Tu Meri Mai Tera Mai Tera Tu Meri film poster  
ಸುದ್ದಿಗಳು

ʼಸಾತ್ ಸಮುಂದರ್ ಪಾರ್ʼ ಹಾಡಿನ ಅಕ್ರಮ ಬಳಕೆ: ₹10 ಕೋಟಿ ಪರಿಹಾರ ಕೇಳಿದ ತ್ರಿಮೂರ್ತಿ ಫಿಲ್ಮ್ಸ್

ತೊಂಬತ್ತರ ದಶಕದಲ್ಲಿ ತೆರೆ ಕಂಡಿದ್ದ ವಿಶ್ವಾತ್ಮ ಚಿತ್ರದ 'ಸಾತ್ ಸಮುಂದರ್ ಪಾರ್' ಹಾಡಿನ ಅನಧಿಕೃತ ರಿಮಿಕ್ಸ್ ಮತ್ತು ಬಳಕೆ ಮಾಡಲಾಗಿದೆ ಎಂದು ತ್ರಿಮೂರ್ತಿ ಫಿಲ್ಮ್ಸ್ ಆರೋಪಿಸಿದೆ.

Bar & Bench

ಬಿಡುಗಡೆಯ ಹೊಸ್ತಿಲಲ್ಲಿರುವ ‘ತು ಮೇರಿ ಮೈ ತೇರಾʼ ಚಿತ್ರದಲ್ಲಿ 1992ರ ವಿಶ್ವಾತ್ಮ ಚಿತ್ರದ ʼಸಾತ್ ಸಮುಂದರ್ ಪಾರ್ʼ ಹಾಡನ್ನು ಬಳಸಿದ್ದು ಹಕ್ಕು ಸ್ವಾಮ್ಯ ಉಲ್ಲಂಘಿಸಲಾಗಿದೆ ಎಂದು ಆರೋಪಿಸಿ ಕರಣ್ ಜೋಹರ್ ಅವರ ಧರ್ಮಾ ಪ್ರೊಡಕ್ಷನ್ಸ್ ವಿರುದ್ಧ ತ್ರಿಮೂರ್ತಿ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಬಾಂಬೆ ಹೈಕೋರ್ಟ್‌ನಲ್ಲಿ ಮೊಕದ್ದಮೆ ದಾಖಲಿಸಿದೆ [ತ್ರಿಮೂರ್ತಿ ಫಿಲ್ಮ್ಸ್ ಮತ್ತು ಧರ್ಮ ಪ್ರೊಡಕ್ಷನ್ಸ್‌ ಇನ್ನಿತರರ ನಡುವಣ ಪ್ರಕರಣ].

ಡಿಸೆಂಬರ್ 25ರಂದು ಬಿಡುಗಡೆಯಾಗಲಿರುವ ಈ ಚಿತ್ರ ಸೇರಿದಂತೆ ಬೇರೆ ಯಾವುದೇ ಚಿತ್ರಗಳಲ್ಲಿ ಈ ಹಾಡಿನ ಸಂಗೀತ ಸಾಹಿತ್ಯ ಬಳಕೆ ಅಥವಾ ರಿಮಿಕ್ಸ್‌ ಮಾಡದಂತೆ ಶಾಶ್ವತ ತಡೆಯಾಜ್ಞೆ ನೀಡಬೇಕು ಎಂದು ಅದು ಕೋರಿದ್ದು ಜೊತೆಗೆ ₹10 ಕೋಟಿ ಪರಿಹಾರ ನೀಡುವಂತೆ ಮನವಿ ಮಾಡಿದೆ.

ಪ್ರಕರಣದಲ್ಲಿ ಧರ್ಮ ಫಿಲ್ಮ್ಸ್‌ ಮಾತ್ರವಲ್ಲದೆ ನಮಃ ಸಂಸ್ಥೆ, ಸರೇಗಮಾ ಇಂಡಿಯಾ ಲಿಮಿಟೆಡ್  ಹಾಗೂ ಸಂಗೀತಗಾರ ʼಬಾದ್‌ಶಾʼ ಆದಿತ್ಯ ಪ್ರತೀಕ್ ಸಿಂಗ್ ಅವರನ್ನೂ ಪ್ರತಿವಾದಿಗಳನ್ನಾಗಿ ಮಾಡಲಾಗಿದೆ.

ನ್ಯಾ. ಶರ್ಮಿಳಾ ದೇಶಮುಖ್‌ ಅವರಿದ್ದ ಪೀಠ ಪ್ರಕರಣವನ್ನು ಆಲಿಸಿದ್ದು ಪ್ರತಿವಾದಿಗಳಿಗೆ ಪ್ರತಿಕ್ರಿಯೆ ಸಲ್ಲಿಸಲು ಕಾಲಾವಕಾಶ ನೀಡಿದೆ. ತುರ್ತು ಮಧ್ಯಂತರ ಪರಿಹಾರಗಳನ್ನು ನೀಡಬೇಕೇ ಎಂಬ ವಿಚಾರವಾಗಿ ಡಿಸೆಂಬರ್ 22ರಂದು ಮತ್ತೆ ಪ್ರಕರಣದ ವಿಚಾರಣೆ ನಡೆಯಲಿದೆ.

ವಿಶ್ವಾತ್ಮ  ಚಿತ್ರ ಹಾಗೂ ಅದರ ಎಲ್ಲಾ ಹಾಡುಗಳ ಹಕ್ಕುಸ್ವಾಮ್ಯ ಪಡೆದ ಮೊದಲ ಮಾಲೀಕ ತಾನೇ ಆಗಿದ್ದು, ಹಾಡಿನ ಸಂಗೀತ, ಸಾಹಿತ್ಯ ಮತ್ತು ಧ್ವನಿಮುದ್ರಣದ ಮೇಲಿನ ಸಂಪೂರ್ಣ ಹಕ್ಕು ತನಗೆ ಇದೆ. 1990ರಲ್ಲಿ ಸರೇಗಮಾದ ಈ ಹಿಂದಿನ ಸಂಸ್ಥೆಯೊಂದಿಗೆ ನಡೆದ ಒಪ್ಪಂದವು ಕೇವಲ ಮೂಲ ಧ್ವನಿಮುದ್ರಣದ ಪುನರ್ಮುದ್ರಣ ಮತ್ತು ವಿತರಣೆಗೆ ಮಾತ್ರ ಸೀಮಿತವಾಗಿದ್ದು, ಹಾಡನ್ನು ಪರಿವರ್ತನೆ ಮಾಡುವುದು, ರೀಮಿಕ್ಸ್ ಮಾಡುವುದು ಅಥವಾ ಬೇರೆ ಚಿತ್ರದಲ್ಲಿ ಅಳವಡಿಸುವ ಹಕ್ಕು ನೀಡಿಲ್ಲ ಎಂದು ತ್ರಿಮೂರ್ತಿ ಫಿಲ್ಮ್ಸ್‌ ಸ್ಪಷ್ಟಪಡಿಸಿದೆ.

ಈಚೆಗೆ ಧರ್ಮಾ, ನಮಃ ಪಿಕ್ಚರ್ಸ್‌ ಲಿಮಿಟೆಡ್‌ ಮತ್ತು ಸರೇಗಮಾ ಸಂಸ್ಥೆಗಳು ಇನ್‌ಸ್ಟಾಗ್ರಾಂ ಮೂಲಕ ‘ತು ಮೇರಿ ಮೈ ತೇರಾʼ ಚಿತ್ರದ ಪ್ರಚಾರದ ವೇಳೆ ‘ಸಾತ್ ಸಮುಂದರ್ ಪಾರ್ʼ ಹಾಡನ್ನು ಬಳಸಿರುವುದು ತನ್ನ ಗಮನಕ್ಕೆ ಬಂದಿತ್ತು. ಪೋಸ್ಟರ್‌ನಲ್ಲಿ ಸಂಗೀತ ಕಲಾವಿದನಾಗಿ ಬಾದ್‌ಶಾ ಅವರ ಹೆಸರು ಉಲ್ಲೇಖಗೊಂಡಿದೆ. ಪ್ರತಿವಾದಿಗಳು ತನ್ನಿಂದ ಯಾವುದೇ ಪರವಾನಗಿ ಅಥವಾ ಅನುಮತಿ ಪಡೆಯದೆ ಹಾಡನ್ನು ರಿಮಿಕ್ಸ್‌ ಮಾಡಿದ್ದಾರೆ ಎಂದು ಅರ್ಜಿ ದೂರಿದೆ.

ಅರ್ಜಿ ಇತ್ಯರ್ಥವಾಗುವವರೆಗೆ ಚಿತ್ರವನ್ನು ಬಿಡುಗಡೆ ಮಾಡಬಾರದು. ಇದಲ್ಲದೆ, ₹10 ಕೋಟಿ ಪರಿಹಾರಕ್ಕೆ ಪರ್ಯಾಯವಾಗಿ ವಿವಾದಿತ ಹಾಡಿನಿಂದ ಗಳಿಸಲಾದ ಲಾಭದ ದಾಖಲೆ ನೀಡಿ ಆ ಲಾಭದ ಮೊತ್ತ ಪಾವತಿಸುವಂತೆ ಆದೇಶಿಸಬೇಕು ಎಂತಲೂ ತ್ರಿಮೂರ್ತಿ ವಿನಂತಿಸಿದೆ.