ಸನಾತನ ಧರ್ಮ ಕುರಿತ ಹೇಳಿಕೆ: ಸಚಿವ ಸ್ಥಾನದಿಂದ ಉದಯನಿಧಿ ವಜಾಗೊಳಿಸುವಂತೆ ಕೋರಿ ಮದ್ರಾಸ್ ಹೈಕೋರ್ಟ್‌ಗೆ ಮೂರು ಅರ್ಜಿ

ತಮಿಳುನಾಡು ಸಚಿವರಾದ ಉದಯನಿಧಿ ಸ್ಟಾಲಿನ್, ಪಿ ಕೆ ಶೇಖರ್ ಬಾಬು ಹಾಗೂ ಸಂಸದ ಎ ರಾಜಾ ವಿರುದ್ಧ ಹಿಂದೂ ಮುನ್ನಾನಿ ಸಂಘಟನೆ ಪದಾಧಿಕಾರಿಗಳು ಮೂರು ರಿಟ್ ಅರ್ಜಿ ಸಲ್ಲಿಸಿದ್ದಾರೆ.
Udhayanidhi Stalin
Udhayanidhi Stalin Facebook

ಸನಾತನ ಧರ್ಮದ ಕುರಿತು ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್‌ ನೀಡಿದ್ದ ಹೇಳಿಕೆ ವಿರೋಧಿಸಿ ಬಲಪಂಥೀಯ ಸಂಘಟನೆ ಹಿಂದೂ ಮುನ್ನಾನಿ ಸಂಘಟನೆ ಪದಾಧಿಕಾರಿಗಳು ಮದ್ರಾಸ್ ಹೈಕೋರ್ಟ್‌ಗೆ ಮೂರು ರಿಟ್ ಅರ್ಜಿ ಸಲ್ಲಿಸಿದ್ದಾರೆ.

ಸನಾತನದ ವಿನಾಶಕ್ಕೆ ಕರೆ ನೀಡುವ ಸಮಾವೇಶದಲ್ಲಿ ಭಾಗವಹಿಸಿಯೂ ತಮಿಳುನಾಡು ಸಚಿವರಾದ ಉದಯನಿಧಿ ಸ್ಟಾಲಿನ್‌, ಪಿ ಕೆ ಶೇಖರ್‌ಬಾಬು ಹಾಗೂ ಸಂಸದ ಎ ರಾಜಾ ಅವರು ಯಾವ ಅಧಿಕಾರದಡಿ ಸಾರ್ವಜನಿಕ ಹುದ್ದೆಯಲ್ಲಿ ಮುನ್ನಡೆಯುತ್ತಿದ್ದಾರೆ ಎಂದು ವಿವರಿಸುವುದಕ್ಕಾಗಿ ಕೋ ವಾರೆಂಟೊ ಹೊರಡಿಸಲು ಅವರು ಕೋರಿದ್ದಾರೆ.

Also Read
"ಸನಾತನ ಧರ್ಮ ಎಂಬುದು ದೇಶ, ಪೋಷಕರೆಡೆಗಿನ ಕರ್ತವ್ಯಗಳ ಮೊತ್ತ; ಅದನ್ನೇಕೆ ನಾಶಪಡಿಸಬೇಕು?" ಮದ್ರಾಸ್ ಹೈಕೋರ್ಟ್ ಪ್ರಶ್ನೆ

ಭಾರತದ ಸಾರ್ವಭೌಮತೆ, ಏಕತೆ ಮತ್ತು ಸಮಗ್ರತೆಯನ್ನು ಎತ್ತಿಹಿಡಿಯುವುದು ಮತ್ತು ಎಲ್ಲರ ನಡುವೆ ಭ್ರಾತೃತ್ವ ಉಳಿಸಿ ಬೆಳೆಸುವುದು ಪ್ರತಿಯೊಬ್ಬ ವ್ಯಕ್ತಿಯ ಕರ್ತವ್ಯ ಎನ್ನುವ ಸಂವಿಧಾನದ 51 ಎ (ಸಿ) (ಇ) ನಿಯಮಾವಳಿಗಳನ್ನು ಸಚಿವರು ಮತ್ತು ಸಂಸದರು ಉಲ್ಲಂಘಿಸಿದ್ದಾರೆ ಎಂಬ ಆರೋಪವನ್ನು ಪುಷ್ಠೀಕರಿಸುವ ಎಲ್ಲಾ ದಾಖಲೆಗಳನ್ನು ನೀಡುವಂತೆ ನ್ಯಾ. ಅನಿತಾ ಸುಮಂತ್‌ ಶುಕ್ರವಾರ ಅರ್ಜಿದಾರರನ್ನು ಕೇಳಿದರು.

Also Read
ಸನಾತನ ಧರ್ಮ ಕುರಿತ ಹೇಳಿಕೆ: ಉದಯನಿಧಿ ಪ್ರತಿಕ್ರಿಯೆ ಕೇಳಿದ ಸುಪ್ರೀಂ; ಕಾಶ್ಮೀರ ನ್ಯಾಯಾಲಯದಿಂದಲೂ ತನಿಖೆಗೆ ಆದೇಶ

ಉದಯನಿಧಿ ಅವರ ಪರ ಶುಕ್ರವಾರ ಹಾಜರಾದ ಹಿರಿಯ ವಕೀಲ ಪಿ ವಿಲ್ಸನ್‌ ಅವರು “ಅರ್ಜಿದಾರರು ತಮ್ಮ ವಾದ ಪುಷ್ಟೋಕರಿಸುವಂತಹ ಯಾವ ಪುರಾವೆಗಳನ್ನೂ ನೀಡಿಲ್ಲ. ಸಂವಿಧಾನ ಇಲ್ಲವೇ ಕಾನೂನಿನಡಿ ಸಾರ್ವಜನಿಕ ಹುದ್ದೆಗೆ ನೇಮಕ ಅಥವಾ ಅನರ್ಹತೆಗೆ ಸಂಬಂಧಿಸಿದಂತೆ ಉಲ್ಲಂಘನೆಯಾಗಿದೆ ಎಂದು ಕಂಡುಬಂದರೆ ಮಾತ್ರ ಅರ್ಜಿದಾರರು ಕೊ ವಾರಂಟೊ ಮನವಿ ಸಲ್ಲಿಸಬಹುದು. ಈ ಪ್ರಕರಣದಲ್ಲಿ ಅಂತಹ ಯಾವುದೇ ಅನರ್ಹತೆ ಕಂಡುಬಂದಿಲ್ಲ. ರಾಜಕೀಯ ದೃಷ್ಟಿಕೋನ ಹೊಂದುವುದು ಅನರ್ಹತೆಯಾಗುವುದಿಲ್ಲ” ಎಂದರು. ಈ ಹಿನ್ನೆಲೆಯಲ್ಲಿ ಅಗತ್ಯ ದಾಖಲೆಗಳನ್ನು ಸಲ್ಲಿಸುವಂತೆ ಅರ್ಜಿದಾರರಿಗೆ ಸೂಚಿಸಿದ ನ್ಯಾಯಾಲಯ ಅಕ್ಟೋಬರ್ 11ಕ್ಕೆ ಪ್ರಕರಣ ಮುಂದೂಡಿತು.

ಸನಾತನ ಧರ್ಮದ ವಿರುದ್ಧ ನೀಡಲಾದ ಹೇಳಿಕೆ ಸಂಬಂಧ ಉದಯನಿಧಿ ವಿರುದ್ಧ ಎಫ್‌ಐಆರ್‌ ದಾಖಲಿಸುವಂತೆ ಕೋರಿರುವ ಅರ್ಜಿಯೊಂದು ಸುಪ್ರೀಂ ಕೋರ್ಟ್‌ನಲ್ಲಿ ಈಗಾಗಲೇ ಬಾಕಿ ಇದೆ. ವಕೀಲರೊಬ್ಬರು ನೀಡಿದ್ದ ದೂರಿನ ಹಿನ್ನೆಲೆಯಲ್ಲಿ ಜಮ್ಮು ಕಾಶ್ಮೀರ ನ್ಯಾಯಾಲಯ ಕೂಡ ಈಚೆಗೆ ತನಿಖೆಗೆ ಆದೇಶಿಸಿತ್ತು.

Kannada Bar & Bench
kannada.barandbench.com