Law minister Rijiju
Law minister Rijiju 
ಸುದ್ದಿಗಳು

ನ್ಯಾಯಾಂಗ-ಕಾರ್ಯಾಂಗದ ನಡುವಿನ ಭಿನ್ನಾಭಿಪ್ರಾಯ ಪ್ರಜಾಪ್ರಭುತ್ವದ ಭಾಗವಾಗಿದ್ದು ಅದನ್ನು ಸಂಘರ್ಷ ಎನ್ನಬಾರದು: ರಿಜಿಜು

Bar & Bench

ಕಾರ್ಯಾಂಗ ಮತ್ತು ನ್ಯಾಯಾಂಗದ ನಡುವಿನ ಭಿನ್ನಾಭಿಪ್ರಾಯಗಳು ಪ್ರಜಾಪ್ರಭುತ್ವದ ಭಾಗವಾಗಿದ್ದು  ಅದನ್ನು 'ಸಂಘರ್ಷ' ಎಂದು ಕರೆಯಬಾರದು ಎಂಬುದಾಗಿ ಕೇಂದ್ರ ಕಾನೂನು ಸಚಿವ ಕಿರೆನ್‌ ರಿಜಿಜು ಶುಕ್ರವಾರ ಹೇಳಿದರು.

ಗುವಾಹಟಿ ಹೈಕೋರ್ಟ್‌ನ ಎಪ್ಪತ್ತನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಸಮಾರಂಭದಲ್ಲಿ ಅವರು ಮಾತನಾಡಿದರು.

ಕೆಲ ಶಕ್ತಿಗಳು ಭಾರತದ ಪ್ರಗತಿಯನ್ನು ಕಾಣಬಯಸುವುದಿಲ್ಲ ಹೀಗಾಗಿ ನ್ಯಾಯಾಂಗ ಮತ್ತು ಕಾರ್ಯಾಂಗದ ನಡುವೆ ಸಂಘರ್ಷವಿದೆ ಎಂದು ಬಿಂಬಿಸಲು ಯತ್ನಿಸುತ್ತಿವೆ ಎಂದು ಅವರು ಹೇಳಿದರು.

ರಿಜಿಜು ಮಾತಿನ ಪ್ರಮುಖ ವಿಚಾರಗಳು

  • ಕಾನೂನು ಸಚಿವನಾಗಿ, ಕಾನೂನನ್ನು ಎತ್ತಿಹಿಡಿಯುವುದು ನನ್ನ ಬದ್ಧ ಕರ್ತವ್ಯ.

  • ನ್ಯಾಯಾಂಗ ಸ್ವಾತಂತ್ರ್ಯ ಅತ್ಯುನ್ನತವಾದುದಾಗಿದ್ದು ಕೆಲವೊಮ್ಮೆ ನಾವು ಮಾಹಿತಿ ಕೊರತೆಯಿಂದ ಕೂಡಿದ ಚರ್ಚೆ ಮತ್ತು ಚಿಂತನೆಗೆ ಬಲಿಯಾಗುತ್ತೇವೆ.

  • ಸರ್ಕಾರ ಮತ್ತು ನ್ಯಾಯಾಂಗ ಭಿನ್ನಾಭಿಪ್ರಾಯದಲ್ಲಿ ತೊಡಗಿರುವ ಸ್ಥಿತಿಯನ್ನು ಬಿಂಬಿಸುವ ಯತ್ನಗಳು ನಡೆಯುತ್ತಿವೆ.

  • ಅಭಿಪ್ರಾಯ ಭೇದ ಪ್ರಜಾಪ್ರಭುತ್ವದ ಅವಿಭಾಜ್ಯ ಅಂಗವಾಗಿದ್ದು ಅದನ್ನು ಸಂಘರ್ಷ ಎನ್ನಲಾಗದು.

  • ವಕೀಲ ವರ್ಗ ಮತ್ತು ನ್ಯಾಯಾಂಗದ ಸದಸ್ಯರು ಒಟ್ಟಿಗೆ ಕೆಲಸ ಮಾಡಬೇಕಾಗುತ್ತದೆ. ನ್ಯಾಯಾಧೀಶರು ಮತ್ತು ವಕೀಲರು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಇಬ್ಬರೂ ಇಲ್ಲದೆ ನ್ಯಾಯದಾನ ಸಾಧ್ಯವಿಲ್ಲ.

ಇದಕ್ಕೂ ಮುನ್ನ ಸಮಾರಂಭದಲ್ಲಿ ಮಾತನಾಡಿದ್ದ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌ ಅವರು ಆಡಳಿತಾತ್ಮಕ ಭಾಗದಲ್ಲಿ ಕಾರ್ಯಾಂಗ ಮತ್ತು ನ್ಯಾಯಾಂಗದ ನಡುವಿನ ಸಂಬಂಧ ದೃಢವಾದ ಸಾಂವಿಧಾನಿಕ ರಾಜತಾಂತ್ರಿಕತೆಯನ್ನು ಹೊಂದಿರಬೇಕು. ನ್ಯಾಯಾಂಗದ ಮೇಲಿನ ನಾಗರಿಕರ ವಿಶ್ವಾಸವು ಅದರ ಭೀತರಹಿತ ಸ್ವಾತಂತ್ರ್ಯದ ಮೇಲೆ ಅವಲಂಬಿತವಾಗಿದೆ. ಅದೇ ರೀತಿ, ನ್ಯಾಯಾಂಗದ ನ್ಯಾಯಸಮ್ಮತತೆಯು ಜನತೆಯು ನ್ಯಾಯಾಂಗದ ಮೇಲೆ ಇರಿಸಿರುವ ವಿಶ್ವಾಸದ ಮೇಲೆ ನಿಂತಿದೆ ಎಂದಿದ್ದರು.

ಇತ್ತೀಚಿನ ದಿನಗಳಲ್ಲಿ, ನ್ಯಾಯಾಂಗ, ಕೊಲಿಜಿಯಂ ವ್ಯವಸ್ಥೆ ಹಾಗೂ ನ್ಯಾಯಮೂರ್ತಿಗಳ ನೇಮಕಾತಿಗೆ ಸಂಬಂಧಿಸಿದಂತೆ ಕಾನೂನು ಸಚಿವ ರಿಜಿಜು ಅವರ ಅಭಿಪ್ರಾಯಗಳು ಭಿನ್ನಾಭಿಪ್ರಾಯದಂತೆ ಕಂಡುಬಂದಿದ್ದವು.