Udhayanidhi Stalin  Facebook
ಸುದ್ದಿಗಳು

ಸನಾತನ ಧರ್ಮ ಹೇಳಿಕೆ ಹಿಂದೂ ಧರ್ಮದ ವಿರುದ್ಧವಲ್ಲ, ಜಾತಿ ವ್ಯವಸ್ಥೆ ವಿರುದ್ಧ: ನ್ಯಾಯಾಲಯಕ್ಕೆ ಉದಯನಿಧಿ ವಿವರಣೆ

ಹಿಂದೂ ಮುನ್ನಾನಿ ಸಮೂಹವು ಸ್ಟಾಲಿನ್‌ ಮತ್ತು ಇತರೆ ಡಿಎಂಕೆ ನಾಯಕರ ವಿರುದ್ಧ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದ ಆದೇಶವನ್ನು ಮದ್ರಾಸ್‌ ಹೈಕೋರ್ಟ್‌ ಕಾಯ್ದಿರಿಸಿದೆ.

Bar & Bench

ಸನಾತನ ಧರ್ಮ ಕುರಿತಾದ ತಮ್ಮ ಹೇಳಿಕೆಯು ಜಾತಿ ವ್ಯವಸ್ಥೆ ವಿರೋಧಿಯೇ ವಿನಾ ಹಿಂದೂ ಧರ್ಮ ಅಥವಾ ಹಿಂದೂಗಳ ಜೀವನ ಕ್ರಮದ ಕುರಿತಾದದ್ದಲ್ಲ ಎಂದು ತಮಿಳುನಾಡಿನ ಸಚಿವ ಹಾಗೂ ಡಿಎಂಕೆ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್‌ ಗುರುವಾರ ಮದ್ರಾಸ್‌ ಹೈಕೋರ್ಟ್‌ಗೆ ತಿಳಿಸಿದ್ದಾರೆ.

ಹಿಂದೂ ಮುನ್ನಾನಿ ಸಮೂಹವು ಸ್ಟಾಲಿನ್‌ ಮತ್ತು ಇತರೆ ಡಿಎಂಕೆ ನಾಯಕರ ವಿರುದ್ಧ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅನಿತಾ ಸುಮಂತ್‌ ಅವರ ನೇತೃತ್ವದ ಏಕಸದಸ್ಯ ಪೀಠವು ಆದೇಶ ಕಾಯ್ದಿರಿಸಿದೆ.

ಸ್ಟಾಲಿನ್‌ ಪ್ರತಿನಿಧಿಸಿದ್ದ ಹಿರಿಯ ವಕೀಲ ಪಿ ವಿಲ್ಸನ್‌ ಅವರು “ತಮಿಳುನಾಡಿನ ಜನರು ಡಿಎಂಕೆಗೆ ಅಧಿಕಾರ ನೀಡಿದ್ದಾರೆ. ಇವರಲ್ಲಿ ಬಹುತೇಕರು ಹಿಂದೂ ಸಂಪ್ರದಾಯ ಆಚರಿಸುತ್ತಿದ್ದಾರೆ. ಬಹುತೇಕ ರಾಜ್ಯ ಅಥವಾ ಡಿಎಂಕೆಯ ಬಹುತೇಕ ಕಾರ್ಯಕರ್ತರು ಹಿಂದೂಗಳಾಗಿದ್ದಾರೆ” ಎಂದು ವಾದಿಸಿದರು.

“ಡಿಎಂಕೆ ನಾಯಕರ ವಿರುದ್ಧ ಸಲ್ಲಿಸಿರುವ ಅರ್ಜಿಯು ರಾಜಕೀಯ ಪ್ರೇರಿತವಾಗಿದೆ. ಸಂಸದರು ಮತ್ತು ಶಾಸಕರನ್ನು ಅನರ್ಹಗೊಳಿಸುವ ನಿಯಮವು ಸಂವಿಧಾನದ 191(ಇ) ನೇ ವಿಧಿಯಡಿ ಸಂಸತ್‌ನ ವಿಶೇಷಾಧಿಕಾರವಾಗಿದೆ. ನ್ಯಾಯಾಲಯವು ಶಾಸಕಾಂಗ ಹಾಗೂ ನ್ಯಾಯಾಂಗದ ನಡುವಿನ ಅಧಿಕಾರ ಪ್ರತ್ಯೇಕತೆಯನ್ನು ಗೌರವಿಸಬೇಕು. ಸಾಂವಿಧಾನಿಕ ಖಾಲಿತನ ಕಂಡುಬಂದಾಗ ನ್ಯಾಯಾಲಯ ಮಧ್ಯಪ್ರವೇಶಿಸಬಹುದು. ಆದರೆ, ಸಂಸತ್‌ ಈಗಾಗಲೇ ಕೆಲವು ಅನರ್ಹತೆಯನ್ನು ಉಲ್ಲೇಖಿಸಿರುವಾಗ ನ್ಯಾಯಾಲಯ ಮುಂದಡಿ ಇಡಲಾಗದು” ಎಂದರು.

ಅರ್ಜಿದಾರರ ಪರವಾಗಿ ವಾದಿಸಿದ ಹಿರಿಯ ವಕೀಲ ಜಿ ರಾಜಗೋಪಾಲನ್‌ ಅವರು “ಡಿಎಂಕೆಯನ್ನು ಹಿಂದೂಗಳು ಅಧಿಕಾರಕ್ಕೆ ತಂದಿರುವುದಾದರೆ ಸನಾತನ ಧರ್ಮದ ಕುರಿತು ಡಿಎಂಕೆ ನಾಯಕರು ನೀಡುವ ಹೇಳಿಕೆಗಳು ವಿರೋಧಾಭಾಸದಿಂದ ಕೂಡಿವೆ. ಡಿಎಂಕೆ ನಾಯಕ ಎ ರಾಜಾ ಅವರು ಎಸ್‌ಸಿ/ಎಸ್‌ಟಿ ಕೋಟಾದಡಿ ಸಂಸದರಾಗಿದ್ದಾರೆ. ಇಂಥ ಮೀಸಲಾತಿಗಳು ಹಿಂದೂಗಳಿಗೆ ಮಾತ್ರ” ಎಂದರು.

ಎಲ್ಲಾ ವಕೀಲರು ಮೌಖಿಕ ವಾದ ಪೂರ್ಣಗೊಳಿಸಿದ್ದು, ಲಿಖಿತ ವಾದ ಸಲ್ಲಿಸಲು ನ್ಯಾಯಾಲಯವು ಎಲ್ಲರಿಗೂ ಒಂದು ವಾರ ಕಾಲಾವಕಾಶ ನೀಡಿದೆ.