ಬೆಂಗಳೂರಿನ ಪಾದಚಾರಿ ಮಾರ್ಗಗಳ ಮೇಲೆ ಅಳವಡಿಸಲಾಗಿರುವ ಟ್ರಾನ್ಸ್‌ಫಾರ್ಮರ್‌ಗಳ ಸ್ಥಳಾಂತರ ಕಾಮಗಾರಿ ವಿಳಂಬವಾಗುತ್ತಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಕರ್ನಾಟಕ ಹೈಕೋರ್ಟ್, ಈ ಬಗ್ಗೆ ವಿವರಣೆ ನೀಡಲು ಖುದ್ದು ನ್ಯಾಯಾಲಯಕ್ಕೆ ಹಾಜರಾಗುವಂತೆ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಿಗೆ ಗುರುವಾರ ತಾಕೀತು ಮಾಡಿದೆ.
ಬೆಂಗಳೂರಿನಲ್ಲಿ ಪಾದಚಾರಿಗಳ ಮಾರ್ಗ ಹಾಗೂ ರಾಜಕಾಲುವೆಗಳ ಮೇಲೆ ಅಳವಡಿಸಲಾಗಿರುವ ಟ್ರಾನ್ಸ್‌ಫಾರ್ಮರ್‌ಗಳನ್ನು ತೆರವುಗೊಳಿಸಲು ನಿರ್ದೇಶಿಸುವಂತೆ ಕೋರಿ ನಿವೃತ್ತ ವಿಂಗ್ ಕಮಾಂಡರ್ ಜಿ ಬಿ ಅತ್ರಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಎಸ್ ಆರ್ ಕೃಷ್ಣ ಕುಮಾರ್ ನೇತೃತ್ವದ ವಿಭಾಗೀಯ ಪೀಠ ನಡೆಸಿತು.
ಇದಕ್ಕೂ ಮುನ್ನ ಬೆಸ್ಕಾಂ ಪರ ವಕೀಲರು “ನಗರದ ಪಾದಚಾರಿ ಮಾರ್ಗಗಳ ಮೇಲಿನ ಟ್ರಾನ್ಸ್‌ಫಾರ್ಮರ್ ಸ್ಥಳಾಂತರಿಸುವ ಕಾಮಗಾರಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಅರ್ಹ ಸಂಸ್ಥೆಗೆ ಕಾಮಗಾರಿ ವಹಿಸಲಾಗಿದೆ. ಈ ಕುರಿತ ವಿವರ ಸಲ್ಲಿಸಲು ಕೊಂಚ ಕಾಲಾವಕಾಶ ನೀಡಬೇಕು ಎಂದು ಮನವಿ ಮಾಡಿದರು.
ಆಗ ಪೀಠವು ಟೆಂಡರ್ ವಿಚಾರ ನಮಗೆ ಬೇಡ. ಪಾದಚಾರಿ ಮಾರ್ಗಗಳ ಮೇಲಿರುವ ಟ್ರಾನ್ಸ್‌ಫಾರ್ಮರ್‌ಗಳನ್ನು ಸ್ಥಳಾಂತರಿಸುವುದಷ್ಟೇ ನಮಗೆ ಬೇಕಿದೆ. ಅದಕ್ಕಾಗಿ ಏನು ಮಾಡಿದ್ದೀರಿ, ಅರ್ಜಿಯ ಕಳೆದ ವಿಚಾರಣೆ ವೇಳೆ ಟ್ರಾನ್ಸ್‌ಫಾರ್ಮರ್‌ಗಳನ್ನು ಎಷ್ಟು ದಿನಗಳ ಒಳಗೆ ತೆರವುಗೊಳಿಸಲಾಗುತ್ತದೆ, ಅದಕ್ಕೆ ಯಾವ ಕ್ರಮ ಕೈಗೊಳ್ಳಲಾಗುತ್ತದೆ ಎಂಬ ಬಗ್ಗೆ ಕ್ರಿಯಾ ಯೋಜನೆ ಸಲ್ಲಿಸುವಂತೆ ನಿರ್ದೇಶಿಸಲಾಗಿತ್ತು. ಈ ಆದೇಶ ಪಾಲನೆ ಮಾಡಲಾಗಿದೆಯೇ ಎಂದು ಪ್ರಶ್ನಿಸಿತು.
ಇದಕ್ಕೆ ಬೆಸ್ಕಾಂ ಪರ ವಕೀಲರು “ಡಿಸೆಂಬರ್ 23ರಂದು ಹೈಕೋರ್ಟ್ ಆದೇಶ ಹೊರಡಿಸಿದ ನಂತರ ಪಾದಚಾರಿ ಮಾರ್ಗದ ಮೇಲಿನ ಟ್ರಾನ್ಸ್‌ಫಾರ್ಮರ್ ಸ್ಥಳಾಂತರಿಸುವ ಕಾಮಗಾರಿಗೆ ಟೆಂಡರ್ ಕರೆಯಲಾಗಿತ್ತು. ಅದರಲ್ಲಿ ಯಶಸ್ವಿಯಾಗಿದ್ದ ಸಂಸ್ಥೆ ಟೆಂಡರ್ ಮೊತ್ತಕ್ಕಿಂತ ಶೇ 56ಕ್ಕೂ ಹೆಚ್ಚಿನ ಮೊತ್ತ ಕೇಳಿತ್ತು. ಈ ಬಗ್ಗೆ ಸಾಕಷ್ಟು ಮಾತುಕತೆ ನಡೆಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಆದ್ದರಿಂದ, ಟೆಂಡರ್ ಹಿಂಪಡೆದು ಹೊಸದಾಗಿ ಟೆಂಡರ್ ಕರೆಯಲಾಯಿತು. ಇದೀಗ ಬೇರೊಂದು ಸಂಸ್ಥೆಗೆ ಕಾಮಗಾರಿ ವಹಿಸಲಾಗಿದೆ," ಎಂದರು.
ಜನರ ಜೀವಕ್ಕೆ ಅಪಾಯ: ಮೊದಲು ನೀವು ತಪ್ಪುಗಳನ್ನು ಮಾಡುತ್ತೀರಿ. ಪಾದಚಾರಿ ಮಾರ್ಗದ ಮೇಲೆ ಟ್ರಾನ್ಸ್‌ಫಾರ್ಮರ್ ಅಳವಡಿಸಲು ನೀವೇ ಅವಕಾಶ ಕೊಡುವ ಮೂಲಕ ಸಾರ್ವಜನಿಕರಿಗೆ ಅನನುಕೂಲ ಉಂಟು ಮಾಡುವುದಲ್ಲದೆ, ಅವರ ಜೀವವನ್ನು ಅಪಾಯಕ್ಕೆ ತಳ್ಳುತ್ತೀರಿ. ಈಗ ಇಲ್ಲಿ ಬಂದು ಅವುಗಳನ್ನು ತೆರವುಗೊಳಿಸಲು ಸಮಸ್ಯೆಯಾಗುತ್ತಿದೆ ಎಂದು ಕಾರಣಗಳನ್ನು ಹೇಳುತ್ತೀರಿ ಎಂದು ಪೀಠವು ಅಸಮಾಧಾನ ವ್ಯಕ್ತಪಡಿಸಿತು. ಅರ್ಜಿದಾರರ ಪರ ವಕೀಲ ಜಿ ಆರ್ ಮೋಹನ್ ಅವರು ಕಳೆದ ವಾರ ಮಲ್ಲತ್ತಹಳ್ಳಿಯಲ್ಲಿ ಟ್ರಾನ್ಸ್‌ಫಾರ್ಮರ್ ಸ್ಫೋಟಗೊಂಡು ಇಬ್ಬರು ಮೃತಪಟ್ಟ ವಿಚಾರವನ್ನು ಪೀಠದ ಗಮನಕ್ಕೆ ತಂದರು.
ಪಾಲಿಕೆ ಪರ ವಕೀಲರು, ಹೊಸದಾಗಿ ಟೆಂಡರ್ ಕರೆದಾಗ ಬೇರೊಂದು ಸಂಸ್ಥೆ ಮುಂದೆ ಬಂದಿದೆ. ಆ ಸಂಸ್ಥೆಗೆ ಈಗಾಗಲೇ ಕಾಮಗಾರಿ ವಹಿಸಲಾಗಿದ್ದು, ನಗರದಲ್ಲಿ ಬಿಬಿಎಂಪಿ ಹಾಗೂ ಬೆಸ್ಕಾಂ ಗುರುತಿಸಿರುವ ಎಲ್ಲ ಟ್ರಾನ್ಸ್‌ಫಾರ್ಮರ್‌ಗಳನ್ನು ತೆರವುಗೊಳಿಸಲು 18 ತಿಂಗಳ ಕಾಲಾವಕಾಶ ನೀಡಲಾಗಿದೆ ಎಂದರು.
ಅದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಪೀಠವು 18 ತಿಂಗಳು ಕಾಲಾವಕಾಶ ನೀಡಿದ್ದು ಯಾರು, ಅಷ್ಟು ಹೆಚ್ಚು ಸಮಯ ನೀಡಿರುವುದೇಕೆ ಎಂದು ಪ್ರಶ್ನಿಸಿತಲ್ಲದೆ, ನೀವು ಟ್ರಾನ್ಸ್‌ಫಾರ್ಮರ್ ಸ್ಥಳಾಂತರಗೊಳಿಸುವ ವಿಚಾರವನ್ನು ಗಂಭೀರವಾಗಿ ಪರಿಗಣಿಸಿಲ್ಲ. ಸಾಕಷ್ಟು ಕಾಲಾವಕಾಶ ನೀಡಲಾಗಿದ್ದರೂ, ಈವರೆಗೂ ಕೆಲಸವನ್ನೇ ಆರಂಭಿಸಿಲ್ಲ. ಆದ್ದರಿಂದ, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರು ಮುಂದಿನ ವಿಚಾರಣೆಗೆ ಖುದ್ದು ಹಾಜರಾಗಿ ಟ್ರಾನ್ಸ್‌ಫಾರ್ಮರ್ ಸ್ಥಳಾಂತರ ಪ್ರಕ್ರಿಯೆ ವಿಳಂಬವಾಗುತ್ತಿರುವುದಕ್ಕೆ ವಿವರಣೆ ನೀಡಬೇಕು ಎಂದು ತಾಕೀತು ಮಾಡಿ, ವಿಚಾರಣೆಯನ್ನು ಏಪ್ರಿಲ್ 7ಕ್ಕೆ ಮುಂದೂಡಿತು.