ಜನ ಲಾಕ್‌ಡೌನ್‌ನಿಂದ ತತ್ತರಿಸಿದ್ದಾಗ ಎ ಸಿ ರೂಮಿನಲ್ಲಿ ಕುಳಿತ ಬ್ಯಾಂಕ್ ಅಧಿಕಾರಿಗಳಿಂದ ಬಡ್ಡಿ: ಉಡುಪಿ ನ್ಯಾಯಾಲಯ ಕಿಡಿ

ಶಾಮಿಯಾನ ವ್ಯವಹಾರಕ್ಕಾಗಿ ಸಾಲ ಮಾಡಿಕೊಂಡಿದ್ದ ಗ್ರಾಹಕರೊಬ್ಬರಿಗೆ ಬ್ಯಾಂಕ್ ವಿಧಿಸಿದ್ದ ಬಡ್ಡಿದರ ಮತ್ತು ಅಸಲನ್ನು ಕಡಿತಗೊಳಿಸಿದ ನ್ಯಾಯಾಲಯ.
Canara Bank Logo and Udupi district court complex

Canara Bank Logo and Udupi district court complex

ಕೊರೊನಾ ಲಾಕ್‌ಡೌನ್‌ನಿಂದ ಮಧ್ಯಮ ವರ್ಗ ಆಹಾರಕ್ಕಾಗಿ ಪರದಾಡುತ್ತಿದ್ದಾಗ ರಾಷ್ಟ್ರೀಕೃತ ಬ್ಯಾಂಕ್‌ ಅಧಿಕಾರಿಗಳು ಹವಾನಿಯಂತ್ರಿತ ರೂಮಿನಲ್ಲಿ ಕುಳಿತು ಬಡ್ಡಿ ವಿಧಿಸುತ್ತಿದ್ದರು ಎಂದು ತರಾಟೆಗೆ ತೆಗೆದುಕೊಂಡಿರುವ ಉಡುಪಿ ನ್ಯಾಯಾಲಯ ಗ್ರಾಹಕರೊಬ್ಬರಿಗೆ ಬ್ಯಾಂಕ್‌ ವಿಧಿಸಿದ್ದ ಬಡ್ಡಿದರದ ಜೊತೆಗೆ ಅಸಲನ್ನು ಸ್ವಲ್ಪಮಟ್ಟಿಗೆ ಕಡಿತಗೊಳಿಸಿ ಗುರುವಾರ ತೀರ್ಪು ನೀಡಿದೆ.

ಅರ್ಜಿದಾರ ಕೆನರಾ ಬ್ಯಾಂಕ್‌ ಪಡುಬಿದ್ರಿ ಶಾಖೆಗೆ ಗ್ರಾಹಕ ಕೆ ಎಸ್‌ ಅಬೂಬಕರ್‌ ಅವರು ರೂ 5,92,420/- ಮತ್ತು ವಾರ್ಷಿಕ 13.35% ಬಡ್ಡಿದರದ ಬದಲಾಗಿ ವಾರ್ಷಿಕ ಶೇ 10ರ ಬಡ್ಡಿದರದಲ್ಲಿ ರೂ 5,38,739/ ಅಸಲನ್ನು 01.09.2022 ರಿಂದ ಪ್ರಾರಂಭವಾಗುವ ರೀತಿಯಲ್ಲಿ ಹನ್ನೆರಡು ಸಮಾನ ಕಂತುಗಳಲ್ಲಿ ಪಾವತಿಸುವಂತೆ ಉಡುಪಿ ಜಿಲ್ಲಾ/ ವಾಣಿಜ್ಯ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶ ಜೆ ಎನ್‌ ಸುಬ್ರಮಣ್ಯ ಸೂಚಿಸಿದ್ದಾರೆ.


“ಕೊರೊನಾ ಲಾಕ್‌ಡೌನ್‌ ಅವಧಿಯಲ್ಲಿ ಮಧ್ಯಮ ವರ್ಗ ಮತ್ತು ಸಣ್ಣ ವ್ಯಾಪಾರಿಗಳು ಆಹಾರಕ್ಕಾಗಿ ಪರದಾಡುತ್ತಿದ್ದಾಗ ಹವಾನಿಯಂತ್ರಿತ ಕಚೇರಿಯಲ್ಲಿ ಕುಳಿತ ರಾಷ್ಟ್ರೀಕೃತ ಬ್ಯಾಂಕಿನ ಅಧಿಕಾರಿಗಳು ಕಂಪ್ಯೂಟರ್‌ ಬಳಸಿ ತಮ್ಮಿಂದ ಸಾಲ ಪಡೆದ ಮಧ್ಯಮ ವರ್ಗದ ಸಣ್ಣ ವ್ಯಾಪಾರಿಗಳಿಗೆ ಬಡ್ಡಿ ವಿಧಿಸುತ್ತಿದ್ದರು” ಎಂದು ನ್ಯಾಯಾಧೀಶರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

“ಮಾರ್ಚ್‌ 23 2020ರಿಂದ ಪ್ರತಿವಾದಿ (ಅಬೂಬಕರ್‌) ಸೇರಿದಂತೆ ಲಾಕ್‌ಡೌನ್‌ನಿಂದ ಸಾರ್ವಜನಿಕರು ಎದುರಿಸಿದ ಸಂಕಷ್ಟ ಪರಿಗಣಿಸಿ ಎರಡೂ ಕಡೆಯವರ ವಾದ ಆಲಿಸಿ ಕರ್ನಾಟಕ ಹೈಕೋರ್ಟ್‌ ನೀಡಿರುವ ತೀರ್ಪಿನ ಬೆಳಕಿನಲ್ಲಿ” ನ್ಯಾಯಾಲಯ ಸಾಲದ ಅಸಲು ಮತ್ತು ಬಡ್ಡಿ ದರದಲ್ಲಿ ಕಡಿತಗೊಳಿಸಿರುವುದಾಗಿ ಆದೇಶದಲ್ಲಿ ತಿಳಿಸಿದೆ.

ಕೊರೊನಾ ಲಾಕ್‌ಡೌನ್‌ನಿಂದಾಗಿ ಶಾಮಿಯಾನ ವ್ಯವಹಾರ ಮಾಡುವವರು ಸೇರಿದಂತೆ ಅನೇಕರು ಸಂಪೂರ್ಣ ನಷ್ಟ ಅನುಭವಿಸಿದರು ಎಂಬುದು ನಿರ್ವಿವಾದದ ಸಂಗತಿ.

ಉಡುಪಿ ಜಿಲ್ಲಾ ನ್ಯಾಯಾಲಯ

ಹಿನ್ನೆಲೆ

ಶಾಮಿಯಾನ ವ್ಯವಹಾರಕ್ಕೆಂದು ಪಡುಬಿದ್ರಿ ನಿವಾಸಿ ಅಬೂಬಕರ್‌ ಅವರು 11.30% ಬಡ್ಡಿದರದೊಂದಿಗೆ ಅಸಲನ್ನು ಪಾವತಿಸುವುದಾಗಿ ಒಪ್ಪಿ ಕೆನರಾ ಬ್ಯಾಂಕ್‌ನಿಂದ 4,50,000/- ಸಾಲ ಪಡೆದಿದ್ದರು. ಅವಧಿಯೊಳಗೆ ಸಾಲ ಮರುಪಾವತಿಸಲು ತಪ್ಪಿದಲ್ಲಿ ಹೆಚ್ಚುವರಿಯಾಗಿ ಶೇ 2ರಷ್ಟು ಬಡ್ಡಿದರ ಪಾವತಿಸಲು ಕೂಡ ಅವರು ಸಮ್ಮತಿ ಸೂಚಿಸಿದ್ದರು.

Also Read
ಬ್ಯಾಂಕ್‌ ಬಡ್ಡಿದರ ಇಳಿಸಿದ ವಿಚಾರವನ್ನು ಗ್ರಾಹಕರ ಖುದ್ದು ಗಮನಕ್ಕೆ ತರಬೇಕು: ಕರ್ನಾಟಕ ಹೈಕೋರ್ಟ್

ನವೆಂಬರ್‌ 2017ರಲ್ಲಿ ಮೊದಲ ಕಂತನ್ನು ಪಾವತಿಸಿದ ಅಬೂಬಕರ್‌ ಉಳಿದ ಕಂತುಗಳನ್ನು ಪಾವತಿಸಲು ವಿಫಲರಾದರು. ಆಗ ಬ್ಯಾಂಕ್‌ ವಾರ್ಷಿಕ 13.35%ರ ಬಡ್ಡಿ ದರದೊಂದಿಗೆ ರೂ.5,92,420/- ಅಸಲನ್ನು ಪಾವತಿಸುವಂತೆ ನ್ಯಾಯಾಲಯದಲ್ಲಿ ದಾವೆ ಹೂಡಿತು. ನ್ಯಾಯಾಲಯದ ಸಮನ್ಸ್‌ ಹಿನ್ನೆಲೆಯಲ್ಲಿ ವಕೀಲರೊಂದಿಗೆ ಕೋರ್ಟ್‌ಗೆ ಹಾಜರಾದ ಅಬೂಬಕರ್‌ ಬ್ಯಾಂಕ್‌ ಮಾಡಿದ್ದ ಎಲ್ಲಾ ಆರೋಪಗಳನ್ನು ನಿರಾಕರಿಸಿದರು.

ಸಾಲದ ಮೇಲೆ ಬ್ಯಾಂಕ್‌ ಲೆಕ್ಕ ಹಾಕಿ ವಿಧಿಸಿದ ಬಡ್ಡಿ ದರ ಹೊರತುಪಡಿಸಿ ಉಳಿದ ಹಣವನ್ನು ಪಾವತಿಸಲಾಗಿದೆ ಎಂದು ವಾದಿಸಿದರು. ಇತ್ತ ಲೋಕ್‌ ಅದಾಲತ್‌ನಲ್ಲಿ ವ್ಯಾಜ್ಯ ಬಗೆಹರಿಸಿಕೊಳ್ಳುವ ವಿಫಲ ಯತ್ನಗಳು ನಡೆದವು.

ಬಳಿಕ ವಿಚಾರಣೆ ನಡೆಸಿದ ಜಿಲ್ಲಾ ನ್ಯಾಯಾಲಯ ಸಾಕ್ಷ್ಯಾಧಾರಗಳನ್ನು ಪರಿಗಣಿಸಿ ರೂ.5,38,739/- ಲಕ್ಷ ಹಣವನ್ನು ವಾರ್ಷಿಕ ಶೇ 10ರ ಬಡ್ಡಿದರದಲ್ಲಿ ಸ್ವೀಕರಿಸಲು ಬ್ಯಾಂಕ್‌ ಅರ್ಹವಾಗಿದೆ ಎಂದು ತೀರ್ಪು ನೀಡಿದೆ. “ಕೊರೊನಾ ಲಾಕ್‌ಡೌನ್‌ನಿಂದಾಗಿ ಶಾಮಿಯಾನ ವ್ಯವಹಾರ ಮಾಡುವವರು ಸೇರಿದಂತೆ ಅನೇಕರು ಸಂಪೂರ್ಣ ನಷ್ಟ ಅನುಭವಿಸಿದರು ಎಂಬುದು ನಿರ್ವಿವಾದದ ಸಂಗತಿ” ಎಂದು ಅದು ವಿಚಾರಣೆ ವೇಳೆ ತಿಳಿಸಿದೆ.

ಅರ್ಜಿದಾರ ಅಬೂಬಕರ್‌ ಪರವಾಗಿ ಕೆ ಬಿ ಪಿ ವಾದ ಮಂಡಿಸಿದ್ದರು. ವಕೀಲ ಎಂ ಎಸ್‌ ಬಿ ಅವರು ಕೆನರಾ ಬ್ಯಾಂಕನ್ನು ಪ್ರತಿನಿಧಿಸಿದ್ದರು.

Kannada Bar & Bench
kannada.barandbench.com