ಟ್ವಿಟರ್ ತನ್ನ ಖಾತೆದಾರರ ಪರವಾಗಿ ವಾದಿಸಲಾಗದು. ಹೀಗಾಗಿ, 39 ಯುಆರ್‌ಎಲ್‌ಗಳನ್ನು ತೆಗೆಯುವಂತೆ ಕೇಂದ್ರ ಸರ್ಕಾರವು ಹತ್ತು ನಿರ್ಬಂಧ ಆದೇಶ ಮಾಡಿರುವುದನ್ನು ಪ್ರಶ್ನಿಸಲು ಟ್ವಿಟರ್‌ಗೆ ದಾವೆಯಲ್ಲಿ ಹಾಜರಾಗುವ ಹಕ್ಕಿಲ್ಲ ಎಂದು ಸೋಮವಾರ ಸರ್ಕಾರವು ಕರ್ನಾಟಕ ಹೈಕೋರ್ಟ್ ಮುಂದೆ ವಾದಿಸಿತು.
ವ್ಯಕ್ತಿಗತವಾಗಿ ಖಾತೆಗಳನ್ನು ನಿಷೇಧಿಸುವಂತೆ ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆ ಜಾರಿ ಮಾಡಿರುವ ನಿರ್ಬಂಧ ಆದೇಶಗಳನ್ನು ಪ್ರಶ್ನಿಸಿ ಟ್ವಿಟರ್ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ನೇತೃತ್ವದ ಏಕಸದಸ್ಯ ಪೀಠವು ನಡೆಸಿತು.
ಟ್ವಿಟರ್ ಬಳಕೆದಾರರ ಪರವಾಗಿ ಸಮರ್ಥಿಸುವ ಹಕ್ಕನ್ನು ಹೊಂದಿಲ್ಲ. ಹೀಗೆ ಮಾಡಲು ಶಾಸನದ ಬೆಂಬಲ ಅಗತ್ಯ ಎಂದು ಕೇಂದ್ರ ಸರ್ಕಾರ ವಾದಿಸಿದೆ. “ದಾವೆಯಲ್ಲಿ ಹಾಜರಾಗುವ ಹಕ್ಕಿನ ವಿಷಯವನ್ನು ಪರಿಗಣಿಸುವುದಾದರೆ ಟ್ವಿಟರ್ ಪ್ರಕರಣದಲ್ಲಿ ಬಾದಿತ ಪಕ್ಷಕಾರನೇ? ಎಲ್ಲ ಬಳಕೆದಾರರನ್ನು ಅದು ಬೆಂಬಲಿಸುತ್ತದೆಯೇ? ಟ್ವಿಟರ್ ಮತ್ತು ಅದರ ಬಳಕೆದಾರರ ನಡುವೆ ಯಾವುದೇ ಸದಸ್ಯತ್ವ ಅಥವಾ ಸಂಬಂಧದ ಪ್ರಶ್ನೆ ಉದ್ಭವಿಸುವುದಿಲ್ಲ” ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಹೇಳಿದರು.
ಕೇಂದ್ರ ಸರ್ಕಾರವು ಸ್ವೇಚ್ಛೆಯಿಂದ ನಡೆದುಕೊಂಡರೆ ಮಾತ್ರ ಸಂವಿಧಾನದ 14ನೇ ವಿಧಿ ಅಡಿ ಹಕ್ಕು ಉಲ್ಲಂಘನೆ ಉಲ್ಲೇಖಿಸಿ ಟ್ವಿಟರ್ ನ್ಯಾಯಾಲಯದ ಕದತಟ್ಟಬಹುದು ಎಂದು ಕೇಂದ್ರ ಸರ್ಕಾರವು ವಾದಿಸಿದೆ.
“ಟ್ವಿಟರ್ ವೇದಿಕೆ ಸೃಷ್ಟಿಸಿದ್ದು, ಅಲ್ಲಿ ಯಾರು ಬೇಕಾದರೂ ಸೇರ್ಪಡೆಯಾಗಬಹುದು. ಖಾತೆದಾರರು ಯಾವುದೇ ಉದ್ಯಮ ನಡೆಸುವುದಿಲ್ಲ. ಅವರು ಅಭಿವ್ಯಕ್ತಿಸಬಹುದಷ್ಟೆ. ಭಾರತದ ಹಿತಾಸಕ್ತಿಗೆ ಧಕ್ಕೆ ಉಂಟು ಮಾಡುವ ಸಾಧ್ಯತೆ ಇದೆ ಎಂದು ಸರ್ಕಾರ ಹೇಳಿದೆ. ಇಂಥ ಸಂದರ್ಭದಲ್ಲಿ ಮಧ್ಯಸ್ಥವೇದಿಕೆ (ಟ್ವಿಟರ್) ಅಂತರ ಕಾಯ್ದುಕೊಳ್ಳಬೇಕು” ಎಂದು ಪೀಠಕ್ಕೆ ವಿವರಿಸಿದರು.
ಕೇಂದ್ರ ಸರ್ಕಾರದ ವಾದವನ್ನು ಆಲಿಸಿದ ನ್ಯಾಯಾಲಯವು ವಿಚಾರಣೆಯನ್ನು ಮಾರ್ಚ್ 6ಕ್ಕೆ ಮುಂದೂಡಿದೆ. ಅಂದು ಕೇಂದ್ರವು ವಾದ ಮಂಡನೆ ಮುಂದುವರಿಸಲಿದೆ.