Transgender Persons (Protection of Rights) Act, 2019 
ಸುದ್ದಿಗಳು

ತೃತೀಯ ಲಿಂಗತ್ವ ಕಾಯಿದೆ ತಾರತಮ್ಯದಿಂದ ರಕ್ಷಣೆ ಒದಗಿಸುತ್ತದೆ: ಕರ್ನಾಟಕ ಹೈಕೋರ್ಟ್‌ನಲ್ಲಿ ಕಾಯಿದೆ ಸಮರ್ಥಿಸಿದ ಕೇಂದ್ರ

ತೃತೀಯ ಲಿಂಗಿಗಳ (ಹಕ್ಕುಗಳ ರಕ್ಷಣೆ) ಕಾಯಿದೆ 2019 ಮತ್ತು ಸಂಬಂಧಿತ ನಿಬಂಧನೆಗಳ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಲಾಗಿರುವ ಮನವಿಯ ವಿಚಾರಣೆಯನ್ನು ಪೀಠ ನಡೆಸಿತು.

Bar & Bench

ತೃತೀಯ ಲಿಂಗಿಗಳ (ಹಕ್ಕುಗಳ ರಕ್ಷಣೆ) ಕಾಯಿದೆ - 2019 ತೃತೀಯ ಲಿಂಗಿಗಳಿಗೆ ಸ್ವಇಚ್ಛೆಯ ಲಿಂಗತ್ವ ಗುರುತು ಹೊಂದಲು ಹಕ್ಕು ನೀಡುತ್ತದೆ ಮತ್ತು ತಾರತಮ್ಯದಿಂದ ಅವರಿಗೆ ರಕ್ಷಣೆ ಒದಗಿಸುತ್ತದೆ ಎಂದು ಸೋಮವಾರ ಕರ್ನಾಟಕ ಹೈಕೋರ್ಟ್‌ನಲ್ಲಿ ಕೇಂದ್ರ ಸರ್ಕಾರವು ಕಾಯಿದೆಯನ್ನು ಸಮರ್ಥಿಸಿಕೊಂಡಿತು.

ತೃತೀಯ ಲಿಂಗಿಗಳ ಸ್ವಯಂ ಗ್ರಹಿಕೆಯ ಲಿಂಗತ್ವವನ್ನು ಗುರುತಿಸಿಕೊಳ್ಳಲು ಕಾಯಿದೆಯು ಅವರಿಗೆ ರಕ್ಷಣೆ ಒದಗಿಸುತ್ತದೆ ಎಂದು ಕಾಯಿದೆಯ ಸೆಕ್ಷನ್‌ಗಳಾದ 4, 5, 6, 7 12 ಮತ್ತು 18 ಅನ್ನು ನಿರ್ದಿಷ್ಟವಾಗಿ ಉಲ್ಲೇಖಿಸಿ ಕೇಂದ್ರ ಸರ್ಕಾರವು ತನ್ನ ವಾದವನ್ನು ಸಮರ್ಥಿಸಿಕೊಂಡಿತು.

“ರಿಟ್‌ ಮನವಿಯಲ್ಲಿ ಉಲ್ಲೇಖಿಸಲಾಗಿರುವ ಪ್ಯಾರಾ 29ಕ್ಕೆ ಸಂಬಂಧಿಸಿದಂತೆ ಕಾಯಿದೆಯ ಸೆಕ್ಷನ್‌ಗಳಾದ 4, 5, 6, 7, 12(3), 18 (ಎ) ಮತ್ತು 18 (ಡಿ) ತೃತೀಯ ಲಿಂಗಿಗಳು ಸ್ವಇಚ್ಛೆಯಿಂದ ಗುರುತಿಸಿಕೊಳ್ಳಲು ಬಯಸುವ ಲಿಂಗತ್ವದ ಹಕ್ಕು ಮತ್ತು ಅವರ ವಿರುದ್ಧ ತಾರತಮ್ಯ ಎಸಗುವವರಿಗೆ ತಕ್ಕ ಶಿಕ್ಷೆ ವಿಧಿಸುವ ಮೂಲಕ ತೃತೀಯ ಲಿಂಗಿಗಳಿಗೆ ರಕ್ಷಣೆ ಒದಗಿಸುತ್ತದೆ” ಎಂದು ನ್ಯಾಯಾಲಯಕ್ಕೆ ತಿಳಿಸಲಾಯಿತು.

ತೃತೀಯ ಲಿಂಗಿಗಳ ರಕ್ಷಣಾ ಕಾಯಿದೆ ಮತ್ತು ಸಂಬಂಧಿತ ನಿಬಂಧನೆಗಳ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಲಾಗಿರುವ ಮನವಿಯ ವಿಚಾರಣೆಯನ್ನು ಪೀಠ ನಡೆಸಿತು. ಸಮರ್ಥ ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಸೆಕ್ಷನ್‌ 12 (ನಿವಾಸದ ಹಕ್ಕು) ತೃತೀಯ ಲಿಂಗಿ ಎಂಬ ಏಕೈಕ ಕಾರಣಕ್ಕೆ ಪೋಷಕರು ಅಥವಾ ತಕ್ಷಣದ ಕುಟುಂದಿಂದ ಮಗು ಪ್ರತ್ಯೇಕಗೊಳ್ಳುವುದರಿಂದ ರಕ್ಷಣೆ ಒದಗಿಸುವುದರ ಜೊತೆಗೆ ಮನೆಯಲ್ಲಿ ಕುಟುಂಬ ಸದಸ್ಯರ ಜೊತೆಗೆ ನೆಲೆಸುವ ಅಥವಾ ಪುನರ್ವಸತಿ ಕೇಂದ್ರಕ್ಕೆ ತೆರಳುವ ಅವರ ಹಕ್ಕನ್ನು ರಕ್ಷಿಸುತ್ತದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಕಾಯಿದೆಯ ಸೆಕ್ಷನ್‌ 18 (ಅಪರಾಧ ಮತ್ತು ದಂಡಗಳು) ತೃತೀಯ ಲಿಂಗಗಳ ಮೇಲಿನ ದೌರ್ಜನ್ಯ ಎಸಗಿದವರಿಗೆ ಈಗಾಗಲೇ ಜಾರಿಯಲ್ಲಿರುವ ಭಾರತೀಯ ದಂಡ ಸಂಹಿತೆಯ ನಿಬಂಧನೆಯಡಿ ಶಿಕ್ಷೆ ವಿಧಿಸಲು ಅನುವು ಮಾಡಿಕೊಡುತ್ತದೆ ಎಂದು ಹೇಳಲಾಗಿದೆ.

ತೃತೀಯ ಲಿಂಗಿಗಳ ಹಕ್ಕು ಮತ್ತು ಹಿತಾಸಕ್ತಿಯನ್ನು ರಕ್ಷಿಸುವುದರ ಜೊತೆಗೆ ಸರ್ಕಾರ ಜಾರಿಗೊಳಿಸುವ ಕಲ್ಯಾಣ ಯೋಜನೆಗಳನ್ನು ಪಡೆದುಕೊಳ್ಳಲು ಕ್ರಮಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಕಾಯಿದೆಯ ಸೆಕ್ಷನ್‌ 8 ನಿರ್ದೇಶಿಸುತ್ತದೆ ಎಂದು ಹೇಳಲಾಗಿದೆ. ಸಂಬಂಧಪಟ್ಟ ಎಲ್ಲರ ಜೊತೆ ಸುದೀರ್ಘವಾಗಿ ಸಮಾಲೋಚನೆ ನಡೆಸಿದ ಬಳಿಕ ಕಾಯಿದೆಯನ್ನು ರೂಪಿಸಲಾಗಿದೆ ಎಂದೂ ಕೇಂದ್ರ ಸರ್ಕಾರ ತಿಳಿಸಿದೆ.

ತೃತೀಯ ಲಿಂಗಿಗಳ (ಹಕ್ಕುಗಳ ರಕ್ಷಣೆ) ಕಾಯಿದೆ 2019ರ ಸೆಕ್ಷನ್‌ಗಳಾದ 4, 5, 6, 7, 12(3), 18 (ಎ) ಮತ್ತು 18 (ಡಿ) ಅನ್ನು ಪ್ರಶ್ನಿಸಿ ಸರ್ಕಾರೇತರ ಸಂಸ್ಥೆ ʼಒಂದೆಡೆʼ ಸಲ್ಲಿಸಿದ್ದ ಮನವಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಪ್ರತಿಕ್ರಿಯೆ ದಾಖಲಿಸಿದೆ.

ತೃತೀಯ ಲಿಂಗಿಗಳಿಗೆ ಹಕ್ಕುಗಳನ್ನು ಕಲ್ಪಿಸಲು ಕಾಯಿದೆ ಜಾರಿಗೊಳಿಸಲಾಗಿದೆ ಎಂದು ಸರ್ಕಾರ ಹೇಳುತ್ತಿದೆ. ಆದರೆ, ಕಾಯಿದೆಯ ನಿಬಂಧನೆಗಳು ಸಂವಿಧಾನದ 14, 15, 16, 19 ಮತ್ತು 21 ಅನ್ನು ಸ್ಪಷ್ಟವಾಗಿ ಉಲ್ಲಂಘಿಸುತ್ತವೆ ಎಂದು ಅರ್ಜಿದಾರರು ವಾದಿಸಿದ್ದಾರೆ. ಕಾಯಿದೆಯ ಸೆಕ್ಷನ್‌ 4ರ ಪ್ರಕಾರ ತೃತೀಯ ಲಿಂಗಿಯು ಪುರುಷ, ಮಹಿಳೆ ಅಥವಾ ಬೇರಾವುದೇ ಪದಕ್ಕೆ ಬದಲಾಗಿ ತೃತೀಯ ಲಿಂಗಿ ಎಂದೇ ಸಂಬೋಧಿಸುವ ಹಕ್ಕು ಹೊಂದಿದ್ದಾರೆ ಎಂದು ಹೇಳಲಾಗಿದೆ. ಇದು ಎನ್‌ಎಎಲ್‌ಎಸ್‌ಎ ವರ್ಸಸ್‌ ಭಾರತ ಸರ್ಕಾರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ತೀರ್ಪಿಗೆ ವಿರುದ್ಧವಾಗಿದೆ ಎಂದು ಅರ್ಜಿದಾರರು ತಕರಾರು ಎತ್ತಿದ್ದರು. ಪ್ರಕರಣದ ವಿಚಾರಣೆಯನ್ನು ಸೆಪ್ಟೆಂಬರ್‌ 8ಕ್ಕೆ ಮುಂದೂಡಲಾಗಿದೆ.