ನ್ಯಾಯಾಂಗದ ಮೇಲೆ ಸಾರ್ವಜನಿಕರು ಇರಿಸಿರುವ ವಿಶ್ವಾಸವನ್ನು ಭಾರತದ ಪ್ರಜಾಸತ್ತಾತ್ಮಕ ಸಂಸ್ಥೆಗಳು ಮತ್ತು ಕಾನೂನು ಆಳ್ವಿಕೆಯ ವ್ಯಾಪಕ ಹಿನ್ನೆಲೆಯಲ್ಲಿ ನೋಡಬೇಕು ಎಂದು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಬಿ ಆರ್ ಗವಾಯಿ ಹೇಳಿದರು.
ರಾಜ್ಯದ ನ್ಯಾಯಾಂಗ ಅಧಿಕಾರಿಗಳಿಗಾಗಿ ಗುಜರಾತ್ ಹೈಕೋರ್ಟ್ ಶನಿವಾರ ಆಯೋಜಿಸಿದ್ದ ಎರಡು ದಿನಗಳ ವಾರ್ಷಿಕ ಸಮ್ಮೇಳನದಲ್ಲಿ ʼವಿಶ್ವಾಸದ ಕೊರತೆ- ನ್ಯಾಯಾಂಗ ಸಂಸ್ಥೆಗಳ ವಿಶ್ವಾಸಾರ್ಹತೆಯನ್ನು ಕಳೆಯುತ್ತದೆಯೇ? ಸತ್ಯ ವಿನಾಶ ತಡೆಯಲು ಬೇಕಾದ ಮಾರ್ಗ ಮತ್ತು ವಿಧಾನಗಳುʼ ಎಂಬ ವಿಚಾರದ ಕುರಿತು ಅವರು ಮಾತನಾಡಿದರು.
ನ್ಯಾ. ಗವಾಯಿ ಅವರ ಭಾಷಣದ ಪ್ರಮುಖಾಂಶಗಳು
ಪ್ರಜಾಪ್ರಭುತ್ವ ಎಂಬುದು ಕೇವಲ ಬಹುಸಂಖ್ಯಾತ ಜನರ ಆಳ್ವಿಕೆಗೆ ಸಂಬಂಧಿಸಿದ್ದಲ್ಲ.
ಡಾ. ಬಿ ಆರ್ ಅಂಬೇಡ್ಕರ್ ಅವರ ದೃಷ್ಟಿಯಲ್ಲಿ ಪ್ರಜಾಪ್ರಭುತ್ವದ ಕಾರ್ಯನಿರ್ವಹಣೆಗೆ ಸಾಂಸ್ಥಿಕ ಸುರಕ್ಷತೆ ಅವಶ್ಯಕವಾಗಿದೆ.
ನ್ಯಾಯಾಂಗ ಎಂಬುದು ಕಾನೂನು ಆಳ್ವಿಕೆಯನ್ನು ನಿರ್ವಹಿಸುವ ನಿರ್ಣಾಯಕ ಸಂಸ್ಥೆಯಾಗಿದೆ.
ಪ್ರಭುತ್ವದ ಎಲ್ಲೆ ಮೀರಿದ ನಡೆಯನ್ನು ನಿಗ್ರಹಿಸಿ ತಮ್ಮ ಹಕ್ಕುಗಳ ಉಲ್ಲಂಘನೆಯಾಗದಂತೆ ನ್ಯಾಯಾಂಗ ನಾಗರಿಕರನ್ನು ರಕ್ಷಿಸುತ್ತದೆ.
ನ್ಯಾಯಾಂಗದಲ್ಲಿನ ನಂಬಿಕೆಯ ಕೊರತೆ ನ್ಯಾಯಾಂಗ ಎಂಬ ಸಂಸ್ಥೆಯ ಅಡಿಪಾಯಕ್ಕೆ ಧಕ್ಕೆ ತರುತ್ತದೆ.
ಅಂತಹ ಕೊರತೆ ಉಂಟಾದರೆ ಜನ ಔಪಚಾರಿಕ ನ್ಯಾಯಾಂಗ ವ್ಯವಸ್ಥೆಯನ್ನು ದಾಟಿ ನ್ಯಾಯ ಪಡೆಯುವಂತಾಗಬಹುದು.
ನಿಗಾ ಇಡುವುದು, ಭ್ರಷ್ಟಾಚಾರ, ಇಲ್ಲವೇ ʼಗುಂಪು ನ್ಯಾಯʼದ (ಜನರೇ ತಮಗೆ ತೋಚಿಸದಂತೆ ನಿರ್ಣಯಿಸುವ ಅರಾಜಕ ನ್ಯಾಯ) ಮೂಲಕ ನ್ಯಾಯ ಗಿಟ್ಟಿಸಿಕೊಳ್ಳುವ ಕಾರ್ಯ ನಡೆಯಬಹುದು.
ಇವೆಲ್ಲವುಗಳಿಂದ ಕಾನೂನು ಮತ್ತು ಸುವ್ಯವಸ್ಥೆ ಕುಸಿಯಲಿದ್ದು, ಇದರಿಂದ ಪ್ರಕರಣ ದಾಖಲಿಸಲು ಮತ್ತು ಮೇಲ್ಮನವಿ ಸಲ್ಲಿಸಲು ಜನರು ಹಿಂಜರಿಯುವಂತಾಗಬಹುದು.
ನ್ಯಾಯ ವಿತರಣೆಯಲ್ಲಿ ಉಂಟಾಗುವ ದೀರ್ಘ ವಿಳಂಬ ನ್ಯಾಯಾಂಗ ವ್ಯವಸ್ಥೆಯಲ್ಲಿ ಜನರು ಇಟ್ಟಿರುವ ವಿಶ್ವಾಸವನ್ನು ದುರ್ಬಲಗೊಳಿಸುತ್ತದೆ.
ನ್ಯಾಯಾಂಗದಲ್ಲಿ ಸಾರ್ವಜನಿಕರು ಇಟ್ಟ ನಂಬಿಕೆಗೆ ಧಕ್ಕೆ ಒದಗಲು ಮತ್ತೊಂದು ನಿರ್ಣಾಯಕ ಅಂಶ ಎಂದರೆ ಪ್ರಜಾಪ್ರಭುತ್ವದ ಮೂಲಾಧಾರವಾಗಿರುವ ಅಧಿಕಾರ ಪ್ರತ್ಯೇಕತೆಯನ್ನು ದುರ್ಬಲಗೊಳಿಸುವುದು.
ನ್ಯಾಯ ಪಡೆಯುವಲ್ಲಿನ ಸಮಸ್ಯೆ ಮತ್ತು ಕಾನೂನು ವ್ಯವಸ್ತೆಯ ಸಂಕೀರ್ನತೆ ಕೂಡ ಜನರು ನ್ಯಾಯಾಂಗದ ಮೇಲೆ ಇಟ್ಟಿರುವ ನಂಬಿಕೆಯನ್ನು ನಾಶಗೊಳಿಸಬಹುದು.
ನ್ಯಾಯಾಲಯದ ಹೊರಗೆ ಒಳಗೆ ನ್ಯಾಯಧೀಶರ ನಡೆ ನ್ಯಾಯಾಂಗ ನೀತಿಯ ಅತ್ಯುನ್ನತ ಮಾನದಂಡಗಳಿಗೆ ಅನುಗುಣವಾಗಿರಬೇಕು. ಆಗ ಮಾತ್ರ ನ್ಯಾಯಾಂಗದ ಮೇಲಿನ ನಂಬಿಕೆ ಹೆಚ್ಚುತ್ತದೆ.
ನಕಲಿ ಸುದ್ದಿಗಳು ಆತಂಕಕಾರಿಯಾಗಿವೆ. ಇತ್ತ ಕ್ಲಿಕ್‌ಬೈಟ್ ಪತ್ರಿಕೋದ್ಯಮ ಸಾಧಾರಣ ನ್ಯಾಯಾಂಗ ಕ್ರಮಗಳನ್ನು ಕೂಡ ರೋಚಕವಾಗಿ ಮಂಡಿಸುತ್ತಿದೆ. ಕೆಲವೊಮ್ಮೆ ವಾಸ್ತವಾಂಶವನ್ನು ನಿಖರವಾಗಿ ಅವು ವರದಿ ಮಾಡುತ್ತಿಲ್ಲ.