ಸ್ವಯಂಘೋಷಿತ ದೇವಮಾನವ ಸ್ವಾಮಿ ನಿತ್ಯಾನಂದನ ಅಕ್ರಮ ವಶದಲ್ಲಿದ್ದಾರೆ ಎನ್ನಲಾದ ಇಬ್ಬರು ಬಾಲಕಿಯರು ಇತ್ತೀಚೆಗೆ ವರ್ಚುವಲ್ ವಿಧಾನದ ಮೂಲಕ ಗುಜರಾತ್ ಹೈಕೋರ್ಟ್‌ಗೆ ಹಾಜರಾಗಿ ವೀಡಿಯೊ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಲು ತಮ್ಮ ಆಕ್ಷೇಪಣೆ ಇಲ್ಲ ಎಂದು ಹೇಳಿಕೆ ನೀಡಿದ್ದಾರೆ [ಜನಾರ್ದನ ರಾಮಕೃಷ್ಣ ಶರ್ಮ ವರ್ಸಸ್ ಗುಜರಾತ್ ಸರ್ಕಾರ].
ಇವರಿಬ್ಬರ ಪರ ವಾದ ಮಂಡಿಸಿದ ಹಿರಿಯ ವಕೀಲ ಬಿ ಬಿ ನಾಯ್ಕ್ ಈ ವಿಚಾರವನ್ನು ನ್ಯಾಯಾಲಯಕ್ಕೆ ವಿವರಿಸಿದರು. ನ್ಯಾಯಮೂರ್ತಿಗಳಾದ ಎನ್ ವಿ ಅಂಜಾರಿಯಾ ಮತ್ತು ನೀರಲ್ ಮೆಹ್ತಾ ಅವರಿದ್ದ ವಿಭಾಗೀಯ ಪೀಠ ಆದೇಶದಲ್ಲಿ ವಕೀಲ ನಾಯಕ್ ಅವರ ಹೇಳಿಕೆ ದಾಖಲಿಸಿ ಕೊಂಡಿತಾದರೂ ಇಬ್ಬರು ಹುಡುಗಿಯರು ಹಾಜರಾಗುವಂತೆ ನಿರ್ದೇಶಿಸುವ ಯಾವುದೇ ಆದೇಶ ನೀಡಲಿಲ್ಲ.
ತಮ್ಮ ಕಕ್ಷಿದಾರರು ವೀಡಿಯೊ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಲು ಯಾವುದೇ ಆಕ್ಷೇಪ ಇಲ್ಲವಾದರೂ ಪ್ರಸ್ತುತ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಪುರಸ್ಕರಿಸಲು ಇರುವ ನ್ಯಾಯವ್ಯಾಪ್ತಿಗೆ ಸಂಬಂಧಿಸಿದಂತೆ ತಾವು ಎತ್ತಿರುವ ಆಕ್ಷೇಪಣೆಯನ್ನು ಮೊದಲು ಪರಿಗಣಿಸಿ ನಿರ್ಧರಿಸುವಂತೆ ವಕೀಲ ನಾಯಕ್ ಕೋರಿದ್ದಾರೆ ಎಂಬುದಾಗಿ ಪೀಠ ಫೆಬ್ರವರಿ 6 ರಂದು ನೀಡಿದ ಆದೇಶದಲ್ಲಿ ಉಲ್ಲೇಖಿಸಿದೆ.
ತನ್ನ ಇಬ್ಬರು ಹೆಣ್ಣುಮಕ್ಕಳು ದೇಶಕ್ಕೆ ಮರಳಿ ತರುವಲ್ಲಿ ಅಥವಾ ಅಕ್ರಮವಾಗಿ ಜಮೈಕಾದ ಕಿಂಗ್‌ಸ್ಟನ್‌ನಲ್ಲಿ ಇರಸಿದ್ದಾರೆ ಎನ್ನಲಾದ ಅವರೊಂದಿಗೆ ಸಂಪರ್ಕ ಕಲ್ಪಿಸುವಲ್ಲಿ ಪೊಲೀಸರು ಯಾವುದೇ ಪ್ರಯತ್ನವನ್ನು ಮಾಡಿಲ್ಲ ಎಂದು ಆರೋಪಿಸಿ ಬಾಲಕಿಯರ ತಂದೆಯೊಬ್ಬರು ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದ ಪ್ರಕರಣ ಇದಾಗಿದೆ. ಅರ್ಜಿ ಮುಖೇನ ಬಾಲಕಿರಯನ್ನು ಭಾರತಕ್ಕೆ ಕರೆತರಲು ನಿರ್ದೇಶನ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಲಾಗಿತ್ತು. ನವೆಂಬರ್ 2019ರಲ್ಲಿ ತನ್ನ ಇಬ್ಬರು ಹೆಣ್ಣುಮಕ್ಕಳು ನಿಗೂಢ ರೀತಿಯಲ್ಲಿ ನಾಪತ್ತೆಯಾದರು. ಹೆಣ್ಣುಮಕ್ಕಳನ್ನು ಬಲವಂತವಾಗಿ ಕರೆದೊಯ್ದು ಅಕ್ರಮ ಎಸಗಿರುವ ಪ್ರಕರಣದಲ್ಲಿ ಸ್ವಾಮಿ ನಿತ್ಯಾನಂದ ಅವರ ಪಾತ್ರವಿದೆ ಎಂದು ಅರ್ಜಿಯಲ್ಲಿ ದೂರಲಾಗಿತ್ತು.
ಪ್ರಕರಣದ ಕುರಿತು ತೀರ್ಮಾನ ಕೈಗೊಳ್ಳಲು, ಇಬ್ಬರು ಹುಡುಗಿಯರು ತಂಗಿರುವ ನಿಖರವಾದ ಸ್ಥಳ ಮತ್ತು ಅವರು ಯಾರ ಸಂಗಡ ಮತ್ತು ವಶದಲ್ಲಿದ್ದಾರೆ ಎಂದು ತಿಳಿದುಕೊಳ್ಳುವುದು ಅವಶ್ಯಕ ಎಂಬುದಾಗಿ ನ್ಯಾಯಾಲಯ ಫೆಬ್ರವರಿ 6ರ ತನ್ನ ಆದೇಶದಲ್ಲಿ ಹೇಳಿದೆ.
ಘಟನೆಯ ನಂತರದ ಹೆಚ್ಚಿನ ವಿವರ ಲಭ್ಯವಿಲ್ಲ. ಮುಂದಿನ ವಿಚಾರಣಾ ದಿನದ ಮೊದಲು ಹೆಚ್ಚಿನ ವಿವರ ಕಲೆಹಾಕಲು ಯತ್ನಿಸುತ್ತೇವೆ ಎಂದು ವಕೀಲರು ತಿಳಿಸಿದಾಗ ನ್ಯಾಯಾಲಯ ವಿಚಾರಣೆಯನ್ನು ಫೆಬ್ರವರಿ 27ಕ್ಕೆ ಮುಂದೂಡಿತು.
ಹೈಕೋರ್ಟ್‌ನ ವಿವಿಧ ಪೀಠಗಳು ಈ ಹಿಂದೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಆದೇಶಗಳನ್ನು ನೀಡಿದ್ದರೂ ಯಾವುದೇ ಫಲ ದೊರೆಯಲಿಲ್ಲ ಎಂಬುದನ್ನು ಈ ಹಿಂದಿನ ವಿಚಾರಣೆ ವೇಳೆ ನ್ಯಾಯಾಲಯದ ಗಮನಕ್ಕೆ ತರಲಾಗಿತ್ತು. ಹೀಗಾಗಿ ಅಧಿಕಾರಿಗಳು ಭವಿಷ್ಯದಲ್ಲಿ ಸಲ್ಲಿಸುವ ಅಫಿಡವಿಟ್‌ನಲ್ಲಿ ಬಾಲಕಿಯರನ್ನು ಪತ್ತೆಹಚ್ಚಲು ತಾವು ಕೈಗೊಂಡ ಕ್ರಮದ ಬಗ್ಗೆ ತಿಳಿಸುವುದು ಅಧಿಕಾರಿಗಳ ಕರ್ತವ್ಯವಾಗಿದೆ ಎಂದು ಪೀಠವು ಕಟುವಾಗಿ ನುಡಿದಿತ್ತು.