Karnataka HC and Shivamurthy Muruga Sharanaru 
ಸುದ್ದಿಗಳು

ಮುರುಘಾ ಶರಣರ ಪ್ರಕರಣ: ವಿಶೇಷ ನ್ಯಾಯಾಲಯದ ನ್ಯಾಯಾಧೀಶರ ನಡೆ ಹಠಮಾರಿತನದಿಂದ ಕೂಡಿದ ನ್ಯಾಯಾಂಗ ನಿಂದನೆ ಎಂದ ಹೈಕೋರ್ಟ್‌

ಎರಡೂ ಪ್ರಕರಣಗಳಿಗೆ ಸಂಬಂಧಿಸಿದಂತೆ ಎಲ್ಲಾ ದಾಖಲೆಗಳನ್ನು ತನ್ನ ಮುಂದಿಡಬೇಕು. ಈ ಆದೇಶದ ಪ್ರತಿಯನ್ನು ಪರಿಶೀಲನೆಗೆ ಮುಖ್ಯ ನ್ಯಾಯಮೂರ್ತಿಗಳ ಮುಂದಿಡಬೇಕು ಎಂದು ರಿಜಿಸ್ಟ್ರಿಗೆ ಹೈಕೋರ್ಟ್‌ ನಿರ್ದೇಶಿಸಿದೆ.

Bar & Bench

ಅಪ್ರಾಪ್ತರ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್‌ ಹೊರಡಿಸಿದ್ದ ಆದೇಶ ಉಲ್ಲಂಘಿಸಿ ಚಿತ್ರದುರ್ಗದ ಡಾ. ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಚಿತ್ರದುರ್ಗದ 2ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ (ಪೋಕ್ಸೊ ವಿಶೇಷ ನ್ಯಾಯಾಲಯ) ಆದೇಶ ಹೊರಡಿಸಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್, ಜಿಲ್ಲಾ ನ್ಯಾಯಾಧೀಶರ ಕ್ರಮ ಹಠಮಾರಿತನದಿಂದ ಕೂಡಿದ ನ್ಯಾಯಾಂಗ ನಿಂದನೆಯಾಗಿದೆ ಎಂದು ಕಟುವಾಗಿ ನುಡಿದಿದೆ.

ಮುರುಘಾ ಶರಣರ ವಿರುದ್ಧದ ಎರಡು ಪ್ರಕರಣಗಳಿಗೆ ಸಂಬಂಧಿಸಿದ ಜಿಲ್ಲಾ ವಿಶೇಷ ನ್ಯಾಯಾಲಯದ ಮುಂದಿರುವ ಎಲ್ಲಾ ಪ್ರಕ್ರಿಯೆಗಳಿಗೆ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ಮಂಗಳವಾರ ತಡೆಯಾಜ್ಞೆ ನೀಡಿದೆ.

ಎರಡೂ ಪ್ರಕರಣಗಳಿಗೆ ಸಂಬಂಧಿಸಿದಂತೆ ಎಲ್ಲಾ ದಾಖಲೆಗಳನ್ನು ತನ್ನ ಮುಂದಿಡಬೇಕು. ಈ ಆದೇಶದ ಪ್ರತಿಯನ್ನು ಪರಿಶೀಲನೆಗೆ ಮುಖ್ಯ ನ್ಯಾಯಮೂರ್ತಿಗಳ ಮುಂದಿಡಬೇಕು ಎಂದು ರಿಜಿಸ್ಟ್ರಿಗೆ ಹೈಕೋರ್ಟ್‌ ನಿರ್ದೇಶಿಸಿದೆ.

ಚಿತ್ರದುರ್ಗದ ಪೋಕ್ಸೊ ವಿಶೇಷ ನ್ಯಾಯಾಲಯದ ವಿಶೇಷ ಸರ್ಕಾರಿ ಅಭಿಯೋಜಕರ ನಡವಳಿಕೆಗೆ ಸಂಬಂಧಿಸಿದ ವಿಚಾರಣಾ ವರದಿಯನ್ನು ಹೈಕೋರ್ಟ್‌ ಮುಂದಿರಿಸಬೇಕು ಎಂದು ರಾಜ್ಯ ಸರ್ಕಾರದ ವಿಶೇಷ ಸರ್ಕಾರಿ ಅಭಿಯೋಜಕರಾದ ಬಿ ಎ ಬೆಳ್ಳಿಯಪ್ಪ ಅವರಿಗೆ ಪೀಠ ನಿರ್ದೇಶಿಸಿದೆ.

ಜಿಲ್ಲಾ ನ್ಯಾಯಾಧೀಶರ ನಡೆಗೆ ಗರಂ: ಆರೋಪಿಗೆ ಶರಣರಿಗೆ ಹೈಕೋರ್ಟ್‌ ಜಾಮೀನು ಮಂಜೂರು ಮಾಡುವ ಮುನ್ನ ಅವರ ವಿರುದ್ಧ ವಿಶೇಷ ನ್ಯಾಯಾಲಯವು ಬಾಡಿ ವಾರೆಂಟ್‌ ಜಾರಿ ಮಾಡಿತ್ತು. ನಂತರ ಹೈಕೋರ್ಟ್‌ ಜಾಮೀನು ಮಂಜೂರು ಮಾಡಿದ್ದು, ಅದರಿಂದ ಬಾಡಿ ವಾರೆಂಟ್‌ ಸಹ ಉಪಶಮನಗೊಳ್ಳುತ್ತದೆ. ಹೀಗಾಗಿ, ನವೆಂಬರ್‌ 16ರಂದು ಜೈಲು ಅಧಿಕಾರಿಗಳು ಶರಣರನ್ನು ಬಿಡುಗಡೆ ಮಾಡಿದ್ದಾರೆ. ಆದರೆ, ಇದಾದ ನಂತರ ಬಾಡಿ ವಾರೆಂಟ್‌ ಹೊರಡಿಸಿದ ಹೊರತಾಗಿಯೂ ಹೈಕೋರ್ಟ್‌ನ ಆದೇಶ ಅನುಸರಿಸಿ ಆರೋಪಿಯನ್ನು ಹೇಗೆ ಬಿಡುಗಡೆ ಮಾಡಲಾಯಿತು ಎಂಬುದರ ವಿವರಣೆ ಕೇಳಿ ಜೈಲರ್‌ಗೆ ಜಿಲ್ಲಾ ವಿಶೇಷ ನ್ಯಾಯಾಲಯದ ನ್ಯಾಯಾಧೀಶರು ನೋಟಿಸ್‌ ನೀಡಿದ್ದಾರೆ. ಹೈಕೋರ್ಟ್‌ ಆದೇಶದ ಜಾರಿಗೊಳಿಸಿದ ಜೈಲರ್ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಸೂಚಿಸಿದ್ದಾರೆ. ಇದು ನಿಜಕ್ಕೂ ಆಘಾತಕಾರಿ ನಡೆ ಎಂದು ಆದೇಶದಲ್ಲಿ ಪೀಠ ಕಿಡಿಕಾರಿದೆ.

ಹೈಕೋರ್ಟ್‌ ನಿರ್ದೇಶದಂತೆ ಶರಣರು ತಮ್ಮ ಪಾಸ್‌ಪೋರ್ಟ್‌ ಅನ್ನು ವಶಕ್ಕೆ ನೀಡಿದ್ದಾರೆ. ಅದನ್ನು ದಾಖಲಿಸಿಕೊಳ್ಳದೆ ವಿಶೇಷ ನ್ಯಾಯಾಲಯದ ನ್ಯಾಯಾಧೀಶರು ಪಾಸ್‌ಪೋರ್ಟ್‌ ಅನ್ನು ಅದರ ನೈಜತೆಯ ಪರಿಶೀಲನೆಗೆ ಕಳುಹಿಸಿದ್ದಾರೆ. ಆ ಮೂಲಕ ಹೈಕೋರ್ಟ್‌ ಆದೇಶವನ್ನು ಪಾಲಿಸದೆ ಉಲ್ಲಂಘನೆ ಮಾಡಿದ್ದಾರೆ. ವಿಶೇಷ ನ್ಯಾಯಾಲಯದ ಮುಂದಿನ ಎಲ್ಲಾ ಪ್ರಕ್ರಿಯೆಗಳಿಗೆ ಹೈಕೋರ್ಟ್‌ ತಡೆಯಾಜ್ಞೆ ನೀಡಿದ್ದರೂ ಹಾಗೂ ಚಿತ್ರದುರ್ಗ ಜಿಲ್ಲೆಗೆ ಪ್ರವೇಶಿಸದಂತೆ ಅರ್ಜಿದಾರರಿಗೆ ನಿರ್ಬಂಧ ಹೇರಿದ್ದರೂ ಶರಣರ ಖುದ್ದು ಹಾಜರಾತಿಗೆ ಸೂಚಿಸಿರುವುದು ಈಗಲೂ ನಿಗೂಢವಾಗಿದೆ. ಹೈಕೋರ್ಟ್‌ನ ಈ ಎರಡೂ ಆದೇಶಗಳನ್ನು ವಿಶೇಷ ನ್ಯಾಯಾಲಯದ ನ್ಯಾಯಾಧೀಶರು ಗಾಳಿಗೆ ತೂರಿದ್ದಾರೆ. ಈ ನಡೆ ನ್ಯಾಯಾಂಗದ ಶಿಸ್ತಿನ ಉಲ್ಲಂಘನೆಯಾಗಿದೆ. ನ್ಯಾಯಾಲಯಗಳು ಸಂವಿಧಾನದ ನೈತಿಕತೆಯಿಂದ ನಿಯಂತ್ರಿಸಲ್ಪಡುತ್ತವೆಯೇ ಹೊರತು ಸಾರ್ವಜನಿಕ ನೈತಿಕತೆಯಿಂದಲ್ಲ. ರೋಚಕಗೊಳಿಸಲಾದ ಪ್ರಕರಣವನ್ನು ಪ್ರಚಾರದಲ್ಲಿ ಉಳಿಸುವ ಪ್ರಯತ್ನ ಇದಾಗಿದೆ ಎಂದು ಪೀಠ ತೀಕ್ಷ್ಣವಾಗಿ ನುಡಿದಿದೆ.

ಅರ್ಜಿದಾರರ ಪರ ಹಿರಿಯ ವಕೀಲರಾದ ಸಿ ವಿ ನಾಗೇಶ್‌ ಮತ್ತು ಸಂದೇಶ್‌ ಚೌಟ ಅವರು, ಜಿಲ್ಲಾ ನ್ಯಾಯಾಲಯ ಹೊರಡಿಸಿರುವ ಎಲ್ಲಾ ಆದೇಶಗಳ ದೃಢೀಕೃತ ಪ್ರತಿಗಾಗಿ ಅರ್ಜಿ ಸಲ್ಲಿಸಲಾಗಿದೆ. ಈವರೆಗೂ ಯಾವೊಂದು ಪ್ರತಿಯನ್ನು ಒದಗಿಸಿಲ್ಲ. ವಿಶೇಷ ನ್ಯಾಯಾಲಯದ ನ್ಯಾಯಾಧೀಶರು ಎಲ್ಲಾ ಕಡತಗಳನ್ನು ತಮ್ಮ ಕಚೇರಿಯಟ್ಟುಕೊಂಡಿದ್ದು, ದೃಢೀಕೃತ ಪ್ರತಿ ನೀಡುವುದಕ್ಕಾಗಿ ಯಾವುದೇ ಕಡತವನ್ನು ಬಿಡುಗಡೆ ಮಾಡಿಲ್ಲ ಎಂದು ವಾದಿಸಿದ್ದಾರೆ. ಇಂತಹ ಸಂದರ್ಭದಲ್ಲಿ ವಿಶೇಷ ನ್ಯಾಯಾಲಯದ ನ್ಯಾಯಾಧೀಶರ ನಡವಳಿಕೆ ನ್ಯಾಯಾಗ ನಿಂದನೆಯಾಗಿದೆ ಎಂದು ಪೀಠ ಆದೇಶದಲ್ಲಿ ದಾಖಲಿಸಿದೆ.