ರಾಜ್ಯ ಸರ್ಕಾರಿ ಸೇವೆಯಲ್ಲಿ ತೃತೀಯ ಲಿಂಗಿಗಳಿಗೆ ಶೇ. 1ರಷ್ಟು ಸಮತಲ ಮೀಸಲಾತಿ ನೀಡುವುದಕ್ಕೆ ಅವಕಾಶ ಮಾಡಿಕೊಡಲಾಗಿದೆ ಎಂದು ರಾಜ್ಯ ಸರ್ಕಾರವು ಕರ್ನಾಟಕ ಹೈಕೋರ್ಟ್‌ಗೆ ಮಂಗಳವಾರ ತಿಳಿಸಿದ್ದು, ದೇಶದಲ್ಲೇ ಈ ಕ್ರಮಕೈಗೊಂಡ ಮೊದಲ ರಾಜ್ಯ ಎಂಬ ಹಿರಿಮೆಗೆ ಕರ್ನಾಟಕ ಪಾತ್ರವಾಗಿದೆ.
ರಾಜ್ಯ ನಾಗರಿಕ ಸೇವೆಗಳ ಸಾಮಾನ್ಯ ನೇಮಕಾತಿ (ನಿಯಮಗಳು) 1977ಕ್ಕೆ ತಿದ್ದುಪಡಿ ಮಾಡುವ ಮೂಲಕ ಮೀಸಲಾತಿಗೆ ಅನುವು ಮಾಡಿಕೊಡಲಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ವಿಭಾಗೀಯಕ್ಕೆ ಸರ್ಕಾರ ತಿಳಿಸಿದೆ.
“ರಾಜ್ಯ ನಾಗರಿಕ ಸೇವೆಗಳ ಸಾಮಾನ್ಯ ನೇಮಕಾತಿ (ನಿಯಮಗಳು) 1977ಕ್ಕೆ ತಿದ್ದುಪಡಿ ಮಾಡಿ ರಾಜ್ಯ ನಾಗರಿಕ ಸೇವೆಗಳ ನೇಮಕಾತಿ ತಿದ್ದುಪಡಿ (ನಿಯಮಗಳು) 2021 ತಂದಿರುವುದನ್ನು ನಾವು ಗಮನಿಸಿದ್ದು, ಇದರಲ್ಲಿ ನಿಯಮ 9ಕ್ಕೆ ಉಪ ನಿಯಮ 1 (ಡಿ) ಸೇರ್ಪಡೆಗೊಳಿಸಲಾಗಿದೆ. ಈ ಉಪನಿಯಮ 1ಡಿ ತೃತೀಯ ಲಿಂಗಿಗಳಿಗೆ ಶೇ. 1ರಷ್ಟು ಸಮತಲ ಮೀಸಲಾತಿ ಕಲ್ಪಿಸುತ್ತದೆ” ಎಂದು ನ್ಯಾಯಾಲಯವು ತನ್ನ ಆದೇಶದಲ್ಲಿ ದಾಖಲಿಸಿದೆ.
ಸರ್ಕಾರಿ ಉದ್ಯೋಗದಲ್ಲಿ ತೃತೀಯ ಲಿಂಗಿಗಳಿಗೆ ಸಮತಲ ಮೀಸಲಾತಿ ಕಲ್ಪಿಸುವ ಕುರಿತು ಸಲ್ಲಿಸಲಾಗಿದ್ದ ಮನವಿಯ ವಿಚಾರಣೆಯನ್ನು ಪೀಠ ನಡೆಸಿತು. ತೃತೀಯ ಲಿಂಗಿಗಳಿಗೆ ಮೀಸಲಾತಿ ಕಲ್ಪಿಸುವ ಸಂಬಂಧ ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗವು (ಎನ್‌ಸಿಬಿಸಿ) ತನ್ನ ವರದಿಯಲ್ಲಿ ಶಿಫಾರಸ್ಸು ಮಾಡಿದ್ದು, ಈ ಕುರಿತು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಲಾಗಿತ್ತು ಎಂದು ಕೇಂದ್ರ ಸರ್ಕಾರದ ಪರ ವಕೀಲರು ವಿಭಾಗೀಯ ಪೀಠಕ್ಕೆ ತಿಳಿಸಿದರು.
ಎನ್‌ಸಿಬಿಸಿ ವರದಿ ಮತ್ತು ಆಕ್ಷೇಪಣಾ ಹೇಳಿಕೆಯನ್ನು ಎರಡು ವಾರಗಳಲ್ಲಿ ನ್ಯಾಯಾಲಯದ ಮುಂದೆ ಮಂಡಿಸಲಾಗುವುದು ಎಂದು ಕೇಂದ್ರ ಸರ್ಕಾರವು ಪೀಠಕ್ಕೆ ತಿಳಿಸಿತು.
ರಾಜ್ಯದ ಇತರೆ ಸರ್ಕಾರಿ ಪ್ರಾಧಿಕಾರಿಗಳಿಗೆ ನೋಟಿಸ್ ಜಾರಿ ಮಾಡುವ ಮೂಲಕ ತೃತೀಯ ಲಿಂಗಿಗಳಿಗೆ ಔದ್ಯೋಗಿಕ ಮೀಸಲಾತಿ ನೀಡುವ ಸಂಬಂಧ ನಿರ್ದೇಶನ ನೀಡುವಂತೆ ಕೋರಿ ಅರ್ಜಿ ಸಲ್ಲಿಸಲಾಗುವುದು ಎಂದು ಮಧ್ಯಪ್ರವೇಶಕಾರರಾಗಿದ್ದ ತೃತೀಯ ಲಿಂಗಿಗಳ ಸಂಸ್ಥೆಯಾದ ʼಜೀವʼ ಪ್ರತಿನಿಧಿಸಿದ್ದ ಹಿರಿಯ ವಕೀಲೆ ಜಯ್ನಾ ಕೊಠಾರಿ ಹೇಳಿದರು.
“ತೃತೀಯ ಲಿಂಗಿಗಳಿಗೆ ಮೀಸಲಾತಿ ಕಲ್ಪಿಸಿದ ಮತ್ತು ಅದನ್ನು ಜಾರಿಗೊಳಿಸಿದ ದೇಶದ ಮೊದಲ ರಾಜ್ಯ ಕರ್ನಾಟಕವಾಗಿದೆ. ಇದೊಂದು ಮಹತ್ವದ ಬೆಳವಣಿಗೆ… ಇದಕ್ಕೆ ನಿರಂತರವಾಗಿ ಶ್ರಮಿಸಿದ ಸ್ನೇಹಿತ ವಿಜಯ್ ಕುಮಾರ್ ಪಾಟೀಲ್‌ಗೆ ಶುಭಾಯಶಗಳು” ಎಂದು ಕೊಠಾರಿ ಅವರು ವಿಚಾರಣೆಯು ಅಂತ್ಯ ಸಮೀಪಿಸುವ ವೇಳೆ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಪಾಟೀಲ್ ಅವರು “ಇದೆಲ್ಲವೂ ಸಾಧ್ಯವಾಗಲು ನ್ಯಾಯಾಲಯದ ನಿರ್ದೇಶನ ಕಾರಣ” ಎಂದರು.