ಟೆಲಿವಿಷನ್ ರೇಟಿಂಗ್ ಪಾಯಿಂಟ್ (ಟಿಆರ್‌ಪಿ) ವಿವಾದಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ನೀಡಿದ್ದ ಸಮನ್ಸ್ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ ರಿಪಬ್ಲಿಕ್ ಟಿವಿಯು ತನ್ನ ಮನವಿಯನ್ನು ಹಿಂಪಡೆದ ಕಾರಣಕ್ಕೆ ಸುಪ್ರೀಂ ಕೋರ್ಟ್ ವಜಾಗೊಳಿಸಿದೆ
ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್, ಇಂದೂ ಮಲ್ಹೋತ್ರಾ ಮತ್ತು ಇಂದಿರಾ ಬ್ಯಾನರ್ಜಿ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು ಗುರುವಾರ ಅರ್ಜಿ ವಿಚಾರಣೆ ನಡೆಸಿತು. ಈ ಸಂದರ್ಭದಲ್ಲಿ ನ್ಯಾ. ಚಂದ್ರಚೂಡ್ ಅವರು ರಿಪಬ್ಲಿಟ್ ಟಿವಿ ಪ್ರತಿನಿಧಿಸುತ್ತಿರುವ ಹಿರಿಯ ವಕೀಲ ಹರೀಶ್ ಸಾಳ್ವೆ ಅವರನ್ನು ಕುರಿತು ಹೀಗೆ ಹೇಳಿದರು. “ನಿಮ್ಮ ಕಕ್ಷಿದಾರರ ಕಚೇರಿಯು ವಾರ್ಲಿಯಲ್ಲಿದ್ದು, ಸಂವಿಧಾನದ 226ನೇ ವಿಧಿಯ ಅನ್ವಯ ನೀವು ಫ್ಲೋರಾ ಫೌಂಟೈನ್‌ನಲ್ಲಿರುವ ಬಾಂಬೆ ಹೈಕೋರ್ಟ್ ಅನ್ನು ಸಂಪರ್ಕಿಸಬಹುದು” ಎಂದರು.
“ಮೊದಲಿಗೆ ಹೈಕೋರ್ಟ್ ಸಂಪರ್ಕಿಸಿ ಎಂದಷ್ಟೇ ನಾವು ನಿಮಗೆ ಹೇಳುತ್ತಿದ್ದೇವೆ” ಎನ್ನುವ ಮೂಲಕ ನ್ಯಾ. ಮಲ್ಹೋತ್ರಾ ಅವರು ನ್ಯಾ. ಚಂದ್ರಚೂಡ್ ಅವರ ಸಲಹೆಗೆ ಸಹಮತ ವ್ಯಕ್ತಪಡಿಸಿದರು. ಬಳಿಕ ನ್ಯಾ. ಚಂದ್ರಚೂಡ್ ಅವರು ಇತ್ತೀಚಿನ ದಿನಗಳಲ್ಲಿ ಪೊಲೀಸ್ ಆಯುಕ್ತರು ಹೇಗೆ ಮಾಧ್ಯಮಗಳಿಗೆ ಸಂದರ್ಶನ ನೀಡುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ನ್ಯಾಯಪೀಠದ ಸೂಚನೆಯ ಹಿನ್ನೆಲೆಯಲ್ಲಿ ಸಾಳ್ವೆ ಅವರು ಅರ್ಜಿ ಹಿಂಪಡೆಯಲು ನಿರ್ಧರಿಸಿದರು. ಪ್ರಕರಣದಲ್ಲಿ ನ್ಯಾಯಿಕ ಪರಿಹಾರ ಕೋರಿ ರಿಪಬ್ಲಿಕ್ ಟಿವಿಯು ಬಾಂಬೆ ಹೈಕೋರ್ಟ್ ಸಂಪರ್ಕಿಸುವ ಸಾಧ್ಯತೆ ಇದೆ.
ಟಿಆರ್‌ಪಿ ಹಗರಣದ ತನಿಖೆಗೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ರಿಪಬ್ಲಿಕ್ ಮಿಡಿಯಾ ನೆಟ್‌ವರ್ಕ್‌ನ ಸಿಎಫ್‌ಒಗೆ ಅಕ್ಟೋಬರ್ 9ರಂದು ನೀಡಿದ್ದ ಸಮನ್ಸ್ ಅನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮನವಿ ಇದಾಗಿತ್ತು. ಪ್ರಕರಣದ ಕುರಿತು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುವವರೆಗೆ ತನಿಖೆ ನಡೆಸದಂತೆ ರಿಪಬ್ಲಿಕ್ ಟಿವಿಯ ಸಿಎಫ್‌ಒ ಮುಂಬೈ ಪೊಲೀಸರಿಗೆ ಮನವಿ ಮಾಡಿದ್ದರು.