ನ್ಯಾಯಮಂಡಳಿ ಸುಧಾರಣಾ ಕಾಯಿದೆ- 2021ರ ಸೆಕ್ಷನ್‌ಗಳ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿದ್ದ ಅರ್ಜಿಗಳನ್ನು ಮುಂದೂಡಬೇಕೆಂಬ ಕೇಂದ್ರ ಸರ್ಕಾರದ ಕೋರಿಕೆಗೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ ಆರ್ ಗವಾಯಿ ಗುರುವಾರ ಗಂಭೀರ ಅಸಮ್ಮತಿ ವ್ಯಕ್ತಪಡಿಸಿದರು.
ತಮ್ಮ ನಿವೃತ್ತಿಗೆ ಕೆಲವೇ ದಿನಗಳು ಇರುವುದರಿಂದ ಸರ್ಕಾರ ತಮ್ಮ ನೇತೃತ್ವದ ಪೀಠದ ವಿಚಾರಣೆ ತಪ್ಪಿಸಲು ಯತ್ನಿಸುತ್ತಿದೆ ಎಂದು ಅವರು ಹೇಳಿದರು.
ಪ್ರಕರಣದ ವಿಚಾರಣೆ ನಾಳೆಗೆ (ನವೆಂಬರ್ 7 ಶುಕ್ರವಾರ) ನಿಗದಿಯಾಗಿದೆ. ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯ ಭಾಟಿ ಅವರ ಮೂಲಕ ಇಂದು ವಿಚಾರಣೆ ಮುಂದೂಡಿಕೆ ಕೋರಿ ಮನವಿ ಸಲ್ಲಿಸಲಾಯಿತು.
ಸಿಜೆಐ ಗವಾಯಿ ಅವರು ಸುಪ್ರೀಂ ಕೋರ್ಟ್‌ನಿಂದ ನಿವೃತ್ತರಾಗುವ ಕೆಲವೇ ದಿನಗಳ ಮೊದಲು ವಿಚಾರಣೆಯನ್ನು ಮುಂದೂಡುವಂತೆ ಕೋರಿದ್ದಕ್ಕಾಗಿ ಭಾರತದ ಅಟಾರ್ನಿ ಜನರಲ್ (ಎಜಿ) ಆರ್ ವೆಂಕಟರಮಣಿ ಅವರನ್ನು ಸಿಜೆಐ ಗವಾಯಿ, ನ್ಯಾಯಮೂರ್ತಿ ಕೆ ವಿನೋದ್ ಚಂದ್ರನ್ ಮತ್ತು ನ್ಯಾಯಮೂರ್ತಿ ವಿಪುಲ್ ಎಂ ಪಂಚೋಲಿ ಅವರಿದ್ದ ಪೀಠ ತರಾಟೆಗೆ ತೆಗೆದುಕೊಂಡಿತು. ಶುಕ್ರವಾರ ಪ್ರಕರಣದ ವಿಚಾರಣೆ ನಡೆಸಿ ವಾರಾಂತ್ಯದಲ್ಲಿ ತೀರ್ಪು ಪ್ರಕಟಿಸಲು ಬಯಸಿರುವುದಾಗಿ ಅದು ತಿಳಿಸಿತು.
ನಾವು ಈಗಾಗಲೇ ನಿಮಗೆ ಎರಡು ಬಾರಿ ಅವಕಾಶ ನೀಡಿದ್ದೇವೆ. ಇನ್ನೂ ಎಷ್ಟು ಬಾರಿ ನೀಡಬೇಕು? ನಿಮಗೆ ವಿಚಾರಣೆ ನವೆಂಬರ್ 24ರ ನಂತರ ಬೇಕೆಂದರೆ ನೇರವಾಗಿ ಹೇಳಿ. (ಅದು ಸಿಜೆಐ ಗವಾಯಿ ನಿವೃತ್ತರಾಗುವ ದಿನ). ಇದು ನ್ಯಾಯಾಲಯಕ್ಕೆ ಸಮ್ಮತವಾದುದಲ್ಲ. ಪ್ರತಿಸಾರಿ ನೀವು 'ಅಂತರರಾಷ್ಟ್ರೀಯ ಮಧ್ಯಸ್ಥಿಕೆ' ಕಾರಣ ಹೇಳಿ ಮುಂದೂಡಿಕೆ ಕೇಳುತ್ತೀರಿ. ನಿಮ್ಮ ಬಳಿ ದೊಡ್ಡ ವಕೀಲರ ತಂಡ ಇದೆ. ಆದರೆ ನೀವು ಮಧ್ಯರಾತ್ರಿ ಸಲ್ಲಿಸಿ ವಿಸ್ತೃತ ಪೀಠಕ್ಕೆ ಪ್ರಕರಣ ವರ್ಗಾಯಿಸಬೇಕೆಂದು ಕೋರುತ್ತೀರಿ!... ನಾಳೆ (ಶುಕ್ರವಾರ) ಬೇರಾವುದೇ ಪ್ರಕರಣದ ವಿಚಾರಣೆ ನಡೆಸದೆ ಇದನ್ನೇ ಆಲಿಸಲು ಯೋಜಿಸಿದ್ದೇವೆ. ವಾರಾಂತ್ಯದಲ್ಲಿ ತೀರ್ಪು ಬರೆಯಲಿದ್ದೇವೆ ಎಂದು ಅದು ನುಡಿಯಿತು.
ನಿಮಗೆ ವಿಚಾರಣೆ ನವೆಂಬರ್ 24 ನಂತರ ಬೇಕೆಂದರೆ ನೇರವಾಗಿ ಹೇಳಿ. (ಅದು ಸಿಜೆಐ ಗವಾಯಿ ನಿವೃತ್ತರಾಗುವ ದಿನ). ಇದು ನ್ಯಾಯಾಲಯಕ್ಕೆ ಸಮ್ಮತವಾದುದಲ್ಲ.ಸುಪ್ರೀಂ ಕೋರ್ಟ್
ಪ್ರಕರಣದ ಅರ್ಜಿದಾರರಲ್ಲಿ ಒಬ್ಬರಾದ ಮದ್ರಾಸ್ ವಕೀಲರ ಸಂಘವನ್ನು ಪ್ರತಿನಿಧಿಸುತ್ತಿರುವ ಹಿರಿಯ ವಕೀಲ ಅರವಿಂದ್ ದಾತಾರ್ ಅವರು ಶುಕ್ರವಾರ ವಾದ ಮುಂದುವರೆಸುವಂತೆ ಬಳಿಕ ನ್ಯಾಯಾಲಯ ಸೂಚಿಸಿತು.
"ಸೋಮವಾರ ಅಟಾರ್ನಿ ಜನರಲ್ ಮಂಡಿಸಲಿ. ಆದರೆ ಎಜಿ ಬರದಿದ್ದರೆ ನಾವು ಪ್ರಕರಣವನ್ನು ಮುಕ್ತಾಯಗೊಳಿಸುತ್ತೇವೆ" ಎಂದು ಸಿಜೆಐ ಗವಾಯಿ ಹೇಳಿದರು.
ನವೆಂಬರ್ 3 ರಂದು ವಿಚಾರಣೆ ನಡೆದಾಗಲೂ ಪ್ರಕರಣದಲ್ಲಿ ತೀರ್ಪು ನೀಡಿದಂತೆ ಕೇಂದ್ರ ಸರ್ಕಾರ ತಡೆಯಲು ಹೊರಟಿದೆ ಎಂದು ಸಿಜೆಐ ಗವಾಯಿ ಟೀಕಿಸಿದ್ದರು. ಪ್ರಕರಣವನ್ನು ವಿಸ್ತೃತ ಪೀಠಕ್ಕೆ ವಹಿಸುವಂತೆ ಕೋರಿ ಅಟಾರ್ನಿ ಜನರಲ್ ಆರ್ ವೆಂಕಟರಮಣಿ ಹಿಂದಿನ ವಿಚಾರಣೆ ವೇಳೆ ತಿಳಿಸಿದ್ದರು. ಆದರೆ ಈ ಮನವಿಯ ಹಿಂದಿನ ಉದ್ದೇಶವೇನು ಎಂದು ಸಿಜೆಐ ಗವಾಯಿ ಪ್ರಶ್ನಿಸಿದ್ದರು.
ನ್ಯಾಯಮಂಡಳಿಗಳಿಗೆ ನೇಮಕಾತಿ, ಸದಸ್ಯರ ಅವಧಿ, ವೇತನ ಸೇರಿದಂತೆ ಹಲವು ವ್ಯವಸ್ಥೆಗಳನ್ನು ಕೇಂದ್ರ ಸರ್ಕಾರದ ವ್ಯಾಪ್ತಿಗೆ ತರಲು ನ್ಯಾಯಮಂಡಳಿ ಸುಧಾರಣಾ ಕಾಯಿದೆ- 2021 ಯತ್ನಿಸುತ್ತದೆ. ಆದರೆ ಕಾಯಿದೆಯಿಂದ ನ್ಯಾಯಾಂಗ ಸ್ವಾತಂತ್ರ್ಯ ಹರಣವಾಗುತ್ತದೆ ಎಂದು ಆಕ್ಷೇಪಿಸಿ ವಿವಿಧ ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಾಗಿದೆ.