Supreme Court, COVID-19 vaccine

Supreme Court, COVID-19 vaccine

ಸುದ್ದಿಗಳು

ಪರೀಕ್ಷಿಸದೆ ಮಕ್ಕಳಿಗೆ ಕೋವಿಡ್ ಲಸಿಕೆ ನೀಡುವುದು ಅನೈತಿಕ ಮತ್ತು ಬೇಜವಾಬ್ದಾರಿ: ಸುಪ್ರೀಂ ಮುಂದೆ ಪ್ರಶಾಂತ್ ಭೂಷಣ್ ವಾದ

Bar & Bench

ಪರೀಕ್ಷಿಸದ ಕೋವಿಡ್‌ ಲಸಿಕೆಗಳನ್ನು ಮಕ್ಕಳಿಗೆ ನೀಡುವುದು ಅನೈತಿಕ ಮತ್ತು ಬೇಜವಾಬ್ದಾರಿ ಎಂದು ವಕೀಲ ಪ್ರಶಾಂತ್ ಭೂಷಣ್ ಬುಧವಾರ ಸುಪ್ರೀಂ ಕೋರ್ಟ್‌ ಮುಂದೆ ವಾದಿಸಿದರು [ಜಾಕೋಬ್ ಪುಲಿಯೆಲ್ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].

ಯಾವುದೇ ಸವಲತ್ತು ಅಥವಾ ಸೇವೆ ಪಡೆಯಲು ಕೋವಿಡ್ ಲಸಿಕೆ ಕಡ್ಡಾಯಗೊಳಿಸಿ ಷರತ್ತು ವಿಧಿಸುವುದು ನಾಗರಿಕರ ಹಕ್ಕುಗಳ ಉಲ್ಲಂಘನೆ ಎಂದು ಘೋಷಿಸುವಂತೆ ಕೋರಿದ್ದ ಮನವಿಯನ್ನು ನ್ಯಾಯಮೂರ್ತಿಗಳಾದ ಎಲ್ ನಾಗೇಶ್ವರ ರಾವ್ ಮತ್ತು ಬಿ ಆರ್ ಗವಾಯಿ ಅವರಿದ್ದ ಪೀಠ ವಿಚಾರಣೆ ನಡೆಸಿತು.

ಮಕ್ಕಳು ಕೋವಿಡ್‌ನಿಂದ ಅಷ್ಟೇನೂ ಬಾಧಿತರಾಗದ ಕಾರಣ ಅವರಿಗೆ ಲಸಿಕೆ ಕಡ್ಡಾಯಗೊಳಿಸುವುದು ಅತ್ಯಂತ ಗಂಭೀರ ವಿಚಾರ. ಈಗ ಅದನ್ನು ಕಡ್ಡಾಯಗೊಳಿಸಿದರೆ ಕೋವಿಡ್‌ನಿಂದ ಸಾಯುವ ಸಾಧ್ಯತೆಗಿಂತಲೂ ಲಸಿಕೆಯಿಂದ ಸಾಯುವ ಸಾಧ್ಯತೆ ಹೆಚ್ಚು. ಇಂಡಿಯನ್ ಸರ್ಟಿಫಿಕೇಟ್ ಆಫ್ ಸೆಕೆಂಡರಿ ಎಜುಕೇಶನ್ (ಐಸಿಎಸ್‌ಇ) ಮಕ್ಕಳಿಗೆ ಪರೀಕ್ಷೆಗೆ ಕುಳಿತುಕೊಳ್ಳಲು ಲಸಿಕೆ ಹಾಕುವುದನ್ನು ಕಡ್ಡಾಯಗೊಳಿಸಿದೆ. ಇಂತಹ ಸ್ವೇಚ್ಚೆಯ ನಿರ್ದೇಶನಗಳ ಮೇಲೆ ನ್ಯಾಯಾಲಯ ತನ್ನ ನ್ಯಾಯಾಂಗ ಪರಿಶೀಲನೆ ಅಧಿಕಾರ ಚಲಾಯಿಸಿ ಲಸಿಕೆ ಆದೇಶ ರದ್ದುಗೊಳಿಸಬೇಕು ಎಂದು ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ಭೂಷಣ್ ತಿಳಿಸಿದರು.

ಈ ಬಗೆಯ ಕಡ್ಡಾಯ ಮಾಡುವಿಕೆಯು ಅಗತ್ಯ ವಸ್ತುಗಳು ಮತ್ತು ಸೇವೆಗಳನ್ನು ಪಡೆಯುವ ಹಕ್ಕನ್ನು ಭಂಗಗೊಳಿಸಬಾರದು. ಜೀವಿಸುವ ಮತ್ತು ಜೀವನೋಪಾಯದ ಹಕ್ಕನ್ನು ಲಸಿಕೆಯನ್ನು ನೀಡುವ ಕಲ್ಯಾಣ ಕಾರ್ಯಕ್ರಮದ ನೀತಿಯು ಅಡ್ಡಪಡಿಸಬಾರದು. ಇವುಗಳ ನಡುವೆ ಗುರುತರವಾದ ಸಂಬಂಧವೂ ಇಲ್ಲ ಎಂದು ಅವರು ಸಮರ್ಥಿಸಿದರು.

ಕೋವಿಡ್ ಲಸಿಕೆ ಕಡ್ಡಾಯವಲ್ಲ ಎಂದು ಕೇಂದ್ರ ಹೇಳಿರುವುದನ್ನು ನ್ಯಾಯಾಲಯ ತಿಳಿಸಿದಾಗ, ರಾಜ್ಯಗಳು ಅದನ್ನು ಕಡ್ಡಾಯಗೊಳಿಸುತ್ತಿವೆ ಎಂದು ಭೂಷಣ್ ಹೇಳಿದರು. ಪ್ರಕರಣವನ್ನು ಮಾರ್ಚ್ 8ಕ್ಕೆ ಮುಂದೂಡಲಾಯಿತು.