Supreme Court
Supreme Court 
ಸುದ್ದಿಗಳು

ಚಳಿಗಾಲದ ರಜೆ ವೇಳೆ ಸುಪ್ರೀಂ ರಿಜಿಸ್ಟ್ರಾರ್ ಮುಂದೆ ತುರ್ತು ಪ್ರಕರಣ ಪ್ರಸ್ತಾಪಿಸಲು ಸೂಚನೆ: ಅಗತ್ಯಬಿದ್ದರೆ ಪೀಠ ರಚನೆ

Bar & Bench

ಮುಂಬರುವ ಚಳಿಗಾಲದ ರಜೆಯಲ್ಲಿ ಯಾವುದೇ ಪೀಠಗಳು ಕಾರ್ಯ ನಿರ್ವಹಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಯವರು ತಿಳಿಸಿದ್ದು ಅಗತ್ಯವಿದ್ದರೆ ತುರ್ತು ಪ್ರಕರಣಗಳ ವಿಚಾರಣೆ ನಡೆಸಲಾಗುವುದು ಎಂದು ಸುಪ್ರೀಂ ಕೋರ್ಟ್‌ ಮೂಲಗಳು ʼಬಾರ್‌ ಅಂಡ್‌ ಬೆಂಚ್‌ʼಗೆ ದೃಢಪಡಿಸಿವೆ.

ರಜಾಕಾಲೀನ ವೇಳೆ, ತುರ್ತುಪ್ರಕರಣಗಳ ಉಲ್ಲೇಖವನ್ನು ಸ್ವೀಕರಿಸುವ ಅಧಿಕಾರ ಹೊಂದಿದ ಪದನಿಮಿತ್ತ ರಜಾಕಾಲೀನ ರಿಜಿಸ್ಟ್ರಾರ್‌ ಒಬ್ಬರು ಇರುವ ಪ್ರಮಾಣಿತ ಪರಿಪಾಠ ಇದೆ ಎಂದು ಮೂಲಗಳು ಖಚಿತಪಡಿಸಿವೆ. ಪ್ರಕರಣದ ತುರ್ತಿನ ಬಗ್ಗೆ ರಜಾಕಾಲೀನ ರಿಜಿಸ್ಟ್ರಾರ್‌ ಅವರು ತೃಪ್ತಿ ಹೊಂದಿದ್ದರೆ ಆಗ ಅದನ್ನು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಾಮೂರ್ತಿಯವರ ಗಮನಕ್ಕೆ ತರಲಾಗುತ್ತದೆ. ಅಗತ್ಯಬಿದ್ದರೆ ತುರ್ತು ರಜಾಕಾಲೀನ ಪೀಠವೊಂದನ್ನು ಸಿಜೆಐ ರಚಿಸುತ್ತಾರೆ ಎನ್ನಲಾಯಿತು.

"ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳು ರಜೆಯ ಅವಧಿಯಲ್ಲಿಯೂ ಸಹ ಇಂತಹ ಪೀಠಗಳ ನೇತೃತ್ವವಹಿಸಲು ಲಭ್ಯರಿರುತ್ತಾರೆ" ಎಂದು ಮೂಲಗಳು ವಿವರಿಸಿದವು. ಸುಪ್ರೀಂ ಕೋರ್ಟ್‌ಗೆ ಡಿಸೆಂಬರ್ 19ರಿಂದ ಎರಡು ವಾರಗಳ ಕಾಲ ರಜೆ ಇರಲಿದ್ದು ಜನವರಿ 2ರಿಂದ ನ್ಯಾಯಾಲಯ ಮತ್ತೆ ಕಾರ್ಯಪ್ರವೃತ್ತವಾಗಲಿದೆ.

ನ್ಯಾಯಾಲಯಗಳು ಸುದೀರ್ಘ ರಜೆ ತೆಗೆದುಕೊಳ್ಳುವುದಕ್ಕೆ ಕೇಂದ್ರ ಕಾನೂನು ಸಚಿವ ಕಿರೆನ್‌ ರಿಜಿಜು ಅವರು ಆಕ್ಷೇಪಿಸಿದ್ದ ಬೆನ್ನಲ್ಲೇ ಸಿಜೆಐ ಅವರು ಶುಕ್ರವಾರ ಚಳಿಗಾಲದ ರಜೆಯ ಬಗ್ಗೆ ತಿಳಿಸಿದ್ದರು.

ರಿಜಿಜು ಅವರು ಗುರುವಾರ ಸಂಸತ್‌ನಲ್ಲಿ “ನ್ಯಾಯಾಲಯಗಳ ಸುದೀರ್ಘ ರಜೆಯು ನ್ಯಾಯದಾನ ಬಯಸುವವರಿಗೆ ಹೆಚ್ಚು ಅನುಕೂಲಕರವಾಗಿಲ್ಲ ಎಂಬ ಭಾವನೆ ದೇಶದ ಜನರಲ್ಲಿದೆ. ಈ ಸದನದ ಸಂದೇಶ ಅಥವಾ ಭಾವನೆಯನ್ನು ನ್ಯಾಯಾಂಗಕ್ಕೆ ತಿಳಿಸುವುದು ನನ್ನ ಜವಾಬ್ದಾರಿ ಮತ್ತು ಕರ್ತವ್ಯವಾಗಿದೆ” ಎಂದಿದ್ದರು. ನ್ಯಾಯಾಲಯಗಳ ಸುದೀರ್ಘ ರಜೆಯ ಕುರಿತು ಆಗಾಗ್ಗೆ ಸಾರ್ವಜನಿಕ ಟೀಕೆ ವ್ಯಕ್ತವಾಗುತ್ತಿರುತ್ತದೆ.