ನನ್ನ ಅಧಿಕಾರಾವಧಿಯನ್ನು ಚರಿತ್ರೆ ಹೇಗೆ ನಿರ್ಣಯಿಸುತ್ತದೆ ಎಂಬ ಆತಂಕವಿದೆ: ನಿವೃತ್ತಿ ಹೊಸ್ತಿಲಲ್ಲಿ ಸಿಜೆಐ ಚಂದ್ರಚೂಡ್

ಸಿಜೆಐ ಆಗಿ ಎರಡು ವರ್ಷಗಳ ಅಧಿಕಾರ ಪೂರೈಸುತ್ತಿರುವ ಸಿಜೆಐ ಚಂದ್ರಚೂಡ್ ಅವರು ಬರುವ ನವೆಂಬರ್ 10 ರಂದು ನಿವೃತ್ತರಾಗಲಿದ್ದಾರೆ. 14 ವರ್ಷಗಳ ಬಳಿಕ ಇಷ್ಟು ಸುದೀರ್ಘ ಅವಧಿಗೆ ಸಿಜೆಐ ಒಬ್ಬರು ಕಾರ್ಯ ನಿರ್ವಹಿಸಿದ್ದಾರೆ.
CJI DY Chandrachud and Supreme Court
CJI DY Chandrachud and Supreme Court
Published on

ನನ್ನ ಅಧಿಕಾರಾವಧಿಯನ್ನು ಇತಿಹಾಸ ಹೇಗೆ ನಿರ್ಣಯಿಸುತ್ತದೆ ಎಂಬುದರ ಜೊತೆಗೆ ನ್ಯಾಯಾಧೀಶರು ಮತ್ತು ಕಾನೂನು ವೃತ್ತಿಪರರನ್ನು ಒಳಗೊಂಡ ಭವಿಷ್ಯದ ಪೀಳಿಗೆಗೆ ನಾನು ಯಾವ ಪರಂಪರೆ  ಬಿಟ್ಟು ಹೋಗುತ್ತಿರುವೆ ಎಂಬ ಕುರಿತು ನನ್ನ ಮನಸ್ಸು ಚಿಂತಿಸುತ್ತಿದೆ ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌ ತಿಳಿಸಿದರು.

ಭೂತಾನ್‌ಗೆ ಮಂಗಳವಾರ ಅಧಿಕೃತ ಪ್ರವಾಸ ಕೈಗೊಂಡಿದ್ದ ಅವರು ಅಲ್ಲಿನ ಪಾರೋದಲ್ಲಿರುವ ಜೆಎಸ್‌ಡಬ್ಲ್ಯು ಕಾನೂನು ಶಾಲೆಯ ಘಟಿಕೋತ್ಸವದಲ್ಲಿ ಮಾತನಾಡಿದರು.

Also Read
ನಿವೃತ್ತಿ ಬಳಿಕವೂ ನ್ಯಾ. ಮೇರಿ ತೀರ್ಪು ಬರೆಯುತ್ತಿದ್ದಾರೆ: ಕೇರಳ ಹೈಕೋರ್ಟ್ ಸಿಜೆಗೆ ವಕೀಲರ ಸಂಘದ ಅಧ್ಯಕ್ಷ ಪತ್ರ

ಸಿಜೆಐ ಯುಯು ಲಲಿತ್ ಅವರ ನಿವೃತ್ತಿಯ ಬಳಿಕ ನ್ಯಾಯಮೂರ್ತಿ ಚಂದ್ರಚೂಡ್ ಅವರು ನವೆಂಬರ್ 9, 2022ರಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ವಹಿಸಿಕೊಂಡಿದ್ದರು.

ಸಿಜೆಐ ಆಗಿ ಎರಡು ವರ್ಷಗಳ ಅಧಿಕಾರ ಪೂರೈಸುತ್ತಿರುವ ನ್ಯಾ. ಚಂದ್ರಚೂಡ್ ಅವರು ಬರುವ ನವೆಂಬರ್ 10ರಂದು ನಿವೃತ್ತರಾಗಲಿದ್ದಾರೆ. 14 ವರ್ಷಗಳ ಬಳಿಕ ಇಷ್ಟು ಸುದೀರ್ಘ ಅವಧಿಗೆ ಸಿಜೆಐ ಒಬ್ಬರು ಕಾರ್ಯ ನಿರ್ವಹಿಸಿದ್ದಾರೆ.

"ನನ್ನ ದೇಶಕ್ಕೆ ಎರಡು ವರ್ಷಗಳ ಕಾಲ ಸೇವೆ ಸಲ್ಲಿಸಿದ ನಂತರ ಈ ವರ್ಷದ ನವೆಂಬರ್‌ನಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿ ಹುದ್ದೆಯಿಂದ ನಿವೃತ್ತನಾಗುತ್ತಿದ್ದೇನೆ. ನನ್ನ ಅಧಿಕಾರಾವಧಿಯು ಅಂತ್ಯಗೊಳ್ಳುತ್ತಿದ್ದಂತೆ, ನನ್ನ ಮನಸ್ಸು ಭವಿಷ್ಯ ಮತ್ತು ಭೂತಕಾಲದ ಬಗ್ಗೆ ಭಯ ಹಾಗೂ ಉದ್ವೇಗದಿಂದ ಕೂಡಿದೆ. ಅಂದುಕೊಂಡ ಎಲ್ಲವನ್ನೂ  ಮಾಡಿದ್ದೇನೆಯೇ? ಇತಿಹಾಸ ನನ್ನನ್ನು ಹೇಗೆ ನೆನಪಿಸಿಕೊಳ್ಳಲಿದೆ? ಭವಿಷ್ಯದ ತಲೆಮಾರಿನ ನ್ಯಾಯಮೂರ್ತಿಗಳು, ನ್ಯಾಯಿಕ ವೃತ್ತಿಪರರಿಗೆ ನಾನು ಯಾವ ಪರಂಪರೆಯನ್ನು ಬಿಟ್ಟು ಹೋಗಲಿದ್ದೇನೆ? ಎನ್ನುವಂತಹ ಪ್ರಶ್ನೆಗಳ ಬಗ್ಗೆ ನಾನು ಯೋಚಿಸುತ್ತಿರುತ್ತೇನೆ" ಎಂದು ಸಿಜೆಐ ಚಂದ್ರಚೂಡ್ ಹೇಳಿದರು.

ಬಹುತೇಕ ಪ್ರಶ್ನೆಗಳಿಗೆ ಉತ್ತರ ದೊರೆಯುತ್ತಿಲ್ಲವಾದರೂ ನನ್ನ ದೇಶಕ್ಕೆ ಅತ್ಯಂತ ಸಮರ್ಪಣಾಭಾವದಿಂದ ಸೇವೆ ಸಲ್ಲಿಸಿರುವ ತೃಪ್ತಿ ನನಗಿದೆ ಎಂದರು. ನಿಮ್ಮ ಉದ್ದೇಶಗಳು ಮತ್ತು ಸಾಮರ್ಥ್ಯಗಳಲ್ಲಿ ನಿಮಗೆ ಇಂತಹ ನಂಬಿಕೆ ಇದ್ದಲ್ಲಿ ಫಲಿತಾಂಶ ಕುರಿತಾದ ಚಿಂತೆಯಿಂದ ಹೊರಬರುವುದು ಸುಲಭವಾಗಲಿದೆ ಎಂದು ಸಿಜೆಐ ಹೇಳಿದರು.

Also Read
ಬೆಂಗಳೂರಿನ ಎನ್‌ಎಲ್‌ಎಸ್‌ಐಯುನಲ್ಲಿ ಲೂಥ್ರಾ ಶೈಕ್ಷಣಿಕ ಘಟಕಕ್ಕೆ ಶಿಲಾನ್ಯಾಸ ನೆರವೇರಿಸಿದ ಸಿಜೆಐ

ನಮ್ಮ ಸಮುದಾಯಗಳ ಸಾಂಪ್ರದಾಯಿಕ ಮೌಲ್ಯಗಳು ಸ್ವಾತಂತ್ರ್ಯ, ಸಮಾನತೆ ಹಾಗೂ ಭಿನ್ನಾಭಿಪ್ರಾಯದಂತಹ ಆಧುನಿಕ ಪ್ರಜಾಸತ್ತಾತ್ಮಕ ವಿಚಾರಗಳಿಗೆ ವಿರುದ್ಧವಾಗಿವೆ ಎಂಬ ತಪ್ಪು ಗ್ರಹಿಕೆ ಹೆಚ್ಚಾಗಿದೆ. ಆದರೆ ಏಷ್ಯಾದಲ್ಲಿನ ನಮ್ಮ ಸಮುದಾಯಗಳ ಇತಿಹಾಸದ ಬಗ್ಗೆ ನಿರ್ಲಿಪ್ತವಾಗಿ ಗಮನಿಸಿದಾಗ ಬೇರೆಯದೇ ಉತ್ತರ ದೊರೆಯುತ್ತದೆ ಎಂದರು.

ನಾವೆಲ್ಲರೂ ಚಿಕ್ಕವರಿದ್ದಾಗ ಪ್ರಪಂಚದ ತಪ್ಪುಗಳನ್ನು ಸರಿಪಡಿಸುವ ತೀವ್ರ ಬಯಕೆಯಿಂದ ಧಗಧಗಿಸುತ್ತಿರುತ್ತೇವೆ. ಆದರೆ ಈ ಭಾವನೆಯ ಹಿಂದೆ ಬಹುತೇಕವಾಗಿ ಅನನುಭವ, ಅನಿಶ್ಚಿತತೆ ಹಾಗೂ ಅವಕಾಶದ ಕೊರತೆಗಳಿರುತ್ತವೆ ಎಂದು ಅವರು ವಿದ್ಯಾರ್ಥಿಗಳನ್ನುದ್ದೇಶಿಸಿ ಹೇಳಿದರು.

Kannada Bar & Bench
kannada.barandbench.com