ಅವಧಿ ಮೀರಿರುವ ನಗರ ಸ್ಥಳೀಯ ಸಂಸ್ಥೆಗಳಿಗೆ 2 ತಿಂಗಳಲ್ಲಿ ಮೀಸಲಾತಿ ನಿಗದಿಪಡಿಸಿ ಅಂತಿಮ ಅಧಿಸೂಚನೆಗೆ ಹೈಕೋರ್ಟ್‌ ಆದೇಶ

2021ರಲ್ಲಿ ಅವಧಿ ಪೂರ್ಣಗೊಂಡಿರುವ ಸಂಸ್ಥೆಗಳಲ್ಲಿ 50 ಸಂಸ್ಥೆಗಳಿಗೆ ಹಾಗೂ 2019ರಲ್ಲಿ ಅವಧಿ ಪೂರ್ಣಗೊಂಡಿರುವ 6 ಸಂಸ್ಥೆಗಳಿಗೆ ಮುಂದಿನ ಎರಡು ತಿಂಗಳ ಒಳಗೆ ಮೀಸಲಾತಿ ನಿಗದಿಪಡಿಸಿ ಅಂತಿಮ ಅಧಿಸೂಚನೆ ಹೊರಡಿಸಬೇಕು ಎಂದ ಪೀಠ.
Karnataka High Court
Karnataka High Court
Published on

ರಾಜ್ಯದಲ್ಲಿ ಅವಧಿ ಪೂರ್ಣಗೊಂಡಿರುವ 56 ನಗರ ಸ್ಥಳೀಯ ಸಂಸ್ಥೆಗಳಿಗೆ ಎರಡು ತಿಂಗಳ ಒಳಗೆ ಮೀಸಲಾತಿ ನಿಗದಿಪಡಿಸಿ ಅಂತಿಮ ಅಧಿಸೂಚನೆ ಹೊರಡಿಸಬೇಕು ಎಂದು ಸರ್ಕಾರಕ್ಕೆ ಹೈಕೋರ್ಟ್ ಗುರುವಾರ ಆದೇಶಿಸಿದೆ.

ಅವಧಿ ಪೂರ್ಣಗೊಂಡಿರುವ ರಾಜ್ಯದ ಕೆಲ ನಗರ ಸ್ಥಳೀಯ ಸಂಸ್ಥೆಗಳಿಗೆ ನಿಗದಿತ ಕಾಲಮಿತಿಯೊಳಗೆ ಚುನಾವಣೆ ನಡೆಸಲು ಸರ್ಕಾರ ಹಾಗೂ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಲು ದಾಖಲಿಸಿಕೊಂಡಿರುವ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸಚಿನ್‌ ಶಂಕರ್‌ ಮಗದುಮ್‌ ಅವರ ನೇತೃತ್ವದ ವಿಭಾಗೀಯ ಪೀಠ ಆದೇಶ ಮಾಡಿತು.

ಇದಕ್ಕೂ ಮುನ್ನ ರಾಜ್ಯ ಚುನಾವಣಾ ಆಯೋಗದ ಪರ ಹಿರಿಯ ವಕೀಲ ಕೆ ಎನ್ ಫಣೀಂದ್ರ ಅವರು “ವಸ್ತುಸ್ಥಿತಿ ವರದಿ ಸಲ್ಲಿಸಿ, 2021ರ ಮೇ ತಿಂಗಳಿಂದ ಆಗಸ್ಟ್ ತಿಂಗಳ ನಡುವೆ ವಿವಿಧ ನಗರ ಪಾಲಿಕೆ, ಪಟ್ಟಣ ಪಂಚಾಯಿತಿ, ನಗರಸಭೆ ಮತ್ತು ಪುರಸಭೆಗಳು ಸೇರಿದಂತೆ 52 ಸ್ಥಳೀಯ ಸಂಸ್ಥೆಗಳ ಅವಧಿ ಪೂರ್ಣಗೊಂಡಿದೆ. ಆ ಪೈಕಿ ಎರಡಕ್ಕೆ ಮಾತ್ರ ಮೀಸಲಾತಿ ಅಂತಿಮಗೊಳಿಸಲಾಗಿದ್ದು, 50ಕ್ಕೆ ಅಂತಿಮ ಮೀಸಲಾತಿ ಅಧಿಸೂಚನೆ ಹೊರಡಿಸಬೇಕಿದೆ. ಇನ್ನೂ 2019ರ ಮಾರ್ಚ್‌ನಲ್ಲಿ ಅವಧಿ ಪೂರ್ಣಗೊಂಡಿರುವ ಆರು ಸ್ಥಳೀಯ ಸಂಸ್ಥೆಗಳಿಗೂ ಅಂತಿಮ ಮೀಸಲಾತಿ ಅಧಿಸೂಚನೆ ಹೊರಡಿಸಬೇಕಿದೆ. ಈ ನಿಟ್ಟಿನಲ್ಲಿ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಬೇಕು” ಎಂದು ಕೋರಿದರು.

Also Read
ಧಾರ್ಮಿಕ ಕೇಂದ್ರಗಳಿಗೆ ತೆರಳಲು ಅವಕಾಶವಿರುವಾಗ ಮತಗಟ್ಟೆಗೆ ತೆರಳಲು ಏಕೆ ನಿರ್ಬಂಧ: ಸರ್ಕಾರಕ್ಕೆ ಹೈಕೋರ್ಟ್‌ ಪ್ರಶ್ನೆ

ಅದನ್ನು ಪರಿಗಣಿಸಿದ ಪೀಠವು 2021ರಲ್ಲಿ ಅವಧಿ ಪೂರ್ಣಗೊಂಡಿರುವ ಸಂಸ್ಥೆಗಳಲ್ಲಿ 50 ಸಂಸ್ಥೆಗಳಿಗೆ ಹಾಗೂ 2019ರಲ್ಲಿ ಅವಧಿ ಪೂರ್ಣಗೊಂಡಿರುವ 6 ಸಂಸ್ಥೆಗಳಿಗೆ ಮುಂದಿನ ಎರಡು ತಿಂಗಳ ಒಳಗೆ ಮೀಸಲಾತಿ ನಿಗದಿಪಡಿಸಿ ಅಂತಿಮ ಅಧಿಸೂಚನೆ ಹೊರಡಿಸಬೇಕು. ಈ ಆದೇಶದ ಅನುಪಾಲನಾ ವರದಿಯನ್ನು ನ.17ರಂದು ಕೋರ್ಟ್‌ಗೆ ಸಲ್ಲಿಸಬೇಕು ಎಂದು ಸರ್ಕಾರಕ್ಕೆ ನಿರ್ದೇಶಿಸಿ ವಿಚಾರಣೆ ಮುಂದೂಡಿತು.

Kannada Bar & Bench
kannada.barandbench.com