ ಮೂಕಪ್ರೇಕ್ಷಕನಂತೆ ನ್ಯಾಯಾಂಗ ಗಮನಿಸುತ್ತಿದ್ದುದು ಸಮಸ್ಯೆಯ ಮೂಲ” ಎಂದು ವಿವರಿಸಿದರು.
“ಪ್ರಚೋದನಾಕಾರಿ ಹೇಳಿಕೆ ನೀಡಿದ ರಾಜಕಾರಣಿಯನ್ನು ಸುಮ್ಮನೆ ಬಿಡಲಾಗಿತ್ತು. ಇಂಥ ರಾಜಕಾರಣಿಯನ್ನು ಕಾನೂನಿನ ಕಟಕಟೆಯಲ್ಲಿ ನಿಲ್ಲಿಸಲು ಯತ್ನಿಸಿದ ದೆಹಲಿ ನ್ಯಾಯಮೂರ್ತಿಯನ್ನು ವರ್ಗಾವಣೆ ಮಾಡಲಾಗಿತ್ತು. ದೆಹಲಿ ಪೊಲೀಸರು ಪಕ್ಷಪಾತ ಮತ್ತು ರಾಜಕೀಯ ಪ್ರೇರಿತ ಆರೋಪ ಎದುರಿಸುತ್ತಿದ್ದಾರೆ. ಆರೋಪಿಗಳಾದ ಬಹುಸಂಖ್ಯಾತ ಸಮುದಾಯದವರನ್ನು ಪ್ರಕರಣದಿಂದ ಬಿಡಲಾಗಿದೆ. ದುರ್ಬಲ ನ್ಯಾಯಾಂಗದಿಂದಾಗಿ ರಾಜಕಾರಣಿಗಳು ಹಾಗೂ ಪೊಲೀಸರಿಗೆ ಅಷ್ಟು ಧೈರ್ಯ ಬಂದಿದೆ” ಎಂದು ಮಾರ್ಮಿಕವಾಗಿ ನುಡಿದರು.
“ಯುಎಪಿಎ ಅನ್ನು ಪೊಲೀಸರು, ಸರ್ಕಾರ ಮತ್ತು ಫಿರ್ಯಾದುದಾರರು ವ್ಯಾಪಕವಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಯುಎಪಿಎ ಅಡಿ ಆರೋಪಿಗಳಿಗೆ ಜಾಮೀನು ಪಡೆಯುವುದು ನರಕಯಾತನೆಯಾಗಿದೆ. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಅತ್ಯಂತ ಅಪಾಯಕಾರಿಯಾದ ಯುಎಪಿಎ ಕಾನೂನುಗಳಿದ್ದವು. ಇಂದು ಅಂಥ ಸ್ಥಿತಿಯನ್ನು ತಪ್ಪಿಸಬೇಕು ಎಂದಾದರೆ ತೀರ್ಮಾನವನ್ನು ಮರುಪರಿಶೀಲಿಸಬೇಕು” ಎಂದು ಸಲಹೆ ನೀಡಿದರು.
“ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ವ್ಯಾಪಕವಾಗಿ ಯುಎಪಿಎ ಅನ್ನು ದುರ್ಬಳಕೆ ಮಾಡಲಾಗಿದೆ. ಕಾಶ್ಮೀರದ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಪ್ರಾಯೋಗಿಕವಾಗಿ ತನ್ನ ಪಾತ್ರವನ್ನು ತ್ಯಜಿಸಿದೆ. ಅನುರಾಧ ಬಾಸಿನ್ ಪ್ರಕರಣವನ್ನು ಹಲವು ರೀತಿಯಲ್ಲಿ ಮೆಚ್ಚಿಕೊಂಡರೂ ವಾಸ್ತವದಲ್ಲಿ ಏನನ್ನೂ ನಿರ್ಧರಿಸಲಿಲ್ಲ. ಕಾಶ್ಮೀರದ ವಿಚಾರದಲ್ಲಿ ನ್ಯಾಯಾಂಗವು ತನ್ನ ಕರ್ತವ್ಯದಿಂದ ವಿಮುಖವಾಗಿರುವುದರಲ್ಲಿ ಮಾದರಿ ಕಾಣುತ್ತದೆ. 1.3 ಕೋಟಿ ಜನಸಂಖ್ಯೆ ಇರುವ ಕಾಶ್ಮೀರದಲ್ಲಿ ಕಾರ್ಯಾಂಗವು ಇಂಟರ್‌ನೆಟ್ ನಿರ್ಬಂಧಿಸಿತ್ತು. ಜಗತ್ತಿನ ಇಂಥ ನೈಜ ಸಮಸ್ಯೆಗಳ ಬಗ್ಗೆ ಸುಪ್ರೀಂ ಕೋರ್ಟ್ ಮಾತನಾಡಲು ಬಯಸುವುದಿಲ್ಲ” ಎಂದರು.