pregnant woman A1
ಸುದ್ದಿಗಳು

ಸಮ್ಮತಿಯ ಲೈಂಗಿಕತೆಯಿಂದ ಗರ್ಭಿಣಿಯರಾದ ಅವಿವಾಹಿತೆಯರು 20 ವಾರ ಮೀರಿದ ಗರ್ಭ ಅಂತ್ಯಗೊಳಿಸುವಂತಿಲ್ಲ: ದೆಹಲಿ ಹೈಕೋರ್ಟ್

ಅವಿವಾಹಿತ ಗರ್ಭಿಣಿ ಯುವತಿಯ 23 ವಾರಗಳ ಗರ್ಭವನ್ನು ಅಂತ್ಯಗೊಳಿಸಲು ದೆಹಲಿ ಹೈಕೋರ್ಟ್ ಶುಕ್ರವಾರ ಅನುಮತಿ ನಿರಾಕರಿಸಿದೆ.

Bar & Bench

ಅವಿವಾಹಿತೆಯಾದ 25 ವರ್ಷದ ಗರ್ಭಿಣಿ ಮಹಿಳೆಯೊಬ್ಬರು ತಮ್ಮ 23 ವಾರಗಳ ಗರ್ಭವನ್ನು ಅಂತ್ಯಗೊಳಿಸಲು ಕೋರಿದ್ದ ಮನವಿಯನ್ನು ದೆಹಲಿ ಹೈಕೋರ್ಟ್‌ ಶುಕ್ರವಾರ ತಿರಸ್ಕರಿಸಿದೆ.

ಸಮ್ಮತಿಯ ಲೈಂಗಿಕ ಸಂಬಂಧದಿಂದ ಗರ್ಭಿಣಿಯಾಗುವ ಅವಿವಾಹಿತ ಮಹಿಳೆಗೆ ವೈದ್ಯಕೀಯ ಗರ್ಭಪಾತ ನಿಯಮಗಳ ಪ್ರಕಾರ 20 ವಾರ ಮೀರಿದ ಗರ್ಭವನ್ನು ಅಂತ್ಯಗೊಳಿಸಲು ಅನುಮತಿ ಇಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸುಬ್ರಮೊಣಿಯಂ ಪ್ರಸಾದ್ ಅವರಿದ್ದ ವಿಭಾಗೀಯ ಪೀಠ ಈ ಸಂದರ್ಭದಲ್ಲಿ ತಿಳಿಸಿತು.

ವೈದ್ಯಕೀಯ ಗರ್ಭಪಾತ ನಿಯಮಾವಳಿ 2003ರ ಯಾವುದೇ ಷರತ್ತುಗಳನ್ನು ಅರ್ಜಿ ಸ್ಪಷ್ಟವಾಗಿ ಒಳಗೊಂಡಿಲ್ಲ. ಹೀಗಾಗಿ ಪ್ರಕರಣದ ಸತ್ಯಾಸತ್ಯತೆಗಳಿಗೆ ಸೆಕ್ಷನ್ 3(2)(ಬಿ) ಅನ್ವಯವಾಗುವುದಿಲ್ಲ ಎಂದು ನ್ಯಾಯಾಲಯ ಆದೇಶಿಸಿತು.

ಅಲ್ಲದೆ, ಇಂದಿಗೂ ಎಂಟಿಪಿ ನಿಯಮಾವಳಿ 3ಬಿ ನಿಯಮ ಅನ್ವಯವಾಗುತ್ತಿದ್ದು, 20 ವಾರಗಳಾಚೆಗಿನ ಅವಿವಾಹಿತ ಮಹಿಳೆಯ ಗರ್ಭಧಾರಣೆ ಅಂತ್ಯಗೊಳಿಸಲು ಅದು ಅನುಮತಿಸುವುದಿಲ್ಲ. ಆದ್ದರಿಂದ ನ್ಯಾಯಾಲಯ ಶಾಸನವನ್ನು ಮೀರಿ ಹೋಗುವಂತಿಲ್ಲ ಎಂದು ಪೀಠ ಹೇಳಿದೆ.

ನ್ಯಾಯಾಲಯವು ಅರ್ಜಿಯನ್ನು ಬಾಕಿ ಉಳಿಸಿಕೊಂಡಿದೆ ಮತ್ತು ಆಗಸ್ಟ್ 26 ರೊಳಗೆ ಅರ್ಜಿಯ ಬಗ್ಗೆ ತನ್ನ ಪ್ರತಿಕ್ರಿಯೆಯನ್ನು ಸಲ್ಲಿಸುವಂತೆ ದೆಹಲಿಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಸೂಚನೆ ನೀಡಿದೆ.

ಆದರೂ ನ್ಯಾಯಾಲಯ ಅರ್ಜಿಯನ್ನು ಬಾಕಿ ಉಳಿಸಿಕೊಂಡಿದ್ದು ಆಗಸ್ಟ್ 26 ರೊಳಗೆ ಪ್ರತಿಕ್ರಿಯೆ ನೀಡುವಂತೆ ದೆಹಲಿಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಸೂಚಿಸಿದೆ.

ಅವಿವಾಹಿತ ಮಹಿಳೆಯನ್ನು ಎಂಟಿಪಿ 3ಬಿ ನಿಯಮದ ವ್ಯಾಪ್ತಿಗೆ ತರಲು ಕೋರಿರುವ ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಾಲಯ ಈ ಹೇಳಿಕೆ ನೀಡಿದೆ. ನಿಯಮದ ಪ್ರಕಾರ, ಅತ್ಯಾಚಾರ ಸಂತ್ರಸ್ತರು, ಅಪ್ರಾಪ್ತ ವಯಸ್ಕರು, ಗರ್ಭಾವಸ್ಥೆಯಲ್ಲಿ ವೈವಾಹಿಕ ಸ್ಥಿತಿ ಬದಲಾದ ಮಹಿಳೆಯರು, ಮಾನಸಿಕ ಅಸ್ವಸ್ಥೆಯರು ಅಥವಾ ಭ್ರೂಣದ ವಿರೂಪತೆ ಇರುವ ಮಹಿಳೆಯರು ಮಾತ್ರ 24 ವಾರಗಳ ಗರ್ಭ ಅಂತ್ಯಗೊಳಿಸಲು ಅನುಮತಿಸಲಾಗಿದೆ.

ಶುಕ್ರವಾರ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯ ಈ ಹಂತದಲ್ಲಿ ಗರ್ಭಾವಸ್ಥೆಯನ್ನು ಮುಕ್ತಾಯಗೊಳಿಸುವುದು ಮಗುವನ್ನು ಕೊಲ್ಲುವುದಕ್ಕೆ ಸಮಾನವಾಗಿರುತ್ತದೆ ಎಂದಿತು.

ಆದರೆ ಹುಟ್ಟಿದ ಮಗುವನ್ನು ದತ್ತು ನೀಡಬಹುದು ಎಂದು ಕೂಡ ಪೀಠ ಹೇಳಿದೆ. ಮಗುವನ್ನು ಏಕೆ ಕೊಲ್ಲುತ್ತಿದ್ದೀರಿ? ಮಕ್ಕಳ ದತ್ತು ಪಡೆಯಲು ದೊಡ್ಡ ಸರತಿ ಸಾಲು ಇದೆ ಎಂದು ನ್ಯಾಯಾಲಯ ಇದೇ ಸಂದರ್ಭದಲ್ಲಿ ತಿಳಿಸಿತು. ಅಲ್ಲದೆ ಮಗುವನ್ನು ಬೆಳೆಸಬೇಕೆಂದು ಮಹಿಳೆಯನ್ನು ಒತ್ತಾಯಿಸುವುದಿಲ್ಲ ಎಲ್ಲವನ್ನೂ ಸರ್ಕಾರ ಅಥವಾ ಆಸ್ಪತ್ರೆ ನೋಡಿಕೊಳ್ಳುತ್ತದೆ. ನಾನೂ ಹಣ ಪಾವತಿಸಲು ಸಿದ್ಧನಿದ್ದೇನೆ ಎಂದು ಸಿಜೆ ವಿವರಿಸಿದರು.

ನ್ಯಾಯಾಲಯದಲ್ಲಿ ಹಾಜರಿದ್ದ ಹಿರಿಯ ವಕೀಲ ಕಪಿಲ್ ಸಿಬಲ್ ಅವರ ಅಭಿಪ್ರಾಯಗಳನ್ನು ಅವರು ಕೇಳಿದರು. ಆಗ ಈ ಹಂತದಲ್ಲಿ ಮಗುವಿನ ಗರ್ಭಪಾತ ಮಾಡಬಾರದು ಎಂದು ಸಿಬಲ್ ಅಭಿಪ್ರಾಯಪಟ್ಟರು.

ಆದರೆ ಅರ್ಜಿದಾರೆಯೊಂದಿಗೆ ಸಮಾಲೋಚಿಸಿದ ಆಕೆಯ ಪರ ವಕೀಲ ಡಾ ಅಮಿತ್‌ ಮಿಶ್ರಾ ಗರ್ಭವನ್ನು ಮುಂದುವರಿಸಲು ಆಕೆ ಸಿದ್ಧಳಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಇದನ್ನು ಒಪ್ಪದ ನ್ಯಾಯಾಲಯ ಮಗುವನ್ನು ಕೊಲ್ಲಲು ಕಾನೂನು ಅನುಮತಿ ನೀಡುವುದಿಲ್ಲ ಎಂದು ಹೇಳಿತು.

ಆದೇಶದ ಪ್ರತಿಯನ್ನು ಇಲ್ಲಿ ಓದಿ:

Ms_X_v_Health_and_Family_Welfare_Department_GNCTD.pdf
Preview