Karnataka High Court 
ಸುದ್ದಿಗಳು

ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ: ಅನುಪಾಲನಾ ವರದಿ ಸಲ್ಲಿಕೆ; ಮನವಿ ವಿಲೇವಾರಿ ಮಾಡಿದ ನ್ಯಾಯಾಲಯ

ಬಿಬಿಎಂಪಿ ಹಾಗೂ ವಿಜಯಪುರ ಮಹಾನಗರ ಪಾಲಿಕೆ ಚುನಾವಣೆಗಳಿಗೆ ಸಂಬಂಧಿಸಿದ ಅರ್ಜಿ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣಾ ಹಂತದಲ್ಲಿರುವ ಕಾರಣ, ಈ ಎರಡೂ ಸಂಸ್ಥೆಗಳಿಗೆ ಮಾತ್ರ ಚುನಾವಣೆ ನಡೆಸಲಾಗಿಲ್ಲ ಎಂದ ಆಯೋಗ.

Bar & Bench

ಅವಧಿ ಪೂರ್ಣಗೊಂಡಿದ್ದ ರಾಜ್ಯದ 56 ನಗರ ಸ್ಥಳೀಯ ಸಂಸ್ಥೆಗಳಿಗೆ ನ್ಯಾಯಾಲಯ ವಿಧಿಸಿದ್ದ ಕಾಲಮಿತಿಯಂತೆ ಡಿಸೆಂಬರ್‌ 30ರೊಳಗೆ ಚುನಾವಣೆ ನಡೆಸಲಾಗಿದೆ ಎಂದು ರಾಜ್ಯ ಚುನಾವಣಾ ಆಯೋಗವು ಕರ್ನಾಟಕ ಹೈಕೋರ್ಟ್‌ಗೆ ಶುಕ್ರವಾರ ಮಾಹಿತಿ ನೀಡಿದೆ.

ಅವಧಿ ಮುಗಿದಿರುವ ರಾಜ್ಯದ ಕೆಲ ನಗರ ಸ್ಥಳೀಯ ಸಂಸ್ಥೆಗಳಿಗೆ ನಿಗದಿತ ಕಾಲಮಿತಿಯೊಳಗೆ ಚುನಾವಣೆ ನಡೆಸಲು ಸರ್ಕಾರ ಹಾಗೂ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಲು ದಾಖಲಿಸಿಕೊಂಡಿದ್ದ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಮನವಿಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ನೇತೃತ್ವದ ವಿಭಾಗೀಯ ಪೀಠ ಶುಕ್ರವಾರ ವಿಚಾರಣೆ ನಡೆಸಿತು.

ರಾಜ್ಯ ಚುನಾವಣಾ ಆಯೋಗದ ಪರ ಹಿರಿಯ ವಕೀಲ ಕೆ ಎನ್ ಫಣೀಂದ್ರ ಅವರು “2021ರ ನವೆಂಬರ್‌ 17ರಂದು ಹೈಕೋರ್ಟ್ ನೀಡಿದ್ದ ಆದೇಶದಂತೆ ಅವಧಿ ಪೂರ್ಣಗೊಂಡಿದ್ದ ರಾಜ್ಯದ 56 ಸ್ಥಳೀಯ ಸಂಸ್ಥೆಗಳಿಗೆ ಡಿಸೆಂಬರ್‌ 30ರೊಳಗೆ ಚುನಾವಣೆ ನಡೆಸಲಾಗಿದೆ. ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಹಾಗೂ ವಿಜಯಪುರ ಮಹಾನಗರ ಪಾಲಿಕೆ ಚುನಾವಣೆಗಳಿಗೆ ಸಂಬಂಧಿಸಿದ ಅರ್ಜಿ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣಾ ಹಂತದಲ್ಲಿರುವ ಕಾರಣ, ಈ ಎರಡೂ ಸಂಸ್ಥೆಗಳಿಗೆ ಮಾತ್ರ ಚುನಾವಣೆ ನಡೆಸಲಾಗಿಲ್ಲ” ಎಂದು ಪೀಠಕ್ಕೆ ತಿಳಿಸಿದರು.

ಇದನ್ನು ದಾಖಲಿಸಿಕೊಂಡ ಪೀಠವು “ಅವಧಿ ಪೂರ್ಣಗೊಂಡಿರುವ ಸ್ಥಳೀಯ ಸಂಸ್ಥೆಗಳಿಗೆ ನಿಗದಿತ ಸಮಯದೊಳಗೆ ಚುನಾವಣೆ ನಡೆಸುವಂತೆ ನಿರ್ದೇಶಿಸಲು ಸ್ವಯಂಪ್ರೇರಿತ ಅರ್ಜಿ ದಾಖಲಿಸಿಕೊಳ್ಳಲಾಗಿತ್ತು. ಇದೀಗ, 56 ಸ್ಥಳೀಯ ಸಂಸ್ಥೆಗಳಿಗೂ ಕಳೆದ ಡಿಸೆಂಬರ್‌ 30ರೊಳಗೆ ಚುನಾವಣೆ ನಡೆಸಲಾಗಿದೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ. ಆದ್ದರಿಂದ, ಪ್ರಕರಣದ ವಿಚಾರಣೆ ಮುಂದುವರಿಸುವ ಅಗತ್ಯವಿಲ್ಲ” ಎಂದು ಅಭಿಪ್ರಾಯಪಟ್ಟು ಅರ್ಜಿ ವಿಲೇವಾರಿ ಮಾಡಿತು.