ನ್ಯಾ. ಯಾದವ್ ಅವರಿಗೆ ವಾಗ್ದಂಡನೆ ಪ್ರಶ್ನಿಸಿದ್ದ ಪಿಐಎಲ್ ವಜಾಗೊಳಿಸಿದ ಅಲಾಹಾಬಾದ್ ಹೈಕೋರ್ಟ್

ನ್ಯಾ. ಯಾದವ್ ಅವರ ವಿರುದ್ಧ ಕಪಿಲ್ ಸಿಬಲ್ ಹಾಗೂ 54 ಸಂಸದರು ರಾಜ್ಯಸಭೆಯ ಅಧ್ಯಕ್ಷರೆದುರು ವಾಗ್ದಂಡನಾ ನಿರ್ಣಯ ಮಂಡಿಸಿದ್ದರು.
Justice Shekhar Kumar Yadav with Allahabad High Court
Justice Shekhar Kumar Yadav with Allahabad High Court
Published on

ಮುಸ್ಲಿಮರ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದ ಅಲಾಹಾಬಾದ್‌ ಹೈಕೋರ್ಟ್‌ ಹಾಲಿ ನ್ಯಾಯಮೂರ್ತಿ ಶೇಖರ್ ಕುಮಾರ್ ಯಾದವ್ ಅವರ ವಿರುದ್ಧ ಮಂಡಿಸಲಾಗಿದ್ದ ವಾಗ್ದಂಡನಾ ನಿರ್ಣಯ ಪ್ರಶ್ನಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಅಲಾಹಾಬಾದ್ ಹೈಕೋರ್ಟ್ ಮಂಗಳವಾರ ವಜಾಗೊಳಿಸಿದೆ

ನ್ಯಾಯಮೂರ್ತಿಗಳಾದ ಅಟ್ಟೌ ರೆಹಮಾನ್ ಮಸೂದಿ ಮತ್ತು ಸುಭಾಷ್ ವಿದ್ಯಾರ್ಥಿ ಅವರಿದ್ದ ವಿಭಾಗೀಯ ಪೀಠ ಪಿಐಎಲ್ ನಿರ್ವಹಣಾರ್ಹವಲ್ಲ ಎಂದು ಹೇಳಿದೆ.

Also Read
ನ್ಯಾ. ಯಾದವ್‌ ಅವರಿಗೆ ವಾಗ್ದಂಡನೆ ಪ್ರಶ್ನಿಸಿ ಅಲಾಹಾಬಾದ್ ಹೈಕೋರ್ಟ್‌ಗೆ ಅರ್ಜಿ

ಬಲಪಂಥೀಯ ಸಂಘಟನೆಯಾದ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಕಾನೂನು ಘಟಕ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಭಾಷಣ ಮಾಡುವಾಗ ನ್ಯಾ. ಯಾದವ್ ವಿವಾದಾತ್ಮಕ ಹೇಳಿಕೆ ನೀಡಿದ್ದರು  .

ಬಹುಸಂಖ್ಯಾತ ಸಮುದಾಯದ ಆಶಯದಂತೆ ಭಾರತ ಕಾರ್ಯ ನಿರ್ವಹಿಸಲಿದೆ ಎಂದಿದ್ದ ಅವರು ಮುಸ್ಲಿಮರ ವಿರುದ್ಧ ಅವಹೇಳನಕಾರಿಯಾದ ಕಠ್‌ಮುಲ್ಲಾ ಎಂಬ ಪದ ಕೂಡ ಬಳಸಿದ್ದರು. ಭಾಷಣದ ಹಿನ್ನೆಲೆಯಲ್ಲಿ ಅವರನ್ನು ನ್ಯಾಯಾಂಗ ಕರ್ತವ್ಯದಿಂದ ದೂರ ಇರಿಸಬೇಕು ಎಂಬ ಮಾತುಗಳು ಕೇಳಿಬಂದಿದ್ದವು.

Also Read
ನ್ಯಾ. ಶೇಖರ್‌ ಕುಮಾರ್‌ ಯಾದವ್‌ ವಿರುದ್ಧ ವಾಗ್ದಂಡನಾ ನಿರ್ಣಯಕ್ಕೆ ಮುಂದಾದ ಸಿಬಲ್‌ ನೇತೃತ್ವದ ಸಂಸದರು

ಈ ಮಧ್ಯೆ ರೋಸ್ಟರ್‌ನಲ್ಲಿ (ಪ್ರಕರಣಗಳನ್ನು ವಿಷಯಾಧಾರಿತವಾಗಿ ನಿರ್ದಿಷ್ಟ ನ್ಯಾಯಮೂರ್ತಿಗಳ ಮುಂದೆ ವಿಚಾರಣೆಗೆ ಇರಿಸುವ ಪಟ್ಟಿ) ಬದಲಾವಣೆ ಮಾಡಿದ್ದ ಹೈಕೋರ್ಟ್‌ ನ್ಯಾ. ಯಾದವ್‌ ಅವರಿಗೆ ಮೊದಲ ಮೇಲ್ಮನವಿಗಳನ್ನು ಆಲಿಸಲು ನಿಗದಿಪಡಿಸಿತ್ತು. ಜಿಲ್ಲಾ ನ್ಯಾಯಾಲಯಗಳು ನೀಡಿದ ಆದೇಶಗಳಿಂದ ಉದ್ಭವಿಸುವ ಪ್ರಕರಣಗಳನ್ನು, ಅದು ಕೂಡ 2010ರವರೆಗೆ ಸಲ್ಲಿಕೆಯಾಗಿದ್ದ ಪ್ರಕರಣಗಳನ್ನು ಮಾತ್ರವೇ ಆಲಿಸಲು ನಿಗದಿಪಡಿಸಲಾಗಿತ್ತು.

ನ್ಯಾ. ಯಾದವ್‌ ಅವರ ವಿರುದ್ಧ ರಾಜ್ಯಸಭಾ ಸದಸ್ಯರೂ ಆಗಿರುವ ಹಿರಿಯ ವಕೀಲ ಕಪಿಲ್‌ ಸಿಬಲ್‌ ಹಾಗೂ 54 ಸಂಸದರು ರಾಜ್ಯಸಭೆಯ ಅಧ್ಯಕ್ಷರೆದುರು ವಾಗ್ದಂಡನಾ ನಿರ್ಣಯ ಮಂಡಿಸಿದ್ದರು. ಈ ನಿರ್ಣಯ ಪ್ರಶ್ನಿಸಿದ್ದ ವಕೀಲ ಅಶೋಕ್ ಪಾಂಡೆ  ಪ್ರಸ್ತಾವನೆಗೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳದೆ ಇರಲು ರಾಜ್ಯಸಭಾಧ್ಯಕ್ಷರಿಗೆ ನಿರ್ದೇಶನ ನೀಡಬೇಕು ಎಂದು ನ್ಯಾಯಾಲಯದ ಮೊರೆ ಹೋಗಿದ್ದರು.

Also Read
ನ್ಯಾ. ಯಾದವ್ ಭಾಷಣಕ್ಕೆ ಬೆಂಬಲ: ಸಿಎಂ ಯೋಗಿ ಪದಚ್ಯುತಿ ಕೋರಿ ಅಲಾಹಾಬಾದ್ ಹೈಕೋರ್ಟ್‌ಗೆ ಅರ್ಜಿ

ಸಭೆಯಲ್ಲಿ ನ್ಯಾ. ಯಾದವ್‌ ಏನೇ ಹೇಳಿದ್ದರೂ ಸನಾತನ ಹಿಂದೂ ಧರ್ಮದ ಅನುಯಾಯಿಯಾಗಿ ಅವರು ಹೇಳಿದ್ದಾರೆಯೇ ವಿನಾ ನ್ಯಾಯಾಲಯದ ನ್ಯಾಯಮೂರ್ತಿಯಾಗಿ ಅಲ್ಲ. ಅವರು ಬಳಸಿದ ಕಠ್‌ಮುಲ್ಲಾ ಪದ ದ್ವೇಷ ಭಾಷಣವಾಗದು ಎಂದು ಪಾಂಡೆ ವಾದಿಸಿದ್ದರು.

ಮುಸ್ಲಿಂ ಹುಡುಗಿಯರನ್ನು ಶಾಲಾ ಕಾಲೇಜುಗಳಿಗೆ ತೆರಳದಂತೆ ಹೇಗೆ ಕಠ್‌ಮುಲ್ಲಾಗಳು ತಡೆಯತ್ತಿದ್ದಾರೆ ಅಥವಾ ಮುಸ್ಲಿಂ ಮಹಿಳೆಯರು ಹಿಜಾಬ್‌ ಇಲ್ಲವೇ ಬುರ್ಖಾ ಧರಿಸುವಂತೆ ಹೇಗೆ ಒತ್ತಾಯಿಸುತ್ತಿದ್ದಾರೆ ಎಂಬುದು ವಕೀಲರು ಮತ್ತು ನ್ಯಾಯಮೂರ್ತಿಯಾಗಿ ಯಾದವ್‌ ಅವರಿಗೆ ತಿಳಿದಿರಬಹುದು.

ಬಾಬರ್‌ ಜೊತೆ ಕೈಜೋಡಿಸಿ ಶ್ರೀರಾಮ ಜನ್ಮಭೂಮಿ ಮಂದಿರ ನಿರ್ಮಾಣಕ್ಕೆ ಅಡ್ಡಿಪಡಿಸಿದ, ಕಾಶಿ ವಿಶ್ವನಾಥ ದೇಗುಲ ಮತ್ತು ಕೃಷ್ಣ ಜನ್ಮಭೂಮಿಯ ದೇವಸ್ಥಾನಕ್ಕೆ ಸಂಬಂಧಿಸಿದಂತೆ ಔರಂಗಾಜೇಬನೊಂದಿಗೆ ನಿಂತ ಮುಸ್ಲಿಮ್‌ ಸಮುದಾಯದಲ್ಲಿರುವ ಕೆಲ ಕಠ್‌ಮುಲ್ಲಾಗಳ ಬಗ್ಗೆ ಅವರು ಆತಂಕ ವ್ಯಕ್ತಪಡಿಸಿರಬಹುದು ಎಂದು ಅರ್ಜಿಯಲ್ಲಿ ಪಾಂಡೆ ವಿವರಿಸಿದ್ದರು.

Kannada Bar & Bench
kannada.barandbench.com