[ಬಂಗಾಳ ಮುಖ್ಯ ಕಾರ್ಯದರ್ಶಿ ವರ್ಗಾವಣೆ] ಕೇಂದ್ರದಿಂದ ಕೇವಿಯಟ್‌; ನಾವೂ ಕೋರ್ಟ್‌ ಮೊರೆ ಹೋಗಬೇಕಾಗಬಹುದು ಎಂದ ಮಮತಾ

ಸಮಸ್ಯೆಗೆ ಸಾಂವಿಧಾನಿಕ ಪರಿಹಾರ ಅಗತ್ಯವಿದೆಯೇ ವಿನಾ ರಾಜಕೀಯ ಪರಿಹಾರವಲ್ಲ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
PM Narendra Modi, WB CM Mamta Banerjee
PM Narendra Modi, WB CM Mamta Banerjee
Published on

ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿ ಅಲಪನ್‌ ಬಂಡೋಪಾಧ್ಯಾಯ ಅವರನ್ನು ದೆಹಲಿಯ ಸಿಬ್ಬಂದಿ ಮತ್ತು ತರಬೇತಿ ಇಲಾಖೆಗೆ ವರ್ಗಾವಣೆ ಮಾಡಿರುವುದರ ಕುರಿತು ಕೇಂದ್ರ ಸರ್ಕಾರವು ಕೇಂದ್ರೀಯ ಆಡಳಿತಾತ್ಮಕ ನ್ಯಾಯಾಧಿಕರಣ (ಸಿಎಟಿ) ಮತ್ತು ಕಲ್ಕತ್ತಾ ಹೈಕೋರ್ಟ್‌ನಲ್ಲಿ ಕೇವಿಯಟ್‌ಗಳನ್ನು ಸಲ್ಲಿಸಿದೆ ಎಂದು ನನಗೆ ತಿಳಿಸಲಾಗಿದೆ. ಹಾಗಾಗಿ, ಬಂಡೋಪಾಧ್ಯಾಯ ಅವರ ವರ್ಗಾವಣೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಕಾನೂನು ಸಾಧ್ಯತೆಗಳನ್ನು ಪರಿಶೀಲಿಸಿಬೇಕಿದೆ ಎಂದು ಶನಿವಾರ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಮಮತಾ ಬ್ಯಾನರ್ಜಿ ಅವರು ಬಂಡೋಪಾಧ್ಯಾಯ ಅವರ ವರ್ಗಾವಣೆಯು ಹೇಗೆ “ಅಸಾಂವಿಧಾನಿಕ ಮತ್ತು ಕಾನೂನುಬಾಹಿರ” ಎಂದು ವಿವರಿಸುವ ಯತ್ನ ಮಾಡಿದರು.

“ಮುಖ್ಯ ಕಾರ್ಯದರ್ಶಿ ಅಲಪನ್‌ ಬಂಡೋಪಾಧ್ಯಾಯ ಅವರನ್ನು ಕೇಂದ್ರಕ್ಕೆ ವರ್ಗಾವಣೆ ಮಾಡುವ ಯತ್ನ ಅಸಾಂವಿಧಾನಿಕ ಮತ್ತು ಕಾನೂನುಬಾಹಿರ. ಇದೊಂದು ರೀತಿಯಲ್ಲಿ ಸಂವಿಧಾನದ ಮೂಲರಚನೆಯನ್ನು ನಾಶ ಮಾಡಿದಂತೆ. ಸಾಂವಿಧಾನಿಕ ಸೌಜನ್ಯತೆ ಎನ್ನುವುದು (ಕೇಂದ್ರಕ್ಕೆ) ಇರಬೇಕಿತ್ತು. ರಾಜ್ಯ ಮತ್ತು ಕೇಂದ್ರ ಸರ್ಕಾರ ಒಟ್ಟಾಗಿ ಕೆಲಸ ಮಾಡಬೇಕು” ಎಂದು ಮುಖ್ಯಮಂತ್ರಿ ಮಮತಾ ಹೇಳಿದರು.

“ಕೇಂದ್ರ ಸರ್ಕಾರವು ಸಿಎಟಿ ಮತ್ತು ಹೈಕೋರ್ಟ್‌ನಲ್ಲಿ ಕೇವಿಯಟ್‌ಗಳನ್ನು ಹಾಕಿದೆ ಎಂದು ನನಗೆ ತಿಳಿಸಲಾಗಿದೆ. ಆದರೆ, ರಾಜ್ಯ ಸರ್ಕಾರವು ಯಾವುದೇ ಕಾನೂನು ಕ್ರಮ ಆರಂಭಿಸಿಲ್ಲ. ಕೇಂದ್ರ ಸರ್ಕಾರ ನ್ಯಾಯಾಲಯಕ್ಕೆ ಹೋಗುವುದಾದರೆ ನಾವು ನ್ಯಾಯಾಲಯದ ಕದ ತಟ್ಟಬೇಕಾಗಬಹುದು. ಅದು ಏಕಮುಖ ಮೊಕದ್ದಮೆಯಾಗಬಾರದು” ಎಂದರು.

ಮುಖ್ಯ ಕಾರ್ಯದರ್ಶಿ ಬಂಡೋಪಾಧ್ಯಾಯ ಸಮರ್ಥ ಅಧಿಕಾರಿಯಾಗಿದ್ದು, ಅವರ ವೃತ್ತಿ ಬದುಕಿನ ಅಂತ್ಯದಲ್ಲಿ ಅವರ ಘನತೆಗೆ ಚ್ಯುತಿ ಉಂಟು ಮಾಡಲಾಗುತ್ತಿದೆ ಎಂದಿದ್ದಾರೆ.

ಮೇ 28ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಮಮತಾ ಬ್ಯಾನರ್ಜಿ ನಡುವೆ ಯಾಸ್‌ ಚಂಡಮಾರುತದಿಂದ ಉಂಟಾಗಿರುವ ಹಾನಿಯ ಕುರಿತಾದ ಪರಿಶೀಲನಾ ಸಭೆಗೆ ಸಂಬಂಧಿಸಿದಂತೆ ವಿವಾದ ಸೃಷ್ಟಿಯಾದ ದಿನವೇ ಮುಖ್ಯ ಕಾರ್ಯದರ್ಶಿಯನ್ನು ಹಿಂದಕ್ಕೆ ಕರೆಸಿಕೊಳ್ಳುವ ಆದೇಶವನ್ನು ಕೇಂದ್ರ ಸರ್ಕಾರ ಹೊರಡಿಸಿತ್ತು.

Also Read
ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲು ಕೇಂದ್ರಕ್ಕೆ ನಿರ್ದೇಶಿಸುವಂತೆ ಕೋರಿ ಸುಪ್ರೀಂನಲ್ಲಿ ಮನವಿ

ಬಂಡೋಪಾಧ್ಯಾಯ ಅವರನ್ನು ಹಿಂದಕ್ಕೆ ಕರೆಸಿಕೊಳ್ಳುವ ಸಂಬಂಧ ಶುಕ್ರವಾರ ಕೇಂದ್ರ ಆದೇಶ ಹೊರಡಿಸಿದೆ. ನಾಲ್ಕು ದಿನಗಳ ಹಿಂದಷ್ಟೇ ಅವರ ಸೇವಾವಧಿಯನ್ನು ಮೂರು ತಿಂಗಳ ಕಾಲ ಕೇಂದ್ರ ಸರ್ಕಾರ ವಿಸ್ತರಿಸಿತ್ತು.

ಯಾಸ್‌ ಸೈಕ್ಲೋನ್‌ ಪ್ರಭಾವ ಪರಿಶೀಲಿಸುವ ಸಂಬಂಧ ಪ್ರಧಾನಿ ಮೋದಿಯವರೊಂದಿಗಿನ ಸಭೆಯ ಬದಲಿಗೆ ಪ್ರಧಾನಿ ಬಂದಿಳಿದ ವಿಮಾನ ನಿಲ್ದಾಣದಲ್ಲಿ ಮಮತಾ ಬ್ಯಾನರ್ಜಿ ಅವರು ಹದಿನೈದು ನಿಮಿಷಗಳ ಚರ್ಚೆ ನಡೆಸಿದ ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ವರ್ಗಾವಣೆಯ ಬೆಳವಣಿಗೆ ನಡೆದಿತ್ತು. ಪ್ರಧಾನಿಯ ಜೊತೆ ಪರಿಶೀಲನಾ ಸಭೆಯಲ್ಲಿ ಭಾಗವಹಿಸಬೇಕಿದ್ದ ಮಮತಾ ಬ್ಯಾನರ್ಜಿ ಈ ಸಂಬಂಧ ವರದಿಯನ್ನು ಪ್ರಧಾನಿಗೆ ನೀಡಿ ಅಲ್ಲಿಂದ ತೆರಳಿದ್ದರು. ಪ್ರಧಾನಿ ಮೋದಿ ಮತ್ತು ರಾಜ್ಯಪಾಲ ಜಗದೀಪ್‌ ಧನ್‌ಕರ್ ಅವರನ್ನು ಮಮತಾ ಬ್ಯಾನರ್ಜಿ ಅರ್ಧ ತಾಸು ಕಾಯಿಸಿದರು ಎಂದು ಕೇಂದ್ರ ಸರ್ಕಾರ ಆರೋಪಿಸಿತ್ತು.

Kannada Bar & Bench
kannada.barandbench.com