Twitter 
ಸುದ್ದಿಗಳು

ಟ್ವಿಟರ್‌ ಖಾತೆ ನಿರ್ಬಂಧ ಪ್ರಕರಣ: ಒಲ್ಲದ ಮನಸ್ಸಿನಿಂದ ವಿಚಾರಣೆ ಮುಂದೂಡಿಕೆ ಎಂದ ಹೈಕೋರ್ಟ್‌

“ಎಎಸ್‌ಜಿ ಪ್ರಸ್ತಾವಕ್ಕೆ ನಿಮ್ಮ ಒಪ್ಪಿಗೆ ಇದೆಯೇ? ನೀವು ವಿರೋಧಿಸಿದರೆ ಕೇಂದ್ರ ಸರ್ಕಾರಕ್ಕೆ ಅವಕಾಶ ನಿರಾಕರಿಸಲಾಗುವುದು. ಈಗಾಗಲೇ ಕೇಂದ್ರ ಸರ್ಕಾರದ ಹಲವು ಕೋರಿಕೆ ಮನ್ನಿಸಲಾಗಿದೆ” ಎಂದು ಅರ್ಜಿದಾರರ ವಕೀಲರನ್ನು ಕುರಿತು ನ್ಯಾಯಾಲಯ ಹೇಳಿತು.

Bar & Bench

ವ್ಯಕ್ತಿಗತವಾಗಿ ಖಾತೆಗಳನ್ನು ನಿಷೇಧಿಸುವಂತೆ ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆ ಜಾರಿ ಮಾಡಿರುವ ನಿರ್ಬಂಧ ಆದೇಶಗಳನ್ನು ಪ್ರಶ್ನಿಸಿ ಟ್ವಿಟರ್‌ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ ಒಲ್ಲದ ಮನಸ್ಸಿನಿಂದ ಅರ್ಜಿ ವಿಚಾರಣೆ ಮುಂದೂಡುತ್ತಿರುವುದಾಗಿ ಬುಧವಾರ ಹೇಳಿತು.

ಪ್ರಕರಣದ ವಿಚಾರಣೆಯನ್ನು ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಅವರ ನೇತೃತ್ವದ ಏಕಸದಸ್ಯ ಪೀಠವು ವಿಚಾರಣೆ ನಡೆಸಿತು.

ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಶಂಕರನಾರಾಯಣ್‌ ಅವರು “ಸಾಲಿಸಿಟರ್‌ ಜನರಲ್‌ ಅವರು ಸಾಂವಿಧಾನಿಕ ಪೀಠದ ಮುಂದೆ ವಾದಿಸುತ್ತಿದ್ದಾರೆ. ತೀವ್ರ ಅನಾರೋಗ್ಯದಿಂದ ಈಚೆಗೆ ಕರ್ತವ್ಯಕ್ಕೆ ಮರಳಿದ್ದು, ಪ್ರಕರಣದ ಬಗ್ಗೆ ಮಾಹಿತಿ ಪಡೆದುಕೊಂಡಿಲ್ಲ. ಹೀಗಾಗಿ, ವಿಚಾರಣೆಯನ್ನು ಫೆಬ್ರವರಿ 7ರಂದು ನಡೆಸಬಹುದೇ?” ಎಂದು ಕೋರಿದರು.

ಆಗ ಪೀಠವು “ಎಎಸ್‌ಜಿ ಪ್ರಸ್ತಾವಕ್ಕೆ ನಿಮ್ಮ ಒಪ್ಪಿಗೆ ಇದೆಯೇ? ನೀವು ವಿರೋಧಿಸಿದರೆ ಕೇಂದ್ರ ಸರ್ಕಾರಕ್ಕೆ ಅವಕಾಶ ನಿರಾಕರಿಸಲಾಗುವುದು. ಈಗಾಗಲೇ ಕೇಂದ್ರ ಸರ್ಕಾರದ ಹಲವು ಕೋರಿಕೆಗಳನ್ನು ಮನ್ನಿಸಲಾಗಿದೆ” ಎಂದು ಅರ್ಜಿದಾರರ ವಕೀಲರನ್ನು ಕುರಿತು ಹೇಳಿತು. ಅರ್ಜಿದಾರ ಪರ ವಕೀಲರು ಎಎಸ್‌ಜಿ ಪ್ರಸ್ತಾವಕ್ಕೆ ಸಮ್ಮತಿಸಿದರು.

ತದನಂತರ, ಎಎಸ್‌ಜಿ ಅವರ ಕೋರಿಕೆಯಂತೆ ವಿಚಾರಣೆಯನ್ನು ಒಲ್ಲದ ಮನಸ್ಸಿನಿಂದ ಫೆಬ್ರವರಿ 7ಕ್ಕೆ ಅಂತಿಮವಾಗಿ ಮುಂದೂಡಲಾಗಿದೆ ಎಂದು ನ್ಯಾಯಾಲಯವು ಆದೇಶದಲ್ಲಿ ಉಲ್ಲೇಖಿಸಿತು.

ಕಳೆದ ವಿಚಾರಣೆ ವೇಳೆ ಪೀಠವು “ನಾವು ಸರ್ಕಾರ ಹೇಳಿದ್ದನ್ನು ಬರೆದುಕೊಳ್ಳಲು ಇಲ್ಲಿಲ್ಲ. ಚಾಚೂತಪ್ಪದೇ ನಿಮ್ಮ ಆದೇಶ ಪಾಲಿಸಲು ನಾವಿಲ್ಲಿ ಕುಳಿತಿಲ್ಲ. ಎಷ್ಟು ಬಾರಿ ನೀವು ವಿಚಾರಣೆ ಮುಂದೂಡಿಕೆ ಕೋರಿದ್ದೀರಿ? ಆದೇಶಗಳನ್ನು ಒಮ್ಮೆ ನೋಡಿ” ಎಂದು ಮೌಖಿಕವಾಗಿ ಕಟುವಾಗಿ ನುಡಿದಿತ್ತು.