Twitter / Karnataka High Court
Twitter / Karnataka High Court  
ಸುದ್ದಿಗಳು

[ಟ್ವಿಟರ್‌ ಖಾತೆ ನಿರ್ಬಂಧ] ನೀವು ಬಯಸಿದರೆ ಗೌಪ್ಯ ವಿಚಾರಣೆ ಮಾಡೋಣ ಎಂದ ಹೈಕೋರ್ಟ್‌; ಕೇಂದ್ರಕ್ಕೆ ನೋಟಿಸ್‌ ಜಾರಿ

Bar & Bench

ವ್ಯಕ್ತಿಗತವಾಗಿ ಖಾತೆಗಳನ್ನು ನಿಷೇಧಿಸುವಂತೆ ಕೇಂದ್ರ ಸರ್ಕಾರ ಹೊರಡಿಸಿರುವ ನಿರ್ಬಂಧಕ ಆದೇಶಗಳನ್ನು ಪ್ರಶ್ನಿಸಿ ಟ್ವಿಟರ್‌ ಸಲ್ಲಿಸಿರುವ ಮನವಿಯ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್‌ ಮಂಗಳವಾರ ಕೇಂದ್ರ ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡಿದೆ.

ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆ (ಎಂಇಐಟಿವೈ) ಜಾರಿ ಮಾಡಿರುವ ನಿರ್ಬಂಧ ಆದೇಶಗಳನ್ನು ಪ್ರಶ್ನಿಸಿ ಟ್ವಿಟರ್‌ ಸಲ್ಲಿಸಿರುವ ರಿಟ್‌ ಮನವಿಯ ವಿಚಾರಣೆಯನ್ನು ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಅವರ ನೇತೃತ್ವದ ಏಕಸದಸ್ಯ ಪೀಠವು ನಡೆಸಿತು.

“ಕೇಂದ್ರ ಸರ್ಕಾರದ ಪರ ವಕೀಲರಾದ ಎಂ ಎನ್‌ ಕುಮಾರ್‌ ಅವರು ಕೇಂದ್ರ ಸರ್ಕಾರದ ಪರವಾಗಿ ನೋಟಿಸ್‌ ಸ್ವೀಕರಿಸಲು ಕೋರಲಾಗಿದೆ. ಅರ್ಜಿದಾರರು ಸಲ್ಲಿಸಿರುವ ಮುಚ್ಚಿದ ಲಕೋಟೆಯಲ್ಲಿರುವ ಗೌಪ್ಯ ದಾಖಲೆಯನ್ನು ಜತನವಾಗಿ ಇಡಲು ರಿಜಿಸ್ಟ್ರಿಗೆ ನಿರ್ದೇಶಿಸಲಾಗಿದೆ. ಇಂಥದ್ದೇ ಮತ್ತೊಂದು ಮುಚ್ಚಿದ ಲಕೋಟೆಯಲ್ಲಿರುವ ದಾಖಲೆಯನ್ನು ಪ್ರತಿವಾದಿಗಳಿಗೆ ನೀಡಲು ಅರ್ಜಿದಾರರಿಗೆ ಸೂಚಿಸಿಲಾಗಿದೆ” ಎಂದು ಪೀಠವು ಆದೇಶದಲ್ಲಿ ದಾಖಲಿಸಿತು.

ವಿಚಾರಣೆಯ ಆರಂಭದಲ್ಲಿ ಟ್ವಿಟರ್‌ ಪ್ರತಿನಿಧಿಸಿದ್ದ ಹಿರಿಯ ವಕೀಲ ಅಶೋಕ್‌ ಹಾರನಹಳ್ಳಿ ಅವರು ಕೇಂದ್ರ ಸರ್ಕಾರದ ನಿರ್ಬಂಧ ಆದೇಶದ ಕುರಿತು ಪೀಠಕ್ಕೆ ಸ್ಥೂಲವಾಗಿ ವಿವರಿಸಿದರು.

ಹಾರನಹಳ್ಳಿ ಅವರ ವಾದವನ್ನು ವಿಸ್ತರಿಸಿದ ಮತ್ತೊಬ್ಬ ಹಿರಿಯ ವಕೀಲ ಮುಕುಲ್‌ ರೋಹಟ್ಗಿ ಅವರು “ಟ್ವಿಟರ್‌ನಲ್ಲಿ ವ್ಯಕ್ತಿಗತವಾಗಿ ಹೊಂದಿರುವ ನೂರಾರು, ಸಾವಿರಾರು ಖಾತೆಗಳನ್ನು ನಿರ್ಬಂಧಿಸುವಂತೆ ಕೇಂದ್ರ ಸರ್ಕಾರ ಆದೇಶ ಮಾಡಿದೆ. ಕಾನೂನಿನ ಅನ್ವಯ ನಾವು ಸರ್ಕಾರದ ಆದೇಶವನ್ನು ಪಾಲಿಸಬೇಕಿದೆ. ಆದರೆ, ತಮ್ಮ ಟ್ವಿಟರ್‌ ಹ್ಯಾಂಡಲ್‌ ನಿರ್ಬಂಧವಾದದ್ದಕ್ಕೆ ವ್ಯಕ್ತಿಗತವಾಗಿ ಬಳಕೆದಾರರಿಗೆ ಯಾವುದೇ ಆಶ್ರಯ ಅಥವಾ ಪರಿಹಾರ ಇರುವುದಿಲ್ಲ. ಇದು ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವಾಗಿದೆ. ನಿರ್ಬಂಧ ಆದೇಶ ಮತ್ತು ಜಾರಿಯು ಗೌಪ್ಯವಾಗಿರಬೇಕು ಎಂದು ಹೇಳಲಾಗಿರುವುದರಿಂದ ನಾವು ಅದನ್ನು ಬಹಿರಂಗಪಡಿಸಿಲ್ಲ. ಈ ಮಾಹಿತಿಯನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಿದ್ದೇವೆ. 1000ಕ್ಕೂ ಅಧಿಕ ಟ್ವಿಟರ್‌ ಖಾತೆಗಳನ್ನು ನಿರ್ಬಂಧಿಸುವಂತೆ ಸರ್ಕಾರ ಆದೇಶ ಮಾಡಿದೆ. ಇದಕ್ಕೆ ಯಾವುದೇ ಸಕಾರಣ ನೀಡಿಲ್ಲ" ಎಂದರು.

ಮುಂದುವರೆದು, "ಟ್ವಿಟರ್‌ ಖಾತೆಯನ್ನು ನಿರ್ಬಂಧಿಸಿದರೆ ನಾವು ಬಳಕೆದಾರರಿಗೆ ಉತ್ತರಿಸಬೇಕಾಗುತ್ತದೆ. ಸ್ವಾಭಾವಿಕ ನ್ಯಾಯದ ಅನ್ವಯ ಬಳಕೆದಾರರೊಬ್ಬರು ಆಕ್ಷೇಪಾರ್ಹ ಟ್ವೀಟ್‌ ಮಾಡಿದ್ದರೆ ಅವರಿಗೆ ಅದನ್ನು ತಿಳಿಸಿದ ಬಳಿಕ ಅವರ ಖಾತೆಯನ್ನು ನಿರ್ಬಂಧಿಸಬೇಕಾಗುತ್ತದೆ. ಹೀಗಾಗಿ, ಏತಕ್ಕಾಗಿ ನಿರ್ದಿಷ್ಟ ಬಳಕೆದಾರರ ಖಾತೆಗಳನ್ನು ನಿರ್ಬಂಧಿಸಬೇಕು ಎಂಬುದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಕಾರಣ ನೀಡಬೇಕು. ಸದ್ಯದ ಕೇಂದ್ರ ಸರ್ಕಾರ ಆದೇಶ ಪಾಲಿಸಿದರೆ ಟ್ವಿಟರ್‌ ಉದ್ಯಮಕ್ಕೆ ಹಾನಿಯಾಗುತ್ತದೆ. ಹೀಗಾಗಿ ನ್ಯಾಯಾಲಯದ ಮೆಟ್ಟಿಲೇರಿದ್ದು, ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಲಾಗಿರುವ ಒಂದು ಮಾದರಿಯನ್ನು ನ್ಯಾಯಾಲಯ ಪರಿಶೀಲಿಸಬಹುದು” ಎಂದರು.

ಆಗ ಮಧ್ಯಪ್ರವೇಶಿಸಿದ ಪೀಠವು “ಕೇಂದ್ರ ಸರ್ಕಾರವನ್ನು ಪ್ರತಿನಿಧಿಸಿರುವ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರು ಕೋವಿಡ್‌ ಸೋಂಕಿಗೆ ತುತ್ತಾಗಿದ್ದಾರೆ. ಎರಡು ವಾರಗಳ ಬಳಿಕ ವಿಚಾರಣೆ ನಡೆಸೋಣ” ಎಂದಿತು.

ಇದಕ್ಕೆ ರೋಹಟ್ಗಿ ಅವರು “ಸಾಲಿಸಿಟರ್‌ ಜನರಲ್‌ ಕೋವಿಡ್‌ ಸೋಂಕಿಗೆ ತುತ್ತಾಗಿದ್ದಾರೆ ಎಂಬುದು ಗೊತ್ತಿದೆ. ಆಗಸ್ಟ್‌ 25ರಂದು ಪ್ರಕರಣದ ವಿಚಾರಣೆಗೆ ನಾನು ಬೆಂಗಳೂರಿಗೆ ಬರುವವನಿದ್ದು, ಅಂದು ಈ ಪ್ರಕರಣದ ವಿಚಾರಣೆಯನ್ನೂ ಮುಗಿಸಿಕೊಳ್ಳುತ್ತೇನೆ. ಇದಕ್ಕೆ ಅನುಮತಿಸಬೇಕು” ಎಂದು ಕೋರಿದರು. ಇದಕ್ಕೆ ಪೀಠವು ಒಪ್ಪಿಗೆ ಸೂಚಿಸಿತು.

ಈ ನಡುವೆ, ಕೇಂದ್ರ ಸರ್ಕಾರದ ಪರವಾಗಿ ಹಾಜರಾಗಿದ್ದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಎಂ ಬಿ ನರಗುಂದ್‌ ಅವರು “ಹಿರಿಯ ವಕೀಲ ಮುಕುಲ್‌ ರೋಹಟ್ಗಿ ಅವರನ್ನು ಖುದ್ದು ವಿಚಾರಣೆಯಲ್ಲಿ ಹಾಜರಾಗಲು ನಿರ್ದೇಶಿಸಬೇಕು” ಎಂದರು.

ಇದಕ್ಕೆ ಪೀಠ “ರೋಹಟ್ಗಿ ಬೆಂಗಳೂರಿಗೆ ವಿಚಾರಣೆಗೆ ಬರುತ್ತೇನೆ ಎಂದು ಹೇಳಿದ್ದಾರೆ. ಅವರು ಬರುವುದನ್ನು ನೀವು ಕಾಯಬೇಕಷ್ಟೆ” ಎಂದರು.

ಮುಂದುವರಿದು, “ನನ್ನ ಚೇಂಬರ್‌ ಚಿಕ್ಕದು ಎಂಬುದು ನಿಮಗೆ ತಿಳಿದಿದೆ. ದೊಡ್ಡ ಮಂದಿಯನ್ನು ಆಹ್ವಾನಿಸಲು ಕಷ್ಟವಾಗುತ್ತದೆ. ಆದರೂ, ನೀವು ಬಯಸುವುದಾದರೆ ಪ್ರಕರಣದ ಗೌಪ್ಯ ವಿಚಾರಣೆ ಮಾಡೋಣ” ಎಂದರು.

ಅಂತಿಮವಾಗಿ ಪೀಠವು ವಿಚಾರಣೆಯನ್ನು ಆಗಸ್ಟ್‌ 25ಕ್ಕೆ ಮುಂದೂಡಿತು.