ಉದ್ಯಮಿ ದಿವಂಗತ ಸಂಜಯ್ ಕಪೂರ್ ಅವರ ₹30,000 ಕೋಟಿ ಮೌಲ್ಯದ ಆಸ್ತಿ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಅವರ ಪತ್ನಿ ಪ್ರಿಯಾ ಸಚ್‌ದೇವ್ ಕಪೂರ್ ಅವರ ಪರ ವಕೀಲರು ಬುಧವಾರ ವಾದ ಮಂಡಿಸಿ ಸಂಜಯ್ ಬರೆದಿರುವ ಉಯಿಲು ನಿಜವಾದುದ್ದು ಅದನ್ನು ಫೋರ್ಜರಿ ಮಾಡಲಾಗಿದೆ ಎಂಬ ಆರೋಪ ಸುಳ್ಳು ಎಂದಿದ್ದಾರೆ.
ಅಕ್ಷರದೋಷವಿದ್ದ ಮಾತ್ರಕ್ಕೆ ಸಂಜಯ್ ಕಪೂರ್ ಉಯಿಲು ಅಮಾನ್ಯವಾಗದು. ಸಂಜಯ್ ಕಪೂರ್ ಅವರ ಸಹಿಯ ದೃಢೀಕರಣವನ್ನು ಯಾರೂ ಪ್ರಶ್ನಿಸಿಲ್ಲ ಎಂದು ಪ್ರಿಯಾ ಕಪೂರ್ ಪರ ಹಿರಿಯ ನ್ಯಾಯವಾದಿ ರಾಜೀವ್ ವಾದ ಮಂಡಿಸಿದರು.
ಟೆಸ್ಟೇಟರ್ (ಉಯಿಲು ಬರೆದಾತ) ಬದಲಿಗೆ ಟೆಸ್ಟ್ಯಾಟ್ರಿಕ್ಸ್ (ಉಯಿಲು ಬರೆದಾಕೆ) ಎಂಬ ಪದ ಬಳಸಿದ ಮಾತ್ರಕ್ಕೆ ಉಯಿಲು ಅಮಾನ್ಯವಾಗದು. ಉಯಿಲು ನಿಜ ಎಂಬುದಕ್ಕೆ ನಾಲ್ಕು ಹೆಚ್ಚುವರಿ ಸಾಕ್ಷಿಗಳಿವೆ. ಸಂಜಯ್ ನಿಧನರಾದ ಏಳು ವಾರಗಳ ಬಳಿಕ ಉಯಿಲು ಬಹಿರಂಗಗೊಂಡಿದೆ ಎಂಬುದು ಕೂಡ ಅದನ್ನು ಅಮಾನ್ಯಗೊಳಿಸಲು ಆಧಾರವಾಗದು. ಉಯಿಲನ್ನು ಸಂಜಯ್ ಬರೆದು ಎಲ್ಲೋ ಇಟ್ಟಿದ್ದು ನಂತರ ಅದು ಬಹಿರಂಗಗೊಂಡರೆ ಅದಕ್ಕೆ ಅಮಾನ್ಯಗೊಳಿಸಲು ಸಾಧ್ಯವಿಲ್ಲ ಎಂದು ಅವರು ವಾದಿಸಿದರು.
ತಮ್ಮ ಮಲತಾಯಿ ಹಾಗೂ ಸಂಜಯ್ ಕಪೂರ್ ಅವರ ಮೂರನೇ ಪತ್ನಿ ಪ್ರಿಯಾ ಕಪೂರ್ ಅವರು, ಸಂಜಯ್ ಅವರ ಉಯಿಲು ಫೋರ್ಜರಿ ಮಾಡಿ ಆಸ್ತಿಗಳನ್ನುಸಂಪೂರ್ಣ ಸ್ವಾಧೀನಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಬಾಲಿವುಡ್ ನಟಿ ಕರಿಷ್ಮಾ ಕಪೂರ್ ಅವರ ಪುತ್ರ ಹಾಗೂ ಪುತ್ರಿ ಆರೋಪಿಸಿದ್ದ ಪ್ರಕರಣದ ವಿಚಾರಣೆ ನ್ಯಾ. ಜ್ಯೋತಿ ಸಿಂಗ್ ಅವರೆದುರು ನಡೆಯಿತು. ಸಂಜಯ್ ಅವರ ಆಸ್ತಿಗೆ ಸಂಬಂಧಿಸಿದಂತೆ ಮೂರನೇ ವ್ಯಕ್ತಿ ಹಕ್ಕು ಚಲಾಯಿಸದಂತೆ ತಡೆ ನೀಡುವಂತೆ ಕೋರಿ ಕರಿಷ್ಮಾ ಮಕ್ಕಳು ಸಲ್ಲಿಸಿದ್ದ ಅರ್ಜಿಗೆ ನಾಯರ್ ವಿರೋಧ ವ್ಯಕ್ತಪಡಿಸಿದರು.
ಕರಿಷ್ಮಾಕಪೂರ್ ಸಂಜಯ್ ಅವರನ್ನು 2003ರಲ್ಲಿ ವರಿಸಿದ್ದರು. 2016ರಲ್ಲಿ ಅವರು ವಿಚ್ಛೇದನ ಪಡೆಯುವ ಮೂಲಕ 13 ವರ್ಷಗಳ ದಾಂಪತ್ಯ ಅಂತ್ಯಗೊಂಡಿತ್ತು. ಕಳೆದ ಜೂನ್‌ನಲ್ಲಿ ಸಂಜಯ್ ಇಂಗ್ಲೆಂಡ್‌ನಲ್ಲಿ ಅಕಾಲಿಕ ಮರಣಕ್ಕೆ ತುತ್ತಾಗಿದ್ದು ಆ ಬಳಿಕ ಸಂಜಯ್ ಅವರ ಮನೆಯಿಂದ ಪ್ರಿಯಾ ಕಪೂರ್ ನಮ್ಮನ್ನು ಅಕ್ರಮವಾಗಿ ಹೊರಗಟ್ಟಿದ್ದಾರೆ. ಎಂದು ಕರಿಷ್ಮಾ ಅವರ ಅಪ್ರಾಪ್ತ ಮಕ್ಕಳು ತಮ್ಮ ತಾಯಿಯ ಮುಖೇನ ನ್ಯಾಯಾಲಯದ ಮೊರೆ ಹೋಗಿದ್ದರು.