ಸುದ್ದಿಗಳು

ಶರದ್ ಪವಾರ್ ವಿರುದ್ಧ ಟ್ವೀಟ್ ಮಾಡಿದ ವಿದ್ಯಾರ್ಥಿಯ ಬಂಧನ: ಬಾಂಬೆ ಹೈಕೋರ್ಟ್ ಅಸಮಾಧಾನ

"ಪ್ರತಿದಿನ ನೂರಾರು, ಸಾವಿರಾರು ಟ್ವೀಟ್‌ಗಳನ್ನು ಮಾಡಲಾಗುತ್ತದೆ. ನೀವು ಪ್ರತಿ ಟ್ವೀಟನ್ನೂ ಗಣನೆಗೆ ತೆಗೆದುಕೊಳ್ಳುತ್ತೀರಾ?" ಎಂದು ಪೊಲೀಸರ ವರ್ತನೆಯ ಬಗ್ಗೆ ಬೇಸರಿಸಿದ ಪೀಠ.

Bar & Bench

ಎನ್‌ಸಿಪಿ ನಾಯಕ ಶರದ್ ಪವಾರ್ ವಿರುದ್ಧ ಟ್ವೀಟ್ ಮಾಡಿದ 21 ವರ್ಷದ ವಿದ್ಯಾರ್ಥಿ ನಿಖಿಲ್ ಭಾಮ್ರೆಯನ್ನು ಬಂಧಿಸಿದ್ದಕ್ಕಾಗಿ ಬಾಂಬೆ ಹೈಕೋರ್ಟ್ ಸೋಮವಾರ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದೆ [ನಿಖಿಲ್ ಭ್ರಾಮೆ ಮತ್ತು ಮಹಾರಾಷ್ಟ್ರ ಸರ್ಕಾರ ನಡುವಣ ಪ್ರಕರಣ].

ಭಾಮ್ರೆ ವಿರುದ್ಧ ಎಫ್‌ಐಆರ್‌ಗಳು ದಾಖಲುಗೊಳ್ಳಲು ಟ್ವೀಟ್ ಯಾವ ರೀತಿಯಲ್ಲಿ ಆಧಾರವಾಗಿರಬಹುದು ಎಂದು ನ್ಯಾಯಮೂರ್ತಿಗಳಾದ ಎಸ್‌ ಎಸ್ ಶಿಂಧೆ ಮತ್ತು ಮಿಲಿಂದ್ ಜಾಧವ್ ಅವರಿದ್ದ ಪೀಠ ಆಶ್ಚರ್ಯ ವ್ಯಕ್ತಪಡಿಸಿತು.

"ಪ್ರತಿದಿನ ನೂರಾರು, ಸಾವಿರಾರು ಟ್ವೀಟ್‌ಗಳನ್ನು ಮಾಡಲಾಗುತ್ತದೆ. ನೀವು ಪ್ರತಿ ಟ್ವೀಟನ್ನೂ ಗಣನೆಗೆ ತೆಗೆದುಕೊಳ್ಳುತ್ತೀರಾ? ಇಂತಹ ಎಫ್‌ಐಆರ್‌ಗಳು ನಮಗೆ ಬೇಡ. … ಇಂತದ್ದನ್ನು ಕೇಳಿಲ್ಲ… ವಿದ್ಯಾರ್ಥಿಯೊಬ್ಬನನ್ನು ಕಸ್ಟಡಿಯಲ್ಲಿ ಇರಿಸಲಾಗಿದೆ” ಎಂದು ಪೀಠ ಬೇಸರಿಸಿತು.

“48ನೇ ಪುಟದಲ್ಲಿ (ಭಾಮ್ರೆ ಅವರ ಮೊದಲ ಟ್ವೀಟ್ ಪ್ರಸ್ತಾಪವಾಗಿರುವ ಎಫ್‌ಐಆರ್‌ನ) ಯಾರನ್ನೂ ಹೆಸರಿಸದೇ ಒಂದು ತಿಂಗಳ ಕಾಲ ಜೈಲಿನಲ್ಲಿಡಲಾಗಿದೆ. ಇದು ಎಲ್ಲದಕ್ಕೂ ಹೇಗೆ ಆಧಾರವಾಗುತ್ತದೆ? ಪುಟ 48ರ ಪ್ರಕಾರ ಎಫ್‌ಐಆರ್‌ಗೆ ಕಾರಣವೇನು?” ಎಂದು ನ್ಯಾ. ಶಿಂಧೆ ಕೇಳಿದರು.

“ಈ ರೀತಿಯ ಕ್ರಮ ತೆಗೆದುಕೊಳ್ಳಲಾರಂಭಿಸಿದರೆ ನೀವು ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಪಡೆದ ವ್ಯಕ್ತಿಯ (ಪವಾರ್) ಹೆಸರಿಗೆ ಧಕ್ಕೆ ತರುತ್ತೀರಿ. ಹಾಗೆ ವಿದ್ಯಾರ್ಥಿಯನ್ನು ಜೈಲಿನಲ್ಲಿರಿಸುವುದು ಮೇರು ವ್ಯಕ್ತಿತ್ವಕ್ಕೆ (ಪವಾರ್) ಕೂಡ ಇಷ್ಟವಾಗದು. ಮೇರು ವ್ಯಕ್ತಿತ್ವದ ಖ್ಯಾತಿ ಕಡಿಮೆಯಾಗುವುದು ನಮಗೆ ಇಷ್ಟವಿಲ್ಲ” ಎಂದು ನ್ಯಾಯಮೂರ್ತಿಗಳು ಹೇಳಿದರು.

ಈ ಸಂಬಂಧ ರಾಜ್ಯ ಸರ್ಕಾರದ ಸೂಚನೆ ಪಡೆಯುವಂತೆ ಮತ್ತು ಭಾಮ್ರೆ ಬಿಡುಗಡೆಗೆ ಸರ್ಕಾರದ ಆಕ್ಷೇಪವಿಲ್ಲ ಎಂಬ ಹೇಳಿಕೆ ಪಡೆಯುವಂತೆ ವಿಚಾರಣೆಯನ್ನು ಮುಕ್ತಾಯಗೊಳಿಸುವ ಮೊದಲು, ನ್ಯಾ. ಶಿಂಧೆ ಪಬ್ಲಿಕ್ ಪ್ರಾಸಿಕ್ಯೂಟರ್‌ ಅವರಿಗೆ ಸೂಚಿಸಿದರು.

" ನಮ್ಮ ವಿನಮ್ರ ಅಭಿಪ್ರಾಯದಲ್ಲಿ ಹೇಳುವುದಾದರೆ ಸರ್ಕಾರ ಹೇಳಿಕೆ ನೀಡಿದರೆ ಅದರ ಗೌರವ ಉಳಿಯುತ್ತದೆ" ಎಂದು ಪೀಠ ತಿಳಿಸಿತು. ಜೂನ್ 16ಕ್ಕೆ ಅರ್ಜಿಯ ಮುಂದಿನ ವಿಚಾರಣೆ ನಿಗದಿಯಾಗಿದೆ.