ಸುದ್ದಿಗಳು

2019ರ ಕಾಯಿದೆಗೂ ಮೊದಲು ಲಿಂಗ ಬದಲಾವಣೆ ದಾಖಲಿಸಿದವರು ಗುರುತಿನ ಪ್ರಮಾಣಪತ್ರ ಪಡೆಯಬೇಕಿಲ್ಲ: ಕರ್ನಾಟಕ ಹೈಕೋರ್ಟ್‌

Bar & Bench

2019ರ ತೃತೀಯ ಲಿಂಗಿ ವ್ಯಕ್ತಿಗಳ (ಹಕ್ಕು ರಕ್ಷಣೆ) ಕಾಯಿದೆಗೂ ಮೊದಲು ಲಿಂಗ ಬದಲಾವಣೆ ಕುರಿತಂತೆ ಅಧಿಕೃತ ದಾಖಲೆ ನೀಡಿರುವ ತೃತೀಯ ಲಿಂಗಿಗಳು 2020ರ ತೃತೀಯ ಲಿಂಗಿ ವ್ಯಕ್ತಿಗಳ (ಹಕ್ಕು ರಕ್ಷಣೆ) ನಿಯಮಾವಳಿಗಳಡಿ ಗುರುತಿನ ಪ್ರಮಾಣಪತ್ರಕ್ಕಾಗಿ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್‌ ಸ್ಪಷ್ಟಪಡಿಸಿದೆ.

ತೃತೀಯ ಲಿಂಗಿಗಳು ಸ್ವ-ಗುರುತನ್ನು ನಿರ್ಧರಿಸುವ ಹಕ್ಕನ್ನು ಸುಪ್ರೀಂಕೋರ್ಟ್‌ ಎನ್‌ಎಎಲ್‌ಎಸ್‌ಎ ವರ್ಸಸ್‌ ಭಾರತ ಒಕ್ಕೂಟ ಪ್ರಕರಣದಲ್ಲಿ ಎತ್ತಿ ಹಿಡಿದಿತ್ತು. ಈ ತೀರ್ಪನ್ನೇ ಆಧರಿಸಿ ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ಹಾ ಅವರಿದ್ದ ಪೀಠ ಆದೇಶ ನೀಡಿದೆ (ಕ್ರಿಸ್ಟಿನಾ ಲೊಬೊ ವರ್ಸಸ್‌ ಕರ್ನಾಟಕ ಸರ್ಕಾರ).

ಹಿನ್ನೆಲೆ

ಅರ್ಜಿದಾರರ ಹುಟ್ಟಿನಿಂದ ಗುರುತಿಸಿದ ಲಿಂಗ ಆಕೆಗೆ ಹೊಂದಿಕೆಯಾಗುತ್ತಿರಲಿಲ್ಲ. ಜೈವಿಕವಾಗಿ ಪುರುಷನಾಗಿ ಜನಿಸಿದ್ದನ್ನು ಆಕೆಯ ಪ್ರಮಾಣಪತ್ರ ಹೇಳುತ್ತದೆ.

ಚಿಕ್ಕ ವಯಸ್ಸಿನಿಂದಲೂ ತನ್ನನ್ನು ಹೆಣ್ಣೆಂದು ಆಕೆ ಭಾವಿಸಿದ್ದರು. ಜನ್ಮತಃ ಪುರುಷ ಎಂದು ಅಧಿಕೃತ ದಾಖಲೆಗಳು ಹೇಳಿದ್ದರೂ ಸ್ವ- ಗುರುತಿನ ಪ್ರಕಾರ ಆಕೆ ಸ್ತ್ರೀಯಾಗಿದ್ದಾರೆ. ೨೦೧೮ರ ಲಿಂಗತ್ವ ಬದಲಾವಣೆ ಶಸ್ತ್ರಚಿಕಿತ್ಸೆಗೂ ಆಕೆ ಒಳಗಾಗಿದ್ದರು. ತರುವಾಯ ಅವರು ತನ್ನ ನೂತನ ಹೆಸರು ಮತ್ತು ಹೆಣ್ಣು ಎಂದು ಗುರುತಿಸಿದ ಆಧಾರ್ ಕಾರ್ಡ್ ಮತ್ತು ಪಾಸ್‌ಪೋರ್ಟ್ ಪಡೆದಿದ್ದರು.

2019 ರ ಅಕ್ಟೋಬರ್ 31 ರಂದು ವಿಜಯ ಕರ್ನಾಟಕ ಮತ್ತು ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಗಳಲ್ಲಿ ಪ್ರಕಟವಾದ ಎರಡು ಸೂಚನೆಗಳ ಮೂಲಕ ಅರ್ಜಿದಾರರು ತಮ್ಮ ಹೆಸರು ಮತ್ತು ಲಿಂಗ ಬದಲಾವಣೆ ಉದ್ದೇಶ ಕುರಿತಂತೆ ಅಫಿಡವಿಟ್‌ ನೀಡಿದ್ದರು. ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಅಂಕಪಟ್ಟಿಗಳಲ್ಲಿ ತನ್ನ ಹೆಸರು ಮತ್ತು ಲಿಂಗದ ಗುರುತು ಬದಲಾಯಿಸಲು ಸಂಬಂಧಪಟ್ಟವರು ನಿರಾಕರಿಸಿದ್ದಾರೆ. ಈ ಕುರಿತು ಸೂಕ್ತ ನಿರ್ದೇಶನವನ್ನು ನ್ಯಾಯಾಲಯ ಸಂಬಂಧಪಟ್ಟವರಿಗೆ ನೀಡಬೇಕು ಎಂದು ಕೋರಿದ್ದರು.

ಆದ್ದರಿಂದ, ಪರಿಷ್ಕೃತ ಪಿಯು ಪ್ರಮಾಣಪತ್ರ ನೀಡಲು ಮತ್ತು ಸಿಬಿಎಸ್‌ಇ ಹೊರಡಿಸಿದ ಆದೇಶವನ್ನು ತಿರಸ್ಕರಿಸಲು ನಿರ್ದೇಶನ ನೀಡಬೇಕೆಂದು ಅರ್ಜಿದಾರರು ಕೋರಿದ್ದರು. ಅಲ್ಲದೆ, ತಮ್ಮ ಎಂಬಿಬಿಎಸ್ ಅಂಕಪಟ್ಟಿ ಮತ್ತು ಶೈಕ್ಷಣಿಕ ದಾಖಲೆಗಳಲ್ಲಿ ಹೆಸರು ಮತ್ತು ಲಿಂಗದ ಗುರುತನ್ನು ಬದಲಿಸಬೇಕೆಂದು ಕೂಡ ಅವರು ಮನವಿ ಸಲ್ಲಿಸಿದ್ದಾರೆ.

ವಾದಗಳನ್ನು ಆಲಿಸಿದ ನ್ಯಾಯಾಲಯ, ʼ…ಈ ಕಾಯ್ದೆ ಜಾರಿಗೆ ಬರುವ ಮೊದಲು ಪುರುಷ, ಸ್ತ್ರೀ ಅಥವಾ ತೃತೀಯ ಲಿಂಗಿ ಎಂದು ತಮ್ಮ ಲಿಂಗ ಬದಲಾವಣೆಯನ್ನು ಅಧಿಕೃತವಾಗಿ ದಾಖಲಿಸಿರುವ ತೃತೀಯ ಲಿಂಗಿ ವ್ಯಕ್ತಿಗಳು ಈ ನಿಯಮಾವಳಿಗಳಡಿ ಗುರುತಿನ ಪ್ರಮಾಣಪತ್ರಕ್ಕಾಗಿ ಅರ್ಜಿ ಸಲ್ಲಿಸುವ ಅಗತ್ಯ ಇಲ್ಲʼ ಎಂದು ಹೇಳಿದೆ.

ಅರ್ಜಿದಾರರು ಆಯ್ಕೆ ಮಾಡಿಕೊಂಡಿರುವ ಹೆಸರು ಮತ್ತು ಆಕೆಯ ಲಿಂಗವನ್ನು ಸ್ತ್ರೀ ಎಂಬುದಾಗಿ ಬದಲಿಸುವಂತೆ ಕರ್ನಾಟಕ ರಾಜ್ಯ (ಪದವಿ ಪೂರ್ವ ಶಿಕ್ಷಣ ಇಲಾಖೆ), ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ, ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ಮತ್ತು ಬೆಂಗಳೂರಿನ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯಗಳಿಗೆ ನಿರ್ದೇಶನ ನೀಡಿತು.

ಆದೇಶದ ವಿವರ ಇಲ್ಲಿದೆ:

Karnataka_HC_Transgenders_Certificate_of_Identity.pdf
Preview