Twitter logo and Karnataka High Court 
ಸುದ್ದಿಗಳು

ಕೇಂದ್ರ ಸರ್ಕಾರದ ಅಧಿಕಾರಿಗಳು ವೆಂಕ, ಸೀನ, ನಾಣಿಯಲ್ಲ: ಎಕ್ಸ್‌ ಕಾರ್ಪ್‌ ನಡೆಗೆ ಹೈಕೋರ್ಟ್‌ ಅತೃಪ್ತಿ

“ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೊ/ಫೋಟೊಗಳನ್ನು ಹಾಕಲಾಗುತ್ತದೆ. ಇದು ಈ ದೇಶದಲ್ಲಿ ಕಾನೂನುಬಾಹಿರ ವಿಚಾರವೇ?” ಎಂದು ಕೇಂದ್ರದ ನಡೆಯನ್ನು ಪ್ರಶ್ನಿಸಿದ ಹಿರಿಯ ವಕೀಲ ಕೆ ಜಿ ರಾಘವನ್.‌

Bar & Bench

ಹೈದರಾಬಾದ್‌ನಲ್ಲಿ ಮಹಿಳೆಯು ತನ್ನ ಕಾರನ್ನು ರೈಲು ಹಳಿಯಲ್ಲಿ ಚಲಾಯಿಸುತ್ತಿರುವ ವಿಡಿಯೊ/ಚಿತ್ರ ತೆಗೆದು ಹಾಕುವಂತೆ ರೈಲ್ವೆ ಇಲಾಖೆಯು ನೋಟಿಸ್‌ ರವಾನಿಸಿದೆ ಎಂದು ಎಕ್ಸ್‌ ಕಾರ್ಪ್‌ ಮಂಗಳವಾರ ಕರ್ನಾಟಕ ಹೈಕೋರ್ಟ್‌ನಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಆಕ್ಷೇಪಿತು.

ಮಾಹಿತಿ ನಿರ್ಬಂಧ ಮಾಡುವುದಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣ ಸಂಸ್ಥೆಗಳಿಗೆ ಆದೇಶಿಸಲು ಕೇಂದ್ರ ಸರ್ಕಾರವು ಸಹಯೋಗ್‌ ಪೋರ್ಟಲ್‌ ಆರಂಭಿಸಿರುವುದನ್ನು ಹಾಗೂ ಅದನ್ನು ಬಳಸುತ್ತಿರುವುದನ್ನು ಪ್ರಶ್ನಿಸಿ ಎಕ್ಸ್‌ ಕಾರ್ಪ್‌ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ನಡೆಸಿತು.

Justice M Nagaprasanna

ಹಿರಿಯ ವಕೀಲ ಕೆ ಜಿ ರಾಘವನ್‌ ಅವರು ಜೂನ್‌ 26ರಂದು ರೈಲ್ವೆ ಇಲಾಖೆಯು ನೀಡಿರುವ ನೋಟಿಸ್‌ ಉಲ್ಲೇಖಿಸಿ “ಪ್ರತಿಯೊಬ್ಬ ವೆಂಕ, ಸೀನ ಮತ್ತು ನಾಣಿಯಂಥ ಅಧಿಕಾರಿಗಳು ನೋಟಿಸ್‌ ಕಳುಹಿಸಿದರೆ ಏನು ಮಾಡುವುದು. ಇದನ್ನು ಹೇಗೆ ದುರ್ಬಳಕೆ ಮಾಡಲಾಗುತ್ತಿದೆ ನೋಡಿ” ಎಂದರು.

“ಮಹಿಳೆಯೊಬ್ಬರು ರೈಲು ಹಳಿಯ ಮೇಲೆ ಕಾರು ಓಡಿಸಿದ್ದರು. ನಾಯಿ ಮನುಷ್ಯನಿಗೆ ಕಚ್ಚಿದರೆ ಅದು ಸುದ್ದಿಯಲ್ಲ. ಆದರೆ, ಮನುಷ್ಯ ನಾಯಿಗೆ ಕಚ್ಚಿದರೆ ಅದು ಸುದ್ದಿ. ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೊ/ಫೋಟೊಗಳನ್ನು ಹಾಕಲಾಗುತ್ತದೆ. ಇದು ಈ ದೇಶದಲ್ಲಿ ಕಾನೂನುಬಾಹಿರ ವಿಚಾರವೇ?” ಎಂದು ಪ್ರಶ್ನಿಸಿದರು.

ಕೇಂದ್ರ ಸರ್ಕಾರ ಪ್ರತಿನಿಧಿಸಿದ್ದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರು ರಾಘವನ್‌ ಅವರು ಅಧಿಕಾರಿಗಳನ್ನು ವೆಂಕ, ಸೀನ ಮತ್ತು ನಾಣಿ ಎಂದು ಕರೆದಿದ್ದರೆ ಆಕ್ಷೇಪಿಸಿದರು. ಅಧಿಕಾರಿಗಳು ವೆಂಕ, ಸೀನ ಮತ್ತು ನಾಣಿಯಾಗಲ್ಲ. ಶಾಸನಬದ್ಧ ಅಧಿಕಾರವನ್ನು ಅಧಿಕಾರಿಗಳು ಹೊಂದಿರುತ್ತಾರೆ. ಅಂತಾರಾಷ್ಟ್ರೀಯ ಸಂಸ್ಥೆಗಳಿಗೆ ಇಂಥ ಅಹಂಕಾರ ಇರಬಾರದು. ಯಾವುದೇ ಸಾಮಾಜಿಕ ಮಾಧ್ಯಮ ಮಧ್ಯಸ್ಥಿಕೆ ಸಂಸ್ಥೆಯು ಸಂಪೂರ್ಣ ಅನಿಯಂತ್ರಣ ನಿರೀಕ್ಷಿಸಲಾಗದು. ಎಲ್ಲಾ ದೇಶಗಳಲ್ಲಿ ಅವರು ಚೌಕಟ್ಟಿಗೆ ಅನುಗುಣವಾಗಿ ವರ್ತಿಸುತ್ತಾರೆ. ಭಾರತದಲ್ಲಿ ಈ ವಿಶೇಷತೆ ಅವರಿಗೆ ಬೇಕಿದೆ” ಎಂದರು.

ಆಗ ಪೀಠವು “ಅರ್ಜಿದಾರರ ಮೆಮೊ ಪರಿಗಣಿಸುವುದಕ್ಕೂ ಮುನ್ನ ಕೇಂದ್ರ ಸರ್ಕಾರವು ಆಕ್ಷೇಪಣೆ ಸಲ್ಲಿಸಬೇಕಾಗುತ್ತದೆ. ಕೇಂದ್ರ ಸರ್ಕಾರದ ಅಧಿಕಾರಿಗಳನ್ನು ವೆಂಕ, ಸೀನ ಮತ್ತು ನಾಣಿ ಎನ್ನುವುದು ಸರಿಯಲ್ಲ. ಅವರು ಅಧಿಕಾರಿಗಳು” ಎಂದರು.

ಡಿಜಿಟಲ್‌ ಮೀಡಿಯಾ ಸಂಸ್ಥೆಗಳ ಒಕ್ಕೂಟ ಪರವಾಗಿ ಮಧ್ಯಪ್ರವೇಶಿಕೆ ಕೋರಿದ ಹಿರಿಯ ವಕೀಲ ಆದಿತ್ಯ ಸೋಂಧಿ ಅವರು “ನಾವು ಕಂಟೆಂಟ್‌ ಕ್ರಿಯೇಟರ್ಸ್‌ (ವಸ್ತು ವಿಷಯವನ್ನು ಸೃಜಿಸುವವರು) ಆಗಿದ್ದು ಕೇಂದ್ರ ಸರ್ಕಾರದ ನಿರ್ಬಂಧ ಆದೇಶವು ನಮಗೆ ಹಾನಿ ಮಾಡುತ್ತದೆ” ಎಂದರು.

ಇದಕ್ಕೆ ಪೀಠವು “ನೀವು ಹೇಗೆ ಬಾಧಿತರಾಗುತ್ತೀರಿ? ಇದು ಎಕ್ಸ್‌ ಕಾರ್ಪ್‌ ಮತ್ತು ಸರ್ಕಾರದ ನಡುವಿನ ವಿವಾದವಾಗಿದೆ” ಎಂದರು. ಅದಕ್ಕೆ ಸೋಂಧಿ ಅವರು “ವಿಷಯ ನಮ್ಮದಾಗಿರುವುದರಿಂದ ನಮಗೆ ಸಮಸ್ಯೆಯಾಗುತ್ತದೆ. ನಿರ್ಬಂಧಿಸುವಂತೆ ಮಧ್ಯಸ್ಥಿಕೆದಾರರಿಗೆ ನೇರ ಆದೇಶ ಮಾಡಲಾಗುತ್ತಿದೆ” ಎಂದರು.

ಆಗ ಸಾಲಿಸಿಟರ್‌ ಜನರಲ್ ತುಷಾರ್‌ ಮೆಹ್ತಾ ಅವರು “ಡಿಜಿಟಲ್‌ ಮೀಡಿಯಾ ಸಂಸ್ಥೆಗಳ ಒಕ್ಕೂಟದ ಕೋರಿಕೆಯನ್ನು ಪ್ರಧಾನ ಅರ್ಜಿಯ ಜೊತೆ ಆಲಿಸಬಹುದು. ಎಕ್ಸ್‌ ಕಾರ್ಪ್‌ಗೆ ಅವರ ಬೆಂಬಲ ಬೇಕಿಲ್ಲ. ಏಕೆಂದರೆ ಎಕ್ಸ್‌ ಕಾರ್ಪ್‌ ಅಂತಾರಾಷ್ಟ್ರೀಯ ಸಂಸ್ಥೆಯಾಗಿದ್ದು, ಅದಕ್ಕೆ ಹೊರಗಿನವರ ಬೆಂಬಲ ಬೇಕಿಲ್ಲ” ಎಂದರು.

ಅಂತಿಮವಾಗಿ ಕೇಂದ್ರ ಸರ್ಕಾರದ ವಿವಿಧ ಸಚಿವಾಲಯಗಳನ್ನು ಅರ್ಜಿಯಲ್ಲಿ ಪ್ರತಿವಾದಿಯಾಗಿಸಿ, ಅರ್ಜಿ ತಿದ್ದುಪಡಿ ಮಾಡಲು ಎಕ್ಸ್‌ ಕಾರ್ಪ್‌ಗೆ ಅನುಮತಿಸಿದ ನ್ಯಾಯಾಲಯವು ಅದಕ್ಕೆ ಆಕ್ಷೇಪಣೆ ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಿ, ವಿಚಾರಣೆಯನ್ನು ಜುಲೈ 8ಕ್ಕೆ ಮುಂದೂಡಿತು.