ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರ ನಿವಾಸದಲ್ಲಿ ಅಪಾರ ಪ್ರಮಾಣದ ಹಣ ದೊರೆತ ಆರೋಪದ ಬಗ್ಗೆ ವಿವಾದ ಭುಗಿಲೆದ್ದ ಕೆಲವೇ ಗಂಟೆಗಳಲ್ಲಿ ಕೊಲಿಜಿಯಂ ಅವರನ್ನು ಅಲಾಹಾಬಾದ್ ಹೈಕೋರ್ಟ್‌ಗೆ ವರ್ಗಾವಣೆ ಮಾಡಲು ಶಿಫಾರಸು ಮಾಡಿದೆ ಎಂಬ ಹೇಳಿಕೆಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದೆ.
ಸುಪ್ರೀಂ ಕೋರ್ಟ್ ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟಣೆ ಪ್ರಕಾರ ವರ್ಮಾ ಅವರ ವರ್ಗಾವಣೆಗೆ ಕೊಲಿಜಿಯಂ ಇನ್ನೂ ಅಧಿಕೃತವಾಗಿ ಶಿಫಾರಸು ಮಾಡಿಲ್ಲ. ಬದಲಿಗೆ ವರ್ಗಾವಣೆ ಪ್ರಸ್ತಾವನೆ ಪರಿಗಣನೆಯಲ್ಲಿದೆ. ವರ್ಗಾವಣೆ ಪ್ರಸ್ತಾವನೆ ಸಂಬಂಧ ಸುಪ್ರೀಂ ಕೋರ್ಟ್‌ನ ಸಮಾಲೋಚಕ ನ್ಯಾಯಮೂರ್ತಿಗಳು, ಸಂಬಂಧಪಟ್ಟ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಹಾಗೂ ಖುದ್ದು ನಾ. ವರ್ಮಾ ಅವರ ಸಲಹೆ ಕೇಳಲಾಗಿದೆ ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.
ಪ್ರತಿಕ್ರಿಯೆಗಳನ್ನು ಪರಿಶೀಲಿಸಿದ ಬಳಿಕ ಕೊಲಿಜಿಯಂ ನಿರ್ಣಯ ಅಂಗೀಕರಿಸಲಿದೆ ಎಂದು ಅದು ಹೇಳಿದೆ.
ಅಗ್ನಿ ಆಕಸ್ಮಿಕಕ್ಕೆ ತುತ್ತಾದ ನ್ಯಾ. ವರ್ಮಾ ಅವರ ಮನೆಗೆ ಬೆಂಕಿ ನಂದಿಸಲು ಹೋದ ಅಗ್ನಿಶಾಮಕ ಸಿಬ್ಬಂದಿಗೆ ಅವರ ಮನೆಯಲ್ಲಿ ಅಪಾರ ಪ್ರಮಾಣದ ನಗದು ದೊರೆತಿತ್ತು ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಆರಂಭವಾಗಿರುವ ಆಂತರಿಕ ತನಿಖೆ ಹಾಗೂ ವರ್ಗಾವಣೆ ಪ್ರಸ್ತಾವನೆ ಬೇರೆ ಬೇರೆ ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.
ವರ್ಮಾ ಅವರ ನಿವಾಸದಿಂದ ಅಪಾರ ಪ್ರಮಾಣದ ಲೆಕ್ಕಪತ್ರವಿಲ್ಲದ ನಗದು ಪತ್ತೆಯಾಗಿದೆ. ಇದರಿಂದಾಗಿ ಕೊಲಿಜಿಯಂ ಅವರನ್ನು ಅಲಹಾಬಾದ್‌ಗೆ ವರ್ಗಾಯಿಸಲು ಶಿಫಾರಸು ಮಾಡಿದೆ ಎಂಬ ಸುದ್ದಿ ಶುಕ್ರವಾರ ದೇಶದಾದ್ಯಂತ ಸಂಚಲನ ಮೂಡಿಸಿತ್ತು. ನಗದು ದೊರೆತ ಬಗ್ಗೆ ಸುಪ್ರೀಂ ಕೋರ್ಟ್ ಪೂರ್ಣ ನ್ಯಾಯಾಲಯ ತನಿಖೆ ಆರಂಭಿಸಿದೆ ಎಂಬುದು ದೃಢಪಟ್ಟಿತ್ತು. ಆದರೆ ವರ್ಗಾವಣೆ ಮತ್ತು ಆಂತರಿಕ ತನಿಖೆ ಎರಡೂ ಪ್ರತ್ಯೇಕ ಸಂಗತಿಗಳು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
"ದೆಹಲಿ ಹೈಕೋರ್ಟ್‌ನ ಎರಡನೇ ಅತಿ ಹಿರಿಯ ನ್ಯಾಯಮೂರ್ತಿ ಮತ್ತು ಕೊಲಿಜಿಯಂ ಸದಸ್ಯರಾಗಿರುವ ನ್ಯಾ. ಯಶವಂತ್ ವರ್ಮಾ ಅವರನ್ನು ಅವರ ಮಾತೃ ಹೈಕೋರ್ಟ್‌ಗೆ ಅಂದರೆ ಅಲಹಾಬಾದ್ ಹೈಕೋರ್ಟ್‌ಗೆ ವರ್ಗಾವಣೆ ಮಾಡುವ ಪ್ರಸ್ತಾಪ ಮತ್ತು ಆಂತರಿಕ ತನಿಖೆ ನಡೆಸುವ ವಿಚಾರ ಪ್ರತ್ಯೇಕವಾದುದು” ಎಂದು ಅದು ವಿವರಿಸಿದೆ.
ಮಾರ್ಚ್ 20ರ ಕೊಲಿಜಿಯಂ ಸಭೆಗೂ ಮೊದಲೇ ದೆಹಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಆಂತರಿಕ ತನಿಖಾ ಪ್ರಕ್ರಿಯೆ, ಸಾಕ್ಷ್ಯಗಳು ಮತ್ತು ಮಾಹಿತಿ ಸಂಗ್ರಹ ಕಾರ್ಯಕ್ಕೆ ಮುಂದಾಗಿದ್ದರು ಎಂದು ಅದು ಹೇಳಿದೆ.
ವರದಿಯನ್ನು ಮುಖ್ಯ ನ್ಯಾಯಮೂರ್ತಿಗಳು ಶುಕ್ರವಾರ ತಡರಾತ್ರಿ ಹೊತ್ತಿಗೆ ಸಿಜೆಐ ಸಂಜೀವ್ ಖನ್ನಾ ಅವರಿಗೆ ಸಲ್ಲಿಸಲಿದ್ದು ಅದನ್ನು ಪರಿಶೀಲಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.
[ಪತ್ರಿಕಾ ಪ್ರಕಟಣೆಯ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]