High Court of Karnataka
High Court of Karnataka  
ಸುದ್ದಿಗಳು

ತಿದ್ದುಪಡಿಗಳಾದ ತಕ್ಷಣ ಶಾಸನವನ್ನು ನವೀಕರಿಸುವುದು ಹೈಕೋರ್ಟ್‌ ಗ್ರಂಥಾಲಯದ ಕರ್ತವ್ಯ: ಕರ್ನಾಟಕ ಹೈಕೋರ್ಟ್‌

Bar & Bench

ಕಾಯಿದೆಗಳಿಗೆ ತಿದ್ದುಪಡಿಯಾದ ತಕ್ಷಣ ಎಲ್ಲಾ ಶಾಸನಗಳನ್ನು ನವೀಕರಿಸಿ ಅವುಗಳ ಪ್ರತಿಗಳನ್ನು ಎಲ್ಲಾ ಹೈಕೋರ್ಟ್‌ಗಳ ಸಭಾಂಗಣಕ್ಕೆ ಕಳುಹಿಸಿಕೊಡುವುದು ಹೈಕೋರ್ಟ್‌ ಗ್ರಂಥಾಲಯದ ಕರ್ತವ್ಯ ಎಂದು ಕರ್ನಾಟಕ ಹೈಕೋರ್ಟ್‌ ಬುಧವಾರ ನಿರ್ದೇಶನ ನೀಡಿದೆ.

ಮೇಲಿನ ನಿರ್ದೇಶನವನ್ನು ಹೈಕೋರ್ಟ್‌ ಗ್ರಂಥಾಲಯ ಸಮಿತಿಯ ಗಮನಕ್ಕೆ ತರುವಂತೆ ರಿಜಿಸ್ಟ್ರಾರ್‌ ಜನರಲ್‌ ಅವರಿಗೆ ಮುಖ್ಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಓಕಾ ಮತ್ತು ನ್ಯಾಯಮೂರ್ತಿ ಎಸ್‌ ಎಸ್‌ ಮಗದುಮ್‌ ಅವರಿದ್ದ ವಿಭಾಗೀಯ ಪೀಠವು ಆದೇಶಿಸಿದೆ.

ನವಚೇತನ ವೃದ್ಧಾಶ್ರಮ ಮತ್ತು ಪುನರುಜ್ಜೀವನ ಕೇಂದ್ರವು ಸ್ಥಳದಲ್ಲಿರುವವರಿಗೆ ಆರೋಗ್ಯ ಸಮಸ್ಯೆ ಉಂಟುಮಾಡುತ್ತಿರುವುದರಿಂದ ಅದನ್ನು ಮುಚ್ಚುವಂತೆ ಕೋರಿ ಪವನ್‌ ಕುಮಾರ್‌ ಮತ್ತು ಇತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಪೀಠವು ಮೇಲಿನ ಆದೇಶ ಹೊರಡಿಸಿದೆ.

ಪೋಷಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ಕಾಯಿದೆ-2007ಕ್ಕೆ 2018ರಲ್ಲಿ ತಿದ್ದುಪಡಿ ಮಾಡಲಾಗಿದೆ ಎಂದು ಅರ್ಜಿದಾರರ ಪರ ವಕೀಲರು ನ್ಯಾಯಾಲಯದ ಗಮನಸೆಳೆದರು. ನ್ಯಾಯಾಲಯವು 2007ರ ಕಾಯಿದೆ ಕುರಿತು ಕೇಳಿದಾಗ ತಿದ್ದುಪಡಿಯನ್ನು ಒಳಗೊಂಡ ಶಾಸನವನ್ನು ನವೀಕರಿಸಲಾಗಿಲ್ಲ ಎಂಬ ಉತ್ತರ ದೊರೆತ ಹಿನ್ನೆಲೆಯಲ್ಲಿ ನ್ಯಾಯಾಲಯವು ಮೇಲಿನ ಆದೇಶ ಹೊರಡಿಸಿದೆ.

ವಯಸ್ಸಾದ ಪೋಷಕರನ್ನು ಮನೆಯಿಂದ ಹೊರದಬ್ಬಿ, ಅವರನ್ನು ವೃದ್ಧಾಶ್ರಮಗಳಿಗೆ ಸೇರಿಸುತ್ತಿರುವ ಬೆಳವಣಿಗೆಯ ಬಗ್ಗೆ ಕಳೆದ ತಿಂಗಳು ನ್ಯಾಯಾಲಯವು ಆತಂಕ ವ್ಯಕ್ತಪಡಿಸಿತ್ತು. ನಾವು ದೊಡ್ಡವರಾಗುತ್ತಲೇ ನಮ್ಮ ಪೋಷಕರನ್ನು ಹೊರದಬ್ಬುವುದು ದುರುದೃಷ್ಟಕರ ಬೆಳವಣಿಗೆ ಎಂದು ಹೇಳಿತ್ತು. “ವಯಸ್ಸಾದವರು ಸಾವಿನ ಹಾಸಿಗೆಯ ಮೇಲೆ ಮಲಗಿರುವಾಗ ಅವರನ್ನು ಹೊರದಬ್ಬಿ ವೃದ್ಧಾಶ್ರಮಗಳಿಗೆ ಸೇರಿಸುತ್ತಿದ್ದಾರೆ. ಇದು ಸಮಾಜದಲ್ಲಿನ ನ್ಯೂನತೆಯಾಗಿದೆ. ಇದೊಂದು ಸಾಮಾಜಿಕ ಸಮಸ್ಯೆಯಾಗಿದ್ದು, ನಮಗೆ ಆತಂಕವಾಗಿದೆ” ಎಂದು ಪೀಠ ಹೇಳಿತ್ತು.