Karnataka High Court, intermediate semester exams 
ಸುದ್ದಿಗಳು

ಇಂಟರ್‌ಮೀಡಿಯಟ್‌ ಸೆಮಿಸ್ಟರ್‌ ಪರೀಕ್ಷೆ ನಡೆಸುವ ಬಿಸಿಐ,ಕೆಎಸ್‌ಎಲ್‌ಯು ನಿರ್ಧಾರ ಪ್ರಶ್ನಿಸಿದ ಕಾನೂನು ವಿದ್ಯಾರ್ಥಿಗಳು

ವಿಶ್ವವಿದ್ಯಾಲಯ ಅನುದಾನ ಆಯೋಗ ಮತ್ತು ಕರ್ನಾಟಕ ಸರ್ಕಾರ ಈ ಸಂಬಂಧ ರೂಪಿಸಿರುವ ಮಾರ್ಗಸೂಚಿಗಳ ವಿರುದ್ಧವಾಗಿ ಸುತ್ತೋಲೆ ಹೊರಡಿಸಲಾಗಿದೆ ಎಂದು ಅರ್ಜಿದಾರರು ತಗಾದೆ ಎತ್ತಿದ್ದಾರೆ.

Bar & Bench

ಪ್ರಸಕ್ತ ವರ್ಷದಲ್ಲಿ ಇಂಟರ್‌ಮೀಡಿಯಟ್‌ ಸೆಮಿಸ್ಟರ್‌ ಪರೀಕ್ಷೆಗಳನ್ನು ನಡೆಸುವ ಸಂಬಂಧ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ (ಕೆಎಸ್‌ಎಲ್‌ಯು) ಮತ್ತು ಭಾರತೀಯ ವಕೀಲರ ಪರಿಷತ್ತು (ಬಿಸಿಐ) ಹೊರಡಿಸಿರುವ ಆದೇಶದ ಸುತ್ತೋಲೆಯನ್ನು ಪ್ರಶ್ನಿಸಿ ಇಬ್ಬರು ಕಾನೂನು ವಿದ್ಯಾರ್ಥಿಗಳು ಹೈಕೋರ್ಟ್‌ನಲ್ಲಿ ಮನವಿ ಸಲ್ಲಿಸಿದ್ದಾರೆ (ರಿಥ್ವಿಕ್ ಬಾಲನಾಗರಾಜ್‌ ವರ್ಸಸ್‌ ಬಿಸಿಐ).

ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಮತ್ತು ಕರ್ನಾಟಕ ಸರ್ಕಾರ ಈ ಸಂಬಂಧ ರೂಪಿಸಿರುವ ಮಾರ್ಗಸೂಚಿಗಳ ವಿರುದ್ಧವಾಗಿ ಸುತ್ತೋಲೆ ಹೊರಡಿಸಲಾಗಿದೆ ಎಂದು ಅರ್ಜಿದಾರರು ನ್ಯಾಯಾಲಯಕ್ಕೆ ವಿವರಿಸಿದ್ದಾರೆ.

ಪರೀಕ್ಷೆ ಮತ್ತು ಶೈಕ್ಷಣಿಕ ಕ್ಯಾಲೆಂಡರ್‌ಗೆ ಸಂಬಂಧಿಸಿದಂತೆ ವಿಶ್ವವಿದ್ಯಾಲಯಗಳಿಗೆ ಪ್ರಸಕ್ತ ವರ್ಷದ ಏಪ್ರಿಲ್‌ 27ರಂದು ಯುಜಿಸಿ ಮಾರ್ಗಸೂಚಿ ಹೊರಡಿಸಿದ್ದು, ಕಳೆದ ಸೆಮಿಸ್ಟರ್‌ನಲ್ಲಿನ ಸಾಧನೆ ಮತ್ತು ಆಂತರಿಕ ಮೌಲ್ಯಮಾಪನವನ್ನು ತಲಾ ಶೇ.50ರಷ್ಟು ವೇಯ್ಟೇಜ್‌ ಆಧರಿಸಿ ವಿದ್ಯಾರ್ಥಿಗಳಿಗೆ ಗ್ರೇಡಿಂಗ್ ನೀಡಬೇಕು ಎಂದು ಹೇಳಲಾಗಿದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.

ಇದರ ಬೆನ್ನಿಗೇ ಬಿಸಿಐ ಜೂನ್‌ 9ರಂದು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ್ದು, ಇದರಲ್ಲಿ ಕಾಲೇಜು/ವಿಶ್ವವಿದ್ಯಾಲಯ ಪುನಾರಂಭವಾದ ಬಳಿಕ ಕಾನೂನು ವಿಶ್ವವಿದ್ಯಾಲಯಗಳು‌ ವಿದ್ಯಾರ್ಥಿಗಳಿಗೆ ಇಂಟರ್‌ಮೀಡಿಯಟ್‌ ಸೆಮಿಸ್ಟರ್ ನಡೆಸಬೇಕು ಎಂದು ಶಿಫಾರಸ್ಸು ಮಾಡಿತ್ತು. ವಿದ್ಯಾರ್ಥಿಗಳು ಮುಂದಿನ ಸೆಮಿಸ್ಟರ್‌ಗೆ ಪ್ರವೇಶ ಮಾಡಿರುವಾಗ ವಿಶ್ವವಿದ್ಯಾಲಯಗಳು ಪುನಾರಂಭವಾದಾಗ ಪರೀಕ್ಷೆ ನಡೆಸುವಂತೆ ಸೂಚಿಸುವುದು ಯುಜಿಸಿ ಮಾರ್ಗಸೂಚಿಗಳ ವ್ಯಾಪ್ತಿ ಮೀರಿದ್ದಾಗಿದೆ ಎಂದು ಅರ್ಜಿದಾರರು ತಗಾದೆ ಎತ್ತಿದ್ದಾರೆ. ಮುಂದುವರೆದು ಅವರು ಹೀಗೆ ಹೇಳಿದ್ದಾರೆ:

“ಇಂಟರ್‌ಮೀಡಿಯಟ್‌ ವಿದ್ಯಾರ್ಥಿಗಳಿಗೆ ಭೌತಿಕ ಪರೀಕ್ಷೆ ನಡೆಸಲು ಕಾನೂನು ವಿಶ್ವವಿದ್ಯಾಲಯಗಳಿಗೆ ಅನುಮತಿ ನೀಡುವ ಮಟ್ಟಿಗೆ ಬಿಸಿಐ ಮಾರ್ಗಸೂಚಿ ಹೊರಡಿಸಿದೆ. ಈ ಮೂಲಕ ಯುಜಿಸಿಯ ಮಾರ್ಗಸೂಚಿಗಳಿಂದ ವಿಮುಖವಾಗುವುದರ ಜೊತೆಗೆ ಕಾನೂನು ವಿದ್ಯಾರ್ಥಿಗಳು ಮತ್ತು ಕಾನೂನೇತರ ವಿದ್ಯಾರ್ಥಿಗಳ ನಡುವೆ ಅಂತರ ಉಂಟು ಮಾಡುತ್ತಿದೆ. ಕಾನೂನೇತರ ವಿದ್ಯಾರ್ಥಿಗಳನ್ನು ಸೆಮಿಸ್ಟರ್‌ನಲ್ಲಿನ ಆಂತರಿಕ ಅಂಕಗಳ 50-50 ಸರಾಸರಿ ಹಾಗೂ ಹಿಂದಿನ ಸೆಮಿಸ್ಟರ್‌ನಲ್ಲಿ ಅಂಕ ಗಳಿಸಿದ ಆಧಾರದಲ್ಲಿ ಮುಂದಿನ ಸೆಮಿಸ್ಟರ್‌ಗೆ ಕಳುಹಿಸಿಕೊಡಲಾಗಿದೆ.”
ಹೈಕೋರ್ಟ್‌ನಲ್ಲಿ ಸಲ್ಲಿಕೆಯಾಗಿರುವ ಮನವಿಯಲ್ಲಿ ಉಲ್ಲೇಖ

ಬಿಸಿಐ ಮತ್ತು ರಾಜ್ಯ ಸರ್ಕಾರಕ್ಕೆ ಅಹವಾಲು ಸಲ್ಲಿಸಲಾಗಿದ್ದು, ಅವರಿಂದ ಯಾವುದೇ ತೆರನಾದ ಪ್ರತಿಕ್ರಿಯಿ ಸಿಕ್ಕಿಲ್ಲ. ಈ ಕಾರಣದಿಂದಾಗಿ ಹೈಕೋರ್ಟ್‌ ಮೆಟ್ಟಿಲೇರಬೇಕಾಯಿತು ಎಂದು ಅರ್ಜಿದಾರರು ವಿವರಿಸಿದ್ದು, ಮೇಲಿನ ಎಲ್ಲಾ ಕಾರಣಗಳ ಹಿನ್ನೆಲೆಯಲ್ಲಿ ನವೆಂಬರ್‌ 9ರ ಕೆಎಸ್‌ಎಲ್‌ಯು ಸುತ್ತೋಲೆ ಹಾಗೂ ನವೆಂಬರ್‌ 1ರ ಬಿಸಿಐ ಮಾಧ್ಯಮ ಹೇಳಿಕೆಯನ್ನು ವಜಾಗೊಳಿಸುವಂತೆ ಕೋರಲಾಗಿದೆ.

ಇದರ ಜೊತೆಗೆ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಯುಜಿಸಿ ಮಾರ್ಗಸೂಚಿಗಳಿಗೆ ಸಮಾನಾಂತರವಾಗಿರುವ ಜುಲೈ 10ರ ಸರ್ಕಾರದ ಆದೇಶವನ್ನು ಜಾರಿಗೊಳಿಸುವಂತೆ ಮನವಿ ಮಾಡಲಾಗಿದೆ. ಅಕ್ಟೋಬರ್‌ನಲ್ಲಿ ಇಂಟರ್‌ಮೀಡಿಯಟ್‌ ಪರೀಕ್ಷೆ ನಡೆಸಲು ನಿಗದಿಗೊಳಿಸಿದ್ದ ಕೆಎಸ್‌ಎಲ್‌ಯು ಆದೇಶವನ್ನು ಪ್ರಶ್ನಿಸಿದ್ದ ಅರ್ಜಿಯನ್ನು ಆಗಸ್ಟ್‌ನಲ್ಲಿ ಹೈಕೋರ್ಟ್‌ ವಜಾಗೊಳಿಸಿತ್ತು. ಇದೆಲ್ಲದರ ನಡುವೆ ಪ್ರತ್ಯೇಕ ಮನವಿ ಸಲ್ಲಿಸುವ ಸ್ವಾತಂತ್ರ್ಯವನ್ನು ಅರ್ಜಿದಾರರಿಗೆ ಹೈಕೋರ್ಟ್‌ ಸ್ವಾತಂತ್ರ್ಯ ಕಲ್ಪಿಸಿತ್ತು.

ಇದರ ಬೆನ್ನಿಗೇ, ಕೋವಿಡ್‌ ಹಿನ್ನೆಲೆಯಲ್ಲಿ ಕೆಎಸ್‌ಎಲ್‌ಯು ಇಂಟರ್‌ಮೀಡಿಯಟ್‌ ಪರೀಕ್ಷೆಗಳನ್ನು ಮುಂದೂಡುವ ವಿಚಾರವನ್ನು ಕರ್ನಾಟಕದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ ಸಿ ಮಾಧುಸ್ವಾಮಿ ಖಾತರಿಪಡಿಸಿದ್ದರು.