
ಖ್ಯಾತ ಸಂಗೀತ ಸಂಯೋಜಕ ಇಳಯರಾಜ ಅವರು ತಮ್ಮ 536ಕ್ಕೂ ಹೆಚ್ಚು ಸಂಗೀತ ಕೃತಿಗಳ ಹಕ್ಕುಸ್ವಾಮ್ಯಕ್ಕೆ ಸಂಬಂಧಿಸಿದ ಮೊಕದ್ದಮೆಯನ್ನು ಬಾಂಬೆ ಹೈಕೋರ್ಟ್‌ನಿಂದ ಮದ್ರಾಸ್ ಹೈಕೋರ್ಟ್‌ಗೆ ವರ್ಗಾಯಿಸಲು ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. [ಇಳಯರಾಜ ಮ್ಯೂಸಿಕ್ ಎನ್ ಮ್ಯಾನೇಜ್‌ಮೆಂಟ್ ಪ್ರೈವೇಟ್ ಲಿಮಿಟೆಡ್ ಮತ್ತು ಸೋನಿ ಮ್ಯೂಸಿಕ್ ಎಂಟರ್‌ಟೈನ್‌ಮೆಂಟ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನಡುವಣ ಪ್ರಕರಣ]
ಸೋಮವಾರ ಪ್ರಕರಣವನ್ನು ಸಂಕ್ಷಿಪ್ತವಾಗಿ ಆಲಿಸಿದ ನ್ಯಾಯಮೂರ್ತಿಗಳಾದ ಕೆ ವಿನೋದ್ ಚಂದ್ರನ್ ಮತ್ತು ಎನ್‌ವಿ ಅಂಜಾರಿಯಾ ಅವರಿದ್ದ ಪೀಠ ಜುಲೈ 18ಕ್ಕೆ (ಶುಕ್ರವಾರ) ವಿಚಾರಣೆ ಮುಂದೂಡಿದರು.
ಇಳಯರಾಜ ಮ್ಯೂಸಿಕ್ ಅಂಡ್ ಮ್ಯಾನೇಜ್ಮೆಂಟ್ ಪ್ರೈವೇಟ್ ಲಿಮಿಟೆಡ್ (ಐಎಂಎಂಪಿಎಲ್) 536 ಸಂಗೀತ ಕೃತಿಗಳನ್ನು ಬಳಸದಂತೆ ತಡೆಯಾಜ್ಞೆ ಕೋರಿ 2022ರಲ್ಲಿ, ಸೋನಿ ಮ್ಯೂಸಿಕ್ ಎಂಟರ್‌ಟೈನ್‌ಮೆಂಟ್ ಇಂಡಿಯಾ, ಬಾಂಬೆ ಹೈಕೋರ್ಟ್‌ನಲ್ಲಿ ಮೊಕದ್ದಮೆ ಹೂಡಿತ್ತು. ಇಳಯರಾಜ ಅವರು ದೀರ್ಘಕಾಲದಿಂದ ಕಾನೂನು ಸಮರ ನಡೆಸುತ್ತಿರುವ ಓರಿಯಂಟಲ್ ರೆಕಾರ್ಡ್ಸ್/ಎಕೋ ರೆಕಾರ್ಡಿಂಗ್‌ಸಂಸ್ಥೆಗಳಿಂದ ತಾನು ಈ ಕೃತಿಗಳ ಹಕ್ಕು ಪಡೆದುಕೊಂಡಿರುವುದಾಗಿ ಸೋನಿ ವಾದಿಸಿತ್ತು.
ಆದರೆ 2014ರಲ್ಲಿ ಇಳಯರಾಜ ಅವರು ಎಕೋ ರೆಕಾರ್ಡಿಂಗ್ ವಿರುದ್ಧ ಹೂಡಿದ್ದ ಮೊಕದ್ದಮೆಗೆ ಸಂಬಂಧಿಸಿದ 536 ಟೈಟಲ್‌ಗಳಲ್ಲಿ 310 ಟೈಟಲ್‌ಗಳ ಕುರಿತಂತೆ ಈಗಾಗಲೇ ಮದ್ರಾಸ್ ಹೈಕೋರ್ಟ್ ವಿಚಾರಣೆ ನಡೆಸುತ್ತಿದೆ ಎಂದು ಐಎಂಎಂಪಿಎಲ್ ಹೇಳಿತ್ತು. ಆ ಮೊಕದ್ದಮೆಯಲ್ಲಿ, ಇಳಯರಾಜ ಅವರು ತಮ್ಮ ಸಂಯೋಜನೆಗಳ ಮೇಲಿನ ಎಕೋ ಸಂಸ್ಥೆ ಸ್ಥಾಪಿಸಿರುವ ಹಕ್ಕನ್ನು ಪ್ರಶ್ನಿಸಿದ್ದರು ಮತ್ತು ಹಕ್ಕುಸ್ವಾಮ್ಯ ಕಾಯಿದೆಯಡಿಯಲ್ಲಿ ಅವರ ನೈತಿಕ ಮತ್ತು ಆರ್ಥಿಕ ಹಕ್ಕುಗಳ ರಕ್ಷಣೆ ಕೋರಿದ್ದರು.
1970ರ ದಶಕದಿಂದೀಚೆಗೆ ಇಳಯರಾಜ ಹಲವಾರು ಭಾರತೀಯ ಭಾಷೆಗಳಲ್ಲಿ 1,500ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ 7,500 ಕ್ಕೂ ಹೆಚ್ಚು ಹಾಡುಗಳನ್ನು ಸಂಯೋಜಿಸಿದ್ದಾರೆ. ಐಎಂಎಂಪಿಎಲ್ ಪ್ರಕಾರ, 2007ರಲ್ಲಿ ತಮ್ಮ ದಿವಂಗತ ಪತ್ನಿ ಜೀವರಾಜ ಅವರು ಅಗಿ (ಎಜಿಐ) ಮ್ಯೂಸಿಕ್ ಜೊತೆ ಪರವಾನಗಿ ಒಪ್ಪಂದ ಮಾಡಿಕೊಂಡಿದ್ದರು, ಆದರೆ ನಂತರ 2011 ರಲ್ಲಿ ಅವರ ಮರಣದ ನಂತರ ಅದನ್ನು ರದ್ದುಗೊಳಿಸಲಾಯಿತು. ಇದು ಮೂರನೇ ವ್ಯಕ್ತಿಗಳಿಗೆ ನೀಡಲಾದ ಹಕ್ಕುಗಳ ವ್ಯಾಪ್ತಿ ಮತ್ತು ಸಿಂಧುತ್ವದ ಬಗ್ಗೆ ಮೊಕದ್ದಮೆ ಹೂಡಲು ಕಾರಣವಾಯಿತು.
2014ರಲ್ಲಿ, ಇಳಯರಾಜ ಅವರು ಮದ್ರಾಸ್ ಹೈಕೋರ್ಟ್‌ನಲ್ಲಿ ಎಕೋ ರೆಕಾರ್ಡಿಂಗ್ ವಿರುದ್ಧ ಮೊಕದ್ದಮೆ ಹೂಡಿದ ಪರಿಣಾಮ 2015ರಲ್ಲಿ ಮಧ್ಯಂತರ ತಡೆಯಾಜ್ಞೆ ದೊರೆಯಿತು. ನಂತರ 2019ರಲ್ಲಿ ಅಂತಿಮ ತೀರ್ಪು ಬಂದಿತು.
ತೀರ್ಪಿನ ಪರಿಣಾಮ ಇಳಯರಾಜ ತಮ್ಮ ಸಂಗೀತ ಸಂಯೋಜನೆಗಳ ಮೇಲೆ ನೈತಿಕ ಮತ್ತು ವಿಶೇಷ ಹಕ್ಕುಗಳನ್ನು ಉಳಿಸಿಕೊಂಡರು. ಅಗಿ ಮ್ಯೂಸಿಕ್‌ಗೆ ನೀಡಿದ್ದ ನಿಯೋಜನೆ 2012 ರಲ್ಲಿ ಮುಕ್ತಾಯಗೊಂಡಿತ್ತು. ಆದರೂ ನಿರ್ಮಾಪಕರು ಎಕೋಗೆ ಧ್ವನಿ ಮುದ್ರಣ ಹಕ್ಕುಗಳನ್ನು ನೀಡಿದ್ದನ್ನು ಎತ್ತಿಹಿಡಿಯಲಾಗಿತ್ತು.
ತರುವಾಯ, ಎಕೋ ಈ 536 ಟೈಟಲ್‌ಗಳನ್ನು ಅಮೆರಿಕದ ಓರಿಯಂಟಲ್ ರೆಕಾರ್ಡ್ಸ್‌ಗೆ ವಹಿಸಿಕೊಟ್ಟಿತು, ಅದು ಸೋನಿ ಮ್ಯೂಸಿಕ್‌ನೊಂದಿಗೆ ವ್ಯವಹಾರ ಮಾಡಿಕೊಂಡಿತು. ಇದರ ಆಧಾರದ ಮೇಲೆ, ಐಎಂಎಂಪಿಎಲ್ ಈ ಕೃತಿಗಳನ್ನು ಬಳಸದಂತೆ ನಿರ್ಬಂಧಿಸಲು ಕೋರಿ ಸೋನಿ ಜನವರಿ 2022ರಲ್ಲಿ ಬಾಂಬೆ ಹೈಕೋರ್ಟ್‌ನಲ್ಲಿ ಮೊಕದ್ದಮೆ ಹೂಡಿತು.
ಬಾಂಬೆ ಹೈಕೋರ್ಟ್ ಮೊಕದ್ದಮೆ ಕೇವಲ ಪ್ರತಿರೂಪವಾಗಿದ್ದು ಮದ್ರಾಸ್ ಹೈಕೋರ್ಟ್‌ನಲ್ಲಿ ನಡೆಯುತ್ತಿರುವ ಮೇಲ್ಮನವಿಗಳೊಂದಿಗೆ ಸಂಘರ್ಷಕ್ಕೆ ಕಾರಣವಾಗುತ್ತದೆ. ಮದ್ರಾಸ್ ಹೈಕೋರ್ಟ್ ಈಗಾಗಲೇ 2019 ರ ತೀರ್ಪಿನ ಅಂದರೆ ಎಕೋ ಸಂಸ್ಥೆಯ ಹಕ್ಕುಗಳನ್ನು ಗುರುತಿಸುವ ಒಂದು ಭಾಗಕ್ಕೆ ತಡೆಯಾಜ್ಞೆ ನೀಡಿದೆ ಎಂದು ಐಎಂಎಂಪಿಎಲ್ ವಾದಿಸಿದೆ.
ಬಾಂಬೆ ಹೈಕೋರ್ಟ್‌ನಲ್ಲಿ ಸೋನಿ ಹೂಡಿರುವ ಮೊಕದ್ದಮೆ ಇನ್ನೂ ಪ್ರಾಥಮಿಕ ಹಂತದಲ್ಲಿದ್ದರೆ, ಮದ್ರಾಸ್ ಹೈಕೋರ್ಟ್ ವಿಚಾರಣೆಗಳು ಉತ್ತಮ ರೀತಿಯಲ್ಲಿ ಮುಂದುವರೆದಿವೆ. ಅಲ್ಲದೆ ಅರ್ಜಿದಾರರು ಮುಂಬೈನಲ್ಲಿ ಇಲ್ಲ ಸಂಪೂರ್ಣವಾಗಿ ಚೆನ್ನೈನಿಂದ ಕಾರ್ಯನಿರ್ವಹಿಸುತ್ತಾರೆ. ಎರಡು ಹೈಕೋರ್ಟ್‌ಗಳಲ್ಲಿ ಸಮಾನಾಂತರ ವಿಚಾರಣೆಗಳನ್ನು ಮುಂದುವರಿಸುವುದರಿಂದ ಸಂಘರ್ಷದ ತೀರ್ಪುಗಳು ಬರುವ ಅಪಾಯವಿದೆ, ನ್ಯಾಯಾಂಗ ಅಸಂಗತತೆಗೆ ಕಾರಣವಾಗಬಹುದು ಮತ್ತು ಬಹು ಮೊಕದ್ದಮೆಗಳಿಗೆ ಕಾರಣವಾಗಬಹುದು ಎಂದು ಅರ್ಜಿಯಲ್ಲಿ ಒತ್ತಿ ಹೇಳಲಾಗಿದೆ.
ಹಿರಿಯ ವಕೀಲ ಗೋಪಾಲ್ ಶಂಕರನಾರಾಯಣನ್ ಮತ್ತು ಟಿಎಎಸ್ ಕಾನೂನಿನ ಪಾಲುದಾರ ವಕೀಲ ಉತ್ಸವ್ ತ್ರಿವೇದಿ ಅವರು ಐಎಂಎಂಪಿಎಲ್ ಪರ ವಾದ ಮಂಡಿಸಿದರು.