ಉಡುಪಿ ನ್ಯಾಯಾಲಯ ಸಂಕೀರ್ಣದಲ್ಲಿ ಈ ತಿಂಗಳ ಆರಂಭದಲ್ಲಿ ವಕೀಲರೊಬ್ಬರ ಮೇಲೆ ನಡೆದಿದ್ದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆರೋಪಿಗೆ ನಿರೀಕ್ಷಣಾ ಜಾಮೀನು ನೀಡಿದೆ.
ಕೃತ್ಯವನ್ನು ದೃಢಪಡಿಸುವಂತಹ ಆಧಾರಗಳು ದೊರೆಯದೇ ಇರುವುದನ್ನು ಗಮನಿಸಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಜೆ ಎನ್ ಸುಬ್ರಮಣ್ಯ ಅವರು ಆರೋಪಿ ಶಾಹಿದ್ ಮಂಚಿ (28 ವರ್ಷ) ವಿವಿಧ ಷರತ್ತುಗಳನ್ನುಳ್ಳ ನಿರೀಕ್ಷಣಾ ಜಾಮೀನು ಪಡೆಯಲು ಅರ್ಹ ಎಂದು ಅಭಿಪ್ರಾಯಪಟ್ಟರು. ಒಂದು ವೇಳೆ ಆರೋಪಿಯನ್ನು ಬಂಧಿಸಿದ್ದರೆ ಬಿಡುಗಡೆ ಮಾಡುವಂತೆ ಪೊಲೀಸರಿಗೆ ಸೂಚಿಸಿದರು.
ಮಾರ್ಚ್ 5ರಂದು ಶನಿವಾರ ಮಂಚಿ ಗ್ರಾಮದವರಾದ ಶಾಹೀದ್ ಎಂಬ ಆರೋಪಿ ವಕೀಲ ಗುರುರಾಜ್ ಜಿ ಎಸ್ ಅವರ ಮೇಲೆ ಹಲ್ಲೆ ನಡೆಸಿದ್ದರು ಎಂದು ತಿಳಿದುಬಂದಿತ್ತು. ಮೋಟಾರು ವಾಹನ ಪ್ರಕರಣದಲ್ಲಿ ಕೋರ್ಟ್‌ನಲ್ಲಿ ಸಾಕ್ಷಿ ಹೇಳಲು ಬಂದಿದ್ದ ಶಾಹೀದ್ ಮತ್ತು ವಕೀಲ ಗುರುರಾಜ್ ಅವರ ನಡುವೆ ಘರ್ಷಣೆ ಉಂಟಾಗಿತ್ತು.
ಶಾಹಿದ್ ಅವರು ವಕೀಲ ಗುರುರಾಜ್ ಅವರಿಗೆ ಜಾತಿ ನಿಂದನೆ ಮಾಡಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಐಪಿಸಿ ಸೆಕ್ಷನ್ 341, 323, 504, 506 ಹಾಗೂ ಎಸ್‌ಸಿ ಎಸ್‌ಟಿ ಕಾಯಿದೆಯ ಸೆಕ್ಷನ್ 3(1)(r), 3(1)(s) ಅಡಿ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿತ್ತು.
ಘಟನೆ ಕುರಿತಂತೆ ಉಡುಪಿ ವಕೀಲರ ಸಂಘ ತೀವ್ರ ಆಕ್ರೋಶ ವ್ಯಕ್ತಪಡಿಸಿತ್ತು. ನ್ಯಾಯಾಲಯದ ಆವರಣದಲ್ಲಿ ಆರೋಪಿ ಮತ್ತು ವಕೀಲರ ನಡುವೆ ಮಾತಿನ ಚಕಮಕಿ ನಡೆದಿತ್ತು. ಬಳಿಕ ಶಾಹೀದ್ ಅವರನ್ನು ಪೊಲೀಸರು ಬಂಧಿಸಿದ್ದರು.
ಆರೋಪಿ ಪರವಾಗಿ ವಾದ ಮಂಡಿಸಿದ್ದ ಮಂಗಳೂರಿನ ವಕೀಲರಾದ ಕಿರಣ್ ರಾವ್ ಎಂ ಹಾಗೂ ಕೃಷ್ಣಪ್ರಸಾದ್ ಕೆ ವಿ ಅವರು “ಆರೋಪಿ ಮುಗ್ಧರಾಗಿದ್ದು ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯಿದೆ ಅಡಿ ತಮ್ಮ ಕಕ್ಷೀದಾರರ ವಿರುದ್ಧ ಸುಳ್ಳು ಆರೋಪ ಮಾಡಲಾಗಿದೆ. ಆರೋಪಿ ಮರಣದಂಡನೆ ಅಥವಾ ಜೀವಾವಧಿ ಶಿಕ್ಷೆಗೆ ಒಳಪಡುವಂತಹ ಕೃತ್ಯ ಎಸಗಿಲ್ಲ. ವಿಳಂಬವಾಗಿ ದೂರು ದಾಖಲಿಸಿರುವುದನ್ನು ನೀಡಿದರೆ ಉದ್ದೇಶಪೂರ್ವಕವಾಗಿ ಆರೋಪಿಯನ್ನು ಅಪರಾಧದಲ್ಲಿ ಸಿಲುಕಿಸಲೆಂದು ದೂರು ನೀಡಲಾಗಿದೆ ಎಂದು ವಾದಿಸಿದ್ದರು.
“ಆದೇಶ ಜಾರಿಯಾದ ದಿನದಿಂದ ಒಂದು ತಿಂಗಳೊಳಗೆ ತನಿಖಾಧಿಕಾರಿ ಎದುರು ಅರ್ಜಿದಾರ (ಶಾಹಿದ್) ಹಾಜರಾಗಬೇಕು. ನ್ಯಾಯಾಲಯ ಮತ್ತು ತನಿಖಾಧಿಕಾರಿ ಯಾವಾಗ ಕರೆದರೂ ಹಾಜರಾಗಬೇಕು. ಸಾಕ್ಷ್ಯಾಧಾರಗಳನ್ನು ಹಾಳುಮಾಡುವಂತಿಲ್ಲ” ಎಂದು ಸೂಚಿಸಿರುವ ನ್ಯಾಯಾಲಯ ಸಿಆರ್‌ಪಿಸಿ ಸೆಕ್ಷನ್ 438 ಅಡಿ ಅವರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತು.
ಆದೇಶದ ಪ್ರತಿಯನ್ನು ಇಲ್ಲಿ ಓದಿ: