Parliament
Parliament 
ಸುದ್ದಿಗಳು

ನ್ಯಾಯಾಧಿಕರಣ ಸುಧಾರಣಾ ಮಸೂದೆಯಲ್ಲಿ ಮೇಲ್ಮನವಿ ಪ್ರಾಧಿಕಾರಗಳಿಗೆ ಬದಲಾಗಿ ಹೈಕೋರ್ಟ್‌ಗಳಿಗೆ ಅಧಿಕಾರ ನೀಡಲು ಪ್ರಸ್ತಾಪ

Bar & Bench

ಕೇಂದ್ರ ಸರ್ಕಾರವು ಫೆಬ್ರವರಿ 13ರಂದು ನ್ಯಾಯಾಧಿಕರಣ ಸುಧಾರಣಾ (ತರ್ಕಬದ್ಧಗೊಳಿಸುವುದು ಮತ್ತು ಸೇವಾ ಷರತ್ತುಗಳು) ಮಸೂದೆ-2021 ಅನ್ನು ಲೋಕಸಭೆಯಲ್ಲಿ ಮಂಡಿಸಿದೆ. ವಿವಿಧ ಕಾಯಿದೆಗಳ ಅನ್ವಯ ಮೇಲ್ಮನವಿ ಪ್ರಾಧಿಕಾರಿಗಳನ್ನು ಕೈಬಿಡುವ ಹತ್ತು ಮಹತ್ವದ ಶಾಸನಗಳ ತಿದ್ದುಪಡಿಗೆ ಮಸೂದೆಯಲ್ಲಿ ಚಿಂತನೆ ನಡೆಸಲಾಗಿದ್ದು, ಮೇಲ್ಮನವಿಗಳ ವಿಚಾರಣೆ ನಡೆಸುವ ಅಧಿಕಾರವನ್ನು ಹೈಕೋರ್ಟ್‌ಗೆ ನೀಡುವ ಆಲೋಚನೆ ಹೊಂದಲಾಗಿದೆ. ವಿವಿಧ ಶಾಸನಗಳಿಗೆ ಕೆಳಗೆ ಉಲ್ಲೇಖಿಸಿರುವಂತೆ ತಿದ್ದುಪಡಿ ಮಾಡಲು ಮಸೂದೆಯಲ್ಲಿ ಚಿಂತನೆ ನಡೆಸಲಾಗಿದೆ.

ಛಾಯಾಗ್ರಹಣ ಕಾಯಿದೆಯ ಪ್ರಕಾರ ಸೆನ್ಸಾರ್‌ ಮಂಡಳಿಯ ನಿರ್ಧಾರಗಳನ್ನು ಮೇಲ್ಮನವಿ ನ್ಯಾಯಾಧಿಕರಣದಲ್ಲಿ ಪ್ರಶ್ನಿಸುವುದರ ಬದಲಿಗೆ ಸಂಬಂಧಿತ ಹೈಕೋರ್ಟ್‌ಗಳು ವಿಚಾರಣೆ ನಡೆಸಲಿವೆ. ಕಾಪಿರೈಟ್‌ ಕಾಯಿದೆ 1957ರ ಪ್ರಕಾರ ಕಾಪಿರೈಟ್ಸ್‌ ರಿಜಿಸ್ಟ್ರಾರ್‌ ಆದೇಶಗಳನ್ನು ಮೇಲ್ಮನವಿ ಮಂಡಳಿಗೆ ಬದಲಾಗಿ ಕಮರ್ಷಿಯಲ್‌ ನ್ಯಾಯಾಲಯಗಳು ಅಥವಾ ಹೈಕೋರ್ಟ್‌ಗಳು ವಿಚಾರಣೆ ನಡೆಸಲಿವೆ. ಮಸೂದೆಯ ಪ್ರಕಾರ ಹೊಸ ನಿಬಂಧನೆಯನ್ನು ಸೇರ್ಪಡೆಗೊಳಿಸಲಾಗುತ್ತಿದ್ದು, ಕಾಪಿರೈಟ್‌ ಕಾಯಿದೆಯೊಳಗೆ 'ವಾಣಿಜ್ಯ ನ್ಯಾಯಾಲಯ' ಎನ್ನುವ ಅಂಶವನ್ನು ಸೇರ್ಪಡೆಗೊಳಿಸಲಾಗುತ್ತದೆ. ಆ ಮೂಲಕ ಈ ಕಾಯಿದೆಯ ವ್ಯಾಪ್ತಿಯಡಿ ಬರುವ ಪ್ರಕರಣಗಳನ್ನು ಸಂಬಂಧಪಟ್ಟ ಸೆಕ್ಷನ್‌ ಅಡಿ ರಚಿತವಾದ 'ವಾಣಿಜ್ಯ ನ್ಯಾಯಾಲಯ'ಗಳು ವಿಚಾರಣೆ ನಡೆಸಲಿವೆ.

ಸೀಮಾ ಸುಂಕ ಕಾಯಿದೆ-1962ರ ಪ್ರಕಾರ ಮೇಲ್ಮನವಿ ಪ್ರಾಧಿಕಾರವನ್ನು ರದ್ದುಪಡಿಸಿ, ಆ ಅಧಿಕಾರವನ್ನು ಹೈಕೋರ್ಟ್‌ಗೆ ವರ್ಗಾಯಿಸಲಾಗಿದೆ. ಹಕ್ಕು ಸ್ವಾಮ್ಯ ಕಾಯಿದೆ 1970ರ ಪ್ರಕಾರ ಮೇಲ್ಮನವಿ ಮಂಡಳಿಯನ್ನು ರದ್ದುಗೊಳಿಸಿ ಅದೆರೆಲ್ಲರ ಅಧಿಕಾರವನ್ನು ಹೈಕೋರ್ಟ್‌ ನೀಡಲು ಉದ್ದೇಶಿಸಲಾಗಿದೆ. ಭಾರತೀಯ ವಿಮಾನ ನಿಲ್ದಾಣಗಳ ಕಾಯಿದೆ 1994ರ ಅನ್ವಯ ವಿಮಾನ ನಿಲ್ದಾಣ ಮೇಲ್ಮನವಿ ನ್ಯಾಯಾಧಿಕರಣವನ್ನು ತೆಗೆದು ಹಾಕಲು ಉದ್ದೇಶಿಸಲಾಗಿದೆ. ಟ್ರೇಡ್‌ಮಾರ್ಕ್‌ ಕಾಯಿದೆ 1999ಯ ಸೆಕ್ಷನ್‌ 83ರ ಅನ್ವಯ ಬೌದ್ಧಿಕ ಹಕ್ಕು ಮೇಲ್ಮನವಿ ಮಂಡಳಿ (ಐಪಿಎಬಿ) ರದ್ದುಗೊಳಿಸಲು ಪ್ರಸ್ತಾಪಿಸಲಾಗಿದೆ. ಇದರ ಬದಲಾಗಿ ಮೇಲ್ಮನವಿಗಳ ವಿಚಾರಣೆಯ ಅಧಿಕಾರವನ್ನು ಹೈಕೋರ್ಟ್‌ಗಳಿಗೆ ನೀಡಲಾಗಿದೆ.

ಸರಕುಗಳ ಭೌಗೋಳಿಕ ಸೂಚನೆಗಳ (ನೋಂದಣಿ ಮತ್ತು ಸಂರಕ್ಷಣೆ) ಕಾಯಿದೆ 1999ರ ಪ್ರಕಾರ ಮೇಲ್ಮನವಿ ಮಂಡಳಿಗೆ ಬದಲಾಗಿ ಹೈಕೋರ್ಟ್‌ಗಳಿಗೆ ಮೇಲ್ಮನವಿ ವಿಚಾರಣೆ ಅಧಿಕಾರ ನೀಡಲಾಗಿದೆ. ಸಸ್ಯ ಪ್ರಭೇದಗಳ ಸಂರಕ್ಷಣಾ ಮೇಲ್ಮನವಿ ನ್ಯಾಯಾಧಿಕರಣವನ್ನು ರದ್ದುಗೊಳಿಸಿ ಅದರ ಹಕ್ಕುಗಳನ್ನು ಹೈಕೋರ್ಟ್‌ಗೆ ಹಸ್ತಾಂತರಿಸಲು ಸಸ್ಯ ಪ್ರಭೇದಗಳ ಸಂರಕ್ಷಣೆ ಮತ್ತು ರೈತರ ಹಕ್ಕುಗಳ ಕಾಯಿದೆ 2001ರಲ್ಲಿ ಪ್ರಸ್ತಾಪಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿಗಳ (ಭೂಮಿ ಮತ್ತು ಸಂಚಾರ) ನಿಯಂತ್ರಣ ಕಾಯಿದೆ 2002ರ ಅನ್ವಯ ವಿಮಾನ ನಿಲ್ದಾಣ ಮೇಲ್ಮನವಿ ನ್ಯಾಯಾಧಿಕರಣವನ್ನು ರದ್ದುಗೊಳಿಸಿ ಅದರ ಬದಲಿಗೆ ಪ್ರಧಾನ ವ್ಯಾಪ್ತಿಯ ಸಿವಿಲ್‌ ನ್ಯಾಯಾಲಯಕ್ಕೆ ಆ ಹಕ್ಕುಗಳನ್ನು ನೀಡಲು ನಿರ್ಧರಿಸಲಾಗಿದೆ.

ಆರ್ಥಿಕ ಕಾಯಿದೆ -2017ರ ಸೆಕ್ಷನ್‌ 184ರಲ್ಲಿ ಉಪ ಸೆಕ್ಷನ್‌ 11ರ ನೂತನ ನಿಬಂಧನೆಯ ಜಾರಿಗೆ ಮಸೂದೆಯು ಮುಂದಾಗಿದೆ. ಈ ಹೊಸ ನಿಬಂಧನೆಯನ್ವಯ ಯಾವುದೇ ನ್ಯಾಯಾಲಯದ ಯಾವುದೇ ತೀರ್ಪು ಅಥವಾ ಆದೇಶಕ್ಕಿಂತ ಉನ್ನತ ಆದ್ಯತೆಯನ್ನು ಈ ನಿಬಂಧನೆಯು ಪಡೆಯುತ್ತದೆ. ಆ ಮೂಲಕ ಸುಪ್ರೀಂ ಕೋರ್ಟಿನ ಈ ಹಿಂದಿನ ತೀರ್ಪುಗಳನ್ನು ಈ ನಿಬಂಧನೆಯು ಮೀರಲಿದೆ.

ಉಪ ಸೆಕ್ಷನ್‌ 11 ಯಾವುದೇ ನ್ಯಾಯಾಲಯದ ತೀರ್ಪು, ಆದೇಶ ಅಥವಾ ಯಾವುದೇ ಕಾನೂನು ಅಸ್ತಿತ್ವದಲ್ಲಿದ್ದರೂ ಅದನ್ನು ಮೀರಿ (i) ನ್ಯಾಯಾಧಿಕರಣದ ಅಧ್ಯಕ್ಷರು ನಾಲ್ಕು ವರ್ಷಗಳವರೆಗೆ ಅಥವಾ ಅವರಿಗೆ ಎಪತ್ತು ವರ್ಷ ವಯಸ್ಸಾಗುವವರೆಗೆ ಅಲ್ಲಿ ಮುಂದುವರೆಯಲಿದ್ದಾರೆ; (ii) ನ್ಯಾಯಾಧಿಕರಣದಲ್ಲಿ ಸದಸ್ಯರಾಗಿ ನೇಮಕವಾಗುವವರು ನಾಲ್ಕು ವರ್ಷ ಅಥವಾ ಅವರಿಗೆ ಅರವತ್ತೇಳು ವರ್ಷಗಳಾಗುವವರೆಗೆ ಮುಂದುವರೆಯಲಿದ್ದಾರೆ, ಇದರಲ್ಲಿ ಯಾವುದು ಮೊದಲೋ ಅದು ಅನ್ವಯಿಸಲಿದೆ.