ಮನ್ಸೂರ್ ಅಲಿ ಖಾನ್, ತ್ರಿಷಾ, ಚಿರಂಜೀವಿ ಮತ್ತು ಖುಷ್ಬೂ
ಮನ್ಸೂರ್ ಅಲಿ ಖಾನ್, ತ್ರಿಷಾ, ಚಿರಂಜೀವಿ ಮತ್ತು ಖುಷ್ಬೂ Instagram
ಸುದ್ದಿಗಳು

ತ್ರಿಷಾ ಮಾನನಷ್ಟ ಮೊಕದ್ದಮೆ ಹೂಡಬೇಕಿತ್ತೇ ವಿನಾ ಮನ್ಸೂರ್‌ ಅಲ್ಲ: ನಟನಿಗೆ ಚಳಿ ಬಿಡಿಸಿದ ಮದ್ರಾಸ್ ಹೈಕೋರ್ಟ್

Bar & Bench

ಸಾರ್ವಜನಿಕವಾಗಿ ಹೇಗೆ ವರ್ತಿಸಬೇಕು ಎಂಬುದನ್ನು ಖ್ಯಾತನಾಮರು ತಿಳಿದಿರಬೇಕು ಎಂದು ಮದ್ರಾಸ್ ಹೈಕೋರ್ಟ್ ಸೋಮವಾರ ತಮಿಳು ಚಲನಚಿತ್ರ ನಟ ಮನ್ಸೂರ್ ಅಲಿ ಖಾನ್ ಅವರಿಗೆ ಬುದ್ಧಿವಾದ ಹೇಳಿದೆ.

ಸಾರ್ವಜನಿಕವಾಗಿ ಕಾಣಿಸಿಕೊಂಡ ಸಂದರ್ಭದಲ್ಲಿ ಮಾದರಿ ನಡೆ ಬಗ್ಗೆ ತಮ್ಮ ಕಕ್ಷಿದಾರರಿಗೆ ಸಲಹೆ ನೀಡುವಂತೆ ಖಾನ್‌ ಪರ ವಕೀಲರಿಗೆ ಹೈಕೋರ್ಟ್‌ ಸೂಚಿಸಿತು.

ಖಾನ್ ಏಕೆ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ ಎಂದು ಪ್ರಶ್ನಿಸಿದ ನ್ಯಾಯಮೂರ್ತಿ ಎನ್. ಸತೀಶ್ ಕುಮಾರ್ ಖಾನ್ ವಿರುದ್ಧ ಪ್ರತಿವಾದಿಗಳಲ್ಲಿ ಒಬ್ಬರಾದ ನಟಿ ತ್ರಿಷಾ ಕೃಷ್ಣನ್ ಅವರೇ ಮೊಕದ್ದಮೆ ದಾಖಲಿಸಬೇಕಿತ್ತು ಎಂದರು.

"ಸಾರ್ವಜನಿಕವಾಗಿ ಹೇಗೆ ವರ್ತಿಸಬೇಕು ಎಂದು ತಿಳಿದಿರಬೇಕು. ಅನೇಕ ಯುವಜನರು, ನಟರ ಅನುಯಾಯಿಗಳಾಗಿದ್ದು ತಮ್ಮ ಆದರ್ಶ ಎಂದು ಪರಿಗಣಿಸುತ್ತಾರೆ ಎಂದು ತಿಳಿದಿರುವಾಗ ಸಾರ್ವಜನಿಕವಾಗಿ ಈ ರೀತಿ ಮಾತನಾಡಬಹುದೇ ಮತ್ತು ವರ್ತಿಸಬಹುದೇ?" ಎಂದು ನ್ಯಾಯಾಲಯ ಪ್ರಶ್ನಿಸಿತು.

ನಟರಾದ ತ್ರಿಶಾ, ಚಿರಂಜೀವಿ ಹಾಗೂ ಬಿಜೆಪಿ ಸಂಸದೆಯೂ ಆಗಿರುವ ಅಭಿನೇತ್ರಿ ಖುಷ್ಬೂ ಸುಂದರ್ ವಿರುದ್ಧ ಕಳೆದ ವಾರ ಖಾನ್‌ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು . ತಾನು ಮಾಡಿದ ತಮಾಷೆಗೆ ಬೇರೆಯದೇ ಅರ್ಥ ಕಲ್ಪಿಸುವ ಮೂಲಕ ಸತ್ಯ ಪರಿಶೀಲಿಸುವ ಯಾವುದೇ ಯತ್ನ ಮಾಡದೆ ತ್ರಿಷಾ ಮತ್ತಿತರರು ತನ್ನ ವಿರುದ್ಧ ಮಾನಹಾನಿಕರ ಹೇಳಿಕೆ ನೀಡಿದ್ದಾರೆ ಎಂದು ಅವರು ಆರೋಪಿಸಿದ್ದರು.

ಲಿಯೋ ಚಿತ್ರದ ಪ್ರಚಾರದ ವೇಳೆಯ ಪತ್ರಿಕಾಗೋಷ್ಠಿಯಲ್ಲಿ ಮನ್ಸೂರ್‌ ಮಾಡಿದ್ದರು ಎನ್ನಲಾದ ಸ್ತ್ರೀ ವಿರೋಧಿ ಹೇಳಿಕೆ ವಿವಾದಕ್ಕೆ ಗ್ರಾಸವಾಗಿತ್ತು. ಪತ್ರಿಕಾಗೋಷ್ಠಿಯಲ್ಲಿ ಅವರು ತಾನು ಮತ್ತು ತ್ರಿಷಾ ಚಿತ್ರದ ಭಾಗವಾಗಿದ್ದರೂ, ತ್ರಿಷಾ ಅವರೊಂದಿಗೆ ತೆರೆ ಹಂಚಿಕೊಳ್ಳಲು ತನಗೆ ಸಾಧ್ಯವಾಗಲಿಲ್ಲ. ಅವರ ಜೊತೆಗಿನ ಯಾವುದೇ "ಬೆಡ್‌ರೂಂ ದೃಶ್ಯಗಳು" ಚಿತ್ರದಲ್ಲಿಲ್ಲ ಎಂದಿದ್ದರು ಎನ್ನಲಾಗಿತ್ತು. ಇದು ತೀವ್ರ ಟೀಕೆಗೆ ಗುರಿಯಾಗಿತ್ತು. ನಟಿ ತ್ರಿಷಾ ಮಾತ್ರವಲ್ಲದೆ ಚಿರಂಜೀವಿ, ಖುಷ್ಬೂ ಸುಂದರ್ ಅವರು ತಮ್ಮ ಎಕ್ಸ್‌ ಖಾತೆಯಲ್ಲಿ ಈ ಹೇಳಿಕೆಯನ್ನು ಖಂಡಿಸಿದ್ದರು.

ತ್ರಿಷಾ ಅವರ ಬಳಿ ಬೇಷರತ್‌ ಕ್ಷಮೆಯಾಚಿಸಿದ್ದೀರಾ ಎಂದು ನ್ಯಾಯಾಲಯ ಖಾನ್ ಅವರನ್ನು ಸೋಮವಾರ ಕೇಳಿತು. ಆಗ ಖಾನ್ ಕ್ಷಮೆಯಾಚನೆಯ ಯೂಟ್ಯೂಬ್ ವೀಡಿಯೊ ತುಣುಕನ್ನು ಸಲ್ಲಿಸುವುದಾಗಿ ಹೇಳಿದರು. ತನ್ನ ಕ್ಷಮೆಯಾಚನೆಗೆ ತ್ರಿಷಾ ಒಪ್ಪಿದ್ದು ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ನಟರುಗಳು ನೀಡಿದ ಹೇಳಿಕೆಗಳನ್ನು ತೆಗೆದುಹಾಕುವಂತೆ ನಿರ್ದೇಶನ ನೀಡಬೇಕೆಂದು ಖಾನ್‌ ಕೋರಿದರು.

ಖಾನ್ ಅವರ ದಾವೆಗೆ ಪ್ರತಿಕ್ರಿಯಿಸಲು ನ್ಯಾಯಾಲಯ ತ್ರಿಷಾ, ಚಿರಂಜೀವಿ ಹಾಗೂ ಖುಷ್ಬೂ ಅವರಿಗೆ ಡಿ.22ರವರೆಗೆ ಸಮಯ ನೀಡಿತು.