ಅಮೆರಿಕದ ನಾಲ್ಕು ರಾಜ್ಯಗಳಾದ ಪೆನ್ಸಿಲ್ವೇನಿಯಾ, ವಿಸ್ಕಾನ್ಸಿನ್, ಜಾರ್ಜಿಯಾ ಮತ್ತು ಮಿಷಿಗನ್ ಗಳಲ್ಲಿ ಅಧ್ಯಕ್ಷೀಯ ಚುನಾವಣಾ ಫಲಿತಾಂಶಗಳನ್ನು ಪ್ರಶ್ನಿಸಿ ಟೆಕ್ಸಾಸ್ ರಾಜ್ಯ ಹೂಡಿದ್ದ ಮೊಕದ್ದಮೆಯನ್ನು ಅಮೆರಿಕ ಸುಪ್ರೀಂ ಕೋರ್ಟ್ ಶುಕ್ರವಾರ ಕ್ಷಿಪ್ರವಾಗಿ ವಜಾಗೊಳಿಸಿದೆ.
ಈ ತೀರ್ಪಿನಿಂದಾಗಿ ಜೋ ಬೈಡನ್ ಅವರು ಗೆಲುವಿನ ಮಾಲೆ ಧರಿಸಿದ್ದ ಅಧ್ಯಕ್ಷೀಯ ಚುನಾವಣೆಯನ್ನು ರದ್ದುಗೊಳಿಸಲು ಮುಂದಾಗಿದ್ದ ಡೊನಾಲ್ಡ್ ಟ್ರಂಪ್ ಅವರ ಯತ್ನಗಳಿಗೆ ಶಾಶ್ವತ ಸೋಲುಂಟಾಗಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ.
ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆಂಬಲಿತ ಮೊಕದ್ದಮೆಯನ್ನು ವಜಾಗೊಳಿಸಿರುವ ಅಮೆರಿಕದ ಸುಪ್ರೀಂ ಕೋರ್ಟ್‌ನ ಈ ಆದೇಶವು ಜೋ ಬೈಡೆನ್ ವಿಜಯಶಾಲಿಯಾಗಿ ಹೊರಹೊಮ್ಮಿರುವ ಅಧ್ಯಕ್ಷೀಯ ಚುನಾವಣೆಯನ್ನು ರದ್ದುಗೊಳಿಸುವ ಟ್ರಂಪ್ ಅವರ ಪ್ರಯತ್ನಗಳಿಗೆ ಹೊಡೆದಿರುವ ಕೊನೆಯ ಮೊಳೆಯಾಗಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.
"ಮನವಿಯ ಮೂಲಕ ದೂರು ದಾಖಲಿಸುವ ಪ್ರಯತ್ನಕ್ಕೆ ಮುಂದಾದ ಟೆಕ್ಸಾಸ್ ರಾಜ್ಯದ ಕ್ರಮವು ಸಂವಿಧಾನದ ಮೂರನೇ ವಿಧಿಯಡಿ ನಿಲ್ಲುವುದಿಲ್ಲ. ಮತ್ತೊಂದು ರಾಜ್ಯವು ಚುನಾವಣೆಯನ್ನು ನಡೆಸುವ ಕ್ರಮದ ಬಗ್ಗೆ ನ್ಯಾಯಾಂಗವು ಪರಿಗಣಿಸಬಹುದಾದ ಅಂಶವನ್ನು ಟೆಕ್ಸಾಸ್ ಒದಗಿಸುವಲ್ಲಿ ವಿಫಲವಾಗಿದೆ. ಹಾಗಾಗಿ ಎಲ್ಲ ಬಾಕಿ ಇರುವ ಅರ್ಜಿಗಳನ್ನೂ ವಜಾಗೊಳಿಸಲಾಗಿದೆ," ಎಂದು ನ್ಯಾಯಾಲಯವು ಹೇಳಿತು.
ಏಳು ಮಂದಿ ನ್ಯಾಯಮೂರ್ತಿಗಳ ಪೀಠದಲ್ಲಿ ಇಬ್ಬರು ನ್ಯಾಯಮೂರ್ತಿಗಳಾದ ಸ್ಯಾಮ್ಯುಯಲ್ ಅಲಿಟೊ ಮತ್ತು ಕ್ಲಾರೆನ್ಸ್ ಥಾಮಸ್ ಅವರು ದೂರು ದಾಖಲಿಸುವ ಸಂಬಂಧ ಪೀಠದ ಇತರರೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದು ಅದಕ್ಕೆ ಅನುಮತಿಸಿದರಾದರೂ, ಇತರ ಪರಿಹಾರಗಳಿಗೆ ನಕಾರ ವ್ಯಕ್ತಪಡಿಸಿದರು. ಪ್ರಸ್ತುತ ಪ್ರಕರಣದಂತೆ ಅಮೆರಿಕ ಸುಪ್ರೀಂಕೋರ್ಟ್‌ಗೆ ಸಲ್ಲಿಸಲಾಗುವ ಬಹುತೇಕ ಅರ್ಜಿಗಳನ್ನು ಅವುಗಳ ಅರ್ಹತೆಯ ವಿಚಾರವಾಗಿ ಆಲಿಸದೆ ಕ್ರಿಪ್ರವಾಗಿ ಸಹಿರಹಿತ ಆದೇಶದ ಮೂಲಕ ವಿಲೇವಾರಿ ಮಾಡಲಾಗುತ್ತದೆ.
ಪ್ರಕರಣದ ವಿಚಾರಣೆಗೂ ಮೊದಲು ಟ್ರಂಪ್ ಟ್ವೀಟ್ ಮಾಡಿ "ಸುಪ್ರೀಂ ಕೋರ್ಟ್ ಉತ್ತಮ ಬುದ್ಧಿವಂತಿಕೆ ಮತ್ತು ಧೈರ್ಯ ತೋರಿದರೆ, ಅಮೆರಿಕದ ಜನತೆ ಇತಿಹಾಸದ ಬಹುಮುಖ್ಯ ಪ್ರಕರಣವನ್ನು ಗೆಲ್ಲುತ್ತಾರೆ. ಜೊತೆಗೆ ನಮ್ಮ ಚುನಾವಣಾ ಪ್ರಕ್ರಿಯೆಗೆ ಮತ್ತೆ ಗೌರವ ಲಭಿಸುತ್ತದೆ" ಎಂದಿದ್ದರು. ಆದರೆ, ಸುಪ್ರೀಂ ಕೋರ್ಟಿನ ಆದೇಶದ ನಂತರ ಅವರು, "ಸುಪ್ರೀಂ ಕೋರ್ಟ್ ನಮ್ಮನ್ನು ನಿರಾಶೆಗೊಳಿಸಿದೆ. (ಅದಕ್ಕೆ) ಬುದ್ಧಿಯೂ ಇಲ್ಲ, ಧೈರ್ಯವೂ ಇಲ್ಲ" ಎಂದಿದ್ದಾರೆ.
ಆದೇಶವನ್ನು ಇಲ್ಲಿ ಓದಿ