Supreme Court image 
ಸುದ್ದಿಗಳು

ಅತ್ಯಾಚಾರ ಸಂತ್ರಸ್ತರನ್ನು ಎರಡು ಬೆರಳು ಪರೀಕ್ಷೆಗೆ ಒಳಪಡಿಸುವವರು ತಪ್ಪಿತಸ್ಥರು: ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು

ಲೈಂಗಿಕವಾಗಿ ಸಕ್ರಿಯವಾಗಿರುವ ಮಹಿಳೆಯ ಮೇಲೆ ಅತ್ಯಾಚಾರ ನಡೆಯದು ಎಂಬ ತಪ್ಪು ಪುರುಷ ಪ್ರಧಾನ ಕಲ್ಪನೆ ಈ ಪರೀಕ್ಷೆಗೆ ಆಧಾರ ಎಂದಿದೆ ನ್ಯಾಯಾಲಯ.

Bar & Bench

ಅತ್ಯಾಚಾರ ಅಥವಾ ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಸಂತ್ರಸ್ತ ಮಹಿಳೆಗೆ ಎರಡು ಬೆರಳಿನ ಪರೀಕ್ಷೆ ನಡೆಸುವ ಯಾವುದೇ ವ್ಯಕ್ತಿ ದುರ್ನಡತೆಯ ತಪ್ಪಿತಸ್ಥನಾಗುತ್ತಾನೆ ಎಂದು ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು ನೀಡಿದೆ.  

ಇಂತಹ ಪರೀಕ್ಷೆಗಳನ್ನು ಇಂದಿಗೂ ನಡೆಸಲಾಗುತ್ತಿದ್ದು ಇದಕ್ಕೆ ಯಾವುದೇ ವೈಜ್ಞಾನಿಕ ಆಧಾರವಿಲ್ಲ ಮತ್ತು ಲೈಂಗಿಕ ದೌರ್ಜನ್ಯಕ್ಕೊಳಗಾದವರನ್ನು ಇದು ಮತ್ತೆ ವಿಚಲಿತರನ್ನಾಗಿ ಮಾಡುತ್ತದೆ ಎಂದು ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್ ಮತ್ತು ಹಿಮಾ ಕೊಹ್ಲಿ ಅವರಿದ್ದ ಪೀಠ ತಿಳಿಸಿದೆ.

"ಸಂತ್ರಸ್ತ ಮಹಿಳೆಯ ಲೈಂಗಿಕ ಚಾರಿತ್ರ್ಯದ ಪುರಾವೆಗಳು ಪ್ರಕರಣಕ್ಕೆ ಆಧಾರವಾಗುವುದಿಲ್ಲ. ಇದು ಇಂದಿಗೂ ನಡೆಯುತ್ತಿರುವುದು ವಿಷಾದನೀಯ… ಪರೀಕ್ಷೆಗೆ ಯಾವುದೇ ವೈಜ್ಞಾನಿಕ ಆಧಾರವಿಲ್ಲ… ಬದಲಿಗೆ ಅದು ಮಹಿಳೆಯರನ್ನು ಮತ್ತೆ ಬಲಿಪಶುಗಳನ್ನಾಗಿಸಿ ಪುನರ್‌ ವಿಚಲಿತರನ್ನಾಗಿ ಮಾಡುತ್ತದೆ" ಎಂದು ನ್ಯಾಯಾಲಯ ಹೇಳಿದೆ.

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಆರೋಪಿಯ ವಿರುದ್ಧದ ಶಿಕ್ಷೆ ಮರುನಿಗದಿಗೊಳಿಸುವ ವೇಳೆ ಪೀಠ ಈ ಆದೇಶ ನೀಡಿದೆ.

ನ್ಯಾಯಾಲಯದ ಪ್ರಮುಖ ಅವಲೋಕನಗಳು

  • ಲೈಂಗಿಕವಾಗಿ ಸಕ್ರಿಯವಾಗಿರುವ ಮಹಿಳೆಯ ಮೇಲೆ ಅತ್ಯಾಚಾರ ನಡೆಯದು ಎಂಬ ತಪ್ಪು ಪುರುಷ ಪ್ರಧಾನ ಕಲ್ಪನೆಯನ್ನು ಪರೀಕ್ಷೆ ಆಧರಿಸಿದೆ.

  • ತನ್ನ ಮೇಲೆ ಅತ್ಯಾಚಾರ ನಡೆದಿದೆ ಎಂದು ಮಹಿಳೆ ಹೇಳಿದಾಗ ಲೈಂಗಿಕವಾಗಿ ಸಕ್ರಿಯವಾಗಿರುವ ಆಕೆಯ ಮಾತನ್ನು ನಂಬಲು ಸಾಧ್ಯವಿಲ್ಲ ಎನ್ನುವುದು ಪುರುಷ ಪ್ರಧಾನ ಮತ್ತು ಸೆಕ್ಸಿಸ್ಟ್‌ ಧೋರಣೆಯಾಗುತ್ತದೆ.

  • ಅಂತಹ ಪರೀಕ್ಷೆ ನಡೆಸುವ ಯಾವುದೇ ವ್ಯಕ್ತಿ ತನ್ನ ದುರ್ನಡತೆಗಾಗಿ ತಪ್ಪಿತಸ್ಥನಾಗುತ್ತಾನೆ.

  • ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ಸಂತ್ರಸ್ತರನ್ನು ಎರಡು ಬೆರಳಿನ ಪರೀಕ್ಷೆಗೆ ಒಳಪಡಿಸದಂತೆ ಕೇಂದ್ರ ಆರೋಗ್ಯ ವ್ಯವಹಾರಗಳ ಸಚಿವಾಲಯ ನೋಡಿಕೊಳ್ಳಬೇಕು.

  • ಈ ಸಂಬಂಧ ಕಾರ್ಯಾಗಾರಗಳನ್ನು ಸಚಿವಾಲಯ ನಡೆಸಬೇಕು ಮತ್ತು ಎಲ್ಲಾ ರಾಜ್ಯಗಳ ಪೊಲೀಸ್‌ ಮಹಾ ನಿರ್ದೇಶಕರುಗಳಿಗೆ ತನ್ನ ಆದೇಶವನ್ನು ರವಾನಿಸಬೇಕು.