District Court Complex, Tumkur 
ಸುದ್ದಿಗಳು

ಲಂಚ ಪ್ರಕರಣ: ಸಬ್ ಇನ್‌ಸ್ಪೆಕ್ಟರ್‌ ಸೇರಿ ಮೂವರು ಪೊಲೀಸರಿಗೆ ಜಾಮೀನು ನಿರಾಕರಿಸಿದ ತುಮಕೂರು ನ್ಯಾಯಾಲಯ

ವಾಹನ ಬಿಡುಗಡೆಗೆ ಕೋರ್ಟ್ ಆದೇಶವಿದ್ದರೂ ಲಂಚಕ್ಕೆ ಬೇಡಿಕೆ ಇಟ್ಟಿದ್ದನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿತು.

Bar & Bench

ಪೊಲೀಸರ ವಶದಲ್ಲಿದ್ದ ಕಾರು ಬಿಡುಗಡೆ ಮಾಡಲು ಮತ್ತು ದೋಷಾರೋಪ ಪಟ್ಟಿಯಿಂದ ಆರೋಪಿಗಳ ಹೆಸರು ಕೈಬಿಡಲು ಲಂಚ ಪಡೆದಿದ್ದ ತುಮಕೂರು ಜಿಲ್ಲೆ ಗುಬ್ಬಿ ತಾಲೂಕು ಸಿ ಎಸ್‌ ಪುರ ಠಾಣೆಯ ಸಬ್‌ ಇನ್‌ಸ್ಪೆಕ್ಟರ್‌ ಸೋಮಶೇಖರ್‌ ಸೇರಿ ಮೂವರು ಪೊಲೀಸರಿಗೆ ತುಮಕೂರಿನ 7ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜಾಮೀನು ನಿರಾಕರಿಸಿದೆ.

ನ್ಯಾಯಾಧೀಶರಾದ ಎಸ್‌ ಸುಧೀಂದ್ರನಾಥ್‌ ಅರ್ಜಿ ವಜಾಗೊಳಿಸಿದರು. ವಾಹನ ಬಿಡುಗಡೆಗೆ ಕೋರ್ಟ್ ಆದೇಶವಿದ್ದರೂ ಲಂಚಕ್ಕೆ ಬೇಡಿಕೆ ಇಟ್ಟಿದ್ದನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿತು. ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಪರವಾಗಿ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಎನ್‌ ಬಸವರಾಜು ವಾದ ಮಂಡಿಸಿದ್ದರು. ಜಾಮೀನು ನೀಡುವಂತೆ ಕೋರಿ ಪಿಎಸ್‌ಐ ಸೋಮಶೇಖರ್‌ ಹಾಗೂ ಸಿಬ್ಬಂದಿಗಳಾದ ನಯಾಜ್‌ ಅಹಮದ್‌ ಮತ್ತು ಕೇಶವಮೂರ್ತಿ ಅವರು ನ್ಯಾಯಾಲಯಕ್ಕೆ ಜಾಮೀನು ಅರ್ಜಿ ಸಲ್ಲಿಸಿದ್ದರು.

ಕುಟುಂಬ ಕಲಹದ ಕಾರಣಕ್ಕೆ ಕೆಲ ದಿನಗಳ ಹಿಂದೆ ಸಿ ಎಸ್‌ ಪುರ ಠಾಣೆಯಲ್ಲಿ ಚಂದ್ರಣ್ಣ ಎಂಬುವವರ ವಿರುದ್ಧ ದೂರು ದಾಖಲಾಗಿತ್ತು. ಪೊಲೀಸರು ಚಂದ್ರಣ್ಣನ ಕಾರು ವಶಪಡಿಸಿಕೊಂಡಿದ್ದರು. ಆದರೆ ಚಂದ್ರಣ್ಣ ನ್ಯಾಯಾಲಯದಲ್ಲಿ ಜಾಮೀನು ಪಡೆದು ಕಾರು ಬಿಡಿಸಿಕೊಳ್ಳಲು ಠಾಣೆಗೆ ಬಂದಿದ್ದರು. ನ್ಯಾಯಾಲಯದ ಆದೇಶದ ಹೊರತಾಗಿಯೂ ಪೊಲೀಸರು ವಾಹನ ಬಿಡುಗಡೆಗೆ ರೂ 28,000 ಹಣ ನೀಡುವಂತೆ ಒತ್ತಡ ಹೇರಿದ್ದರು.

ಈ ಸಂಬಂಧ ಎಸಿಬಿ ಪೊಲೀಸರು ಸಿ ಎಸ್‌ ಪುರ ಠಾಣೆಗೆ ದಾಳಿ ಮಾಡಿದಾಗ ಆರೋಪಿಗಳಾದ ಸೋಮಶೇಖರ್‌ ಹಾಗೂ ನಯಾಜ್‌ ಬೈಕಿನಲ್ಲಿ ಪರಾರಿಯಾಗಿದ್ದರು. ಎಸಿಬಿ ಸಿಬ್ಬಂದಿ ಊಟ ಮಾಡುತ್ತಿರುವ ಸಮಯ ಬಳಸಿಕೊಂಡು ಆರೋಪಿಗಳು ತಪ್ಪಿಸಿಕೊಂಡಿದ್ದರು. ಘಟನೆಯ ದೃಶ್ಯಾವಳಿಗಳು ವೈರಲ್‌ ಆಗಿದ್ದವು. ನಂತರ ಆರೋಪಿಗಳಲ್ಲಿ ಇಬ್ಬರನ್ನು ಬಂಧಿಸಲಾಗಿತ್ತು.

ಸೋಮಶೇಖರ್‌ ಹಾಗೂ ನಯಾಜ್‌ ನ್ಯಾಯಾಂಗ ಬಂಧನದಲ್ಲಿದ್ದು ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ಕೇಶವಮೂರ್ತಿ ನಿರೀಕ್ಷಣಾ ಜಾಮೀನು ಕೋರಿದ್ದರು. ಆದರೆ ಮೂವರ ಮನವಿಯನ್ನೂ ನ್ಯಾಯಾಲಯ ತಿರಸ್ಕರಿಸಿದೆ.