Shivamurthy Murugha Sharanaru and Karnataka HC
Shivamurthy Murugha Sharanaru and Karnataka HC

ಪೋಕ್ಸೊ ಆರೋಪಿ ಮುರುಘಾ ಶರಣರ ವಿರುದ್ಧದ ಜಾಮೀನುರಹಿತ ಬಂಧನ ವಾರೆಂಟ್‌ಗೆ ಹೈಕೋರ್ಟ್‌ ತಡೆ; ಎಸ್‌ಪಿಪಿ ವಿರುದ್ಧ ಕಿಡಿ

ನ್ಯಾಯಾಲಯದ ಈ ಆದೇಶವನ್ನು ಇಮೇಲ್‌ ಮೂಲಕ ಚಿತ್ರದುರ್ಗ ಜೈಲು ಅಧೀಕ್ಷಕರಿಗೆ ಕಳುಹಿಸುವಂತೆ ಹೈಕೋರ್ಟ್‌ನ ನ್ಯಾಯಾಂಗ ರಿಜಿಸ್ಟ್ರಾರ್‌ಗೆ ನಿರ್ದೇಶಿಸಿದ ಪೀಠ.

ಪೋಕ್ಸೊ ಪ್ರಕರಣದಲ್ಲಿ ಆರೋಪಿಯಾಗಿರುವ ಚಿತ್ರದುರ್ಗದ ಮುರುಘಾ ಮಠದ ಡಾ. ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಸೋಮವಾರ ಮಧ್ಯಾಹ್ನ ಜಾಮೀನು ರಹಿತ ಬಂಧನ ವಾರೆಂಟ್‌ ಹೊರಡಿಸಿದ್ದ ವಿಶೇಷ ನ್ಯಾಯಾಲಯದ ಆದೇಶಕ್ಕೆ ಕರ್ನಾಟಕ ಹೈಕೋರ್ಟ್‌ ಸಂಜೆ ತಡೆ ನೀಡಿದ್ದು, ಆರೋಪಿ ಶರಣರನ್ನು ಬಿಡುಗಡೆ ಮಾಡುವಂತೆ ಚಿತ್ರದುರ್ಗ ಜಿಲ್ಲಾ ಅಧೀಕ್ಷಕರಿಗೆ ನಿರ್ದೇಶಿಸಿದೆ.

ವಿಶೇಷ ನ್ಯಾಯಾಲಯದ ಆದೇಶದಂತೆ ಬಂಧಿಸಿ ಚಿತ್ರದುರ್ಗದ ಜಿಲ್ಲಾ ಕಾರಾಗೃಹದಲ್ಲಿ ಇಡಲಾಗಿರುವ ಆರೋಪಿ ಶರಣರನ್ನು ಬಿಡುಗಡೆ ಮಾಡುವ ಸಂಬಂಧದ ಈ ಆದೇಶವನ್ನು ಇಮೇಲ್‌ ಮೂಲಕ ಜೈಲು ಅಧೀಕ್ಷಕರಿಗೆ ಕಳುಹಿಸುವಂತೆ ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ಅವರ ನೇತೃತ್ವದ ಏಕಸದಸ್ಯ ಪೀಠವು ಹೈಕೋರ್ಟ್‌ನ ನ್ಯಾಯಾಂಗ ರಿಜಿಸ್ಟ್ರಾರ್‌ ಜನರಲ್‌ಗೆ ನಿರ್ದೇಶಿಸಿದೆ.

“ಪೋಕ್ಸೊ ಮೊದಲ ಪ್ರಕರಣದಲ್ಲಿ ಹೈಕೋರ್ಟ್‌ನ ಏಕಸದಸ್ಯ ಪೀಠವು ಆರೋಪಿಗೆ ಜಾಮೀನು ಮಂಜೂರು ಮಾಡುವಾಗ ಚಿತ್ರದುರ್ಗಕ್ಕೆ ಆರೋಪಿ ಪ್ರವೇಶಿಸಬಾರದು. ವಿಡಿಯೊ ಕಾನ್ಫರೆನ್ಸ್‌ ಮೂಲಕ ವಿಚಾರಣೆಗೆ ಹಾಜರಾಗಬೇಕು ಎಂಬ ಷರತ್ತು ವಿಧಿಸಿದೆ. ಈ ಆದೇಶವನ್ನು ಉಲ್ಲಂಘಿಸಿ ವಿಚಾರಣಾಧೀನ ನ್ಯಾಯಾಲಯಕ್ಕೆ ವಿಶೇಷ ಸರ್ಕಾರಿ ಅಭಿಯೋಜಕರು ಮೆಮೊ ಸಲ್ಲಿಸಿದ್ದು, ಇದನ್ನು ವಿಶೇಷ ನ್ಯಾಯಾಲಯ ಪರಿಗಣಿಸಿದೆ. ಜಾಮೀನು ಮಂಜೂರು ಮಾಡುವಾಗ ಹೈಕೋರ್ಟ್‌ನ ಏಕಸದಸ್ಯ ಪೀಠಗಳು ಪ್ರತ್ಯೇಕ ಪ್ರಕರಣಗಳಲ್ಲಿ ಮಾಡಿರುವ ಆದೇಶವನ್ನು ವಿಶೇಷ ನ್ಯಾಯಾಲಯ ಪಾಲಿಸಬೇಕು” ಎಂದು ಪೀಠ ಹೇಳಿದೆ.

“ಹೈಕೋರ್ಟ್‌ ಒಮ್ಮೆ ಚಿತ್ರದುರ್ಗ ಪ್ರವೇಶಿಸಬಾರದು ಎಂದು ಆರೋಪಿಗೆ ನಿರ್ದೇಶಿಸಿದ ಮೇಲೆ ಚಿತ್ರದುರ್ಗದಲ್ಲಿ ನಡೆಯುವ ಎಲ್ಲಾ ಪ್ರಕ್ರಿಯೆಗಳಿಗೂ ಅದು ಅನ್ವಯಿಸುತ್ತದೆ. ವಿಡಿಯೊ ಕಾನ್ಫರೆನ್ಸ್‌ ಮೂಲಕ ಹಾಜರಾಗಲು ಹೈಕೋರ್ಟ್‌ ನಿರ್ದೇಶಿಸಿದೆ. ವಿಶೇಷ ನ್ಯಾಯಾಲಯದಲ್ಲಿ ಎಸ್‌ಪಿಪಿ ತೆಗೆದುಕೊಂಡಿರುವ ಕ್ರಮ ಮತ್ತು ಆನಂತರ ಚಿತ್ರದುರ್ಗದ ವಿಶೇಷ ನ್ಯಾಯಾಲಯ ಮಾಡಿರುವ ಆದೇಶವು ಹೈಕೋರ್ಟ್‌ ಆದೇಶಕ್ಕೆ ವಿರುದ್ಧವಾಗಿದೆ. ಹೀಗಾಗಿ, ನ್ಯಾಯ ಎತ್ತಿ ಹಿಡಿಯುವ ದೃಷ್ಟಿಯಿಂದ ಹೈಕೋರ್ಟ್‌ಗೆ ಸಿಆರ್‌ಪಿಸಿ ಸೆಕ್ಷನ್‌ 482 ಅಡಿ ನೀಡಲಾಗಿರುವ ಅಧಿಕಾರವನ್ನು ಚಲಾಯಿಸಬೇಕಿದೆ” ಎಂದು ಹೈಕೋರ್ಟ್‌ ಆದೇಶದಲ್ಲಿ ವಿವರಣೆ ನೀಡಿದೆ.

ಆರೋಪಿ ಶರಣರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಸಂದೇಶ್‌ ಚೌಟ ಅವರು “ಆರೋಪಿ ಶರಣರ ವಿರುದ್ಧದ ಎಫ್‌ಐಆರ್‌ ದಾಖಲಿಸುವಾಗ ಅನ್ವಯಿಸದ ಕಾಯಿದೆ ಮತ್ತು ಸೆಕ್ಷನ್‌ಗಳನ್ನು ಹಾಕಲಾಗಿದೆ ಎಂದು ಆಕ್ಷೇಪಿಸಿ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಪೂರ್ಣಗೊಳಿಸಿರುವ ಹೈಕೋರ್ಟ್‌ನ ಏಕಸದಸ್ಯ ಪೀಠವು (ನ್ಯಾ. ಎಂ ನಾಗಪ್ರಸನ್ನ ಅವರ ಪೀಠ) ಆದೇಶ ಕಾಯ್ದಿರಿಸಿದೆ. ಅಲ್ಲದೇ, ಆರೋಪ ನಿಗದಿಯ ನಂತರದ ಪ್ರಕ್ರಿಯೆಯನ್ನು ಮುಂದೂಡುವಂತೆ ಚಿತ್ರದುರ್ಗದ ವಿಶೇಷ ನ್ಯಾಯಾಲಯಕ್ಕೆ ನಿರ್ದೇಶಿಸಿದೆ. ಅಲ್ಲದೇ, ಹೈಕೋರ್ಟ್‌ನ ಇನ್ನೊಂದು ಪೀಠವು ಶರಣರಿಗೆ ಜಾಮೀನು ಮಂಜೂರು ಮಾಡುವಾಗ ಚಿತ್ರದುರ್ಗ ಪ್ರವೇಶಕ್ಕೆ ನಿರ್ಬಂಧ ವಿಧಿಸಿ, ವಿಚಾರಣೆಗೆ ವಿಡಿಯೊ ಕಾನ್ಫರೆನ್ಸ್‌ ಮೂಲಕ ಹಾಜರಾಗಬೇಕು (ನ್ಯಾ. ಶ್ರೀನಿವಾಸ್‌ ಹರೀಶ್‌ಕುಮಾರ್‌ ಅವರ ಪೀಠ) ಎಂದು ಆದೇಶಿಸಿದೆ. ಅದಾಗ್ಯೂ, ಪ್ರಾಸಿಕ್ಯೂಷನ್‌ ಎರಡನೇ ಪೋಕ್ಸೊ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗಿಲ್ಲ ಎಂದು ಮೆಮೊ ಸಲ್ಲಿಸಿದ್ದಾರೆ. ಇದನ್ನು ವಿಶೇಷ ನ್ಯಾಯಾಲಯ ಪರಿಗಣಿಸಿ, ಶರಣರನ್ನು ಬಂಧಿಸುವಂತೆ ಆದೇಶ ಮಾಡಿದೆ. ಇದರ ಭಾಗವಾಗಿ ಅವರನ್ನು ಬಂಧಿಸಿ, ಚಿತ್ರದುರ್ಗದ ಜೈಲಿನಲ್ಲಿ ಇಡಲಾಗಿದೆ. ಇದು ಹೈಕೋರ್ಟ್‌ ಆದೇಶಕ್ಕೆ ವಿರುದ್ಧವಾದ ಕ್ರಮ” ಎಂದು ಆಕ್ಷೇಪಿಸಿದರು.

“ವಿಚಾರಣಾಧೀನ ನ್ಯಾಯಾಲಯದಲ್ಲಿ ಎಸ್‌ಪಿಪಿ ಸಲ್ಲಿಸಿದ್ದ ಮೆಮೊಗೆ ಅರ್ಜಿದಾರರು ಹೈಕೋರ್ಟ್‌ನ ಜಾಮೀನು ಆದೇಶ ಮುಂದಿರಿಸಿ ಆಕ್ಷೇಪಿಸಿದ್ದಾರೆ. ಅಲ್ಲದೇ, ಹೈಕೋರ್ಟ್‌ನ ಏಕಸದಸ್ಯ ಪೀಠವು ವಿಚಾರಣೆ ಮೂಂದೂಡಿರುವ ವಿಚಾರ ಹಾಗೂ ಮಧ್ಯಂತರ ಆದೇಶವನ್ನು ಗಮನಕ್ಕೆ ತಂದಿದ್ದಾರೆ. ಅದಾಗ್ಯೂ, ಚಿತ್ರದುರ್ಗದ ವಿಶೇಷ ನ್ಯಾಯಾಲಯದ ನ್ಯಾಯಾಧೀಶರು ಎಸ್‌ಪಿಪಿ ನವೆಂಬರ್‌ 18ರಂದು ಸಲ್ಲಿಸಿರುವ ಮೆಮೊ ಪರಿಗಣಿಸಿದ್ದಾರೆ. ಮಧ್ಯಾಹ್ನ 12.30ಕ್ಕೆ ಶರಣರ ವಿರುದ್ಧ ಜಾಮೀನುರಹಿತ ಬಂಧನ ವಾರೆಂಟ್‌ ಹೊರಡಿಸಿದ್ದಾರೆ. ಇದರ ಭಾಗವಾಗಿ ಬಂಧಿಸಿ, ನ್ಯಾಯಾಂಗ ಬಂಧನದಲ್ಲಿ ಇಡಲಾಗಿದೆ” ಎಂದು ಆಕ್ಷೇಪಿಸಿದರು.

ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಎಸ್‌ಪಿಪಿ-2 ಅವರು “ಎರಡನೇ ಪೋಕ್ಸೊ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸಲಾಗಿದೆಯಷ್ಟೆ” ಎಂದು ಹೇಳಿದ್ದಾರೆ.

ನವೆಂಬರ್‌ 8ರಂದು ನ್ಯಾ. ಶ್ರೀನಿವಾಸ್‌ ಹರೀಶ್‌ಕುಮಾರ್‌ ಅವರ ನೇತೃತ್ವದ ಏಕಸದಸ್ಯ ಪೀಠವು ಆರೋಪಿ ಶರಣರಿಗೆ ಜಾಮೀನು ಮಂಜೂರು ಮಾಡಿತ್ತು. ಪ್ರಕ್ರಿಯೆ ಎಲ್ಲಾ ಮುಗಿದು ನವೆಂಬರ್‌ 16ರಂದು ಜೈಲಿನಿಂದ ಶರಣರು ಬಿಡುಗಡೆಯಾಗಿದ್ದರು.

ಪೋಕ್ಸೊ ಎರಡನೇ ಪ್ರಕರಣದಲ್ಲಿ ಆರೋಪಿ ವಿಚಾರಣೆಗೆ ಹಾಜರಾಗಿಲ್ಲ ಎಂದು ವಿಶೇಷ ನ್ಯಾಯಾಲಯದ ನ್ಯಾಯಾಧೀಶೆ ಬಿ ಕೆ ಕೋಮಲಾ ಅವರು ಆರೋಪಿ ಶರಣರ ವಿರುದ್ಧ ಜಾಮೀನು ರಹಿತ ವಾರೆಂಟ್‌ ಹೊರಡಿಸಿದ್ದರು.

ವಿಚಾರಣೆಯ ಸಂದರ್ಭದಲ್ಲಿ ಪೀಠವು “ಆರೋಪಿ ಚಿತ್ರದುರ್ಗಕ್ಕೆ ಪ್ರವೇಶಿಸಬಾರದು ಎಂದು ಜಾಮೀನು ಮಂಜೂರು ಆದೇಶದಲ್ಲಿ ಹೈಕೋರ್ಟ್‌ನ ಏಕಸದಸ್ಯ ಪೀಠ ಸ್ಪಷ್ಟವಾಗಿ ಹೇಳಿದೆ. ಅದಾಗ್ಯೂ ವಿಶೇಷ ಸರ್ಕಾರಿ ಅಭಿಯೋಜಕರು ವಿಚಾರಣಾಧೀನ ನ್ಯಾಯಾಲಯಕ್ಕೆ ಮೆಮೊ ಸಲ್ಲಿಸಿ, ಆರೋಪಿ ಶರಣರು ವಿಚಾರಣೆಗೆ ಹಾಜರಾಗಿಲ್ಲ ಎಂದು ಹೇಳಿದ್ದಾರೆ. ಇದು ಹೈಕೋರ್ಟ್‌ನ ಆದೇಶಕ್ಕೆ ವಿರುದ್ಧವಲ್ಲವೇ” ಎಂದು ಎಸ್‌ಪಿಪಿ-2ಗೆ ಪ್ರಶ್ನಿಸಿತು.

“ವಿಶೇಷ ನ್ಯಾಯಾಧೀಶರಿಗೆ ಸಂಬಂಧಿಸಿದಂತೆ ನಾವು ಆಡಳಿತಾತ್ಮಕ ವಿಭಾಗದಲ್ಲಿ ಕ್ರಮಕೈಗೊಳ್ಳುತ್ತೇವೆ. ನಿಮ್ಮ ಸಹೋದ್ಯೋಗಿಯ ಬಗ್ಗೆ ಏನು ಕ್ರಮವಹಿಸುತ್ತೀರಿ? ನೀವು ಕ್ರಮಕೈಗೊಳ್ಳಬೇಕು. ನಿಮಗೆ ಒಳ್ಳೆಯ ಪ್ರಕರಣ ಇರಲಿ, ಕೆಟ್ಟ ಪ್ರಕರಣ ಇರಲಿ. ಕಾನೂನು ಪ್ರಕ್ರಿಯೆ ಪ್ರಕಾರ ನಡೆದುಕೊಳ್ಳಬೇಕು. ಇದು ಸೆನ್ಸೇಷನಲ್‌ ಪ್ರಕರಣ ಎಂದ ಮಾತ್ರಕ್ಕೆ ತೀರ್ಪನ್ನು ತಪ್ಪಾಗಿ ಅರ್ಥೈಸಲಾಗದು. ಯಾರೇ ಆದರೂ ನೀವು ಕಾನೂನು ಪಾಲಿಸಬೇಕು” ಎಂದು ಎಸ್‌ಪಿಪಿ-2 ಕುರಿತು ಪೀಠ ಹೇಳಿತು.

ಅಲ್ಲದೇ, “ಆರೋಪಿಯನ್ನು ಚಿತ್ರದುರ್ಗಕ್ಕೆ ಕರೆದೊಯ್ಯುವ ಮೂಲಕ ಹೈಕೋರ್ಟ್‌ನ ಆದೇಶ ಉಲ್ಲಂಘಿಸಲಾಗಿದೆ. ಅರ್ಜಿದಾರನ್ನು ನ್ಯಾಯಾಂಗ ನಿಂದನೆಗೆ ಒಳಗಾಗುವಂತೆ ಮಾಡಿದ್ದೀರಿ” ಎಂದು ಲಘು ದಾಟಿಯಲ್ಲಿ ಮೌಖಿಕವಾಗಿ ಹೇಳಿತು.

Related Stories

No stories found.
Kannada Bar & Bench
kannada.barandbench.com