PM Narendra Modi, WB CM Mamata Banerjee
PM Narendra Modi, WB CM Mamata Banerjee 
ಸುದ್ದಿಗಳು

ಮುಖ್ಯ ಕಾರ್ಯದರ್ಶಿ ವರ್ಗಾವಣೆ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ಎಂದ ಮಮತಾ; ಕರ್ತವ್ಯದಿಂದ ಬಿಡುಗಡೆ ಮಾಡಲು ನಕಾರ

Bar & Bench

ಮುಖ್ಯ ಕಾರ್ಯದರ್ಶಿ ವರ್ಗಾವಣೆ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಪಶ್ಚಿಮ ಬಂಗಾಳ ಸರ್ಕಾರದ ಮುಖ್ಯ ಕಾರ್ಯದರ್ಶಿ ಅಲಪನ್‌ ಬಂಡೋಪಾಧ್ಯಾಯ ಅವರನ್ನು ರಾಜ್ಯ ಸೇವೆಯಿಂದ ಬಿಡುಗಡೆಗೊಳಿಸಲು ನಿರಾಕರಿಸಿದ್ದಾರೆ. ಅಷ್ಟೇ ಅಲ್ಲದೆ, ರಾಜ್ಯ ಸರ್ಕಾರದ ಅಭಿಪ್ರಾಯ ಪಡೆಯದೆ ಬಂಡೋಪಾಧ್ಯಾಯ ಅವರನ್ನು ವರ್ಗಾವಣೆ ಮಾಡಿರುವ ಏಕಪಕ್ಷೀಯ ನಿರ್ಧಾರವು ಅಸಾಂವಿಧಾನಿಕವಾಗಿದ್ದು ಕಾನೂನು ಸಮ್ಮತ ನಡೆಯಲ್ಲ ಎಂದಿದ್ದಾರೆ.

ಮಮತಾ ಅವರ ಕೋರಿಕೆಯಂತೆ ಇತ್ತೀಚೆಗಷ್ಟೇ ಬಂಡೋಪಾಧ್ಯಾಯ ಅವರ ಸೇವಾವಧಿಯನ್ನು ಮೂರು ತಿಂಗಳು ವಿಸ್ತರಿಸಿ ಕೇಂದ್ರ ಸರ್ಕಾರ ಆದೇಶಿಸಿತ್ತು. ಅದು ಚಾಲ್ತಿಯಲ್ಲಿದ್ದು ಸಾಧಾರವಾಗಿರುವುದರಿಂದ ಕೇಂದ್ರದ ಇತ್ತೀಚಿನ ನಿರ್ದೇಶನದಂತೆ ಬಂಡೋಪಾಧ್ಯಾಯ ಅವರನ್ನು ವಾಪಸ್‌ ಕಳಿಸಲು ಸಾಧ್ಯವಿಲ್ಲ ಎಂದು ಮಮತಾ ತಮ್ಮ ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ.

1954ರ ಐಎಎಸ್‌ (ಕೇಡರ್) ನಿಯಮಗಳ ಯಾವುದೇ ಪೂರ್ವ ಷರತ್ತುಗಳನ್ನು ಈಡೇರಿಸದೆ, ಪಶ್ಚಿಮ ಬಂಗಾಳ ಸರ್ಕಾರದೊಂದಿಗೆ ಯಾವುದೇ ಪೂರ್ವ ಸಮಾಲೋಚನೆ ಮಾಡದೆ, ಅಧಿಕಾರಿಯ ಯಾವುದೇ ಇಚ್ಛಾಶಕ್ತಿ/ ಆಯ್ಕೆಗೆ ಅವಕಾಶವಿಲ್ಲದೆ ಏಕಪಕ್ಷೀಯ ʼಆದೇಶʼ ಬಂದಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.

ಏಕಪಕ್ಷೀಯ ಆದೇಶವು ಅಸಾಂವಿಧಾನಿಕವಾಗಿದ್ದು, ಕಾನೂನು ಬದ್ಧವಾಗಿ ಸ್ವೀಕಾರಾರ್ಹವಲ್ಲ. ಈ ರೀತಿ ಹಿಂದೆಂದೂ ನಡೆದಿಲ್ಲ ಎಂದು ಪತ್ರದಲ್ಲಿ ತಿಳಿಸಲಾಗಿದೆ.

"ಪಶ್ಚಿಮ ಬಂಗಾಳ ಸರ್ಕಾರ ಈ ನಿರ್ಣಾಯಕ ಘಳಿಗೆಯಲ್ಲಿ ತನ್ನ ಮುಖ್ಯ ಕಾರ್ಯದರ್ಶಿಯನ್ನು ಬಿಡುಗಡೆ ಮಾಡಲು ಸಾಧ್ಯವಿಲ್ಲ ಮಾಡೂವುದೂ ಇಲ್ಲ. ನಮಗೆ ತಿಳಿದಿರುವ ಪ್ರಕಾರ ಸೇವಾವಧಿಯನ್ನು ವಿಸ್ತರಿಸಿದ ಹಿಂದಿನ ಆದೇಶವನ್ನು ಸಮಾಲೋಚನೆಯ ನಂತರ ಕಾನೂನಾತ್ಮಕವಾಗಿ ಹೊರಡಿಸಲಾಗಿದ್ದು, ಅದನ್ನು ಹಿಂಪಡೆಯಲಾಗಿಲ್ಲ. ಈಗಲೂ ಅದು ಸಕ್ರಿಯವಾಗಿದ್ದು, ಸಿಂಧುವಾಗಿದೆ. ಇತ್ತೀಚಿನ ಆದೇಶ ಕಾನೂನಿನ ಉಲ್ಲಂಘನೆಯಾಗಿದ್ದು ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿದೆ. ಇದು ಯಾವುದೇ ಸಂದರ್ಭದಲ್ಲಿ ಅನೂರ್ಜಿತವಾಗಬಹುದು," ಎಂದು ಅವರು ಪತ್ರದಲ್ಲಿ ಹೇಳಿದ್ದಾರೆ.

“ಏಕಪಕ್ಷೀಯ ಮತ್ತು ಸಮಾಲೋಚನಾರಹಿತ ಆದೇಶ ಹೊರಡಿಸುವುದರೊಂದಿಗೆ ಒಕ್ಕೂಟ ವ್ಯವಸ್ಥೆಯನ್ನು ವಿನಾಶದಂಚಿಗೆ ದೂಡಲಾಗಿದ್ದು, ತೀವ್ರವಾಗಿ ಅವಗಣಿಸಲಾಗಿದೆ. ಒಂದು ರಾಜ್ಯದ ಮುಖ್ಯ ಕಾರ್ಯದರ್ಶಿಯನ್ನು ಈ ರೀತಿ ಹಿಂದಕ್ಕೆ ಕರೆಸಿಕೊಳ್ಳಲು ಸಾಧ್ಯವಾದರೆ, ಮುಖ್ಯಮಂತ್ರಿಗಳು, ಸಚಿವರು ಹಾಗೂ ಅಧಿಕಾರಿಗಳ ಆದೇಶವನ್ನು ಕೆಳಹಂತದ ಅಧಿಕಾರಿಗಳು ಹೇಗೆ ಪಾಲಿಸಬಹುದು ಮತ್ತು ಕಾರ್ಯಗತಗೊಳಿಸಬಹುದು ಎಂದು ಪತ್ರದಲ್ಲಿ ಪ್ರಶ್ನಿಸಲಾಗಿದೆ.

ಪ್ರಧಾನಿ ಮೋದಿ ಮತ್ತು ಮುಖ್ಯಮಂತ್ರಿ ಮಮತಾ ಅವರ ನಡುವೆ ಚಂಡಮಾರುತ ಹಾನಿಗೆ ಸಂಬಂಧಿಸಿದಂತೆ ನಡೆದ ಸಭೆಯೊಂದರ ಬಳಿಕ ಎದ್ದ ವಿವಾದದಿಂದಾಗಿ ಕೇಂದ್ರ ಸರ್ಕಾರ ಮೇ 28ರಂದು ಮುಖ್ಯ ಕಾರ್ಯದರ್ಶಿ ಅವರನ್ನು ಹಿಂದಕ್ಕೆ ಕರೆಸಿಕೊಳ್ಳಲು ಆದೇಶಿಸಿತ್ತು. ಬಂಡೋಪಾಧ್ಯಾಯ ಅವರ ಅಧಿಕಾರಾವಧಿಯನ್ನು ಮೂರು ತಿಂಗಳುಗಳ ಕಾಲ ವಿಸ್ತರಿಸಿ ಆದೇಶ ಹೊರಡಿಸಿದ ನಾಲ್ಕೇ ದಿನಗಳಲ್ಲಿ ಕೇಂದ್ರ ಸರ್ಕಾರ ಅವರನ್ನು ವರ್ಗಾಯಿಸಿ ಆದೇಶ ಹೊರಡಿಸಿತ್ತು.

ಯಸ್‌ ಚಂಡಮಾರುತದಿಂದ ಉಂಟಾದ ಹಾನಿಯನ್ನು ನಿರ್ಣಯಿಸಲು ಪ್ರಧಾನಿ ಮೋದಿ ಅವರೊಂದಿಗೆ ಕರೆಯಲಾಗಿದ್ದ ಸಭೆಗೆ ಹಾಜರಾಗದೆ ಮೋದಿ ಅವರಿದ್ದ ವಿಮಾನನಿಲ್ದಾಣದಲ್ಲಿ 15 ನಿಮಿಷಗಳ ತ್ವರಿತ ಸಂವಾದಕ್ಕೆ ಮಮತಾ ಮುಂದಾಗಿದ್ದರು. ಮೋದಿ ಅವರೊಂದಿಗೆ ಚಂಡಮಾರುತದಿಂದ ಉಂಟಾದ ಹಾನಿಯ ಪರಿಶೀಲನೆಗೆ ಹಾಜರಾಗದೆ ವರದಿಯನ್ನು ನೀಡಿ ಹೊರಟುಹೋಗಿದ್ದರು. ಮೋದಿ ಹಾಗೂ ರಾಜ್ಯಪಾಲ ಜಗದೀಪ್‌ ಧನಕರ್‌ ಅವರನ್ನು ಅರ್ಧ ಗಂಟೆ ಕಾಲ ಮಮತಾ ಕಾಯಿಸಿದ್ದರು ಎಂದು ಕೇಂದ್ರ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿತ್ತು.

“ಕೋವಿಡ್‌ ಎರಡನೇ ಅಲೆ ಹಾಗೂ ನಂತರದ ಚಂಡಮಾರುತದ ನಡುವೆ ರಾಜ್ಯದ ಮಹತ್ವದ ಹಿತಾಸಕ್ತಿಗಳನ್ನು ಪರಿಶೀಲಿಸಿದ ಬಳಿಕ ಮುಖ್ಯ ಕಾರ್ಯದರ್ಶಿ 3 ತಿಂಗಳು ಮುಂದುವರಿಯುವುದು ಕಡ್ಡಾಯ ಎಂದು ನೀವು ಸ್ಪಷ್ಟವಾಗಿ ಒಪ್ಪಿಕೊಂಡ ನಂತರ ಈ ವರ್ಗಾವಣೆಯಾಗಿದೆ. ನಿಮ್ಮ ಸ್ವಂತ ಹಸ್ತಕ್ಷೇಪದಿಂದ ಹೊರಡಿಸಿರುವ ಇಂತಹ ಏಕಪಕ್ಷೀಯ ಆದೇಶ ಅವಿವೇಕದಿಂದ ಕೂಡಿದ್ದು ರಾಜ್ಯ ಮತ್ತು ಅದರ ಜನರ ಹಿತಾಸಕ್ತಿಗಳಿಗೆ ವಿರುದ್ಧವಾಗಿದೆ” ಎಂದು ಅವರು ತಿಳಿಸಿದ್ದಾರೆ.

ಸಾರ್ವಜನಿಕ ಹಿತಾಸಕ್ತಿಯ ದೊಡ್ಡ ಕಾರಣಕ್ಕೆ ತಮ್ಮ ಆದೇಶವನ್ನು ಹಿಂಪಡೆಯಲು, ಮರುಪರಿಶೀಲಿಸುವಂತೆ ಪ್ರಧಾನಿ ಅವರನ್ನು ಮೋದಿ ಕೋರಿದ್ದಾರೆ.

ಬಂಡೋಪಾಧ್ಯಾಯ ಅವರನ್ನು ನವದೆಹಲಿಯ ಸಿಬ್ಬಂದಿ ಮತ್ತು ತರಬೇತಿ ಇಲಾಖೆಗೆ ವರ್ಗಾಯಿಸುವ ಸಂಬಂಧ ಕೇಂದ್ರ ಸರ್ಕಾರವು ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿ (ಸಿಎಟಿ) ಮತ್ತು ಕಲ್ಕತ್ತಾ ಹೈಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಿದೆ ಎಂಬ ಮಾಹಿತಿ ಇದೆ ಎಂದು ಮಮತಾ ಬ್ಯಾನರ್ಜಿ ಶನಿವಾರ ಹೇಳಿದ್ದರು. ಅಲ್ಲದೆ, ಈ ಸಂಬಂದ ಪಶ್ಚಿಮ ಬಂಗಾಳ ಸರ್ಕಾರವೂ ನ್ಯಾಯಾಲಯದ ಮೆಟ್ಟಿಲೇರಲು ಹಿಂಜರಿಯುವುದಿಲ್ಲ ಎನ್ನುವ ಸೂಚನೆಯನ್ನು ನೀಡಿದ್ದರು.