Justice RC Chavan and CJI DY Chandrachud 
ಸುದ್ದಿಗಳು

ತಮ್ಮ ಅಧಿಕಾರಾವಧಿ ಕುರಿತು ನಿರ್ಗಮಿತ ಸಿಜೆಐ ಚಂದ್ರಚೂಡ್ ನೀಡಿದ್ದ ಹೇಳಿಕೆಗೆ ನ್ಯಾ. ಚವ್ಹಾಣ್ ಆಕ್ಷೇಪ

ತಮ್ಮ ತೀರ್ಪಿಗೆ ಸಾರ್ವಜನಿಕರು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬ ಬಗ್ಗೆ ನ್ಯಾಯಾಧೀಶರು ಚಿಂತಿತರಾಗಬಾರದು ಮತ್ತು ನ್ಯಾ. ಚಂದ್ರಚೂಡ್ ಅವರಂತಹ ಪ್ರಬುದ್ಧ ವ್ಯಕ್ತಿಗೆ ಆ ಹೇಳಿಕೆ ತಕ್ಕುದಲ್ಲ ಎಂದು ನ್ಯಾ. ಚವ್ಹಾಣ್ ತಿಳಿಸಿದ್ದಾರೆ.

Bar & Bench

ನನ್ನ ಅಧಿಕಾರಾವಧಿಯನ್ನು ಚರಿತ್ರೆ ಹೇಗೆ ನಿರ್ಣಯಿಸುತ್ತದೆ ಎಂಬ ಆತಂಕವಿದೆ ಎಂದು ನಿರ್ಗಮಿತ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್ ಅವರು ನೀಡಿದ್ದ ಹೇಳಿಕೆಯನ್ನು ಬಾಂಬೆ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಆರ್‌ ಸಿ ಚವ್ಹಾಣ್‌ ಟೀಕಿಸಿದ್ದಾರೆ.

ನಿರ್ಗಮಿತ ಸಿಜೆಐ ಚಂದ್ರಚೂಡ್‌ ಅವರ ಅಧಿಕಾರಾವಧಿ ಮತ್ತು ನ್ಯಾಯಾಂಗ ಪರಂಪರೆ ವಿಚಾರವಾಗಿ ನೀತಿ ನಿರೂಪಣಾ ಚಿಂತಕರ ಚಾವಡಿ ವಿಧಿ ಸೆಂಟರ್ ಫಾರ್ ಲೀಗಲ್ ಪಾಲಿಸಿ ನವದೆಹಲಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ತಮ್ಮ ತೀರ್ಪಿಗೆ ಸಾರ್ವಜನಿಕರು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬ ಬಗ್ಗೆ ನ್ಯಾಯಾಧೀಶರು ಚಿಂತಿತರಾಗಬಾರದು ಮತ್ತು ಚಂದ್ರಚೂಡ್‌ ಅವರಂತಹ ಪ್ರಬುದ್ಧ ವ್ಯಕ್ತಿಗೆ ಅವರ ಆ ಹೇಳಿಕೆ ತಕ್ಕುದಲ್ಲ ಎಂದು ನ್ಯಾ. ಚವ್ಹಾಣ್‌ ತಿಳಿಸಿದ್ದಾರೆ.

ನ್ಯಾ. ಚವ್ಹಾಣ್‌ ಅವರ ಮಾತಿನ ಪ್ರಮುಖಾಂಶಗಳು

  • ಸಾರ್ವಜನಿಕ ನಂಬಿಕೆ ಎಂದರೆ ತಮಗೆ ಸೂಕ್ತ ಎನಿಸುವುದನ್ನು ಮಾಡುವ ಬದಲು ಜನರಿಗೆ ಪ್ರಿಯವಾದ ಕೆಲಸ ಮಾಡುವುದು ಎಂದರ್ಥವಲ್ಲ.

  • ನ್ಯಾಯಮೂರ್ತಿಗಳು ನೀಡುವ ತೀರ್ಪನ್ನು ಸಾರ್ವಜನಿಕರು ಹೇಗೆ ನೋಡುತ್ತಾರೆ ಎಂಬುದು ತೀರ್ಪು ಬರೆಯುವುದರ ಮೇಲೆ ಪರಿಣಾಮ ಬೀರಬಾರದು, ಇಲ್ಲವೇ ಭೀತಿ ಹುಟ್ಟುಹಾಕಬಾರದು.

  • ನನ್ನ ಅಧಿಕಾರಾವಧಿಯನ್ನು ಚರಿತ್ರೆ ಹೇಗೆ ನಿರ್ಣಯಿಸುತ್ತದೆ ಎಂಬ ಆತಂಕವಿದೆ ಎಂದು ನಿರ್ಗಮಿತ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಅವರು ನೀಡಿದ ಹೇಳಿಕೆ ಅವರಂತಹ ಪ್ರಬುದ್ಧ ವ್ಯಕ್ತಿಗೆ ತಕ್ಕುದಲ್ಲ.

  • ಏಕೆಂದರೆ ಜನ ಏನನ್ನು ಯೋಚಿಸುತ್ತಾರೆ ಎಂಬ ಬಗ್ಗೆ ನ್ಯಾಯಾಧೀಶರು ಪ್ರಭಾವಿತರಾಗದೆ ತಮ್ಮ ಕೆಲಸವನ್ನಷ್ಟೇ ಮಾಡಬೇಕು.

  • ನ್ಯಾಯಾಂಗವನ್ನು ಮೀರಿದ ಆತಂಕಗಳಿಗೆ ಆದ್ಯತೆ ಇರಬಾರದು.

  • ಜನ ನ್ಯಾಯಾಧೀಶರನ್ನು ಹೇಗೆ ನೋಡಬಹುದು ಎಂದು ಆಲೋಚಿಸುವುದು ಒಳ್ಳೆಯದಲ್ಲ.

  • ಬಾಂಬೆ ಹೈಕೋರ್ಟ್‌ ನ್ಯಾಯಮೂರ್ತಿಯಾಗಿ ಪದೋನ್ನತಿ ಪಡೆದಾಗಲೇ ಚಂದ್ರಚೂಡ್‌ ಅವರನ್ನು ಸುಪ್ರೀಂ ಕೋರ್ಟ್‌ನ ಸಂಭಾವ್ಯ ಮುಖ್ಯ ನ್ಯಾಯಮೂರ್ತಿಯಂತೆ ನಡೆಸಿಕೊಳ್ಳಲಾಗುತ್ತಿತ್ತು.

  • ಸಿಜೆಐ ಚಂದ್ರಚೂಡ್‌ ಅನೇಕ ಆಡಳಿತಾತ್ಮಕ ಕೆಲಸಗಳನ್ನು ಆರಂಭಿಸಿದರಾದರೂ ಅವೆಲ್ಲವನ್ನೂ ಅವರಿಗೆ ಪೂರ್ಣಗೊಳಿಸಲು ಆಗಲಿಲ್ಲ. ನ್ಯಾಯಾಂಗ ಸುಧಾರಣೆಗಾಗಿ ಅವರಿಗೆ ಕಾಲಾವಕಾಶ ದೊರೆಯಲಿಲ್ಲ.

ನನ್ನ ಅಧಿಕಾರಾವಧಿಯನ್ನು ಇತಿಹಾಸ ಹೇಗೆ ನಿರ್ಣಯಿಸುತ್ತದೆ ಎಂಬುದರ ಜೊತೆಗೆ ನ್ಯಾಯಾಧೀಶರು ಮತ್ತು ಕಾನೂನು ವೃತ್ತಿಪರರನ್ನು ಒಳಗೊಂಡ ಭವಿಷ್ಯದ ಪೀಳಿಗೆಗೆ ನಾನು ಯಾವ ಪರಂಪರೆ ಬಿಟ್ಟು ಹೋಗುತ್ತಿರುವೆ ಎಂಬ ಕುರಿತು ನನ್ನ ಮನಸ್ಸು ಚಿಂತಿಸುತ್ತಿದೆ ಎಂದು ನ್ಯಾ. ಚಂದ್ರಚೂಡ್‌ ಕಳೆದ ತಿಂಗಳು ಹೇಳಿದ್ದರು.

ಶುಕ್ರವಾರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಹಿರಿಯ ವಕೀಲ ರಾಜು ರಾಮಚಂದ್ರನ್, ಮಾನವ ಹಕ್ಕುಗಳ ಪರ ವಕೀಲರಾದ ಮಾಜ ದಾರುವಾಲಾ ಹಾಗೂ ವಿಧಿ ಸಂಸ್ಥೆಯ ಸಂಸ್ಥಾಪಕ ಮತ್ತು ಸಂಶೋಧನಾ ನಿರ್ದೇಶಕ ಅರ್ಘ್ಯ ಸೇನ್‌ ಗುಪ್ತಾ ಪಾಲ್ಗೊಂಡಿದ್ದರು.