Mumbai Police, TRP Scam 
ಸುದ್ದಿಗಳು

ಟಿಆರ್‌ಪಿ ಹಗರಣ: ಫಕ್ತ್ ಮರಾಠಿ, ರಿಪಬ್ಲಿಕ್ ಟಿವಿ, ಬಾಕ್ಸ್ ಸಿನಿಮಾಗೆ ಅನುಕೂಲ-ಮುಂಬೈ ಪೊಲೀಸರಿಂದ ಆರೋಪಪಟ್ಟಿ ಸಲ್ಲಿಕೆ

ಫಕ್ತ್ ಮರಾಠಿ, ಬಾಕ್ಸ್ ಸಿನಿಮಾ, ರಿಪಬ್ಲಿಕ್ ಟಿವಿ (ಇಂಗ್ಲಿಷ್ ಮತ್ತು ಹಿಂದಿ ಚಾನೆಲ್), ಮಹಾಮೂವಿ ಮತ್ತು ವಾವ್ ಟಿವಿಗಳು ಟಿಆರ್‌ಪಿ ಹಗರಣದ ಲಾಭ ಪಡೆದಿವೆ ಎಂಬುದಕ್ಕೆ ಅಪರಾಧ ವಿಭಾಗವು ಸಾಕ್ಷ್ಯ ಸಂಗ್ರಹಿಸಿರುವುದಾಗಿ ಹೇಳಿದೆ.

Bar & Bench

ನಕಲಿ ಟೆಲಿವಿಷನ್‌ ರೇಟಿಂಗ್‌ ಪಾಯಿಂಟ್‌ (ಟಿಆರ್‌ಪಿ) ಹಗರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಮೊದಲ ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಮುಂಬೈ ಪೊಲೀಸ್‌ನ ಅಪರಾಧ ವಿಭಾಗ ಬಯಲುಗೊಳಿಸಿದ್ದ ಟಿಆರ್‌ಪಿ ಹಗರಣದ ಕುರಿತಾಗಿ ದಾಖಲಿಸಲಾಗಿರುವ ಎಫ್‌ಐಆರ್‌ ನಂ. 843/2020 ಗೆ ಸಂಬಂಧಿಸಿದಂತೆ ಎಸ್ಪ್ಲನೇಡ್‌ನಲ್ಲಿರುವ ಮೆಟ್ರೋಪಾಲಿಟನ್‌ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯಕ್ಕೆ ಮುಂಬೈ ಪೊಲೀಸರಿಂದ ಆರೋಪ ಪಟ್ಟಿ ಸಲ್ಲಿಕೆಯಾಗಿದೆ.

ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳಾದ 406, 409 (ಕ್ರಿಮಿನಲ್‌ ನಂಬಿಕೆ ದ್ರೋಹ), 420 (ಮೋಸಮ ವಂಚನೆ), 465, 468 (ನಕಲಿ ದಾಖಲೆ ಸೃಷ್ಟಿ), 201, 204 (ಸಾಕ್ಷ್ಯ ನಾಶ), 212 (ಅಪರಾಧಕ್ಕೆ ನೆರವು ನೀಡುವುದು), 120B (ಪಿತೂರಿ) ಅಡಿ ದಾಖಲಿಸಲಾಗಿರುವ ದೂರಿಗೆ ಸಂಬಂಧಿಸಿದಂತೆ ಆರೋಪ ಪಟ್ಟಿ ಸಲ್ಲಿಸಲಾಗಿದೆ.

ನಿರ್ದಿಷ್ಟ ಚಾನೆಲ್‌ಗಳನ್ನು ವೀಕ್ಷಿಸುವುದಕ್ಕೆ ಸಂಬಂಧಿಸಿದಂತೆ ಜನರಿಗೆ ಹಣ ಪಾವತಿಸಲಾಗುತ್ತಿದೆ. ಆ ಮೂಲಕ ಸ್ಯಾಂಪಲ್‌ ಸಂಗ್ರಹಿಸುವ ಮೀಟರ್‌ ಸೇವೆಗಳನ್ನು ತಿರುಚಲಾಗುತ್ತಿದೆ ಎಂಬ ವಿಚಾರವನ್ನು ಹನ್ಸ್‌ ಸಮೂಹದ ಸಿಬ್ಬಂದಿಯಿಂದ ತಿಳಿದು ಮುಂಬೈ ಪೊಲೀಸ್‌ನ ಅಪರಾಧ ವಿಭಾಗವು ಟಿಆರ್‌ಪಿ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ಕೈಗೊಂಡಿತ್ತು.

ವಾಹಿನಿಗಳ ವೀಕ್ಷಣೆಯ ಕುರಿತಾದ ಮಾಹಿತಿ ನೀಡುವ ಬಾರೋಮೀಟರ್‌ ಅಳವಡಿಸಿರುವ ನಿರ್ದಿಷ್ಟ ಮನೆ ಮಾಲೀಕರಿಗೆ ಹಣ ಪಾವತಿಸುವ ಮೂಲಕ ನಿರ್ದಿಷ್ಟ ಚಾನೆಲ್‌ಗಳನ್ನು ಹೆಚ್ಚು ವೀಕ್ಷಿಸುವಂತೆ ಪ್ರೇರೇಪಿಸಿ ಟಿಆರ್‌ಪಿ ಹೆಚ್ಚಿಸಲಾಗಿದೆ. ವೀಕ್ಷಕರು ನಿರ್ದಿಷ್ಟ ಚಾನೆಲ್‌ಗಳನ್ನು ತಾಸುಗಟ್ಟಲೇ ವೀಕ್ಷಿಸಿದ್ದು, ಆ ಮೂಲಕ ವೀಕ್ಷಕರ ಸಂಖ್ಯೆ ಹಾಗೂ ವೀಕ್ಷಣಾ ಅವಧಿಯಲ್ಲಿ ಹೆಚ್ಚಳವನ್ನು ತೋರಿಸಲಾಗಿದೆ ಎಂದು ಆರೋಪಿಸಲಾಗಿದೆ.

ಆಯ್ದ ಮನೆಗಳಲ್ಲಿ ಬಾರೋಮೀಟರ್‌ ಅಳವಡಿಕೆ ಮತ್ತು ನಿರ್ವಹಣೆಯನ್ನು ಹನ್ಸ್‌ ಸಂಶೋಧನಾ ಸಂಸ್ಥೆಯ ಮಾಜಿ ಉದ್ಯೋಗಿಗಳು ಹಾಗೂ ಆರೋಪಿಗಳಾದ ವಿ ವಿ ಭಂಡಾರಿ (ಆರೋಪಿ ನಂ. 1), ವಿ ಆರ್‌ ತ್ರಿಪಾಠಿ (ಆರೋಪಿ ನಂ. 5), ಯು ಎಂ ಮಿಶ್ರಾ (ಆರೋಪಿ ನಂ. 6), ಆರ್‌ ಡಿ ವರ್ಮಾ (ಆರೋಪಿ ನಂ. 7), ಡಿ ಕೆ ಪಟ್ಟಣಶೆಟ್ಟಿ (ಆರೋಪಿ ನಂ. 8) ನಿರ್ವಹಿಸುತ್ತಿದ್ದರು ಎಂದು ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. ಈ ಎಲ್ಲರೂ ಉದ್ಯೋಗದಾತರ ಜೊತೆ ಬಹಿರಂಗಪಡಿಸಲಾಗದ ಒಪ್ಪಂದಕ್ಕೂ ಸಹಿ ಹಾಕಿದ್ದಾರೆ. ಭಂಡಾರಿ ಮತ್ತು ಬಿ ಎನ್‌ ಮಿಸ್ತ್ರಿ (ಆರೋಪಿ ನಂ. 2) ಅವರು ಟಿವಿ ಚಾನೆಲ್‌ಗಳ ಜೊತೆ ಪಿತೂರಿ ನಡೆಸುವ ಮೂಲಕ ವಂಚನೆಯ ಮೂಲಕ ಟಿಆರ್‌ಪಿ ಹೆಚ್ಚಿಸುವ ಕೆಲಸ ಮಾಡಿದ್ದಾರೆ ಎಂದು ಆರೋಪ ಪಟ್ಟಿಯಲ್ಲಿ ವಿವರಿಸಲಾಗಿದೆ.

ಹನ್ಸ್‌ ಸಂಶೋಧನಾ ಸಮೂಹದ ಮಾಜಿ ಸಿಬ್ಬಂದಿ ಹೊರತುಪಡಿಸಿ ಕೆಳಗಿನ ವ್ಯಕ್ತಿಗಳು ಟಿಆರ್‌ಪಿ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ಮುಂಬೈ ಪೊಲೀಸರು ಆರೋಪಿಸಿದ್ದಾರೆ.

  1. ಎಸ್‌ ಎಸ್‌ ಪಟ್ಟಣಶೆಟ್ಟಿ, ಫಕ್ತ್‌ ಮರಾಠಿಯ ಸಹ ಪ್ರವರ್ತಕ (ಆರೋಪಿ ನಂ. 3)

  2. ಎನ್‌ ಎನ್‌ ಶರ್ಮಾ, ಬಾಕ್ಸ್‌ ಸಿನಿಮಾ (ಆರೋಪಿ ನಂ. 4)

  3. ಎಚ್‌ ಕೆ ಪಾಟೀಲ್‌ (ಆರೋಪಿ ನಂ. 9)

  4. ಎ ಬಿ ಕೋಲ್ವಾಡೆ, ಮಾಧ್ಯಮ ಜಾಹೀರಾತು ಮತ್ತು ಹಂಚಿಕೆಯ ಮಾಲೀಕ (ಆರೋಪಿ ನಂ. 10)

  5. ಎ ಎ ಚೌಧರಿ, ಕ್ರಿಸ್ಟಲ್‌ ಬ್ರಾಡ್‌ಕಾಸ್ಟ್‌ ಪ್ರೈ. ಲಿಮಿಟೆಡ್‌ನ ಸಂಸ್ಥಾಪಕ (ಆರೋಪಿ ನಂ. 11)

  6. ಘನಶ್ಯಾಮ್‌ ಸಿಂಗ್‌, ರಿಪಬ್ಲಿಕ್ ಟಿವಿ ಒಡೆತನದ ಎಆರ್‌ಜಿ ಔಟ್ಲಯರ್‌ ಮೀಡಿಯಾ ಪ್ರೈವೇಟ್‌ ಲಿಮಿಟೆಡ್‌ನ ಸಹಾಯಕ ಉಪಾಧ್ಯಕ್ಷ (ಹಂಚಿಕೆ) (ಆರೋಪಿ ನಂ. 12)

  7. ಮಹಾಮೂವಿಯ ಸಂಸ್ಥಾಪಕ (ತಲೆಮರೆಸಿಕೊಂಡಿರುವ ಆರೋಪಿ).

ರಿಪಬ್ಲಿಕ್‌ ಚಾನೆಲ್‌ಗಳು ಉಚಿತವಾಗಿ ಏರ್‌ ಮಾಡಲು ಮತ್ತು ಅವರ ವೀಕ್ಷಕರು ಈ ಚಾನೆಲ್‌ಗಳನ್ನು ನೋಡಲು ಯಾವುದೇ ಶುಲ್ಕ ಪಾವತಿಸಬೇಕಾಗಿಲ್ಲದಿರುವುದರಿಂದ, ಜಾಹೀರಾತಿನಿಂದ ಹೆಚ್ಚಿನ ಆದಾಯ ಗಳಿಸಿಲು ಈ ಚಾನೆಲ್‌ಗಳು ಟಿಆರ್‌ಪಿ ತಿರುಚಿವೆ ಎಂದು ವಿಶೇಷವಾಗಿ ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

ಫಕ್ತ್‌ ಮರಾಠಿ, ಬಾಕ್ಸ್‌ ಸಿನಿಮಾ, ರಿಪಬ್ಲಿಕ್‌ ಟಿವಿ (ಇಂಗ್ಲಿಷ್‌ ಮತ್ತು ಹಿಂದಿ ಚಾನೆಲ್)‌, ಮಹಾಮೂವಿ ಮತ್ತು ವಾವ್‌ ಟಿವಿಗಳು ಟಿಆರ್‌ಪಿ ಹಗರಣದ ಲಾಭ ಪಡೆದಿವೆ ಎಂಬುದಕ್ಕೆ ಅಪರಾಧ ವಿಭಾಗವು ಸಾಕ್ಷ್ಯ ಸಂಗ್ರಹಿಸಿರುವುದಾಗಿ ಹೇಳಿದೆ. ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿರುವ ಆರೋಪಿಗಳು ಮತ್ತು ಸಾಕ್ಷಿಗಳಿಗೆ ಸಮನ್ಸ್‌ ನೀಡುವ ಸಂಬಂಧ ಅಪರಾಧ ವಿಭಾಗವು ನ್ಯಾಯಾಲಯದ ಅನುಮತಿ ಕೋರಿತ್ತು. ಆರೋಪ ಪಟ್ಟಿಯಲ್ಲಿ ಸಾಕ್ಷಿಗಳೂ ಸೇರಿದಂತೆ ಸುಮಾರು 140 ಮಂದಿಯನ್ನು ಉಲ್ಲೇಖಿಸಲಾಗಿದೆ. ಇನ್ನೂ ವಿಚಾರಣೆ ನಡೆಯುತ್ತಿದ್ದು, ಪೂರಕ ಆರೋಪ ಪಟ್ಟಿಯನ್ನು ಸಲ್ಲಿಸಲಾಗುವುದು ಎಂದೂ ಹೇಳಲಾಗಿದೆ.