ಸುದ್ದಿಗಳು

ಅತಿಥಿಗೆ ಹಳಸಿದ ತಿನಿಸು: ಸಿಬ್ಬಂದಿ ವಿವರಣೆ ಕೇಳಿದ ಉತ್ತರ ಪ್ರದೇಶ ನ್ಯಾಯಾಧೀಶರು

“ನಾನು ನಿಮಗೆ ಮತ್ತೆ ಬಿಸ್ಕೆಟ್ ತರಲು ಹೇಳಿದೆ. ಆದರೆ ಬಿಸ್ಕೆಟ್ ತರುವ ಬದಲು ಹಳಸಿದ, ಕೆಟ್ಟ ವಾಸನೆ ಬರುವ ತಿನಿಸು ತಂದಿಟ್ಟಿರಿ” ಎಂದು ಲೀಗಲ್ ನೋಟಿಸ್‌ನಲ್ಲಿ ತಿಳಿಸಲಾಗಿದೆ.

Bar & Bench

ತಮ್ಮ ಕೊಠಡಿಗೆ ಅಧಿಕೃತ ಭೇಟಿಗೆ ಬಂದಿದ್ದ ಅತಿಥಿಗಳಿಗೆ ಹಳಸಿದ ತಿನಿಸು ನೀಡಿದ್ದಕ್ಕಾಗಿ ವಿವರಣೆ ನೀಡುವಂತೆ ಸೂಚಿಸಿ ಉತ್ತರ ಪ್ರದೇಶದ ಗೊಂಡಾದ ನ್ಯಾಯಾಧೀಶರೊಬ್ಬರು ತಮ್ಮ ಸಿಬ್ಬಂದಿಗೆ ನೋಟಿಸ್‌ ಜಾರಿ ಮಾಡಿದ್ದಾರೆ.

 ಗೊಂಡಾ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ಮೇ 30ರ ಮಧ್ಯಾಹ್ನ ವಿರಾಮದ ಸಮಯದಲ್ಲಿ  ತಮ್ಮ ಕೊಠಡಿಯಲ್ಲಿದ್ದರು. ಆಗ ಗೊಂಡಾದ ಕಿರಿಯ ವಿಭಾಗದ ಸಿವಿಲ್‌ ನ್ಯಾಯಾಧೀಶ ಅವರನ್ನು ಭೇಟಿಯಾಗಲು ಬಂದಿದ್ದರು.

ಅತಿಥಿಗೆ ಚಹಾ ಮತ್ತು ಬಿಸ್ಕೆಟ್‌ ನೀಡುವಂತೆ ಸೆಷನ್ಸ್‌ ನ್ಯಾಯಾಧೀಶರು ಸೂಚಿಸಿದರಾದರೂ ಸಿಬ್ಬಂದಿ ಕೇವಲ ಚಹಾದೊಂದಿಗೆ ಮರಳಿದ್ದರು. ಆಗ ಮತ್ತೆ ಬಿಸ್ಕೆಟ್‌ ತರುವಂತೆ ನ್ಯಾಯಧೀಶರು ಸೂಚಿಸಿದರಾದರೂ ಕೆಟ್ಟ ವಾಸನೆ ಬರುತ್ತಿದ್ದ ಬೇರೊಂದು ತಿನಿಸನ್ನು ಸಿಬ್ಬಂದಿ ನೀಡಿದರು.

ಉತ್ತಮ ಗುಣಮಟ್ಟದ ಬಿಸ್ಕೆಟ್‌ ಕಪಾಟಿನಲ್ಲಿದ್ದದ್ದು ತಿಳಿದಿದ್ದರೂ ಸಿಬ್ಬಂದಿ ಉದ್ದೇಶಪೂರ್ವಕವಾಗಿ ಹಳಸಿದ ತಿನಿಸನ್ನು ನೀಡಿದರು ಎಂದಿರುವ ಸೆಷನ್ಸ್‌ ನ್ಯಾಯಾಧೀಶ ಇದೊಂದು ಗಂಭೀರ ನಿರ್ಲಕ್ಷ್ಯ ಎಂಬುದಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

“ನಾನು ನಿಮಗೆ ಮತ್ತೆ ಬಿಸ್ಕೆಟ್ ತರಲು ಹೇಳಿದೆ. ಆದರೆ ಬಿಸ್ಕೆಟ್ ತರುವ ಬದಲು ಹಳಸಿದ, ಕೆಟ್ಟ ವಾಸನೆ ಬರುವ ತಿನಿಸು ತಂದಿಟ್ಟಿರಿ” ಎಂದು ಅವರು ನೀಡಿರುವ ಲೀಗಲ್ ನೋಟಿಸ್‌ನಲ್ಲಿ  ತಿಳಿಸಲಾಗಿದೆ. ಘಟನೆ ಬಗ್ಗೆ ಲಿಖಿತ ವಿವರಣೆ ಸಲ್ಲಿಸುವಂತೆ ಸಿಬ್ಬಂದಿಗೆ ಸೆಷನ್ಸ್‌ ನ್ಯಾಯಾಧೀಶರು ತಾಕೀತು ಮಾಡಿದ್ದಾರೆ.