Joshimath cracks, Delhi HC 
ಸುದ್ದಿಗಳು

ಜೋಶಿಮಠ ಭೂಕುಸಿತ ತಡೆ ಮತ್ತು ಪುನರ್ವಸತಿಗಾಗಿ ಎರಡು ಸಮಿತಿ ರಚನೆ: ದೆಹಲಿ ಹೈಕೋರ್ಟ್‌ಗೆ ತಿಳಿಸಿದ ಉತ್ತರಾಖಂಡ ಸರ್ಕಾರ

ಚಾರ್‌ಧಾಮ್‌ ದೇಗುಲಗಳಲ್ಲಿ ಒಂದಾದ ಬದರೀನಾಥಕ್ಕೆ ಹೆಬ್ಬಾಗಿಲಿನಂತಿರುವ ಜೋಶಿಮಠದಲ್ಲಿ 720ಕ್ಕೂ ಹೆಚ್ಚು ಮನೆಗಳು ಬಿರುಕು ಬಿಟ್ಟಿವೆ ಎಂದು ಜಿಲ್ಲಾಡಳಿತದ ಇತ್ತೀಚಿನ ವರದಿ ಹೇಳಿದೆ.

Bar & Bench

ಭೂಕುಸಿತದಿಂದ ಸಂಕಷ್ಟಕ್ಕೆ ಸಿಲುಕಿರುವ ಉತ್ತರಾಖಂಡದ ಪರ್ವತ ಪಟ್ಟಣ ಜೋಶಿಮಠದಲ್ಲಿ ವಿಕೋಪ ತಡೆ ಮತ್ತು ಪುನರ್‌ವಸತಿಗಾಗಿ ಎರಡು ಸಮಿತಿ ರಚಿಸಲಾಗಿದೆ ಎಂದು ಉತ್ತರಾಖಂಡ ಸರ್ಕಾರ ಗುರುವಾರ ದೆಹಲಿ ಹೈಕೋರ್ಟ್‌ಗೆ ತಿಳಿಸಿದೆ.

ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸುಬ್ರಮೋಣಿಯಂ ಪ್ರಸಾದ್ ಅವರಿದ್ದ ವಿಭಾಗೀಯ ಪೀಠದ ಮುಂದೆ ಇಂದು ಹಾಜರಾದ ಉತ್ತರಾಖಂಡದ ಉಪ ಅಡ್ವೊಕೇಟ್‌ ಜನರಲ್‌ ಜೆ ಕೆ ಸೇಥಿ ಅವರು “ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪರಿಸ್ಥಿತಿ ನಿಭಾಯಿಸುತ್ತಿವೆ” ಎಂದು ಹೇಳಿದರು.

ಈಗಾಗಲೇ ಪಟ್ಟಣ ಮತ್ತು ಸಮೀಪದ ಪ್ರದೇಶಗಳಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್) ನಿಯೋಜಿಸಲಾಗಿದೆ. ಅನೇಕ ಜನರನ್ನು ಸ್ಥಳಾಂತರಿಸಲಾಗಿದ್ದು ಪುನರ್‌ವಸತಿ ಪ್ಯಾಕೇಜ್‌ ಸಿದ್ಧಪಡಿಸಲಾಗುತ್ತಿದೆ.

ಜೋಶಿಮಠದ ಹಲವು ಮನೆಗಳಲ್ಲಿ ಕಾಣಿಸಿಕೊಂಡಿರುವ ಬಿರುಕುಗಳನ್ನು ಪರಿಶೀಲಿಸಲು ಉನ್ನತಾಧಿಕಾರದ ಜಂಟಿ ಸಮಿತಿಯನ್ನು ರಚಿಸುವಂತೆ ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ವೇಳೆ ಅವರು ಈ ವಿಚಾರ ತಿಳಿಸಿದ್ದಾರೆ.

ಅರ್ಜಿಯಲ್ಲಿ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಸಮಿತಿ ರಚನೆಯಾಗಬೇಕು ಮತ್ತು ಪ್ರದೇಶಾಭಿವೃದ್ಧಿ ಕಾರ್ಯಗಳಲ್ಲಿ ತೊಡಗಿರುವ ಎಲ್ಲಾ ಸಚಿವಾಲಯಗಳ ಪ್ರತಿನಿಧಿಗಳನ್ನು ಇದು ಒಳಗೊಂಡಿರಬೇಕು ಇದರಿಂದ ಪುನರ್ವಸತಿಗೆ ಯೋಜನೆ ರೂಪಿಸಲು ಸಹಾಯಕವಾಗುತ್ತದೆ ಎಂದು ಕೋರಲಾಗಿತ್ತು.

ಅರ್ಜಿದಾರರ ಪರವಾಗಿ ಹೈಕೋರ್ಟ್‌ಗೆ ಖುದ್ದಾಗಿ ಹಾಜರಾದ ವಕೀಲ ರೋಹಿತ್ ದಾಂಡ್ರಿಯಾಲ್,  ಅವರು “ಇದೇ ರೀತಿಯ ಅರ್ಜಿಯ ತುರ್ತು ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಸಮಿತಿ ರಚನೆಗೆ ಕೋರಿ ಕೇಂದ್ರ ಸರ್ಕಾರಕ್ಕೂ ಪತ್ರ ಬರೆಯಲಾಗಿದ್ದು ಆ ಬಗ್ಗೆ ಅದು ಇನ್ನೂ ತನ್ನ ನಿರ್ಧಾರ ತಿಳಿಸಿಲ್ಲ" ಎಂದು ಹೇಳಿದರು.

ಪ್ರಕರಣ ಈಗಾಗಲೇ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇರುವ ಕಾರಣ, ಸೋಮವಾರ ಸರ್ವೋಚ್ಚ ನ್ಯಾಯಾಲಯ ಅದನ್ನು ಪರಿಗಣಿಸಿದ ನಂತರ ಆಲಿಸುವುದಾಗಿ ಹೈಕೋರ್ಟ್‌ ಹೇಳಿತು. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಫೆ 2ರಂದು ಕೈಗೆತ್ತಿಕೊಳ್ಳುವುದಾಗಿ ಅದು ತಿಳಿಸಿತು.