ಸಂಸತ್‌ ಅವಲೋಕನ: ವಲಸೆ ಕಾರ್ಮಿಕರ ಬಿಕ್ಕಟ್ಟು, ಸುಳ್ಳು ಸುದ್ದಿ, ಕೃಷಿ ತ್ಯಾಜ್ಯ ಮಾಲಿನ್ಯ ಮುಂತಾದ ವಿಷಯಗಳ ಚರ್ಚೆ

ಸಂಸತ್‌ ಬಜೆಟ್‌ ಅಧಿವೇಶನದಲ್ಲಿ ಎತ್ತಲಾದ ಪ್ರಮುಖ ಸಂಸದೀಯ ಪ್ರಶ್ನೆಗಳಿಗೆ ನೀಡಲಾದ ಉತ್ತರಗಳನ್ನು ಸಂಸತ್ ಅವಲೋಕನ ನಿಮ್ಮ ಮುಂದಿರಿಸುತ್ತದೆ.
Parliament Watch
Parliament Watch

ಹಾಲಿ ನಡೆಯುತ್ತಿರುವ ಬಜೆಟ್‌ ಸಂಸತ್‌ ಅಧಿವೇಶನದಲ್ಲಿ ಎತ್ತಲಾದ ಪ್ರಮುಖ ಪ್ರಶ್ನೆಗಳು, ಚರ್ಚೆಗೊಳಪಟ್ಟ ಮಹತ್ವದ ಸಂಗತಿಗಳ ಸುತ್ತ 'ಸಂಸತ್‌ ಅವಲೋಕನ' ಬೆಳಕು ಚೆಲ್ಲುತ್ತದೆ.

ವಲಸೆ ಕಾರ್ಮಿಕರ ಬಿಕ್ಕಟ್ಟು

ವಲಸೆ ಕಾರ್ಮಿಕರನ್ನು ಕೇಂದ್ರೀಕರಿಸಿ ಸಮಗ್ರ ರಾಷ್ಟ್ರೀಯ ನೀತಿಯನ್ನು ಜಾರಿಗೊಳಿಸಲಾಗುತ್ತಿದೆಯೇ ಎಂದು ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವರಾದ ಸಂತೋಷ್‌ ಕುಮಾರ್‌ ಗಂಗ್ವಾರ್ ಅವರಿಗೆ ಪ್ರಶ್ನೆ ಕೇಳಲಾಗಿತ್ತು. ಅದಕ್ಕವರು‌ ಈ ರೀತಿ ಪ್ರತಿಕ್ರಿಯಿಸಿದ್ದಾರೆ:

“ವಲಸೆ ಕಾರ್ಮಿಕರಿಗೆ ರಾಷ್ಟ್ರೀಯ ಕಾರ್ಯ ಯೋಜನೆ ಸಿದ್ಧಪಡಿಸಲು ಉಪ ಸಮಿತಿಯನ್ನು ನೀತಿ ಆಯೋಗ ಸೃಷ್ಟಿಸಿದೆ. ಈ ಗುಂಪಿನಲ್ಲಿ ವಿವಿಧ ಸಚಿವಾಲಯಗಳ ಸದಸ್ಯರು, ವಿಷಯ ತಜ್ಞರು, ಸರ್ಕಾರೇತರ ಸಂಸ್ಥೆಗಳು, ನಾಗರಿಕ ಸಮಾಜದ ಸಂಸ್ಥೆಗಳು ಸ್ಥಾನ ಪಡೆದಿವೆ. ಇವರೆಲ್ಲರೂ ವಲಸೆ ಕಾರ್ಮಿಕರಿಗೆ ಸಂಬಂಧಿಸಿದ ಸ್ಪಷ್ಟ ಕಾರ್ಯ ಯೋಜನೆ ಸಿದ್ಧಪಡಿಸಲಿದ್ದಾರೆ. ಲಾಕ್‌ಡೌನ್‌ ಸಂದರ್ಭದಲ್ಲಿ ಗ್ರಾಮಗಳಿಗೆ ಮರಳಿದ ವಲಸೆ ಕಾರ್ಮಿಕರಿಗಾಗಿ ಕೇಂದ್ರ ಸರ್ಕಾರವು ಗರೀಬ್‌ ಕಲ್ಯಾಣ್‌ ರೋಜಗಾರ್‌ ಅಭಿಯಾನವನ್ನು ಕಳೆದ ವರ್ಷದ ಜೂನ್‌ನಲ್ಲಿ ಆರಂಭಿಸಿದೆ ಎಂದಿದ್ದಾರೆ.

“ಉದ್ಯೋಗ ಕಲ್ಪಿಸುವ ದೃಷ್ಟಿಯಿಂದ 25 ಗುರಿ ಕೇಂದ್ರಿತ ಕೆಲಸಗಳನ್ನು ಒಳಗೊಂಡ ಗರೀಬ್‌ ಕಲ್ಯಾಣ್‌ ರೋಜಗಾರ್‌ ಅಭಿಯಾನ ಅರಂಭಿಸಲಾಗಿದ್ದು, 50 ಸಾವಿರ ಕೋಟಿ ರೂಪಾಯಿ ಮೊತ್ತದಲ್ಲಿ ಆರು ರಾಜ್ಯಗಳ 116 ಜಿಲ್ಲೆಗಳಲ್ಲಿನ ಗ್ರಾಮೀಣ ಪ್ರದೇಶದಲ್ಲಿ ಮೂಲಸೌಕರ್ಯ ಕಲ್ಪಿಸಲಾಗುತ್ತಿದೆ. ಈ ಸಂಬಂಧ ಈಗಾಗಲೇ ಅಂದಾಜು 39,293 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದ್ದು, ಅಭಿಯಾನದಿಂದ 50,78,68,671 ಮಾನವ ದಿನದ ಉದ್ಯೋಗ ಸೃಷ್ಟಿಸಲಾಗಿದೆ” ಎಂದಿದ್ದಾರೆ. ಲಾಕ್‌ಡೌನ್‌ ಸಂದರ್ಭದಲ್ಲಿ 1,14,30,968 ವಲಸೆ ಕಾರ್ಮಿಕರು ತವರಿಗೆ ಮರಳಿದ್ದು, ಈ ಪೈಕಿ ಬಹುತೇಕರು ಮತ್ತೆ ಕೆಲಸಕ್ಕೆ ಹಾಜರಾಗಿದ್ದಾರೆ ಎಂದು ಸ್ಪಷ್ಟಪಡಿಸಲಾಗಿದೆ.

ದಿವಾಳಿ ಮತ್ತು ರಾಷ್ಟ್ರೀಯ ಕಂಪೆನಿ ಕಾನೂನು ನ್ಯಾಯಾಧಿಕರಣ

ಕಳೆದ ವರ್ಷದಲ್ಲಿ ರಾಷ್ಟ್ರೀಯ ಕಂಪೆನಿ ಕಾನೂನು ನ್ಯಾಯಾಧಿಕರಣದ ಮುಂದೆ ದಿವಾಳಿ ಎಂದು ಮಾಹಿತಿ ನೀಡಿರುವ ಕಂಪೆನಿಗಳ ವಿವರ ನೀಡುವಂತೆ ಸಂಸದ ಬೆನ್ನಿ ಬೆಹನಾನ್‌ ಅವರು ಕಾರ್ಪೊರೇಟ್‌ ಇಲಾಖೆಗೆ ಪ್ರಶ್ನೆ ಹಾಕಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಎನ್‌ಸಿಎಲ್‌ಟಿ ದತ್ತಾಂಶದ ಪ್ರಕಾರ ಹಣಕಾಸು ನಷ್ಟ ಮತ್ತು ದಿವಾಳಿ ಸಂಹಿತೆ – 2016ರ ಅಡಿ 2020ರ ಏಪ್ರಿಲ್-ಡಿಸೆಂಬರ್‌ ಅವಧಿಯಲ್ಲಿ 2,278 ಪ್ರಕರಣ ದಾಖಲಾಗಿವೆ. ಈ ಪೈಕಿ 176 ಪ್ರಕರಣ ವಿಲೇವಾರಿ ಮಾಡಲಾಗಿದೆ ಎಂದಿದ್ದಾರೆ.

ಬಾಲ ಕಾರ್ಮಿಕರು ಮತ್ತು ಪುನರ್ವಸತಿ

ಬಾಲ ಕಾರ್ಮಿಕರು ಮತ್ತು ರಕ್ಷಣಾ ಕಾರ್ಯಾಚರಣೆ ಕುರಿತು ಕಾರ್ಮಿಕ ಮತ್ತು ಉದ್ಯೋಗ ಇಲಾಖೆಯ ಸಚಿವ ಪ್ರದ್ಯುತ್‌ ಬೊರ್ದೋಲೊಯ್‌ ಅವರಿಗೆ ಕೆಳಗಿನ ಪ್ರಶ್ನೆಗಳನ್ನು ಹಾಕಲಾಗಿದೆ.

  • ಮಕ್ಕಳು ಮತ್ತು ಅಪ್ರಾಪ್ತ ಕಾರ್ಮಿಕರ (ನಿಷೇಧ ಮತ್ತು ನಿಯಂತ್ರಣ) ಕಾಯಿದೆ 1986ರ ಅಡಿ 2020ರಲ್ಲಿ ದಾಖಲಿಸಲಾದ ಎಫ್‌ಐಆರ್‌ಗಳು ಎಷ್ಟು?

  • ಪ್ರತೀ ರಾಜ್ಯದಲ್ಲಿ ಕೋವಿಡ್‌ ಸಂದರ್ಭದಲ್ಲಿ ಸಂರಕ್ಷಿಸಲಾದ ಮಕ್ಕಳು ಮತ್ತು ಅಪ್ರಾಪ್ತ ಕಾರ್ಮಿಕರ ಸಂಖ್ಯೆ ಎಷ್ಟು?

  • ರಾಜ್ಯ ಮತ್ತು ವರ್ಷದ ಪ್ರಕಾರ 2017ರಿಂದ ಪುನರ್‌ ವಸತಿ ಕಲ್ಪಿಸಲಾದ ಮಕ್ಕಳು ಮತ್ತು ಅಪ್ರಾಪ್ತ ಕಾರ್ಮಿಕರ ಸಂಖ್ಯೆ ಎಷ್ಟು?

2017ರಿಂದ ರಾಷ್ಟ್ರೀಯ ಮಕ್ಕಳ ಕಾರ್ಮಿಕರ ಯೋಜನೆಯ ಅಡಿ ಹಲವು ಮಕ್ಕಳನ್ನು ಕೆಲಸ ಮಾಡುವ ಸ್ಥಳದಿಂದ ರಕ್ಷಿಸಿ, ಪುನರ್‌ ವಸತಿ ಕಲ್ಪಿಸಿ ಮುಖ್ಯ ವಾಹಿನಿಗೆ ತರಲಾಗಿದೆ. 2019-2020ರ ಅವಧಿಯಲ್ಲಿ 54,894 ಮಕ್ಕಳನ್ನು ರಕ್ಷಿಸಲಾಗಿದ್ದು, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳದಲ್ಲಿ ಅತಿ ಹೆಚ್ಚು ಮಕ್ಕಳನ್ನು ಸಂರಕ್ಷಿಸಲಾಗಿದೆ.

ಮಕ್ಕಳು ಮತ್ತು ಅಪ್ರಾಪ್ತ ಕಾರ್ಮಿಕರ (ನಿಷೇಧ ಮತ್ತು ನಿಯಂತ್ರಣ) ಕಾಯಿದೆ 1986ರ ಅಡಿ ದಾಖಲಿಸಲಾದ ಎಫ್‌ಐಆರ್‌ ವಿವರವನ್ನು ಕೇಂದ್ರ ಸರ್ಕಾರ ಸಿದ್ಧಪಡಿಸಿಲ್ಲ. ಇದಕ್ಕಾಗಿ ರಾಜ್ಯಗಳು ನೀಡಿರುವ ಅಂಕಿ-ಸಂಖ್ಯೆಗಳನ್ನು ಪೂರೈಸಲಾಗುತ್ತಿದೆ. ಉತ್ತರ ಪ್ರದೇಶದಲ್ಲಿ ಏಕೈಕ ಎಫ್‌ಐಆರ್‌ ದಾಖಲಾಗಿದ್ದು, ಗುಜರಾತ್‌ನಲ್ಲಿ ಗರಿಷ್ಟ 56 ಪ್ರಕರಣ ದಾಖಲಿಸಲಾಗಿದೆ ಎಂದು ಸರ್ಕಾರ ಉತ್ತರಿಸಿದೆ.

ಸುಳ್ಳು ಸುದ್ದಿ ಮತ್ತು ತಪ್ಪು ಮಾಹಿತಿ

ಕೋವಿಡ್‌ ಸಂದರ್ಭದಲ್ಲಿ ಸುಳ್ಳು ಸುದ್ದಿಯು ತಪ್ಪು ಮಾಹಿತಿಗೆ ಅವಕಾಶ ಮಾಡಿಕೊಟ್ಟು ವ್ಯಕ್ತಿ ಮತ್ತು ದೇಶಕ್ಕೆ ಹಾನಿ ಉಂಟು ಮಾಡುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ? ಇದನ್ನು ನಿಯಂತ್ರಿಸಲು ಯಾವ ಕ್ರಮಕೈಗೊಳ್ಳಲಾಗಿದೆ ಎಂದು ಕೇರಳ ಸಂಸದ ಥಾಮಸ್‌ ಕಾಜಿಕಡನ್‌ ಅವರು ಮಾಹಿತಿ ಮತ್ತು ಪ್ರಸಾರ ಇಲಾಖೆಯ ಸಚಿವ ಪ್ರಕಾಶ್‌ ಜಾವಡೇಕರ್‌ ಅವರಿಗೆ ಪ್ರಶ್ನೆ ಹಾಕಿದ್ದರು.

ಕಳೆದ ಏಪ್ರಿಲ್‌ನಲ್ಲಿ ಮಾಧ್ಯಮ ಮಾಹಿತಿ ಘಟಕವು (ಪಿಐಬಿ) ಕೋವಿಡ್‌ ವಾಸ್ತವಾಂಶ ಪರಿಶೀಲನಾ ಘಟಕವನ್ನು ಆರಂಭಿಸಲಾಗಿದ್ದು, ಈ ಮೂಲಕ ಸರಿಯಾದ ಮತ್ತು ತೀರ ಈಚೆಗಿನ ಮಾಹಿತಿ ಹಂಚಲಾಗುತ್ತಿದೆ. ಕಳೆದ ಏಪ್ರಿಲ್‌ನಲ್ಲಿ ಭಾರತೀಯ ಮಾಧ್ಯಮ ಒಕ್ಕೂಟವು ಕೋವಿಡ್‌ಗೆ ಸಂಬಂಧಿಸಿದಂತೆ ಪರಿಶೀಲಿಸಿದ ವಾಸ್ತವ ಸಂಗತಿಗಳನ್ನು ಒಳಗೊಂಡ ಸುದ್ದಿ ಮಾತ್ರವೇ ಬಿತ್ತಿರಿಸುವಂತೆ ಮಾಧ್ಯಮ ಸಂಸ್ಥೆಗಳಿಗೆ ಸೂಚಿಸಿದೆ ಎಂದು ಸರ್ಕಾರ ಹೇಳಿದೆ.

ಆರೋಗ್ಯ ಕಾರ್ಯಕರ್ತರು ಮತ್ತು ಮುಂಚೂಣಿ ಕಾರ್ಯಕರ್ತರಿಗೆ ಪರಿಹಾರ

ಕೋವಿಡ್‌ ಸಾಂಕ್ರಾಮಿಕತೆಯ ಸಂದರ್ಭದಲ್ಲಿ ಸಾವನ್ನಪ್ಪಿದ ವೈದ್ಯರು/ ಆರೋಗ್ಯ ಕಾರ್ಯಕರ್ತರ ಕುರಿತಾದ ದತ್ತಾಂಶ ಮತ್ತು ರಾಜ್ಯ/ಕೇಂದ್ರಾಡಳಿತ ಪ್ರದೇಶದಲ್ಲಿ ಕೋವಿಡ್‌ ವಿರುದ್ಧದ ಹೋರಾಟದಲ್ಲಿ ಸಾವನ್ನಪ್ಪಿದ ವೈದ್ಯರು, ದಾದಿಯರು ಮತ್ತು ಇತರೆ ಆರೋಗ್ಯ ಕಾರ್ಯಕರ್ತರಿಗೆ ಹಣಕಾಸು ಮತ್ತು ಇತರೆ ಸೌಲಭ್ಯ ಕಲ್ಪಿಸಿರುವುದರ ಕುರಿತಾದ ಮಾಹಿತಿ ಕೋರಲಾಗಿತ್ತು.

ಆರೋಗ್ಯವು ರಾಜ್ಯ ಸರ್ಕಾರಗಳಿಗೆ ಸಂಬಂಧಿಸಿದ ವಿಷಯವಾದುದರಿಂದ ದೇಶಾದ್ಯಂತ ಇರುವ ಸರ್ಕಾರಿ ಆಸ್ಪತ್ರೆಗಳಲ್ಲಿ ಕೋವಿಡ್‌ ಸೇವೆಯಲ್ಲಿ ತೊಡಗಿರುವ ಆರೋಗ್ಯ ಕಾರ್ಯಕರ್ತರ ದತ್ತಾಂಶವನ್ನು ಹೊಂದಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ. ಕೋವಿಡ್‌ ಸಂಬಂಧಿತ ಕೆಲಸಗಳಿಗೆ ಆಶಾ ಕಾರ್ಯಕರ್ತರು ಗಣನೀಯ ಜವಾಬ್ದಾರಿ ನಿರ್ವಹಿಸಿರುವ ಹಿನ್ನೆಲೆಯಲ್ಲಿ ಪ್ರತಿ ತಿಂಗಳಿಗೆ ಅವರಿಗೆ ತಲಾ 1,000 ರೂಪಾಯಿ ಪ್ರೋತ್ಸಾಹ ಧನ ನೀಡಲಾಗತ್ತಿದೆ ಎಂದು ಸರ್ಕಾರ ಹೇಳಿದೆ.

Also Read
ಸಂಸತ್‌ ಅವಲೋಕನ: ರೈತರ ಪ್ರತಿಭಟನೆ, ನ್ಯಾಯಮೂರ್ತಿಗಳ ಖಾಲಿ ಹುದ್ದೆ ಮುಂತಾದ ಹಲವು ವಿಚಾರಗಳಿಗೆ ಕೇಂದ್ರದ ಪ್ರತಿಕ್ರಿಯೆ

ಪ್ರಧಾನ ಮಂತ್ರಿ ಗರೀಬ್‌ ಕಲ್ಯಾಣ ನಿಧಿಯಡಿ ಆರೋಗ್ಯ ಕಾರ್ಯಕರ್ತರಿಗೆ ವಿಮೆ ಪ್ರಕಾರ ರಾಜ್ಯಗಳಿಂದ ಸ್ವೀಕರಿಸಲಾದ ಮಾಹಿತಿಯ ಅನ್ವಯ ಸಾಂಕ್ರಾಮಿಕತೆ ಸಂದರ್ಭದಲ್ಲಿ 199 ಆರೋಗ್ಯ ಕಾರ್ಯಕರ್ತರು ಸಾವನ್ನಪ್ಪಿದ್ದಾರೆ. ಮಹಾರಾಷ್ಟ್ರದಲ್ಲಿ 11 ದಾದಿಯರು, 21 ವೈದ್ಯರು, ಇತರೆ 55 ಕಾರ್ಮಿಕರು ಸಾವನ್ನಪ್ಪಿದ್ದಾರೆ ಎಂದು ಮಾಹಿತಿ ನೀಡಿದೆ.

ಕೃಷಿ ತ್ಯಾಜ್ಯ ಸುಡುವುದರಿಂದ ಉಂಟಾಗಿರುವ ಮಾಲಿನ್ಯ

ಕರ್ನಾಟಕದ ಬಾಗಲಕೋಟೆ ಸಂಸದ ಪಿ ಸಿ ಗದ್ದಿಗೌಡರ್‌ ಅವರು ಕೃಷಿ ತ್ಯಾಜ್ಯ ಸುಡುವುದರಿಂದ ಆಗುತ್ತಿರುವ ಮಾಲಿನ್ಯ ನಿಯಂತ್ರಿಸಲು ಯಾವೆಲ್ಲಾ ಕ್ರಮಕೈಗೊಳ್ಳಲಾಗಿದೆ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಸರ್ಕಾರವು ರಾಷ್ಟ್ರ ರಾಜಧಾನಿಯ ವ್ಯಾಪ್ತಿ ಮತ್ತು ಅದರ ಸುತ್ತಿಲಿನ ಪ್ರದೇಶದಲ್ಲಿ ವಾಯು ಗುಣಮಟ್ಟ ನಿರ್ವಹಿಸಲು ಆಯೋಗವನ್ನು ರಚಿಸಲಾಗಿದ್ದು, ಅದರ ಅಡಿ ವಿವಿಧ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸರ್ಕಾರವು ವಿವರವಾದ ಮಾಹಿತಿ ಒದಗಿಸಿದೆ.

Related Stories

No stories found.
Kannada Bar & Bench
kannada.barandbench.com