ಕಳೆದ ವರ್ಷದ ಫೆಬ್ರವರಿಯಲ್ಲಿ ದೆಹಲಿಯಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ಆರೋಪಿಗಳ ಪಾತ್ರ ನಿರೂಪಿಸಲು ಅಗತ್ಯವಾದ ಸಿಸಿಟಿವಿ ವಿಡಿಯೊ ತುಣುಕು ಮತ್ತು ವಿದ್ಯುನ್ಮಾನ ಸಾಕ್ಷ್ಯ ಒಳಗೊಂಡು ಯಾವುದೇ ಮಹತ್ವದ ಸಾಕ್ಷ್ಯ ಲಭ್ಯವಾಗಿಲ್ಲ. ಆರೋಪಿಗಳಿಂದ ಘಟನೆ ಕಾರಣವಾದ ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿಲ್ಲ ಎಂದಿರುವ ದೆಹಲಿ ಹೈಕೋರ್ಟ್ ಇಬ್ಬರು ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿದೆ (ಸನ್ನಿ ಅಲಿಯಾಸ್ ಲಲ್ಲಾ ವರ್ಸಸ್ ದೆಹಲಿ ರಾಜ್ಯ).
“ಘಟನಾ ಸ್ಥಳದಲ್ಲಿದ್ದ ಅರ್ಜಿದಾರರ ಕರೆ ದಾಖಲೆ ಹೊರತುಪಡಿಸಿ ಸಿಸಿಟಿವಿ ವಿಡಿಯೊ ತುಣಕು ಅಥವಾ ಯಾವುದೇ ತೆರನಾದ ವಿದ್ಯುನ್ಮಾನ ಸಾಕ್ಷ್ಯದ ರೂಪದಲ್ಲಿ ದಾಖಲೆಗಳು ದೊರೆತಿಲ್ಲ. ಸ್ಥಳದಲ್ಲಿದ್ದ ಅರ್ಜಿದಾರರು ಅದೇ ಪ್ರದೇಶದ ನಿವಾಸಿಗಳಾಗಿದ್ದರಿಂದ ಅವರು ಅಲ್ಲಿಯೇ ಇರಬೇಕಾಗುತ್ತದೆ” ಎಂದು ನ್ಯಾಯಮೂರ್ತಿ ಸುರೇಶ್ ಕುಮಾರ್ ಕೈಟ್ ಅವರ ನೇತೃತ್ವದ ಏಕಸದಸ್ಯ ಪೀಠ ಹೇಳಿದೆ.
ದೆಹಲಿ ಗಲಭೆಗೆ ಸಂಬಂಧಿಸಿದಂತೆ ಆರೋಪಿಗಳಾದ ಬ್ರಿಜ್ ಮೋಹನ್ ಶರ್ಮಾ ಮತ್ತು ಸನ್ನಿ ಸಿಂಗ್ ಅವರ ವಿರುದ್ಧ ಭಾರತೀಯ ದಂಡ ಸಂಹಿತೆಯ ಅಡಿ ಕೊಲೆ ಹಾಗೂ ಇತರೆ ಆರೋಪಗಳನ್ನು ಮಾಡಿ ಎಫ್‌ಐಆರ್ ದಾಖಲಾಗಿತ್ತು. ವಿಚಾರಣಾಧೀನ ನ್ಯಾಯಾಲಯವು ಆರೋಪಿಗಳಿಗೆ ಜಾಮೀನು ನಿರಾಕರಿಸಿದ್ದರಿಂದ ಅವರು ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು.
ದೆಹಲಿಯ ಕರ್ತಾರ್ ನಗರದಲ್ಲಿ ಗಲಭೆಕೋರರು ಲಾಠಿ ಮತ್ತು ಮಾರಾಕಾಸ್ತ್ರಗಳಿಂದ ಮನೆಗಳ ಬಾಗಿಲುಗಳನ್ನು ಧ್ವಂಸಗೊಳಿಸಿದ್ದಾರೆ ಎಂದು ಆರೋಪಿಸಿ ಈಶಾನ್ಯ ದೆಹಲಿಯ ನ್ಯೂ ಉಸ್ಮಾನ್‌ಪುರ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. ಇದೇ ಸಂದರ್ಭದಲ್ಲಿ 25 ವರ್ಷದ ಇರ್ಫಾನ್ ಎಂಬ ಯುವಕ ಗಾಯಾಳುವಾಗಿ ಆಸ್ಪತ್ರೆಗೆ ದಾಖಲಾಗಿದ್ದಾನೆ ಎಂದು ಜಗ್ ಪ್ರವೇಶ್ ಚಂದ್ರ ಆಸ್ಪತ್ರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಮಧ್ಯೆ, ತೀವ್ರವಾಗಿ ಗಾಯಗೊಂಡಿದ್ದ ಇರ್ಫಾನ್ ಸಾವನ್ನಪ್ಪಿದ್ದರು.
ಈ ಹಿನ್ನೆಲೆಯಲ್ಲಿ ಬಿಜೆಪಿಯ ಬ್ರಹ್ಮಪುರಿ ಮಂಡಲ ಪ್ರಧಾನ ಕಾರ್ಯದರ್ಶಿ ಬ್ರಿಜ್ ಮೋಹನ್ ಶರ್ಮಾ ಮತ್ತು ಸನ್ನಿ ಸಿಂಗ್ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿತ್ತು.
“ದೈಹಿಕ ಹಲ್ಲೆ, ದೊಂಬಿಗೆ ಈಡಾದ ರೋಗಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರು ಹೇಳಿಕೆ ನೀಡಲಾಗದ ಸ್ಥಿತಿಯಲ್ಲಿದ್ದರು” ಎಂದು ವೈದ್ಯರ ಲಿಖಿತ ದಾಖಲೆಯಲ್ಲಿ ಹೇಳಲಾಗಿದೆ.
ಆರೋಪಿಗಳು ಗುರುತು ಪತ್ತೆ ಶಿಷ್ಟಾಚಾರಕ್ಕೆ ಒಪ್ಪಿರಲಿಲ್ಲ. ಇದಕ್ಕೆ ಅವಕಾಶ ಮಾಡಿದ್ದರೆ ಸಾಕ್ಷಿದಾರರು ಆರೋಪಿಗಳನ್ನು ಗುರುತಿಸುವ ಸಾಧ್ಯತೆ ಇತ್ತು ಎನ್ನಲಾಗಿದೆ.
ಅರ್ಜಿದಾರ ಸನ್ನಿ ಸಿಂಗ್ ಪರ ವಾದಿಸಿದ ವಕೀಲ ಸಂಜೀವ್ ದಗರ್ ಅವರು “ಸಿಸಿಟಿವಿ ವಿಡಿಯೊ ತುಣುಕು ಸೇರಿದಂತೆ ಅಗತ್ಯ ಪುರಾವೆಗಳನ್ನು ಆಧರಿಸದೇ ನಮ್ಮ ಕಕ್ಷಿದಾರರನ್ನು ಬಂಧಿಸಲಾಗಿದೆ. ಇಷ್ಟುಮಾತ್ರವಲ್ಲದೇ ಸನ್ನಿ ಸಿಂಗ್ ಹೆಸರು ಎಫ್‌ಐಆರ್‌ನಲ್ಲಿ ಇಲ್ಲ” ಎಂದು ವಾದಿಸಿದರು. “ಪ್ರಾಸಿಕ್ಯೂಷನ್ ವಾದವು ಏಕೈಕ ಪ್ರತ್ಯಕ್ಷ ಸಾಕ್ಷಿಯನ್ನು ಆಧರಿಸಿದೆ (ಕೊಲೆಯಾದ ವ್ಯಕ್ತಿಯ ತಾಯಿ). ತನ್ನ ಪುತ್ರನ ಕೊಲೆಯಾದ ರೀತಿಯ ಬಗ್ಗೆ ಆಕೆಯ ಹೇಳಿಕೆ ವಿರೋಧಭಾಸದಿಂದ ಕೂಡಿದೆ” ಎಂದರು.
ತನ್ನ ಕಕ್ಷಿದಾರರ ಕರೆ ದಾಖಲೆಯನ್ನು ಸಾಕ್ಷ್ಯವಾಗಿ ಸಲ್ಲಿಸಿರುವುದಕ್ಕೂ ಅರ್ಜಿದಾರರ ಪರ ವಕೀಲರು ತಗಾದೆ ಎತ್ತಿದ್ದು, ಘಟನೆ ನಡೆದ ಸ್ಥಳದ ಪ್ರದೇಶದಲ್ಲೇ ಆರೋಪಿಗಳು ನೆಲೆಸಿರುವುದರಿಂದ ಅದನ್ನು ಸಾಕ್ಷ್ಯ ಎಂದು ಪರಿಗಣಿಸಲಾಗದು ಎಂದರು. ಆರೋಪಿಗಳ ಪರ ವಕೀಲರ ವಾದವನ್ನು ಪುರಸ್ಕರಿಸಿದ ಪೀಠವು ಷರತ್ತಿಗೆ ಒಳಪಟ್ಟು ಜಾಮೀನು ಮಂಜೂರು ಮಾಡಿತು.